ದಾವಣಗೆರೆ ಜು.15 :  ಲಾಭದಾಯಕ ವಾಣಿಜ್ಯ ಬೆಳೆಗಳಲ್ಲಿ ಹತ್ತಿ ಬೆಳೆ ಪ್ರಮುಖವಾದದು. ಬಿಳಿ ಬಂಗಾರ ಎಂದು ಕರೆಯುವ ಹತ್ತಿಯನ್ನು ನೂಲಿನ ರಾಜ ಎಂದೂ ಕೂಡ ಕರೆಯುತ್ತಾರೆ.  ಆದರೆ ಹತ್ತಿ ಬೆಳೆಗೆ ರೋಗ, ಕೀಟ ಬಾಧೆ ಹೆಚ್ಚು.  ಇತ್ತೀಚಿನ ದಿನಗಳಲ್ಲಿ ಹತ್ತಿ ಗಿಡದ ಎಲೆಗಳು ಕೆಂಪಾಗುವುದನ್ನು ಹೆಚ್ಚು ಕಾಣುತ್ತಿದ್ದೇವೆ.  ಹವಾಮಾನದ ವೈಪರಿತ್ಯದಿಂದಾಗಿ ಪೋಷಕಾಂಶಗಳ ಕೊರತೆ, ತಡವಾದ ಬಿತ್ತನೆ, ಹತ್ತಿಯನ್ನು ಸತತವಾಗಿ ಒಂದೇ ಜಮೀನಿನಲ್ಲಿ ಬೆಳೆದಾಗ ಎಲೆಗಳು ಕೆಂಪಾಗಬಹುದು.   ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದಾಗ, ಭೂಮಿಗೆ ಸಾಕಷ್ಟು ಪೋಷಕಾಂಶಗಳನ್ನು ಕೊಟ್ಟ ಸಮಯದಲ್ಲಿ ಮಳೆಯ ಅಭಾವವಾದಾಗ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸಸ್ಯ ಕಳೆದುಕೊಳ್ಳುತ್ತದೆ.
ಹವಾಮಾನದ ವೈಪರಿತ್ಯದಿಂದಾಗಿ ತಾಪಮಾನ ಹೆಚ್ಚಾಗಿ ಹತ್ತಿ ಬೆಳೆಯಲ್ಲಿ ಸಾರಜನಕದ ಪ್ರಮಾಣ ಕಡಿಮೆಯಾಗಿ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.  ಸಾರಜನಕದ ಪ್ರಮಾಣ ಕಡಿಮೆಯಾದಾಗ ರಂಜPದÀ ಪ್ರಮಾಣ ಕೂಡ ಇಳಿಕೆಯಾಗುವುದು ಕಂಡು ಬರುತ್ತದೆ.  ಆದ್ದರಿಂz ಶೇ. 2ರ ಡಿ.ಎ.ಪಿ ದ್ರಾವಣವನ್ನು ಸಿಂಪರಣೆ ಮಾಡಬೇಕು.  ಎಕರೆಗೆ 200-300 ಲೀ. ದ್ರಾವಣ ಬೇಕಾಗುತ್ತದೆ.  ಎಲೆ ಕೆಂಪಾದರೆ ದ್ಯುತಿಸಂಶ್ಲೇಷಣೆ ಕ್ರಿಯೆಯು ಕಡಿಮೆಯಾಗಿ ಇಳುವರಿಯು ಕಡಿಮೆಯಾಗುತ್ತದೆ.
ಪೋಷಕಾಂಶಗಳಾದ ಮೆಗ್ನಿಷಿಯಂ, ಪೊಟ್ಯಾಷಿಯಂ ಕೊರತೆಯಿಂದ ಎಲೆಗಳು ಕೆಂಪಾಗಬಹುದು.  ಮಳೆಯಾಶ್ರಿತ ಬೆಳೆಯಲ್ಲಿ ಹೆಚ್ಚು ಮಳೆ ಬಂದಾಗ, ನೀರು ನಿಲ್ಲುವಂತಹ ಪ್ರದೇಶಗಳಲ್ಲಿ ಬೆಳೆಯು ಮೊದಲು ಹಳದಿಯಾಗಿ ನಂತರ ಕೆಂಪಾಗುವುದು. ಮೊದಲು ಮೆಗ್ನಿಷಿಯಂ ಕೊರತೆ ಇರುವುದು ಕಂಡು ಬಂದಲ್ಲಿ ಪ್ರತಿ ಎಕರೆ ಭೂಮಿಗೆ 10 ಕಿ.ಗ್ರಾಂ ಮ್ಯೆಗ್ನಿಷಿಯಂ ಸಲ್ಫೇಟ್‍ನ್ನು ಸೇರಿಸಬೇಕು ಮತ್ತು ಬೆಳೆಯ 3 ಸಂಧಿಗ್ಧ ಹಂತಗಳಾದ ಹೂವಾಡುವ ಹಂತ (60-75 ದಿನಗಳು), ಕಾಯಿ ಕಟ್ಟುವ ಹಂತ (80-95 ದಿನಗಳು) ಕಾಯಿ ಬಲಿಯುವ ಹಂತ (100-110 ದಿನಗಳು) ಗಳಲ್ಲಿ  ಶೇ.1 ರ ಮೆಗ್ನಿಷಿಯಂ ಸಲ್ಫೇಟ್ ಜೊತೆಯಲ್ಲಿ ಶೇ.1 ರ 19 :19 :19 (ನೀರಿನಲ್ಲಿ ಕರಗುವ ಗೊಬ್ಬರ, ಒಂದು ಕೆಜಿ ಪ್ಯಾಕೆಟ್ ನಲ್ಲಿ ಲಭ್ಯವಿರುತ್ತದೆ.) ಗಳ ದ್ರಾವಣವನ್ನು ಸಿಂಪರಿಸಬೇಕು.
ಒಂದು ವೇಳೆ ದ್ಯುತಿಸಂಶ್ಲೇಷಣೆ ಕ್ರಿಯೆ ಕಡಿಮೆಯಾದರೆ ಬೆಳವಣಿಗೆ ಕುಂಠಿತವಾಗಿ ಮೊಗ್ಗು ಹಾಗೂ ಹೂಗಳಿಗೆ ಆಹಾರ ಸಿಗದೇ ಮೊಗ್ಗು ಮತ್ತು ಕಾಯಿಗಳು ಉದುರುತ್ತವೆ.  ಆದ್ದರಿಂದ ಎಲೆ ಕೆಂಪಾಗುವುದು ಕಂಡುಬಂದಾಗ ಶೇ.2ರ ಡಿ.ಎ.ಪಿ ದ್ರಾವಣವನ್ನು ಪ್ರತಿ ಎಕರೆಗೆ 200-300 ಲೀ ಸಿಂಪರಣೆ ಮಾಡುವುದು ಉತ್ತಮ.
ಡಿ.ಎ.ಪಿ ದ್ರಾವಣ ತಯಾರಿಕೆ : ಪ್ರತಿ ಲೀ. ನೀರಿಗೆ 20 ಗ್ರಾಂ. ಡಿ.ಎ.ಪಿ ಯನ್ನು ನೀರಿನಲ್ಲಿ ನೆನೆಸಿ ತಯಾರಿಸಿದ ದ್ರಾವಣವನ್ನು 12-18 ಗಂಟೆಗಳ ಕಾಲ ಇರಿಸಿ ನಂತರ ಸಿಂಪರಣೆ ಮಾಡುವುದು ಉತ್ತಮ.  ಕೇವಲ ತಿಳಿ ದ್ರಾವಣವನ್ನು ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ 200-300 ಲೀ. ದ್ರಾವಣ ಬೇಕಾಗುತ್ತದೆ.
 ಆದ್ದರಿಂದ ಆರಂಭಿಕ ಹಂತದಲ್ಲಿಯೇ ಹತೋಟಿ ಕ್ರಮ ಕೈಗೊಂಡರೆ ಗುಣಮಟ್ಟದ ಹತ್ತಿಯನ್ನು ಬೆಳೆಯಬಹುದು ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ  ಸಮೀಪದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *