ದಾವಣಗೆರೆ ಜ.03
ಜಿಲ್ಲೆಯಲ್ಲಿ ಧೂಮಪಾನ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಂದು ವೇಳೆ ಅನಧಿಕೃತವಾಗಿ ಧೂಮಪಾನ ವಲಯಗಳು ಇದ್ದಲ್ಲಿ ಅಂತಹ ಸನ್ನದುಗಳ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದೆಂದು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಟಿ.ನಾಗರಾಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ದಾವಣಗೆರೆ, ಇವರ ವತಿಯಿಂದ ಜ. 3 ರಂದು ಅಬಕಾರಿ ಇಲಾಖೆಯ ಉಪ ಆಯುಕ್ತರ ಕಚೇರಿ, ದಾವಣಗೆರೆ ಇಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಹಾಗೂ ಉಪ ಅಧೀಕ್ಷಕರುಗಳಿಗೆ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2003 ಮತ್ತು ತಂಬಾಕು ಮುಕ್ತ ದಾವಣಗೆರೆ ಮಾಡುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾರ್ & ರೆಸ್ಟೋರೆಂಟ್‍ಗಳಲ್ಲಿ ಕೋಟ್ಪಾ ಕಾಯ್ದೆಯ ಸೆಕ್ಷನ್ 4 ರಂತೆ ಧೂಮಪಾನ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಅಬಕಾರಿ ಇಲಾಖೆಯ ಆಯುಕ್ತರ ಕಚೇರಿಯ ಸುತ್ತೋಲೆ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಬಾರ್ & ರೆಸ್ಟೋರೆಂಟ್‍ಗಳನ್ನು ಸಂಪೂರ್ಣವಾಗಿ ಧೂಮಪಾನ ಮುಕ್ತ ಪ್ರದೇಶಗಳನ್ನಾಗಿ ಮಾಡಲಾಗುವುದು ಎಂದರು.
ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಡಿ ರಾಘವನ್ ಮಾತನಾಡಿ, ನಗರದ ಎಲ್ಲಾ ಬಾರ್ & ರೆಸ್ಟೋರೆಂಟ್‍ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡುತ್ತಿರುವವರ ಮೇಲೆ ಕ್ರಮ ಕೈಗೊಂಡು ಅಬಕಾರಿ ಇಲಾಖೆ, ಮಹಾನಗರಪಾಲಿಕೆ, ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ ಧೂಮಪಾನದ ವಲಯ/ಅಡ್ಡಗಳನ್ನು ತೆರವುಗೊಳಿಸಲಾಗುವುದು. ಕೋಟ್ಪಾ ಕಾಯ್ದೆಯ ಅನ್ವಯ 30 ಕ್ಕೂ ಹೆಚ್ಚು ಆಸನವಿರುವ ಬಾರ್ & ರೆಸ್ಟೋರೆಂಟ್‍ಗಳಲ್ಲಿ ಧೂಮಪಾನ ಪ್ರದೇಶವನ್ನು ಸ್ಥಾಪಿಸಲು ಕಾನೂನಿನಡಿಯಲ್ಲಿ ಅವಕಾಶವಿದ್ದು ಪಾಲಿಕೆಯಿಂದ ಎನ್‍ಓಸಿ (NOC) ಪಡೆದ ನಂತರ ಧೂಮಪಾನ ವಲಯವನ್ನು ಸ್ಥಾಪಿಸಿ, ಬಾರ್ ರೆಸ್ಟೋರೆಂಟ್‍ಗಳಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧಿಸುವಂತೆ ಹೇಳಿದರು.
ಕಾರ್ಯಾಗಾರದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಸತೀಶ್ ಕಲಹಾಳ ಮಾತನಾಡಿ, ಕೋಟ್ಪಾ ಕಾಯ್ದೆ ಸೆಕ್ಷನ್ 4, 5 6ಎ, 6ಬಿ ಮತ್ತು 7ರ ಬಗ್ಗೆ ವಿವರವಾದ ಮಾಹಿತಿ ತಿಳಿಸಿದರು. ಮಾಯ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕರಾದ ಜಿತಿನ್ ಚಂದ್ರನ್ ಮಾತನಾಡಿ, ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಧೂಮಪಾನ ವಲಯದ ಬಗ್ಗೆ ವಿವರಿಸಿದರು.
ಸಮಾಜ ಕಾರ್ಯಕರ್ತರಾದ ದೇವರಾಜ್ ಕೆ.ಪಿ ಕಾರ್ಯಕ್ರಮ ನಿರೂಪಸಿ, ವಂದನಾರ್ಪಣೆ ಮಾಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.