ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ನೀಡುವ ಸೌಲಭ್ಯಗಳನ್ನು ವಿಳಂಬವಿಲ್ಲದೆ ಆದ್ಯತೆ ಮೇಲೆ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದರು.
ಅವರು (ಸೆ.5) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಕಚೇರಿಯಲ್ಲಿ ಪಹಣಿ ತಿದ್ದುಪಡಿ, ಪೋಡಿ, ಹದ್ದುಬಸ್ತು ಪ್ರಕರಣ ಹಾಗೂ ಅರೆ ನ್ಯಾಯಿಕ ಪ್ರಕರಣಗಳ ಶೀಘ್ರ ವಿಲೇವಾರಿ ಬಗ್ಗೆ ಮುಖ್ಯಮಂತ್ರಿಯವರು ಸೇರಿದಂತೆ ಕಂದಾಯ ಸಚಿವರು ಹೆಚ್ಚು ಆಸಕ್ತಿ ಹೊಂದಿದ್ದು ಇವುಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಮಳೆ ಹಾನಿ ಪರಿಶೀಲನೆ; ಈ ವರ್ಷ ವಾಡಿಕೆಗಿಂತ ಎರಡು ಪಟ್ಟು ಮಳೆ ಹೆಚ್ಚಾಗಿದೆ. 398 ಮಿ.ಮೀ ವಾಡಿಕೆ ಮಳೆಗೆ 792 ಮಿ.ಮೀ ವಾಸ್ತವಿಕ ಮಳೆಯಾಗಿದೆ. ಮಳೆಯಿಂದ ಮನೆಗೆ ನೀರು ನುಗ್ಗಿದ 904 ಫಲಾನುಭವಿಗಳಿಗೆ ತಲಾ 10 ಸಾವಿರದಂತೆ ಪರಿಹಾರ ನೀಡಲಾಗಿದೆ. ಮತ್ತು ಜಿಲ್ಲೆಯಲ್ಲಿ 2032 ಒಟ್ಟು ಹಾನಿಯಾದ ಮನೆಗಳೆಂದು ಗುರುತಿಸಿದ್ದು ಇದರಲ್ಲಿ ಸಂಪೂರ್ಣ ಹಾನಿಯಾದ ಎ.ವರ್ಗದ 481 ಮನೆಗಳಿಗೆ ರೂ.5 ಲಕ್ಷ, ಶೇ 75 ಕ್ಕಿಂತಲೂ ಹೆಚ್ಚು ಬಿ.1, ಬಿ.2 ವರ್ಗದ 891 ಇವರಿಗೆ ರೂ.3 ಲಕ್ಷ, 5 ಲಕ್ಷ ರೂ ಹಾನಿಯನ್ನಾಧರಿಸಿ ಹಾಗೂ ಸಿ.ವರ್ಗದ 660 ಮನೆಗಳೆಂದು ಗುರುತಿಸಿ ರೂ.50 ಸಾವಿರ ಪರಿಹಾರವನ್ನು ನೀಡಲಾಗುತ್ತಿದ್ದು ಇಲ್ಲಿಯವರೆಗೆ 1218 ಮನೆಗಳಿಗೆ ಪರಿಹಾರ ನೀಡಲಾಗಿದೆ. ಉಳಿದ ಮನೆಗಳಿಗೂ ಆದಷ್ಟು ಬೇಗನೆ ಪರಿಹಾರ ನೀಡುವಂತೆ ತಿಳಿಸಿದರು.
