ದಾವಣಗೆರೆ ಡಿ.21 -“ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರಪ್ರೇಮಿ ಪಂಡಿತ್ ಜವಹರಲಾಲ್ ನೆಹರೂ ರವರು ಸಹಕಾರ ತತ್ವದಲ್ಲಿ ಅಚಲ ವಿಶ್ವಾಸವನ್ನು ಮತ್ತು ಬಧ್ದತೆಯನ್ನು ಇರಿಸಿಕೊಂಡಿದ್ದರು ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ಮುರುಗೇಶ್ ಹೇಳಿದರು.       ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಸಹಕಾರ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ, ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ ನಿ., ಹಾಗೂ ಎಸ್.ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆ ಇವರ ಸಹಯೋಗದೊಂದಿಗೆ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಹಕಾರ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.        ಸಹಕಾರ ತತ್ವದಿಂದ ಮಾತ್ರವೇ ರಾಷ್ಟ್ರದ ಅರ್ಥವ್ಯವಸ್ಥೆಗೆ ಹೊಸ ರೂಪ ನೀಡಲು ಸಾಧ್ಯ ಎಂದು ನೆಹರೂ ಭಾವಿಸಿದ್ದರು. ಆ ಕಾರಣದಿಂದಲೇ ರಾಷ್ಟ್ರದಲ್ಲಿ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ಬೆಂಬಲ, ಪ್ರೋತ್ಸಾಹ ನೀಡುತ್ತಾ ಸಹಕಾರ ಕ್ಷೇತ್ರದ ಮೂಲಕ ಜನ ಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸದೃಢÀಗೊಳಿಸಬೇಕು ಮತ್ತು ಪ್ರತಿ ಕುಟುಂಬವು ಕೂಡ ಆರ್ಥಿಕವಾಗಿ ಬಲಯುತಗೊಳ್ಳಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಶ್ರಮಪಟ್ಟು ಕೆಲಸ ಮಾಡಿರುತ್ತಾರೆ. ಭಾರತದ ಸಹಕಾರ ಚಳುವಳಿಗೆ 115 ವರ್ಷಗಳ ಭವ್ಯ ಇತಿಹಾಸವಿದೆ. ಈ ಚಳವಳಿಯು ಬೃಹತ್ತಾದದ್ದು ಮತ್ತು ಮಹತ್ತರವಾದದ್ದು. ಭಾರತದಲ್ಲಿ ಸಹಕಾರ ಆಂದೋಲನವು 1904 ರಲ್ಲಿ ಪ್ರಾರಂಭವಾಯಿತು. ದೇಶದಲ್ಲಿ ಮೊಟ್ಟಮೊದಲನೆಯ ಸಹಕಾರ ಸಂಘವು ಗದಗಿನ ಕಣಗಿನಹಾಳ್ ಗ್ರಾಮದಲ್ಲಿ ಎಸ್.ಎಸ್.ಪಾಟೀಲ್ (ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್) ಇವರ ನೇತೃತ್ವದಲ್ಲಿ ಪ್ರಾರಂಭವಾಯಿತು ಎಂದು ತಿಳಿಸಿದರು.        ಇಂತಹ ಸ್ಪರ್ಧಾ ಕಾರ್ಯಕ್ರಮಗಳಿಗೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಭಾಗಹಿಸಿರುವುದು ಸಂತಸದ ವಿಷಯ. ಭಾಗವಹಿಸಿದ ಮಕ್ಕಳಲ್ಲಿ ಬಹುಮಾನ ಪಡೆಯುವುದು ಕೆಲವೇ ಮಕ್ಕಳು ಮಾತ್ರ. ಆದ್ದರಿಂದ ಬಹುಮಾನ ಪಡೆಯದ ಮಕ್ಕಳು ನಿರಾಶರಾಗಬಾರದು. ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಪ್ರಮುಖವಾಗಿರುತ್ತದೆ. ‘ಸೋಲೇ ಗೆಲುವಿನ ಮೊದಲ ಮಟ್ಟಿಲು’ ಎಂದು ಭಾವಿಸಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.        ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಬಿ.ವಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ,  “ಜಿಲ್ಲೆಯಲ್ಲಿ ಅನೇಕ ಸಹಕಾರ ಸಂಘಗಳು ಲಾಭದಾಯಕವಾಗಿದ್ದು, ಭ್ರಷ್ಟಾಚಾರ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಚಳವಳಿಯಿಂದ ಮಾತ್ರ ಗ್ರಾಮೀಣಾಭಿವೃದ್ದಿ ಸಾಧ್ಯವಾಗಿದೆ. ರೈತರಿಗೆ ಬೇಕಾಗುವ ಬೀಜ, ಗೊಬ್ಬರ, ಕೃಷಿ ಉಪಕರಣಗಳು ಸಹಕಾರ ಸಂಘಗಳಿಂದ ದೊರೆಯುತ್ತಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಹಕಾರಿ ಚಳವಳಿ ಬಗ್ಗೆ ತಿಳಿಯಲು ಹಾಗೂ ಸಹಕಾರಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ದಾವಣಗೆರೆ ಯೂನಿಯನ್ ವತಿಯಿಂದ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದ ಅವರು ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿರುವ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು.       ಕಾರ್ಯಕ್ರಮದಲ್ಲಿ ಚರ್ಚಾಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.       ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ  ಡಿ.ಎಂ. ಮುರುಗೇಂದ್ರಯ್ಯ, ಜಿಲ್ಲಾ ಸಹಕಾರ ಯೂನಿಯನ್ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ  ಕೆ.ಹೆಚ್. ಸಂತೋಷ್‍ಕಮಾರ್ ಮತ್ತು  ವ್ಯವಸ್ಥಾಪಕ ಕೆ.ಎಂ.ಜಗದೀಶ್ ಸೇರಿದಂತೆ ಇತರರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *