ದಾವಣಗೆರೆ : ಮಾರಕ ಕೊರೋನಾ ವೈರಸ್ ಪ್ರಸರಣ ತಡೆಗೆ
ದೇಶದಲ್ಲಿ ಏರಲಾಗಿರುವ ಲಾಕ್‍ಡೌನ್‍ಗೆ ಪ್ರತಿಯೊಬ್ಬ ನಾಗರೀಕರು
ಸ್ಪಂದಿಸುವ ಮೂಲಕ ಕೊರೋನಾ ಓಡಿಸಲು ಸಹಕರಿಸುವಂತೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ||
ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವರಾದ
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರೂ ಮನೆಯಲ್ಲಿದ್ದು ಸ್ವಚ್ಛತೆ
ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ
ಕಾಯ್ದುಕೊಳ್ಳುವ ಕನಿಷ್ಠ ಮುಂಜಾಗ್ರತಾ ಕ್ರಮ
ಕೈಗೊಳ್ಳುವ ಜೊತೆ ಮನೆಯಲ್ಲಿ ಯಾರಿಗಾದರೂ
ಅನಾರೋಗ್ಯ ಲಕ್ಷಣಗಳು ಕಂಡು ಬಂದರೆ ತಕ್ಷಣ
ವೈದ್ಯಕೀಯ ನೆರವನ್ನು ಪಡೆಯಬೇಕೆಂದು ಅವರು ಸಲಹೆ
ನೀಡಿದ್ದಾರೆ.
ಎಲ್ಲಾ ಜಾತಿ-ಧರ್ಮದ ಮುಖಂಡರು ತಮ್ಮ-ತಮ್ಮ
ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಮನವಿ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ
ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡದೆ
ಮನೆಯಲ್ಲಿಯೇ ಆರೋಗ್ಯಕರ ವಾತಾವರಣವನ್ನು
ನಿರ್ಮಿಸಿಕೊಳ್ಳಬೇಕು ಎಂದಿರುವ ಅವರು, ಕೊರೋನಾ
ಹೋಗಲಾಡಿಸಲು ಅವಿರತವಾಗಿ ಸೇವೆ ಸಲ್ಲಿಸುತ್ತಿರುವ
ಪ್ರತಿಯೊಬ್ಬರಿಗೂ ಗೌರವ ಪೂರ್ವಕ ವಂದನೆಗಳನ್ನು
ಸಲ್ಲಿಸಿದ್ದಾರೆ.
ಜಿಲ್ಲಾಡಳಿತ ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ
ಸೋಂಕಿತರಿಗೆ ಹಾಗೂ ಅವರ ಕುಟುಂಬಗಳಿಗೆ ಅಗತ್ಯ
ವೈದ್ಯಕೀಯ ನೆರವನ್ನು ನೀಡುತ್ತಿದ್ದು, ಸರ್ಕಾರವೂ ಸಹ
ಚಿಕಿತ್ಸೆಯಲ್ಲಿ ತೊಡಗಿರುವ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳಿಗೆ
ಅಗತ್ಯ ವೈದ್ಯಕೀಯ ವಸ್ತುಗಳನ್ನು ನೀಡಬೇಕೆಂದು
ಆಗ್ರಹಿಸಿದ್ದಾರೆ.

ಪ್ರತಿ ತಾಲ್ಲೂಕು/ ಹೋಬಳಿ ಕೇಂದ್ರಗಳಲ್ಲಿ ಅಗತ್ಯ
ಸಂಖ್ಯೆಯಲ್ಲಿ ಪರೀಕ್ಷಾ ಸಾಧನಗಳನ್ನು ತರಿಸಬೇಕು, ರೈತರ
ಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ಸಾಗಾಣೆ, ಮಾರಾಟ ಮತ್ತು
ಬಳಕೆದಾರರಿಗೆ ಸೂಕ್ತವಾಗಿ ವಿತರಿಸಲು ವ್ಯವಸ್ಥೆ ಕಲ್ಪಿಸಬೇಕು
ಹಾಗೂ ಬಡ ಮಧ್ಯಮ ವರ್ಗದವರಿಗೆ ಪಡಿತರವನ್ನು ಮನೆ
ಬಾಗಿಲಿಗೆ ತಲುಪಿಸಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *