ದಾವಣಗೆರೆ ಜ.23
ಬಾಲ್ಯವಿವಾಹ ನಿಷೇಧದ ಕುರಿತು ಎಷ್ಟೇ ಅರಿವು ಮೂಡಿಸಿದರೂ ಸಹ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಾಲ್ಯವಿವಾಹಗಳು ನಡೆಯುತ್ತಿವೆ. ಇದರ ವಿರುದ್ಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜವಾಬ್ದಾರಿಯಿಂದ ನಡೆದುಕೊಂಡು ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ ಇವರ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಹೊಸ ಜೆ.ಜೆ ಕಾಯ್ದೆ”ಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಕ್ಕಳ ಮೇಲೆ ಬಹಳಷ್ಟು ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಮಕ್ಕಳ ಮಾರಾಟದ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಾನೂನಿನ ರೀತಿಯಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸಿದರೆ ಮಾತ್ರ ಮುಂದೆ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ. ಬಡತನದ ಕಾರಣದಿಂದ ಕೆಲವರು ಮಕ್ಕಳನ್ನು ಮಾರಾಟ ಮಾಡುತ್ತಾರೆ. ಆದರೆ ಬಡತನ ಎಂಬುದು ಶಾಪವಲ್ಲ. ಅದೊಂದು ವರ. ಅದನ್ನು ಧೈರ್ಯವಾಗಿ ಎದುರಿಸಿ ನಿಲ್ಲುವವನೇ ನಿಜವಾದ ಸಾಧಕ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಮಹಿಳಾ ಠಾಣೆಗೆ ದಿನನಿತ್ಯ 200 ರಿಂದ 300 ಜನ ನೊಂದ ಮಹಿಳೆಯರು ಬರುತ್ತಾರೆ. ಅವರಿಗೆ ನ್ಯಾಯ ಸಿಗಬೇಕಾದರೆ ಕನಿಷ್ಟ 6 ತಿಂಗಳಿಂದ 1 ವರ್ಷ ಕಾಯಬೇಕಾದ ವ್ಯವಸ್ಥೆ ಇದೆ. ಆದ್ದರಿಂದ ಮೊದಲು ಠಾಣೆಗೆ ಬರುವ ನೊಂದ ಮಹಿಳೆಯರಿಗೆ ಮಾನಸಿಕವಾಗಿ ಸಾಂತ್ವನ ನೀಡಿ ಆತ್ಮಸ್ಥೈರ್ಯ ತುಂಬಬೇಕು. ಕಾನೂನು ಮತ್ತು ಇಲಾಖೆ ನಮ್ಮ ಪರವಾಗಿ ಇದೆ ಎಂಬ ಭಾವನೆಯನ್ನು ನೊಂದವರಲ್ಲಿ ಮೂಡಿಸಬೇಕು ಎಂದರು.
ಮಹಿಳಾ ಪೊಲೀಸ್ ಠಾಣೆಗೆ ಬರುವ ಮಹಿಳೆಯರಿಗೆ ಮತ್ತು ಸಿಬ್ಬಂದಿಗÀಳಿಗೆ ಸಿಎಸ್‍ಆರ್ ಯೋಜನೆಯಡಿಯಲ್ಲಿ ಠಾಣೆಯಲ್ಲಿ 2 ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ಸೌಲಭ್ಯ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಸಲಾಗುತ್ತಿದೆ. ಮಹಿಳಾ ಠಾಣೆಯ ಪೊಲೀಸರು ಈ ತರಹದ ಕಾರ್ಯಗಾರಗಳ ಸದುಪಯೋಗ ಮಾಡಿಕೊಂಡು, ಠಾಣೆಗೆ ದೂರು ನೀಡಲು ಬರುವ ನೊಂದ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತವಾದ ತನಿಖೆಯನ್ನು ಕೈಗೊಂಡು ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ, ಹಾವೇರಿ ಪೊಲೀಸ್ ಇಲಾಖೆಯ ಮಲ್ಲಪ್ಪ ಜಲಗಾರ್, 2015 ರ ನವೀಕೃತ ಹೊಸÀ ಜೆ.ಜೆ ಕಾಯ್ದೆ ಬಗ್ಗೆ ವಿಷಯ ಮಂಡನೆ ಮಾಡಿ ಬಾಲ್ಯ ವಿವಾಹ, ಬಾಲ ಅಪರಾಧಗಳು, ಬಾಲ ನ್ಯಾಯ ವ್ಯವಸ್ಥೆಗಳು, ಪೋಷಣೆ ಮತ್ತು ರಕ್ಷಣೆ ಬೇಕಾದ ಮಕ್ಕಳು, ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕ ಕಲಂ-107, ಮಕ್ಕಳ ನ್ಯಾಯ ಮಂಡಳಿ, ಮಕ್ಕಳ ಪ್ರಕರಣ ನಿರ್ವಹಣೆಯಲ್ಲಿ ಗಮನಿಸಬೇಕಾದ ದಾಖಲೆಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಿಜಯ್ ಕುಮಾರ್ ಕೆ.ಎಚ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರಾಮಾನಾಯ್ಕ್ ವೈ, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.