ರಾಜ್ಯ ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳನ್ವಯ ಕೊರೊನಾ ವೈರಸ್(ಅಔಗಿIಆ-19)ಸೋಂಕನ್ನು ತಡೆಗಟ್ಟಲು ಮತ್ತು ನಿಯಂತ್ರಣಕ್ಕೆ ಈ ಕೆಳಕಂಡಂತೆ ಕ್ರಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
• ದಾವಣಗೆರೆ ಜಿಲ್ಲೆಗೆ ಆಗಮಿಸುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರನ್ನು (ಭಾರತೀಯರು ಹಾಗೂ ವಿದೇಶಿಯರು) ರೋಗ ಲಕ್ಷಣ ಇಲ್ಲದಿದ್ದರೂ ಸಹ 14 ದಿನಗಳ ಕಾಲ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸತಕ್ಕದ್ದು ಹಾಗೂ ಈ ಯಾವ ವ್ಯಕ್ತಿಯನ್ನೂ ಸಹ ಸಂಪರ್ಕಿಸತಕ್ಕದ್ದಲ್ಲ.
• ಸಿನಿಮಾ ಮಂದಿರಗಳು ,ಮಾಲ್‍ಗಳು, ರಂಗಮಂದಿರಗಳು, ಪಬ್‍ಗಳು, ನೈಟ್ ಕ್ಲಬ್‍ಗಳು, ಸಂಗೀತ ಹಬ್ಬಗಳು ಹಾಗೂ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾ ಕೂಟಗಳನ್ನು ಹಾಗೂ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಹ ಮದುವೆ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸದಿರುವಂತೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಜಾತ್ರೆಗಳಿಗೆ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವಂತೆ ನೋಡಿಕೊಳ್ಳತಕ್ಕದ್ದು.
• ಈಜುಕೊಳ, ಜಿಮ್, ಬೇಸಿಗೆ ಶಿಬಿರ ಮುಂತಾದವುಗಳನ್ನು ಮುಚ್ಚತಕ್ಕದ್ದು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು, ಕೋಚಿಂಗ್ ಸೆಂಟರ್‍ಗಳನ್ನು ಮುಚ್ಚಲು ಸರ್ಕಾರವು ಹೊರಡಿಸಿರುವ ಸುತ್ತೋಲೆ/ಆದೇಶ/ಅಧಿಸೂಚನೆಗಳಂತೆ ಕಡ್ಡಾಯವಾಗಿ ಕ್ರಮ ಕೈಗೊಳ್ಳತಕ್ಕದ್ದು.
• ಖಾಸಗಿ ವೈದ್ಯರುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳು 2020 ರ ಫೆಬ್ರವರಿ 20 ರ ನಂತರ ವಿದೇಶದಿಂದ ಬಂದು ರೋಗ ಲಕ್ಷಣಗಳಿರುವ ರೋಗಿಗಳು ಇದ್ದಲ್ಲಿ ತಡಮಾಡದೇ ಜಿಲ್ಲಾ ಆರೋಗ್ಯಾಧಿಕಾರಿಗೆ (ದೂ.ಸಂ: 9449843051) ಫೋನ್/ಫ್ಯಾಕ್ಸ್/ವಾಟ್ಸ್ಯಾಪ್ ಅಥವಾ ಸಹಾಯವಾಣಿ ಸಂಖ್ಯೆ 104ಕ್ಕೆ ತಿಳಿಸತಕ್ಕದ್ದು.
• ಕೋವಿಡ್-19 ಸೋಂಕು ಪೀಡಿತರಿಗೆ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಯಂತೆ(ಎಸ್‍ಓಪಿ) ವೈದ್ಯಕೀಯ ಉಪಚಾರ ಒದಗಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳು, ಮಾನವ ಸಂಪನ್ಮೂಲ ಇತ್ಯಾದಿ ವ್ಯವಸ್ಥೆಯನ್ನು ಕೈಗೊಳ್ಳತಕ್ಕದ್ದು.
ಈ ಮೇಲಿನ ಸೂಚನೆಗಳನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುವವರು ಭಾರತೀಯ ದಂಡ ಸಂಹಿತೆ 188 ರನ್ವಯ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *