ನಮ್ಮ ಹೊಳೆ , ನಮ್ಮೂರ ಹೊಳೆ , ಹೊನ್ನಾಳಿ ಹೊಳೆ , ಬೇಲಿಮಲ್ಲೂರು ಹೊಳೆ , ತುಂಗಭದ್ರಾ ಹೊಳೆ.
ಇನ್ನೆರಡು ವರ್ಷಕ್ಕೆ ಬರಬ್ಬರಿ 100 ವರ್ಷ. ಮೂರು ಲಕ್ಷದ ಇಪ್ಪತ್ತೆಂಟು ಸಾವಿರ ರೂಪಾಯಿ ವೆಚ್ಚದ ಹೊಳೆ.
ನಾವ್ ಬಾಲ್ಯದಲಿ ಈ ಹೊಳಿಯಾಗೆ ಮೈ ತೊಳೆದದ್ದು , ಎಮ್ಮೆಬಾಲ ಹಿಡ್ಕೊಂಡು ಈಚಾಡಿದ್ದು , ಪಕ್ಕದ್ಮನಿಯೋರು ಅದನ್ನನೋಡಿ ನಮ್ಮ ಅವ್ವಗೆ ಕಂಪ್ಲೇಂಟ್ ಹೇಳಿ ಒಡೆಸಿದ್ದು ,
ವಾರಕ್ಕೊಮ್ಮೆ ಬಟ್ಟೆ ಒಗಿದದ್ದು , ಕಲ್ಲುಬಂಡೆಯಲ್ಲಿನ ಪಾತ್ರೆ ಆಕಾರದ ಗುಂಡಿಯಲ್ಲಿ , ನೀರುಹಾಕಿ ನೀಲಿಪುಡಿ ಸುರಿದು ನಮ್ಮ ಜಂಪರ್ , ಬಿಳಿ ಪಂಚಿ , ಟವಲ್ ಎದ್ದಿ ಒಣಗಿಸಿದ್ದು ,
ನಮ್ಮ ಕಕ್ಕರಜೊತೆ ಕುಡಿಯಾಕ ದಿನಾ ಒಂದು ಗಡಿಗೆ ಹೊಳೆನಿರು ತರೋದು , ವಾರಕ್ಕೊಮ್ಮೆ ಎತ್ತುಗಳ ಮೈತೊಳಿಯೋದು ,
ಹೊಳೆಯಲ್ಲಿ ನಮ್ಮ ಅಜ್ಜನ ಜೊತೆ ಪುಂಡಿಗಿಡ , ರಗಸಪಟ್ಟೆನ ನಿರಾಗೆ ಅದ್ದಿ ಮೇಲೆ ದಪ್ಪದಪ್ಪ ಕಲ್ ಹೇರಿ ಒಂದು ತಿಂಗಳು ಬಿಟ್ಟು ಹೊರತೆಗೆದು ಕಲ್ಲಿಗೆ ಬಡಿತಿದ್ವಿ. ಅದರಿಂದ ಬರೋ ನಾರಿನಲ್ಲಿ ಬಾರಿಕೋಲಿನ ಹಗ್ಗ , ಪಟಗಣ್ಣಿ , ಮೂಗುದಾರ,ಸಣ್ಣ ಸಣ್ಣ ಮಿಣಿ ಹೊಸಿಯೋ ಕಲಾತ್ಮಕ ಕೈಚಳಕ ಯಪ್ಪೋ ಬಣ್ಣಿಸಲಸದಳವು.
ಹೊಳೆರಾಮಪ್ಪನ ಗುಡಿಯಾಗೆ ಮಹೇಶ್ವರಿ ಜಾತ್ರಿಯಲ್ಲಿ ಅನ್ನ , ಬಾಳೆಹಣ್ಣು , ಹಾಲು , ತುಪ್ಪ , ಬೆಲ್ಲ ಹಾಕಿಸಿಕೊಂಡು ಕಲಸಿ ತಿಂದದ್ದು ,
ಗಣಪ್ಪನ ಹಬ್ಬದಾಗ ಹೋಳಿಯಾಗ ಗಣಪತಿ ಬಿಡೋ ಸಂಭ್ರಮ ,
ಹೊಳೆಯ ಎರಡೂ ದಂಡಿಮ್ಯಾಲೆ ಬೆಳೆಯೋ ಬನಾಸ್ಪತ್ರಿ ಹಣ್ಣು ತಿಂದದ್ದು ,
ಹೀಗೆ ನೆನಪುಗಳು…..ಇನ್ನೂ ಹಸಿರು , ಹಚ್ಚಹಸಿರು.
ಓ ನೆನಪುಗಳೇ ಮಾಸದಿರಿ.
ಬೇಂದ್ರೆ ಅಜ್ಜ ನೆನಪಾಗ್ತಾರೆ….ನೆನಪಿನ ಓಣಿಯೊಳಗ ಮಿಣುಕುತೈತಿ ಎಣ್ಣೆದೀಪ , ಎಲ್ಲಿಓದಾವೋ ಆ ಕಾಲ. ಕಣ್ಣು ಆಗತೈತ ತೇಲಮೇಲ.
ಡಾ.ಎಂ.ಈ.ಶಿವಕುಮಾರ ಹೊನ್ನಾಳಿ
ರಾಣೇಬೆನ್ನೂರು.
Dr. M E Shivakumar Honnali
Professor
Department of Mathematics
S T J Institute of Technology
Ranebennur-581 115
Haveri-Dist,
Karanataka, India.