ನದಿಪಾತ್ರದ ಖರಾಬು ಜಾಗ ಗುರುತಿಸಿ; ತುಂಗಭದ್ರಾ ನದಿಯು ಮಳೆಗಾಲದಲ್ಲಿ ತುಂಬಿಹರಿಯುತ್ತದೆ. ನದಿ ಪಾತ್ರದಲ್ಲಿ ಬರುವ ಖರಾಬು ಜಾಗದಲ್ಲಿ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ಆದರೆ ನದಿ ತುಂಬಿಹರಿದಾಗ ಇವರು ನಿರಾಶ್ರಿತರಾಗಲಿದ್ದು ಇಂತಹ ಪ್ರಕರಣಗಳಿದ್ದಲ್ಲಿ ಶಾಶ್ವತ ಪರಿಹಾರವನ್ನು ಕಂಡುಕೊಂಡು ಖರಾಬು ಜಾಗ ಒತ್ತುವರಿ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಮೂಲಭೂತ ಸೌಕರ್ಯಗಳಿಗೆ ಹಾನಿ; ಮಳೆಯಿಂದ 10.43 ಕಿ.ಮೀ ರಾಜ್ಯ ಹೆದ್ದಾರಿ, 18.85 ಕಿ.ಮೀ ಜಿಲ್ಲಾ ಮುಖ್ಯರಸ್ತೆ, 130.38 ಗ್ರಾಮೀಣ ಪ್ರದೇಶಗಳ ರಸ್ತೆ ಹಾಗೂ 9.80 ಕಿ.ಮೀ ನಗರ ಪ್ರದೇಶದಲ್ಲಿನ ರಸ್ತೆಗಳು ಹಾಳಾಗಿವೆ. ಮತ್ತು 12 ಕೆರೆ, ಕಟ್ಟೆಗಳಿಗೆ ಹಾನಿಯಾಗಿದೆ. ಹಾಗೂ 734 ವಿದ್ಯುತ್ ಕಂಬಗಳು, 23 ಟಿ.ಸಿ ಹಾಗೂ 56 ಕಿ.ಮೀ ವಿದ್ಯುತ್ ಮಾರ್ಗದ ಹಾನಿಯಾಗಿದೆ. ಗ್ರಾಮಾಂತರ ಪ್ರದೇಶದ ರಸ್ತೆಗಳು ಹೆಚ್ಚು ಹಾನಿಯಾಗಿದ್ದು ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಹೆಚ್ಚು ಸಿ.ಸಿ ರಸ್ತೆಗಳ ನಿರ್ಮಾಣ ಮಾಡಲು ತಿಳಿಸಿ ಕ್ರಿಯಾ ಯೋಜನೆಯನ್ನು ತಯಾರಿಸಿ ನೀಡಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್‍ಗೆ ಸೂಚನೆ ನೀಡಿದರು.
ಮಳೆಹಾನಿ ಬೆಳೆ ಸಮೀಕ್ಷೆ; ಮಳೆಯಿಂದ ಹಾನಿಯಾದ ಬೆಳಯ ಬಗ್ಗೆ ಸಮೀಕ್ಷೆಯನ್ನು ನಡೆಸಲಾಗಿದ್ದು 20201 ಬೆಳೆಹಾನಿ ಪ್ರಕರಣಗಳನ್ನು ದಾಖಲು ಮಾಡಲಾಗಿ ಇದರಲ್ಲಿ 11856 ಕ್ಕೆ ಗ್ರಾಮಲೆಕ್ಕಾಧಿಕಾರಿಗಳ ಹಂತದಲ್ಲಿ ಅನುಮೋದನೆಯಾಗಿದೆ. 950 ತಹಶೀಲ್ದಾರರ ಹಂತದಲ್ಲಿ ಬಾಕಿ ಇದ್ದು ಆದಷ್ಟು ಬೇಗ ಎಲ್ಲಾ ಪರಿಶೀಲನೆ ಮಾಡಲು ತಿಳಿಸಿದರು.
ಜಿಲ್ಲೆಯಲ್ಲಿ 129.85 ಹೆಕ್ಟೇರ್ ಭತ್ತ, 13200.99 ಹೆ.ಮೆಕ್ಕೆಜೋಳ, 157.70 ಹೆ.ಹತ್ತಿ, 2 ಹೆ.ಸೋಯಾಬೀನ್ ಮತ್ತು ತೋಟಗಾರಿಕೆ ಬೆಳೆಗಳಲ್ಲಿ 29.17 ಹೆ.ಬಾಳೆ, 292.80 ಹೆ.ಅಡಿಕೆ, 170.38 ಹೆ.ಈರುಳ್ಳಿ, 231.50 ಹೆ. ಟಮೋಟೋ ಸೇರಿದಂತೆ 955.90 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 13608.64 ಹೆಕ್ಟೇರ್ ಕೃಷಿ ಬೆಳೆಗಳ ನಷ್ಟ ಉಂಟಾದ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.