ಮಾ.19
ಹಕ್ಕಿಜ್ವರ ಕಂಡು ಬಂದ ಹರಿಹರ ತಾಲ್ಲೂಕಿನ ಬನ್ನಿಕೋಡು ಸೇರಿದಂತೆ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ವೈಜ್ಞಾನಿಕ ರೀತಿಯಲ್ಲಿ ಕೋಳಿಗಳನ್ನು ನಾಶಪಡಿಸುವಂತೆ(ಕಲ್ಲಿಂಗ್) ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಗ್ರಾಮಸ್ಥರು ತಮ್ಮ ಕೋಳಿಗಳನ್ನು ಕಲ್ಲಿಂಗ್‍ಗಾಗಿ ನೀಡುವ ಮೂಲಕ ಸಹಕರಿಸಬೇಕು.
ಕೆಲವು ಗ್ರಾಮಸ್ಥರು ಕಲ್ಲಿಂಗ್‍ಗೆ ಸಹಕರಿಸುತ್ತಿಲ್ಲ. ಆದರೆ ಹಕ್ಕಿಜ್ವರ ನಿಯಂತ್ರಣದ ಕ್ರಮವಾಗಿ ವೈಜ್ಞಾನಿಕವಾಗಿ ಕೋಳಿಗಳನ್ನು ನಾಶಪಡಿಸುವುದು ಅವಶ್ಯಕವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ವೈಜ್ಞಾನಿಕ ರೀತಿಯಲ್ಲಿ ಕಲ್ಲಿಂಗ್ ನಡೆಸಲು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದು, ಗ್ರಾಮಸ್ಥರು ಸ್ವಯಂ ಕೋಳಿಗಳನ್ನು ಅವೈಜ್ಞಾನಿಕವಾಗಿ ನಾಶಪಡಿಸದೇ ಇಲಾಖೆ ಸಿಬ್ಬಂದಿಗಳಿಗೆ ಕೋಳಿಗಳನ್ನು ಕಲ್ಲಿಂಗ್‍ಗೆ ನೀಡುವ ಮೂಲಕ ಸಹಕರಿಸಬೇಕು.
ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಒಂದು ಕಿ.ಮೀ(ರೇಡಿಯಸ್/ತ್ರಿಜ್ಯ) ವ್ಯಾಪ್ತಿಯ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಹಾಗೂ 1 ರಿಂದ 10 ಕಿ.ಮೀ ಗಳ ವ್ಯಾಪ್ತಿ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ. ರೋಗಪೀಡಿತ ವಲಯದಲ್ಲಿ (0 ರಿಂದ 01 ಕಿ.ಮೀ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶ) ಬರುವ ಎಲ್ಲಾ ಕೋಳಿಗಳನ್ನು, ಮೊಟ್ಟೆ, ಕೋಳಿ ಆಹಾರ ಇತ್ಯಾದಿಗಳನ್ನು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ನಿಯಮಾನುಸಾರ ನಾಶಪಡಿಸಲು ಹಾಗೂ ರೋಗಪೀಡಿತ ವಲಯದಲ್ಲಿ (0 ರಿಂದ 01 ಕಿ.ಮೀ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶ) ಅವಶ್ಯಕ ವಾಹನಗಳನ್ನು ಹೊರತುಪಡಿಸಿ, ಸಾರ್ವಜನಿಕರು ಮತ್ತು ಇತರೆ ವಾಹನಗಳ ಚಲನವಲನಗಳನ್ನು ಮಿತಿಗೆ ಒಳಪಟ್ಟು ನಿರ್ಬಂಧಿಸಿದೆ.
ಜಾಗೃತ ವಲಯದಲ್ಲಿ (01 ರಿಂದ 10 ಕಿ.ಮೀ. ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶ) ದಲ್ಲಿ ಕೋಳಿ ಸಾಗಾಣಿಕೆ ನಿಷೇಧಿಸಿದೆ. ಜಾಗೃತ ವಲಯ (01 ರಿಂದ 10 ಕಿ.ಮೀ.ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶ) ದಲ್ಲಿ ಕೋಳಿ, ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟ ಕೇಂದ್ರಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುವ ಹಿನ್ನೆಲೆಯಲ್ಲಿ ಎಲ್ಲ ಕೋಳಿ ಫಾರಂಗಳು, ಅಂಗಡಿಗಳಿಗೆ ಈ ನಿಷೇಧಾಜ್ಞೆ ಕುರಿತು ತಿಳಿಸಿ ಕಟ್ಟುನಿಟ್ಟಿನ ಅನುಪಾಲನೆ ಕೈಗೊಳ್ಳಲಾಗಿದೆ.
ಸಹಾಯವಾಣಿಗೆ ಮಾಹಿತಿ ನೀಡಿ : ಹರಿಹರ ತಾಲ್ಲೂಕಿನ ಬನ್ನಿಕೋಡು ಮತ್ತು ಇತರೆಡೆ ಎಲ್ಲಿಯಾದರೂ ಕೋಳಿಗಳು, ಪಕ್ಷಿಗಳು ಮತ್ತು ಕಾಡು ಪಕ್ಷಿಗಳು ಅಸಹಜವಾಗಿ ಸತ್ತಿರುವುದು, ಸಾಯುತ್ತಿರುವು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 08192-296832 ನ್ನು ಸಂಪರ್ಕಿಸಿ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡಬಹುದೆಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *