ಹಾವೇರಿ ಜ. 08 (ಕನಕ-ಶರೀಫ-ಸರ್ವಜ್ಞ
ಪ್ರಧಾನ ವೇದಿಕೆ) :
ಲೇಖನಿ, ಕಾಗದ ಇಲ್ಲದಿರುವ ಕಾಲಘಟ್ಟದಲ್ಲಿ ರಚಿತವಾದ ಜನಪದ
ಸಾಹಿತ್ಯದಲ್ಲಿ ಶೇ. 90 ಕ್ಕೂ ಹೆಚ್ಚು ಸಾಹಿತ್ಯ ರಚನೆಯಲ್ಲಿ
ಮಹಿಳೆಯರದ್ದೇ ಸಿಂಹಪಾಲಿದೆ, ಆದರೆ ಬರವಣಿಗೆಯ ಯುಗ
ಬಂದಾಗ ಇದೇ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿದ್ದೇಕೆ ಎಂಬುದು
ಅವಕಾಶ ವಂಚಿತ ಮಹಿಳಾ ಲೋಕವನ್ನೇ ಪ್ರಶ್ನಿಸುವಂತಿದೆ ಎಂದು
ಡಾ. ಕವಿತಾ ಕುಸುಗಲ್ಲ ಹೇಳಿದರು.
ಭಾನುವಾರದಂದು ನಡೆದ 86ನೇ ಅಖಿಲ ಭಾರತ ಕನ್ನಡ
ಸಾಹಿತ್ಯ ಸಮ್ಮೇಳದ ಕನಕ-ಷರೀಫ-ಸರ್ವಜ್ಞ ಪ್ರಧಾನ
ವೇದಿಕೆಯಲ್ಲಿ ನಡೆದ ‘ವರ್ತಮಾನದಲ್ಲಿ ಮಹಿಳೆ’ ವಿಷಯ ಕುರಿತ
ಗೋಷ್ಠಿಯಲ್ಲಿ ‘ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ
ಸಾಧನೆಗಳು’ ಕುರಿತ ವಿಷಯ ಮಂಡಿಸಿದರು.
ಗೀಗೀ ಪದ, ಲಾವಣಿಪದ, ಹಂತಿಪದ, ಬೀಸುಕಲ್ಲುಪದ
ಮುಂತಾದ ಜನಪದ ಸಾಹಿತ್ಯದಲ್ಲಿ ಶೇ. 90 ಕ್ಕಿಂತ ಹೆಚ್ಚು ಜನಪದ
ಸಾಹಿತ್ಯ ರಚನೆಯಾಗಿದ್ದೇ ಮಹಿಳೆಯಿಂದ, ಹೀಗೆ ಸಾಹಿತ್ಯದಲ್ಲಿ
ಮುಂಚೂಣಿಯಲ್ಲಿದ್ದ ಮಹಿಳೆ, ಕಾಲಘಟ್ಟ ಸರಿದಂತೆ ಬರವಣಿಗೆ
ಸಾಹಿತ್ಯದಲ್ಲಿ ಹಿಂದೆ ಬಿದ್ದಿದ್ದು, ಬಹುಶಃ ಅವರಲ್ಲಿನ ಹಿಂಜರಿಕೆ ಅಥವಾ
ಪುರುಷ ಪ್ರಧಾನ ಸಮಾಜದಲ್ಲಿ ಅವಕಾಶದ ಕೊರತೆ
ಕಾರಣವಾಯಿತೇನೋ ಎಂದು ಅಭಿಪ್ರಾಯಪಟ್ಟರು. 12ನೇ
ಶತಮಾನದ ಕಾಲಕ್ಕೆ ಮಹಿಳೆಯರಿಗೆ ಸ್ವಲ್ಪ ಬರವಣಿಗೆ
ಸಾಹಿತ್ಯಕ್ಕೆ ಅವಕಾಶ ದೊರೆಯಿತು ಎನ್ನಬಹುದಾಗಿದ್ದು,
ಇದರಿಂದಾಗಿಯೇ ಮಹಿಳಾ ವಚನಗಾರ್ತಿಯರು ಕೂಡ ವಚನ
ಸಾಹಿತ್ಯ, ಕವನ ಸಾಹಿತ್ಯ ರಚಿಸಲು ಸಾಧ್ಯವಾಯಿತು. ಇತ್ತೀಚೆಗೆ
ಮಹಿಳೆಯರು ಎಲ್ಲ ಎಲ್ಲೆಗಳನ್ನು ಮೀರಿ, ಎಲ್ಲ ಬಗೆಯ ಸಾಹಿತ್ಯ
ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಮಹಿಳೆಯರು
ಇದೀಗ ಆತ್ಮಕಥೆಗಳನ್ನೂ ಕೂಡ ರಚಿಸುತ್ತಿದ್ದಾರೆ, ಮಹಿಳಾ
ಬರಹಗಾರರು ವಿಶ್ವವಿದ್ಯಾಲಯಗಳ ಕುಲಪತಿಗಳು, ಐಎಎಸ್, ಐಪಿಎಸ್
ಅಧಿಕಾರಿಗಳೂ, ರಾಜಕಾರಣಿಗಳೂ ಕೂಡ ಆಗುತ್ತಿರುವುದು
ನಿಜಕ್ಕೂ ವರ್ತಮಾನದಲ್ಲಿ ಮಹಿಳೆಯರು ಸಾಧನೆಯಲ್ಲಿ
ತೊಡಗಿದ್ದಾರೆ. ಆದರೆ ಜ್ಞಾನಪೀಠ ಪ್ರಶಸ್ತಿ ಇನ್ನೂ ರಾಜ್ಯದ
ಮಹಿಳೆಗೆ ಸಿಕ್ಕಿಲ್ಲ ಎನ್ನುವ ಕೊರತೆಯೂ ಇದೆ ಎಂದರು.
ವಿಜಯಪುರದ ಅಕ್ಕಮಹಾದೇವಿ ವಿವಿ ಕುಲಪತಿ ಡಾ. ಬಿ.ಕೆ. ತುಳಸಿ
ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರುಷರು

ಉದ್ಯೋಗಾವಕಾಶಗಳನ್ನು ಹುಡುಕಿಕೊಂಡು
ಗ್ರಾಮಗಳನ್ನು ತೊರೆಯುತ್ತಿದ್ದು, ಹೀಗಾಗಿ ಕೃಷಿಯ
ಹೊಣೆ ಮಹಿಳೆಯರ ಮೇಲೆ ಹೆಚ್ಚು ಬೀಳುತ್ತಿದೆ. ಇದರಿಂದಾಗಿ
ಸುಸ್ಥಿರ ಅಭಿವೃದ್ಧಿಗೆ ಮಹಿಳೆಯರ ಪಾಲ್ಗೊಳ್ಳುವಿಕೆ
ಮುಖ್ಯವಾಗಿದ್ದು, ಜೀವನೋಪಾಯ ಕೌಶಲ್ಯಗಳನ್ನು
ಮಹಿಳೆಯರಿಗೆ ಹೆಚ್ಚು ಹೆಚ್ಚು ಒದಗಿಸಬೇಕಿದೆ. ಹೆಣ್ಣುಮಕ್ಕಳಿಗೆ
ಶತಮಾನಗಳ ಹಿಂದೆ ಪ್ರಾರಂಭವಾದ ಶಿಕ್ಷಣದ ವಸ್ತುವನ್ನೇ
ಈಗಲೂ ಕೂಡ ನೀಡುವುದು ಸರಿಯಲ್ಲ, ಶಿಕ್ಷಣದ ಪಠ್ಯ,
ಕಲಿಸುವ ರೀತಿ, ಬೋಧನಾ ಕ್ರಮಗಳನ್ನು ಕೂಡ ಕಾಲಕ್ಕೆ
ಅನುಗುಣವಾಗಿ ಬದಲಿಸಬೇಕಿದೆ. ತಂತ್ರಜ್ಞಾನದ
ಕ್ಷೇತ್ರದಲ್ಲಿಯೂ ಮಹಿಳೆ ತೊಡಗುವಂತೆ ಮಾಡಲು
ಸಾಕಷ್ಟು ಅರಿವು, ಕೌಶಲ್ಯ ನೀಡಬೇಕಿದೆ. ಆದರೆ ಇದು ಕೇವಲ
ಔಪಚಾರಿಕ ಶಿಕ್ಷಣದಿಂದ ಮಾತ್ರ ಸಾಧ್ಯವಾಗುವುದಲ್ಲ, ಪದವಿ,
ಉನ್ನತ ಶಿಕ್ಷಣ ಸ್ಥರದಲ್ಲಿ ಹೆಚ್ಚು ಹೆಚ್ಚು ಸುಧಾರಣೆಯ
ಅಗತ್ಯವಿದೆ. ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುವ
ಹೆಣ್ಣು ಮಕ್ಕಳು ಮುಖ್ಯವಾಹಿನಿಗೆ ಏಕೆ ಬರುತ್ತಿಲ್ಲ ಎಂಬುದು
ಪ್ರಶ್ನೆಯಾಗಿದ್ದು, ಔದ್ಯೋಗಿಕ ಸಹಭಾಗಿತ್ವಕ್ಕೆ, ಮಹಿಳಾ
ನಾಯಕತ್ವಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದರು.
