ದಾವಣಗೆರೆ ಏ.04
ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಇಂದು ಹೆಚ್ಚು
ವರದಿಯಾಗಿದ್ದು ಎಲ್ಲ ಜಿಲ್ಲೆಗಳಲ್ಲಿ ಇದನ್ನು ನಿಯಂತ್ರಿಸಲು
ಜಾಗರೂಕರಾಗಿ ಕಟ್ಟುನಿಟ್ಟಿನ ಕ್ರಮಗಳನ್ನು
ಕೈಗೊಳ್ಳಬೇಕು. ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ
ಸೋಂಕಿತರನ್ನು ಹೆಚ್ಚಿನ ಗಮನ ಹರಿಸಿ ಶುಶ್ರೂಷೆ ಮಾಡಿ ಜೀವ
ಉಳಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ
ಟಿ.ಎಂ.ವಿಜಯಭಾಸ್ಕರ್ ಹೇಳಿದರು.
      ಎಲ್ಲ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳು, ಡಿಸಿ, ಎಸ್‍ಪಿ
ಮತ್ತು ಸಿಇಓ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ
ಸೂಚನೆಗಳನ್ನು ನೀಡಿದ ಅವರು ವಯಸ್ಸಾದ ಸೋಂಕಿತರಿಗೆ
ಹೆಚ್ಚಿನ ಶುಶ್ರೂಷೆ ಅಗತ್ಯವಿದ್ದು, ಅವಶ್ಯವಾದಲ್ಲಿ ಖಾಸಗಿ
ತಜ್ಞರ ಸಹಕಾರ ಪಡೆದು ಚಿಕಿತ್ಸೆ ನೀಡಿ, ಹುಷಾರಾಗುವಂತೆ
ನೋಡಿಕೊಳ್ಳಬೇಕೆಂದು ತಿಳಿಸಿದರು.
ನಿಜಾಮುದ್ದೀನ್ ಸಮಾವೇಶದಲ್ಲಿ ರಾಜ್ಯದಿಂದ ಒಟ್ಟು 1332 ಜನರು
ಭಾಗವಹಿಸಿದ್ದರೆಂಬ ಮಾಹಿತಿ ಇದ್ದು ಇದುವರೆಗೆ 801 ಜನರನ್ನು
ಟ್ರ್ಯಾಕ್ ಮಾಡಲಾಗಿದೆ. ಇವರು ರಾಜ್ಯದ್ಯಾಂತ ಚದುರಿ
ಸಂಚರಿಸುತ್ತಿದ್ದು ಎಲ್ಲ ಜಿಲ್ಲಾಡಳಿತ, ಎಸ್‍ಪಿ ಗಳು ಇವರನ್ನು
ಟ್ರ್ಯಾಕ್ ಮಾಡಿ ಸೋಂಕು ಹರಡದಂತೆ ಅಗತ್ಯವಾದ ಎಲ್ಲ

ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಬೇಕೆಂದು
ತಿಳಿಸಿದರು.
ಸೋಂಕಿತರನ್ನು ಶುಶ್ರೂಷೆ ಮಾಡಲು ಅಗತ್ಯವಾಗಿರುವ
ಪಿಪಿಇ ಕಿಟ್‍ಗಳ ಲಭ್ಯತೆ ಸಾಕಷ್ಟಿದೆ. ಆದರೆ ಲಭ್ಯತೆ ಇದೆ ಎಂದು
ಆಸ್ಪತ್ರೆಗಳಲ್ಲಿ ಇವನ್ನು ಅನಗತ್ಯವಾಗಿ ಬಳಸಬಾರದು,
ವ್ಯರ್ಥ ಮಾಡಬಾರದು. ಐಸಿಎಂಆರ್ ಮಾರ್ಗಸೂಚಿಯನ್ವಯವೇ
ಬಳಸಬೇಕು. ಹಾಗೂ ಇವನ್ನು ಮುಂದಕ್ಕೆ
ಉಳಿಸಿಕೊಳ್ಳಬೇಕು. ಇನ್ನು ಎನ್-95 ಮಾಸ್ಕ್‍ಗಳ ಲಭ್ಯತೆ ಅಷ್ಟು
ಇರುವುದಿಲ್ಲವಾದ ಕಾರಣ ಅವಶ್ಯಕತೆ ಇಲ್ಲದವರು ಇದನ್ನು
ಬಳಸಕೂಡದು.
ದೇಶದಲ್ಲಿ ಸುಮಾರು 16 ಸಾವಿರ ಹಾಗೂ ರಾಜ್ಯದಲ್ಲಿ 750
ವೆಂಟಿಲೇಟರ್‍ಗಳ ಲಭ್ಯತೆ ಇದ್ದು, ದೇಶಾದ್ಯಂತ ಇದುವರೆಗೆ 20
ಸೋಂಕಿತರು ಮಾತ್ರ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಯಾರೂ ವೆಂಟಿಲೇಟರ್
ಚಿಕಿತ್ಸೆಯಲ್ಲಿ ಇಲ್ಲ ಎಂದ ಅವರು ಇನ್ನೂ ಹೆಚ್ಚುವರಿ ವೆಂಟಿಲೇಟರ್‍ಗೆ
ಆರ್ಡರ್ ಮಾಡಲಾಗಿದೆ ಎಂದ ಅವರು ಕೆಲವು ಜಿಲ್ಲೆಗಳಲ್ಲಿ ಖಾಸಗಿ
ಆಸ್ಪತ್ರೆಗಳು ತೆರೆದಿಲ್ಲವೆಂಬ ಮಾಹಿತಿ ಇದ್ದು, ಡಿಸಿ ಎಸ್ಪಿಯವರು
ಖಾಸಗಿಯವರ ಮನವೊಲಿಸಿ ಆಸ್ಪತ್ರೆ ತೆರೆಯಲು ಕ್ರಮ
ಜರುಗಿಸಬೇಕೆಂದರು.
ರಾಜ್ಯಾದ್ಯಂತ ಸರಕು ಸಾಗಣೆ ಸಾರಿಗೆಗೆ ಯಾರೂ
ಅಡ್ಡಿಪಡಿಸುವಂತಿಲ್ಲ. ಎಪಿಎಂಸಿ ಬಂದ್ ಮಾಡಬಾರದು. ಎಲ್ಲ ರೀತಿಯ
ಕೃಷಿ ಕಾರ್ಯ ಚಟುವಟಿಕೆಗಳಿಗೆ ಅನುಮತಿ ನೀಡಿದ್ದು, ಒಕ್ಕಲು
ಯಂತ್ರಕ್ಕೂ ಅನುಮತಿ ನೀಡಲಾಗಿದೆ. ಬಿತ್ತನೆ ಬೀಜದ
ಕೊರತೆ ಇರುವುದಿಲ್ಲ. ಜಿಲ್ಲೆಗಳಲ್ಲಿನ ಆಹಾರ ಸಂಸ್ಕರಣಾ
ಘಟಕಗಳನ್ನು ತೆರೆಯಬೇಕು.
ಓಟಿಪಿ ಮತ್ತು ಇತರೆ ತಾಂತ್ರಿಕ ತೊಂದರೆಗಳಿದ್ದರೂ
ಎರಡು ತಿಂಗಳ ಪಡಿತರ ನೀಡಲು ತಿಳಿಸಲಾಗಿದೆ. ಹಾಲನ್ನು
ಸಮರ್ಪಕವಾಗಿ ವಿತರಣೆ ಮಾಡಬೇಕು. ವಲಸಿ ಕಾರ್ಮಿಕರ
ಶಿಬಿರಗಳಲ್ಲಿ ಶುಚಿತ್ವ ಸೇರಿದಂತೆ ಒಬ್ಬ ಅಧಿಕಾರಿಯನ್ನು ನೇಮಿಸಿ
ಪರಿಶೀಲನೆ ನಡೆಸಿ ವರದಿ ನೀಡಬೇಕು. ಹಾಪ್‍ಕಾಮ್ಸ್ ಸಕ್ರಿಯವಾಗಿ
ಕೆಲಸ ಮಾಡಬೇಕು ಎಂದರು.

Leave a Reply

Your email address will not be published. Required fields are marked *