ತುಮಕೂರು ಜ.೨: ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ ೬ ಕೋಟಿ ಕುಟುಂಬಗಳಿಗೆ ೧೨ ಸಾವಿರ ಕೋಟಿ ರೂ.ಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಟನ್ ಒತ್ತುವ ಮೂಲಕ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ೬ ಕೋಟಿ ರೈತರ ಕುಟುಂಬಗಳಿಗೆ ೧೨,೦೦೦ ಕೋಟಿ ರೂ.ಗಳ ನಗದು ವರ್ಗಾವಣೆ ಹಾಗೂ ೨೦೧೬-೧೭ ಹಾಗೂ ೨೦೧೭-೧೮ನೇ ಸಾಲಿನ ಕೃಷಿ ಕರ್ಮಣ ಪ್ರಶಸ್ತಿ ವಿತರಣೆ ಹಾಗೂ ಮೀನುಗಾರರಿಗೆ ಸೌಲಭ್ಯ ವಿತರಣೆ ಮಾಡಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೊದಲು ಕನ್ನಡದಲ್ಲಿಯೇ ಮಾತು ಆರಂಭಿಸಿ ಹೊಸ ವರುಷದ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.
ಅನ್ನದಾತರ ದರ್ಶನ ಪಡೆಯುತ್ತಿರುವುದು ನನ್ನ ಭಾಗ್ಯ. ದೇಶದ ಅನ್ನದಾತರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೇ ದೇಶದಲ್ಲಿ ದಾಖಲೆ ಮಟ್ಟದಲ್ಲಿ ಆಹಾರ ಉತ್ಪಾದನೆಯಾಗಿದೆ ಎಂದರಲ್ಲದೇ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಕೃಷಿ ಕರ್ಮಣ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಮತ್ತು ತಮಿಳುನಾಡಿನ ಆಳದ ಮೀನುಗಾರಿಕೆ ಮಾಡಲು ಯಂತ್ರಗಳನ್ನು ಪಡೆದ ಮೀನುಗಾರರಿಗೆ ಅಭಿನಂದನೆ ಸಲ್ಲಿಸಿದರು.
ದೇಶದಲ್ಲಿ ಈ ಮೊದಲು ೧೫ ಪೈಸೆ ಹಣ ರೈತರಿಗೆ ತಲುಪಿದರೆ ೮೫ ಪೈಸೆ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಆದರೆ ಇಂದು ದೆಹಲಿಯಲ್ಲಿ ಬಿಡುಗಡೆ ಮಾಡುವ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ ಎಂದರಲ್ಲದೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ನೋಂದಣಿಯಾಗದ ಎಲ್ಲಾ ರೈತರು ಈ ವರ್ಷದಲ್ಲಿ ಈ ಯೋಜನೆಯಡಿ ಸೇರ್ಪಡೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಕೃಷಿಕರಿಗೆ ಸಂಬಂಧಿಸಿದಂತೆ ನೀರಾವರಿ ಯೋಜನೆ, ಫಸಲ್ ಬಿಮಾ ಯೋಜನೆ, ಮಣ್ಣು ಪರೀಕ್ಷೆ ಕಾರ್ಯ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಹಳ ವರ್ಷಗಳಿಂದ ಬೇಡಿಕೆ ಇದ್ದ ಕನಿಷ್ಟ ಬೆಂಬಲ ಬೆಲೆ ಒಂದೂವರೆ ಪಟ್ಟು ಹೆಚ್ಚಳ ಮಾಡಲು ಚಿಂತನೆ ಮಾಡಲಾಗಿದೆ ಎಂದರು. ಅಲ್ಲದೇ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ್ಣು-ತರಕಾರಿಗಳ ಶೇಖರಣೆಯ ಕ್ಷಮತೆಯನ್ನು ಹೆಚ್ಚಿಸಲಾಗುವುದು ಎಂದರು.
