ದಾವಣಗೆರೆ ಮಾ.17
ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988 ಕಲಂ (41)(7) ರ ಅನ್ವಯ ಸಾರಿಗೇತರ (ನಾನ್ ಟ್ರಾನ್ಸ್‍ಪೋರ್ಟ್) ವಾಹನಗಳನ್ನು ನೋಂದಣಿ ದಿನಾಂಕದಿಂದ 15 ವರ್ಷಗಳಿಗೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನೋಂದಣಿಗೊಳ್ಳದ ವಾಹನಗಳು ರಸ್ತೆ ಮೇಲೆ ಸಂಚರಿಸಿದಾಗ ಅಪಘಾತ ಉಂಟಾದರೆ, ವಿಮಾ ಕಂಪನಿಯಿಂದ ಚಾಲ್ತಿ ಇರುವ ವಿಮೆ ಹೊಂದಿದ್ದರೂ ಸಹ ಪರಿಹಾರ ಸಿಗದೇ ಅಪಘಾತಕ್ಕಿಡಾದವರು ಮತ್ತು ವಾಹನ ಮಾಲೀಕರು ತೊಂದರೆ ಅನುಭವಿಸಬೇಕಾಗುತ್ತದೆ. ವಾಹನದ ಮಾಲೀಕರೇ ನಷ್ಟವನ್ನು ಭರಿಸಬೇಕಾಗುತ್ತದೆ. ನಿಯಮ ಬಾಹಿರವಾಗಿ ವಾಹನ ಓಡಿಸಿದ್ದಕ್ಕಾಗಿ ನೋಂದಣಿ ಪುಸ್ತಕದಲ್ಲಿ ಹೆಸರು ಇದ್ದವರೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ವಾಹನಗಳನ್ನು ನೋಂದಣಿ ಮಾಡಲು ಕೇಂದ್ರ ಮೋಟಾರು ವಾಹನಗಳ ನಿಯಮಾವಳಿಗಳು 1989ರ ನಿಯಮಾನುಸರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ನಮೂನೆ 25 ರೊಂದಿಗೆ ಸ್ಮಾರ್ಟ್‍ಕಾರ್ಡ್ ಅಥವಾ ನೋಂದಣಿ ಪುಸ್ತಕ, ಚಾಲ್ತಿ ವಿಮಾ ಪಾಲಿಸಿ, ಹೊಗೆ ತಪಾಸಣೆ ಪ್ರಮಾಣ ಪತ್ರ ಮತ್ತು ಆಧಾರಕಾರ್ಡ್‍ನ್ನು ಸಲ್ಲಿಸಬೇಕು.
ದ್ವಿಚಕ್ರ ವಾಹನಕ್ಕೆ ಶುಲ್ಕ ರೂ.1,761 ಮತ್ತು ಮೋಟಾರು ಕಾರಿನ ಶುಲ್ಕ ರೂ. 2,811 ನ್ನು ಪಾವತಿಸಿ ಆರ್.ಟಿ.ಓ ಕಚೇರಿ ಮುಂದೆ ವಾಹನವನ್ನು ಪರಿಶಿಲನೆಗೆ ಹಾಜರುಪಡಿಸಬೇಕು. ನಂತರ ವಾಹನ ನಿರೀಕ್ಷಕರು ವಾಹನ ಪರೀಕ್ಷಿಸಿ ಯೋಗ್ಯವಾದ ವಾಹನಗಳ ನೋಂದಣಿ ನವೀಕರಣಕ್ಕೆ ಶಿಫಾರಸು ಮಾಡುತ್ತಾರೆ. ಮತ್ತು ರಸ್ತೆ ಮೇಲೆ ಸಂಚರಿಸಲು ಯೋಗ್ಯವಲ್ಲದ ವಾಹನಗಳ ನೋಂದಣಿ ರದ್ದತಿಗೆ ಶಿಫಾರಸು ಮಾಡುತ್ತಾರೆ. ಅಂತಹ ವಾಹನಗಳ ನೋಂದಣಿ ರದ್ದುಪಡಿಸಿ ನಡಾವಳಿ ನೀಡಲಾಗುವುದು.
ವಾಹನಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ವಾಹನ ಮಾಲೀಕರು ಸ್ವಯಂ ಪ್ರೇರಣೆಯಿಂದ ನೋಂದಣಿ ರದ್ದತಿಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಕಾರಣಕ್ಕೂ ನೋಂದಣಿ ರದ್ದತಿ ನಡಾವಳಿ ಪಡೆದುಕೊಳ್ಳದೇ ವಾಹನಗಳನ್ನು ಗುಜರಿಗೆ ಮಾರಾಟ ಮಾಡಿದರೆ ಅದು ಕಾನೂನು ಬಾಹಿರ ಕೃತ್ಯವಾಗುತ್ತದೆ.
ಒಂದು ವೇಳೆ ಬೇರೆಯವರಿಗೆ ವಾಹನವನ್ನು ಮಾರಾಟ ಮಾಡಿದಲ್ಲಿ ಖರೀದಿದಾರರಿಗೆ ಮಾಲೀಕತ್ವ ವರ್ಗಾವಣೆ ಮಾಡಿಸಿಕೊಂಡು ನೋಂದಣಿ ನವೀರಣ ಮಾಡಿಸಿಕೊಳ್ಳವಂತೆ ಸೂಚಿಸಬೇಕು. ಏಕೆಂದರೆ ಮಾಲೀಕತ್ವ ವರ್ಗಾವಣೆ ಆಗುವವರೆಗೂ ನೀವೇ ವಾಹನದ ಮಾಲೀಕರಾಗಿರುತ್ತೀರಿ. ಹಾಗೂ ವಾಹನಗಳ ಆಗು ಹೋಗುಗಳಿಗೆ ನೀವೇ ಹೊಣೆಗಾರರಾಗಿರುತ್ತೀರಿ. ಆದ್ದರಿಂದ ವಾಹನಗಳ ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ವಾಹನ ಚಲಾಯಿಸಬೇಕೆಂದು ಈ ಮೂಲಕ ವಾಹನ ಮಾಲೀಕರಿಗೆ ತಿಳಿಯಪಡಿಸಿದೆ. ಪ್ರತ್ಯೇಕ ನೋಟಿಸನ್ನು ವಾಹನದ ಮಾಲೀಕರಿಗೆ ನೀಡುವುದಿಲ್ಲ. ಇದನ್ನೇ ನೋಟಿಸ್ ಎಂದು ಭಾವಿಸಿ ವಾಹನಗಳ ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಯಪಡಿಸಿದೆ. ತಪ್ಪಿದಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳು ರಸ್ತೆ ಮೇಲೆ ಸಂಚರಿಸುವುದು ಕಂಡು ಬಂದಲ್ಲಿ ವಾಹನ ಜಪ್ತು ಮಾಡಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ.ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *