ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣ ಅಳವಡಿಸಿಕೊಂಡರೆ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಚನ್ನಪ್ಪ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಮನೆ ಮುನ್ನಡೆಸಲು ಒಬ್ಬ ಯಜಮಾನನಿರುತ್ತಾನೆ. ಹಾಗೆಯೇ ರಾಜ್ಯ ಹಾಗೂ ದೇಶವನ್ನು ಮುನ್ನಡೆಸಲು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಇರುತ್ತಾರೆ. ಅವರ ಕಾರ್ಯವೈಖರಿ ಗಮನಿಸಿ, ಸಲಹೆಗಳನ್ನು ನೀಡಲು, ತಪ್ಪುಗಳನ್ನು ತಿದ್ದಲು ವಿರೋಧ ಪಕ್ಷಗಳಿರುತ್ತವೆ ಎಂದು ಹೇಳಿದರು.
ಸರ್ಕಾರದ ಆಡಳಿತದಲ್ಲಿ ಶಾಸಕನ ಸಭೆ ಮಹತ್ವದ ಪಾತ್ರ ವಹಿಸುತ್ತದೆ. ಶಾಸಕನ ಸಭೆಯಲ್ಲಿ ಅನುಮತಿ ಇಲ್ಲದೆ ಯಾವುದೇ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಹೊಸ ಶಾಸನ ರೂಪಿಸುವುದು, ತಿದ್ದುಪಡಿ ಮಾಡುವುದು ಸಹ ಶಾಸನ ಸಭೆಯಲ್ಲಿಯೇ ಎಂದರು.
ಸಾರ್ವಜನಿಕರಿಂದ ಕ್ರೂಢೀಕರಿಸಿದ ತೆರಿಗೆ ಹಣ, ಮಾಡಬೇಕಾದ ಖರ್ಚು ವೆಚ್ಚಗಳ ಬಗ್ಗೆಯೂ ಶಾಸನ ಸಭೆಯಲ್ಲಿ ಮಂಡಿಸಬೇಕಾಗುತ್ತದೆ ಎಂದು ಶಾಸನ ಸಭೆಯ ಮಹತ್ವ ತಿಳಿಸಿದ ಅವರು, ಇಂದಿನ ಸಂಸತ್ ಸ್ಪರ್ಧೆಯಲ್ಲಿ ಜಯ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜಯಶಾಲಿಗಳಾಗಿರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಮಲ್ಲಾನಾಯ್ಕ ಉಪಸ್ಥಿತರಿದ್ದರು. ಡಿಡಿಪಿಐ ತಿಪ್ಪೇಶಪ್ಪ ಸ್ವಾಗತಿಸಿದರು. ವಿಷಯ ಪರಿವೀಕ್ಷಕರಾದ ಶಶಿಕಲಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕರುಗಳಾದ ಮಂಜುನಾಥ ಐರಣಿ, ಪ್ರಭು ಕೆ.ಸಿ., ಕರಿಯಪ್ಪ ಜಿ.ಆರ್., ತೀರ್ಪುಗಾರರಾಗಿ ಆಗಮಿಸಿದ್ದರು. ವಿದ್ಯಾರ್ಥಿನಿಯರಾದ ಚೌಡಮ್ಮ ಹಾಗೂ ಪೂಜಾ ಪ್ರಾರ್ಥಿಸಿದರು. ಟಿ.ಎಂ. ಸುರೇಶ್ ನಾಯ್ಕ ನಿರೂಪಿಸಿದರು. ವಿಷಯ ಪರಿವೀಕ್ಷಕರಾದ ಆರ್.ಬಿ. ವಸಂತ ಕುಮಾರಿ ವಂದಿಸಿದರು.