ದೇಶದ ಆರ್ಥಿಕತೆಗೆ ೫ ಟ್ರಿಲಿಯನ್ ಕೊಡುಗೆ ನೀಡುತ್ತಿರುವ ಕೃಷಿಯನ್ನು ರಫ್ತು ಕೇಂದ್ರಿತವಾಗಿ ಮಾಡಲಾಗುವುದು. ದಕ್ಷಿಣ ಭಾರತದಲ್ಲಿ ಪ್ರಕೃತಿದತ್ತವಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅವಕಾಶವಿದೆ. ಇದಕ್ಕೆ ಕಾರಣವೆಂದರೆ ಇಲ್ಲಿನ ಮಣ್ಣು, ಹವಾಮಾನ ಇದರ ಜೊತೆಗೆ ಸಮುದ್ರ ಸಮೀಪವಿರುವ ವ್ಯವಸ್ಥೆಯಾಗಿದೆ. ಆದ್ದರಿಂದ ದಕ್ಷಿಣ ಭಾರತದ ಈ ಶಕ್ತಿ ವ್ಯವಸ್ಥೆಯನ್ನು ನ್ಯೂ ಇಂಡಿಯಾ ರಫ್ತು ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಬೆಳಗಾಂ-ಮೈಸೂರಿನಿಂದ ಬಾದಾಮಿ, ಚಿಕ್ಕಬಳ್ಳಾಪುರ-ಬೆಂಗಳೂರಿನಿಂದ ಈರುಳ್ಳಿ, ಕೊಡಗು-ಚಿಕ್ಕಮಗಳೂರು ಜಿಲ್ಲೆಯಿಂದ ಕಾಫಿ ಹಾಗೂ ಒಣಮೆಣಿಸಿಕಾಯಿಯನ್ನು ಬೆಳೆಯುತ್ತಿದ್ದು, ಈ ಪದಾರ್ಥಗಳಿಗೆ ಕ್ಲಸ್ಟರ್ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಅಲ್ಲದೇ ಭಾರತದ ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ರಫ್ತಿನಲ್ಲಿ ಸುಮಾರು ೧೫ ಸಾವಿರ ಕೋಟಿಯಿಂದ ೧೯ ಸಾವಿರ ಕೋಟಿಯವರೆಗೆ ಹೆಚ್ಚಳವಾಗಿದೆ ಎಂದರು.
ದಕ್ಷಿಣ ಭಾರತದಲ್ಲಿ ತೆಂಗು, ಗೋಡಂಬಿ ಬೆಳೆಗಳನ್ನು ಬೆಳೆಯುತ್ತಿದ್ದು, ಕರ್ನಾಟಕದಲ್ಲಿ ಸುಮಾರು ೫೫೦ಕ್ಕೂ ಹೆಚ್ಚು ಸೊಸೈಟಿಗಳಿರುವ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತೆಂಗು ಬೆಳೆಗೆ ಸೂಕ್ತ ಬೆಲೆ ನೀಡಲಾಗುವುದು ಎಂದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಕಾರ್ಯಕ್ರಮ ಹಾಗೂ ದೇಶದ ಪ್ರಗತಿಪರ ರೈತರಿಗೆ ಪ್ರಶಸ್ತಿ ನೀಡಲು ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿರುವುದು ರಾಜ್ಯದ ಜನತೆಗೆ ಸಿಕ್ಕಂತಹ ಗೌರವ ಎಂದರು. ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ನಷ್ಟವಾಗಿರುವ ಬಗ್ಗೆ ಪ್ರಧಾನ ಮಂತ್ರಿಯವರ ಗಮನಕ್ಕೆ ತಂದಿದ್ದೇನೆ. ಕರ್ನಾಟಕಕ್ಕೆ ೫೦ ಸಾವಿರ ಕೋಟಿ ರೂ.ಗಳನ್ನು ಪ್ರಕೃತಿ ಪರಿಹಾರ ನಿಧಿಯಿಂದ ನೀಡುವಂತೆ ಪ್ರಧಾನ ಮಂತ್ರಿಗಳಲ್ಲಿ ಕೋರಿದರು.
ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಈ ಯೋಜನೆಗಾಗಿ ಕರ್ನಾಟಕ ರಾಜ್ಯಕ್ಕೆ ೫೦ ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಜೋಶಿ, ಸದಾನಂದಗೌಡ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯ ಸಚಿವರಾದ ವಿ.ಸೋಮಣ್ಣ, ಜೆ.ಸಿ ಮಾಧುಸ್ವಾಮಿ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲು ಸೇರಿದಂತೆ ಮತ್ತಿತರು ಉಪಸ್ಥಿತ

Leave a Reply

Your email address will not be published. Required fields are marked *