ಆಶಯ ನುಡಿಗಳನ್ನಾಡಿದ ವಕೀಲರಾದ ಕ್ಷಮಾ ನರಗುಂದ
ಅವರು, ಹಿಂದಿಗಿಂತಲೂ ಈಗ ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ.
ಸಾಂವಿಧಾನಿಕ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದ್ದು, ಇದನ್ನು
ಆಧರಿಸಿ ಕೌಟುಂಬಿಕ ದೌರ್ಜನ್ಯ ತಡೆ, ವರದಿಕ್ಷಿಣೆ ನಿಷೇಧ ಮುಂತಾದ
ಮಹಿಳಾ ರಕ್ಷಣಾ ಕೇಂದ್ರಿತ ಕಾನೂನುಗಳು ಜಾರಿಗೆ ಬಂದಿವೆ,
ಆದರೆ ಇಂದಿನ ವರ್ತಮಾನದಲ್ಲಿ ಮಹಿಳೆಗೆ ಸಮಸ್ಯೆ
ಆಗುತ್ತಿರುವುದು ಕೇವಲ ಗಂಡಿನಿಂದ ಮಾತ್ರವಲ್ಲ,
ಸಮಾಜದಿಂದಲೂ ಆಗುತ್ತಿದೆ. ಅಸ್ಮಿತೆಯನ್ನು ಗುರುತಿಸಿ ಎಂಬುದೇ
ಮಹಿಳೆಯ ಆಶಯವಾಗಿದೆ. ಕಾನೂನಿನಿಂದಲೇ ಎಲ್ಲವನ್ನೂ
ಪರಿವರ್ತಿಸಲು ಸಾಧ್ಯವಿಲ್ಲ, ಗಂಡು-ಹೆಣ್ಣು ತಮ್ಮ ಹಕ್ಕಿಗಾಗಿ
ಹೋರಾಡಬೇಕಿಲ್ಲ, ಪರಸ್ಪರ ಒಬ್ಬರಿಗೊಬ್ಬರು ಪೂರಕವಾದಾಗ
ಮಾತ್ರ ಸಮಾಜದಲ್ಲಿ ಸಮಾನತೆ ತರಬಹುದು. ಹೀಗಾಗಿ ಸಮಾಜದ
ಮನಸ್ಥಿತಿ ಬದಲಾಗಬೇಕು ಎಂದರು.
“ಗ್ರಾಮೀಣ ಮಹಿಳೆಯರ ಸಾಧನೆಗಳು’ ಕುರಿತು
ಮಾತನಾಡಿದ ಕೆಎಲ್‍ಇ ಕಾಲೇಜು ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ. ವೀಣಾ
ಈ, ದಿನನಿತ್ಯದ ಬದುಕಿನಲ್ಲಿ ಹಲವರು ಮಹಿಳಾ ಸಾಧಕರು
ಕಂಡುಬರುತ್ತಾರೆ, ಸಾಂಸ್ಕøತಿಕ ರಾಯಭಾರಿ ಪದ್ಮಶ್ರೀ ಪ್ರಶಸ್ತಿ
ಪುರಸ್ಕøತ ಸುಕ್ರಜ್ಜಿ, ವೃಕ್ಷಮಾತೆ ತುಳಸಿಗೌಡರ್,
ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ಸುಧಾಮೂರ್ತಿ
ಹೀಗೆ ಅನೇಕರು ಮಹಿಳಾ ಸಾಧಕರಿದ್ದಾರೆ. ಸಾಧನೆ ಮಾಡುವ
ಮನಸ್ಸಿದ್ದರೆ ಲಿಂಗ ಭೇದ ಅಡ್ಡಿಯಾಗಲಾರದು ಎಂದರು.

ಗೋಷ್ಠಿಯಲ್ಲಿ ಡಾ. ಪದ್ಮಿನಿ ನಾಗರಾಜು ಸ್ವಾಗತಿಸಿದರು, ಶಾರದಾ
ಗುರುಮೂರ್ತಿ ನಿರ್ವಹಿಸಿದರು, ಸಹನಾ ನಾಗೇಶ್ ವಂದಿಸಿದರು, ಡಾ.
ಪುಷ್ಪಾ ಶಲವಡಿ ಮಠ ನಿರೂಪಿಸಿದರು.

Leave a Reply

Your email address will not be published. Required fields are marked *