ದಾವಣಗೆರೆ ಜು.21
ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ
ಮಳೆಯಿಂದಾಗಿ ಹಾಗೂ ಮೋಡ ಮುಸುಕಿದ ವಾತಾವರಣದಿಂದ
ಮುಸುಕಿನಜೋಳ ಹಾಗೂ ಇನ್ನಿತರ ಬೆಳೆಗಳಲ್ಲಿ
ಪೋಷಕಾಂಶಗಳ ನಿರ್ವಹಣೆ ಅತೀ ಅಗತ್ಯದ ಕ್ರಮವಾಗಿದೆ.
ಮಣ್ಣಿನ ತೇವಾಂಶದ ಹೆಚ್ಚಳದಿಂದಾಗಿ ಸಸ್ಯದ ಬೇರುಗಳ
ಉಸಿರಾಟದ ಕ್ರಮಕ್ಕೆ ತೊಂದರೆಯಾಗುತ್ತದೆ ಹಾಗೂ ಸಸ್ಯದ
ಆಹಾರೋತ್ಪಾದನೆ ಕುಂಠಿತವಾಗುತ್ತದೆ. ಸಸ್ಯವು ತನಗೆ
ಬೇಕಾದ ಪೋಷಕಾಂಶಗಳನ್ನು ಮಣ್ಣಿನಿಂದ
ತೆಗೆದುಕೊಂಡು ಬೆಳೆಯಲು ಕಷ್ಟ ಸಾಧ್ಯವಾಗುತ್ತದೆ.
ಆದುದರಿಂದ ರೈತರು ಈ ಕೆಳಗಿನಂತೆ
ಮುಸುಕಿನಜೋಳದಲ್ಲಿ ಪೋಷಕಾಂಶಗಳ ನಿರ್ವಹಣೆ
ಮಾಡಲು ತಿಳಿಸಿದೆ.
ಜಮೀನಿನಲ್ಲಿ ನಿಂತ ಹೆಚ್ಚಾದ ನೀರನ್ನು ಅಲ್ಲಲ್ಲಿ ಕಾಲುವೆಗಳನ್ನು
ಮಾಡಿ ಸುರಕ್ಷಿತವಾಗಿ ಹೊರ ಹಾಕುವುದು.
ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಲ್ಲಿ ಇದು ಸಾರಜನಕದ,
ಕೆಂಪಾಗಿ ಕಾಣುತ್ತಿದ್ದಲ್ಲಿ ಇದು ರಂಜಕದ
ಕೊರತೆಯಾಗಿರುತ್ತದೆ, ಎಲೆಯ ಅಂಚಿನಲ್ಲಿ ಹಾಗೂ
ಮಧ್ಯದ ಬಾಗದಲ್ಲಿ ಬಿಳಿಯ ಪಟ್ಟಿಗಳು ಕಾಣುತ್ತಿದ್ದರೆ ಇದು
ಸತುವಿನ ಕೊರತೆಯಾಗಿರುತ್ತದೆ. ಪೋಷಕಾಂಶದ
ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ 5 ಗ್ರಾಂ. 19 ಆಲ್ ಹಾಗೂ 5 ಗ್ರಾಂ
13:0:45 ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರದ ಜೊತೆ
ಪ್ರತಿ ಲೀಟರ್ ನೀರಿಗೆ 5 ಮಿ.ಲೀ. ಲಘುಪೋಷಕಾಂಶಗಳ
ಮಿಶ್ರಣವನ್ನು ಬೆರೆಸಿ ಬೆಳೆಗೆ ಸಿಂಪರಣೆ ಮಾಡುವುದು.
ಸತುವಿನ ಕೊರತೆ ಹೆಚ್ಚಾಗಿದ್ದಲ್ಲ್ಲಿ ಜಿಂಕ್ ಸಲ್ಫೇಟ್‍ನ್ನು ಪ್ರತಿ
ಲೀಟರ್ ನೀರಿಗೆ 2.5ಗ್ರಾಂ ಮಿಶ್ರಣವನ್ನು ಬೆರೆಸಿ ಸಿಂಪರಣೆ
ಮಾಡುವುದು. ಹದ ತೇವಾಂಶ ದೊರೆತ ತಕ್ಷಣ ದಿಂಡು
ಏರುವಂತೆ ಎಡೆ ಹೊಡೆಯಬೇಕು, ಇದರಿಂದ ಕಾಂಡ ಕೊಳೆ
ರೋಗವನ್ನು ನಿಯಂತ್ರಿಸಬಹುದು. ಸೈನಿಕ ಹುಳುವಿನ
ಬಾಧೆ ನಿರ್ವಹಣೆ ಮಾಡಲು ಪ್ರತಿ ಲೀಟರ್ ನೀರಿಗೆ 0.4 ಗ್ರಾಂ
ಇಮಾಮೆಕ್ಟಿನ್ ಬೆನ್ಜೋಯೇಟ್ 5% ಎಸ್.ಜಿ. ಅಥವಾ 0.3 ಗ್ರಾಂ.
ಸ್ಪೈನೋಸಾಡ್ ಬೆರೆಸಿ ಒಂದೊಂದೇ ಸಾಲು ಹಿಡಿದು ಪ್ರತಿ ಸುಳಿ
ತುಂಬುವಂತೆ ಸಿಂಪರಣೆ ಮಾಡಬೇಕೆಂದು ಪ್ರಕಟಣೆ ತಿಳಿಸಿದೆ.