ದಾವಣಗೆರೆ, ಮಾ.17
ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದಾದ್ಯಂತ ಕೊರೊನಾ (ಕೋವಿಡ್-19) ಸೋಂಕು ಹರಡುವಿಕೆಯನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕೊರೊನಾ (ಕೋವಿಡ್-19) ಸೋಂಕು ಹರಡುವಿಕೆಯನ್ನು ತಡೆಯಲು ಬಳಸುವ ವೈಯಕ್ತಿಕ ಸುರಕ್ಷತಾ ಸಾಧನಗಳಾದ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಅಗತ್ಯ ವಸ್ತುಗಳ ಕಾಯ್ದೆಯನ್ವಯ 2020 ರ ಜೂನ್ 30 ರವರೆಗೂ ಅಗತ್ಯ ವಸ್ತುಗಳೆಂದು ಘೋಷಿಸಿ,ಅಧಿಸೂಚನೆ ಹೊರಡಿಸಿದೆ.
ಜಿಲ್ಲೆಯ ಮೆಡಿಕಲ್ ಶಾಪ್ಗಳಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳ ಕೃತಕ ಅಭಾವವನ್ನು ಸೃಷ್ಟಿಸಿ ದಾಸ್ತಾನು ಖಾಲಿಯಾಗಿರುವುದಾಗಿ ಹೇಳುವುದರ ಮೂಲಕ ಎಂ.ಆರ್.ಪಿ ಗಿಂತ ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ, ಆಹಾರ ಇಲಾಖೆ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಾಶಾಸ್ತ್ರ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳನ್ನೊಳಗೊಂಡ ತಂಡವು ಸರ್ಕಾರದ ಆದೇಶಗಳಂತೆ ತನಿಖೆ/ತಪಾಸಣೆ ಕೈಗೊಂಡು ಕೋವಿಡ್-19 ಸೋಂಕು ತಡೆಗಟ್ಟಲು ಬಳಸುವ ವೈಯಕ್ತಿಕ ಸುರಕ್ಷತಾ ಸಾಧನಗಳಾದ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳ ಕೃತಕ ಅಭಾವ ಉಂಟಾಗದಂತೆ ಎಂ.ಆರ್.ಪಿ ದರದಲ್ಲಿ ಲಭ್ಯವಾಗುವಂತೆ ಕ್ರಮ ವಹಿಸಲಿವೆ.
ಹಾಗೂ ನಿಯಮಗಳನ್ನು ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1995 ಮತ್ತು ಪೊಟ್ಟಣ ಸಾಧನಗಳ ಕಾಯ್ದೆ 2009ರಡಿ ಆಹಾರ ಇಲಾಖೆ ಜಂಟಿ ನಿರ್ದೇಶಕರು, ದಾವಣಗೆರೆ ಉಪವಿಭಾಗದ ಎಸಿ, ಡಿಹೆಚ್ಓ, ಔಷಧ ನಿಯಂತ್ರಣ ಇಲಾಖೆಯ ಸಹಾಯಕ ನಿಯಂತ್ರಕರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಹಾಗೂ ಎಲ್ಲಾ ತಹಶೀಲ್ದಾರರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮುಂಜಾಗ್ರತೆಯಾಗಿ 2020 ರ ಜೂನ್ 30 ರವರೆಗೂ ಅಗತ್ಯ ತಪಾಸಣೆ ಕೈಗೊಳ್ಳಬೇಕೆಂದು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.