ಹುಬ್ಬಳ್ಳಿ:
ದಿನಾಂಕ 22.02.2020

ಪಾಪು’ ಎಂದೇ ಗುರ್ತಿಸಲ್ಪಡುವ, ಕರ್ನಾಟಕ ಏಕೀಕರಣ ರೂವಾರಿ, ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ,ಶತಾಯುಷಿ ಪಾಟೀಲ್ ಪುಟ್ಟಪ್ಪನವರು ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಖುದ್ದಾಗಿ ಭೇಟಿ ಪಾಪುರವರ ಆರೋಗ್ಯ ವಿಚಾರಿಸಿದರು.

ಪಾಪುರವರ ಆರೋಗ್ಯತೊಂದರೆಯ ಮಾಹಿತಿಯನ್ನು ಕಿಮ್ಸ್ ನಿರ್ದೇಶಕರು ಹಾಗೂ ಕರ್ತವ್ಯ ವೈದ್ಯರಿಂದ ಪಡೆದ ಶ್ರೀಗಳವರು ಶ್ವಾಸಕೋಶ ಹಾಗೂ ಉಸಿರಾಟ ವಯೋಸಹಜ ತೊಂದರೆಯಿಂದ ಪಾಟೀಲ್ ಪುಟ್ಟಪ್ಪನವರು ಬಳಲಿದ್ದು ಆರೋಗ್ಯ ಚೇತರಿಕೆ ಕಂಡುಬರುತ್ತಿರುವುದಾಗಿ ತಿಳಿದು ಬಂದಿದೆ. ಜನವರಿ 14.1919 ರಲ್ಲಿ ಹಾವೇರಿ ಜಿಲ್ಲೆಯ ಕುರುಬಗೊಂಡನಹಳ್ಳಿಯಲ್ಲಿ ಜನಿಸಿದ ಪಾಟೀಲ್ ಪುಟ್ಟಪ್ಪನವರು 101 ವಸಂತಗಳನ್ನು ಪೂರೈಸಿದ್ದಾರೆ. ಪಾಟೀಲ್ ಪುಟ್ಟಪ್ಪನವರು ಶ್ರೀ ಜಗದ್ಗುರುಗಳವರ ದರ್ಶನದಿಂದ ಉಲ್ಲಾಸಿತರಾಗಿ ಚಟುವಟಿಕೆಯಿಂದ ಇದ್ದಿದ್ದು ಸ್ಥಳದಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಪಾಪು ತರಳಬಾಳು ಬೃಹನ್ಮಠದ ಹಿರಿಯ ಕೊಂಡಿ

ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠಕ್ಕೂ ಪಾಟೀಲ್ ಪುಟ್ಟಪ್ಪನವರಿಗೂ ಕಳೆದ ಎಂಟು ದಶಕಗಳ ಅವಿನಾಭಾವ ಗುರು ಶಿಷ್ಯ ಸಂಬಂಧವಿದೆ. ಹಿರಿಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ನಿರ್ಮಲ ಹಾಗೂ ನೇರ ನಿಶ್ಕಲ್ಮಷ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದ ಪಾಟೀಲ್ ಪುಟ್ಟಪ್ಪನವರು ಅಂದಿನಿಂದಲೂ ಶ್ರೀ ಬೃಹನ್ಮಠದ ಶಿಷ್ಯ ಪ್ರಮುಖರಲ್ಲಿ ಓರ್ವರಾಗಿದ್ದಾರೆ. ಅವರ ಎಲ್ಲಾ ಹೋರಾಟ, ಚಳುವಳಿಗೆ ಶ್ರೀ ಬೃಹನ್ಮಠವು ಬೆಂಬಲ ಮತ್ತು ಮಾರ್ಗದರ್ಶನ ಮಾಡುತ್ತಾ ಬಂದಿದೆ. ವಿದ್ವತ್ಪೂರ್ಣ ಮಹಾನ್ ವೇದಿಕೆ ಎಂದೇ ಸುಪ್ರಸಿದ್ದಿಯಾದ ತರಳಬಾಳು ಹುಣ್ಣಿಮೆ ಮಹೋತ್ಸವ ಗಳಲ್ಲಿ ನಿರಂತರವಾಗಿ ಭಾಗವಹಿಸಿ ಅದರಲ್ಲಿರೂ ಕೊನೆಯ ದಿನವೇ ನನಗೆ ಉಪನ್ಯಾಸ ನೀಡುವಂತೆ ಮನವಿಯನ್ನು ಮಾಡುತ್ತಾ ರಾಜಕೀಯ ನೇತಾರರಿಗೆ ಕನ್ನಡದ ಕೆಲಸಕ್ಕೆ ಅಣಿಯಾಗಲು ಎಚ್ಚರಿಸುತ್ತಿದ್ದರು.ಲಿಂಗೈಕ್ಯ ಹಿರಿಯ ಶ್ರೀ ಜಗದ್ಗುರುಗಳ ಶ್ರದ್ಧಾಂಜಲಿಯಲ್ಲಿ ಭಕ್ತಿ ನುಡಿನಮನವು ಪಾಟೀಲ್ ಪುಟ್ಟಪ್ಪ ನವರಿಗೆ ಮೀಸಲಾಗಿದ್ದಿದ್ದು ಅವರಿಗೆ ಶಿಷ್ಯ ಭಕ್ತಿಯ ಗೌರವದ ದ್ಯೋತಕದಂತಿತ್ತು.

ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾತೃಸ್ವರೂಪ ಪ್ರೇಮವನ್ನು ಆರಾಧಿಸುತ್ತಾ ಅವರ ವಿದ್ವತ್ ಪ್ರಭೆಗೆ ಬೆರಗಾಗಿದ್ದ ಪಾಪುರವರು, ಶ್ರೀ ಜಗದ್ಗುರುಗಳವರ ಎಲ್ಲಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ , ರೈತಮುಖಿ ಯೋಜನೆಗಳ ಯಶಸ್ವಿಗೆ ಬಹು ಮೆಚ್ಚುಗೆ ವ್ಯಕಪಡಿಸುತ್ತಿದ್ದರು. ಪಾಟೀಲ್ ಪುಟ್ಟಪ್ಪನವರು ಈ ಭಾರಿ ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಲು ಆರೋಗ್ಯದ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ.

ಪಾಟೀಲ್ ಪುಟ್ಟಪ್ಪನವರಿಗೆ 2019 ರ ಜನವರಿ ತಿಂಗಳಲ್ಲಿ ನೂರು ವಸಂತಗಳನ್ನು ಪೂರೈಸಿದ್ದ ಸಾರ್ಥಕ ಸಮಯದಿ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹುಬ್ಬಳ್ಳಿಯ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವದಿಸಿ ಶುಭ ಹಾರೈಸಿದ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಕುರಿತಾದ ತಮ್ಮ ಹೋರಾಟದ ಹಳೆಯ ನೆನಪುಗಳ ಸುರಳಿಯನ್ನು ಪಾಪು ಶ್ರೀ ಜಗದ್ಗುರುಳವರ ಮುಂದೆ ಬಿಚ್ಚಿಟ್ಟರು. ರಾಜಕೀಯ ಮುಖಂಡರಿಗೆ ನಾಡು ನುಡಿಯ ವಿಷಯಗಳು ಪ್ರಥಮ ಆದ್ಯತೆ ಆಗಬೇಕು.ಆದರೆ ಅವರಿಗೆ ಇವು ಕೊನೆಯ ಆದ್ಯತೆಗಳಾಗಿರುವುದು ವಿಷಾದಕರವೆಂದು ಪಾಪು ಅನಿಸಿಕೆ ವ್ಯಕ್ತಪಡಿಸಿದರು. “ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿ ಭಾಗವಹಿಸಿದ್ದರು. ಉದ್ಘಾಟನೆ ಮುಗಿಸಿ ಹೊರಡಲು ವೇದಿಕೆ ಇಳಿದು ಹೊರಡಲು ಮುಂದಾದರು. ಆಗ ನಾನು ಸಮ್ಮೇಳನಾಧ್ಯಕ್ಷರ ಭಾಷಣ ಇನ್ನೂ ಮುಗಿದಿಲ್ಲ. ನಾಡಿನ ಮುಖ್ಯಮಂತ್ರಿಯಾದ ನೀವು ಅದು ಹೇಗೆ ಸಮ್ಮೇಳನಾಧ್ಯಕ್ಷರ ಭಾಷಣ ಕೇಳದೆ ಹೋಗುತ್ತೀರಿ ಎಂದು ಜಬರಿಸಿದೆ. ಕುರ್ಚಿಯಿಂದ ಮೇಲೆದ್ದ ಮುಖ್ಯಮಂತ್ರಿಗಳು ಪುನಃ ಕುಳಿತರು’’ ಎಂದು ಹಳೆಯ ನೆನಪನ್ನು ಅವರು ಬಿಚ್ಚಿಟ್ಟರು.

ಪಾಪು ಅವರ ಅದ್ಭುತ ನೆನಪಿನ ಶಕ್ತಿಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ತರಳಬಾಳು ಶ್ರೀಗಳವರು ನಾಡು ನುಡಿಗಳ ಬಗೆಗಿನ ಅವರ ಕಾಳಜಿಯನ್ನು ರಾಜಕೀಯ ನೇತಾರರು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೆ ಅವರು ಚಿರಕಾಲ ಆರೋಗ್ಯದಿಂದ ಇದ್ದು ಕನ್ನಡ ನಾಡು ನುಡಿಗಳಿಗೆ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಒಂದು ಲಕ್ಷ ರೂಗಳ ನಿಧಿಯನ್ನು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು.

Leave a Reply

Your email address will not be published. Required fields are marked *