ದಾವಣಗೆರೆ, ಏ.02
ಚನ್ನಗಿರಿ ನಗರದ ಜವಳಿ ಕಾಂಪ್ಲೆಕ್ಸ್‍ನಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪ ಇವರ ಅಧ್ಯಕ್ಷತೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಅಧಿಕಾರಿಗಳು ತಮ್ಮ ಜೀವವನ್ನೇ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದೀರಿ. ಅದಕ್ಕಾಗಿ ಸರ್ಕಾರ ರೂ.50 ಲಕ್ಷದ ಜೀವ ವಿಮಾ ಸೌಲಭ್ಯ ನೀಡಿದ್ದು, ಎಲ್ಲರೂ ಕೊರೊನಾ ವೈರಸ್‍ನ್ನು ಮೆಟ್ಟಿ ನಿಲ್ಲಲು ಎಲ್ಲ ಕ್ರಮಗಳನ್ನು ಕೈಗೊಂಡು ಶ್ರಮಿಸೋಣ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ಚನ್ನಗಿರಿಯಲ್ಲಿ ಇಂದು ಸಚಿವರು ಸಭೆ ನಡೆಸಿ, ವಿದೇಶದಿಂದ 23 ಜನರು ಬಂದಿದ್ದು, ಮನೆಗಳಲ್ಲಿಯೇ ಅವಲೋಕನ ಅವಧಿಯಲ್ಲಿ ಇರಿಸಲಾಗಿದ್ದು, 18 ಜನರ ಅವಲೋಕನ ಅವಧಿ ಮುಗಿದಿದೆ. 5 ಜನರ ಫಲಿತಾಂಶ ಬರಬೇಕಿದೆ.
ನಿಜಾಮುದ್ದೀನ್ ಸಮಾವೇಶಕ್ಕೆ ಚನ್ನಗಿರಿಯಿಂದ ಒಟ್ಟು 11 ಜನ ಹೋಗಿದ್ದು ಇವರಲ್ಲಿ ಯಾರಿಗೂ ಸೋಂಕು ಕಂಡು ಬಂದಿಲ್ಲ ಎಂದರು.
ಮದ್ಯಪಾನ ನಿಷೇಧ ಹಿನ್ನೆಲೆಯಲ್ಲಿ ಕೆಲವು ಹಳ್ಳಿಗಳಲ್ಲಿ ಕಳ್ಳಭಟ್ಟಿ ಮಾಡುತ್ತಿದೆ ಎಂದು ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ನೀಡಲಾಗಿರುವ ಪಿಪಿಇ ಕಿಟ್‍ಗಳು ಸಮರ್ಪಕವಾಗಿ ದೇಹಕ್ಕೆ ಹೊಂದಿಕೊಳ್ಳುತ್ತಿಲ್ಲ. ಹಾಗೂ ಆ ಕಿಟ್‍ಗಳ ಗುಣಮಟ್ಟ ಕೂಡ ಸರಿ ಇಲ್ಲ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಎಸ್.ಪಿ. ಹನುಮಂತರಾಯ, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಚನ್ನಗಿರಿ ತಹಶೀಲ್ದಾರ್ ನಾಗರಾಜ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *