ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುತ್ತಿವೆ, ಏಪ್ರಿಲ್ 1 ರಿಂದ ಜನಗಣತಿ (Census) ಕಾರ್ಯ ಆರಂಭವಾಗಲಿದೆ ಮತ್ತು ಪಿಯುಸಿ ಮೌಲ್ಯಮಾಪನ ಕಾರ್ಯವೂ ನಡೆಯಬೇಕಿದೆ ಈ ಎಲ್ಲಾ ಕಾರಣಗಳಿಂದ ಸಿಬ್ಬಂದಿ ಕೊರತೆ ಇದೆ ಆದಾಗ್ಯೂ ಉಪಚುನಾವಣೆಗೆ ಸಿಬ್ಬಂದಿ ಕೊರತೆ ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಚುನಾವಣಾಗೆ ಸಿಬ್ಬಂದಿಗಳ ನಿಯೋಜನೆ ಮತ್ತು ತರಬೇತಿ ಕುರಿತು ಮಾಹಿತಿ ನೀಡಿದರು.
ಮಾರ್ಚ್ 19 ದಾವಣಗೆರೆಯ ತುಂಗಭದ್ರಾ ಸಭಾಂಗಣದಲ್ಲಿ ಪಿಯುಸಿ ಉಪನ್ಯಾಸಕರಿಗೆ ಚುನಾವಣಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಈ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸಣ್ಣಪುಟ್ಟ ಕಾರಣಗಳನ್ನು ನೀಡಿ ಅಥವಾ ಚುನಾವಣೆ ಕರ್ತವ್ಯದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ವಿಶೇಷ ಚೇತನರಿಗೆ ಮಾತ್ರ ನಿಯಮಾನುಸಾರ ವಿನಾಯಿತಿ ನೀಡಲಾಗುವುದು ಎಂದರು.
ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ (EVM) ಯಂತ್ರಗಳ ಮೊದಲ ಹಂತದ ರ್ಯಾಂಡಮೈಸೇಶನ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನೇಮಿಸಿದ ಇಂಜಿನಿಯರ್ಗಳು ಇವಿಎಂ ಯಂತ್ರಗಳ ತಪಾಸಣೆ ನಡೆಸಿ ಪ್ರಮಾಣೀಕರಿಸಿದ್ದಾರೆ. ಎಲ್ಲಾ ಪ್ರಕ್ರಿಯೆಗಳನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆಸಲಾಗಿದೆ ಎಂದರು.
ಯಂತ್ರಗಳ ವಿವರ:
284 ಮತಗಟ್ಟೆಗಳಿಗಾಗಿ ತಲಾ 570 ಬಿಯು (BU), ಸಿಯು (CU) ಮತ್ತು ವಿವಿಪ್ಯಾಟ್ (VVPAT) ಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ತರಬೇತಿಗಾಗಿ 10% ಯಂತ್ರಗಳನ್ನು ಮೀಸಲಿಡಲಾಗಿದೆ. ರ್ಯಾಂಡಮೈಸೇಶನ್ ಪ್ರಕ್ರಿಯೆಯ ನಂತರ ಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಡಿ.ಆರ್.ಆರ್. ಶಾಲೆಯಲ್ಲಿನ ಭದ್ರತಾ ಕೊಠಡಿಯಲ್ಲಿ (Strong Room) ಇರಿಸಲಾಗುವುದು, ಮುಂದಿನ ಹಂತದಲ್ಲಿ ಎರಡನೇ ರ್ಯಾಂಡಮೈಸೇಶನ್ ಪ್ರಕ್ರಿಯೆ ನಡೆಯಲಿದ್ದು, ಆ ಸಂದರ್ಭದಲ್ಲಿ ಅಭ್ಯರ್ಥಿಗಳ ಪಟ್ಟಿ ಮತ್ತು ಬ್ಯಾಲೆಟ್ ಪೇಪರ್ ಅಳವಡಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಗೆ ಸುಮಾರು 361 ಪಿ.ಆರ್.ಒಗಳು, 341 ಎಪಿಆರ್ಒಗಳು ಸೇರಿದಂತೆ ಒಟ್ಟು 1,364 ಚುನಾವಣಾ ಸಿಬ್ಬಂದಿಯ ಅಗತ್ಯವಿದೆ. ಜಗಳೂರು, ಹರಿಹರ, ಚನ್ನಗಿರಿ ತಾಲ್ಲೂಕುಗಳ ಉಪನ್ಯಾಸಕರನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದುವರೆವಿಗೆ ಒಟ್ಟು 20.8 ಲೀಟರ್ ಮಧ್ಯವನ್ನು ವಶಪಡಿಸಿಕೊಳ್ಳಲಾಗಿದೆ, ಇದರ ಮೌಲ್ಯ ರೂ. 20,500/- ಗಳಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠಲ್ ರಾವ್ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಶೇ. 70 ರಷ್ಟು ಮತದಾನವಾಗಿದ್ದು ಇದರಲ್ಲಿ ನಗರ ಪ್ರದೇಶದಲ್ಲಿ .ಶೇ. 49 ರಷ್ಟು ಮಾತ್ರ ಮತದಾನವಾಗಿದೆ ಆದುದರಿಂದ ಈ ಬಾರಿ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಬಸ್ ನಿಲ್ದಾಣ , ಕಾಲೇಜುಗಳಲ್ಲಿ ಮತ್ತು ಜನಸಂದಣಿ ಇರುವ ಕಡೆ ಮತದಾನ ಜಾಗೃತಿ ಕಾರ್ಯಕರ್ಮಗಳನ್ನು ಕೈಗೊಳ್ಳಲಾಗಿದೆ, ಉಪ ಚುನಾವಣೆಯಲ್ಲಿ ಶೇ. 90 ಅಥವಾ 95 ರಷ್ಟು ಮತದಾನ ಪ್ರಮಾಣವನ್ನು ಹೆಚ್ಚಿಸಲು ಗುರಿ ಹೊಂದಲಾಗಿದೆ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ‘ಸಿ-ವಿಜಿಲ್’ ಆಪ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕರು ಯಾವುದೇ ದೂರುಗಳನ್ನು ಈ ಆಪ್ ಮೂಲಕ ಸಲ್ಲಿಸಬಹುದು ಎಂದು ತಿಳಿಸಿದರು.
