ದಾವಣಗೆರೆ, ಏ.13ಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕು. ಜಿಲ್ಲೆಯು ಸರ್ಕಾರದ ನಿರ್ದೇಶನದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಮುಕ್ತ ಜಿಲ್ಲೆಯಾಗಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಕಟ್ಟಡ ಕಾರ್ಮಿಕರು, ವಲಸಿಗರು ಸೇರಿದಂತೆ ಬಡವರಿಗೆ ಊಟ, ವಸತಿ ಸೇರಿದಂತೆ ಎಲ್ಲ ರೀತಿಯ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದ್ದು, ದೇಶದ ಬೆನ್ನೆಲುಬಾದ ರೈತರ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲವೆಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ 19 ನಿಯಂತ್ರಣ ಹಾಗೂ ಲಾಕ್‍ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡಿನ ಅನ್ನದಾತನಾದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಯಾವುದೇ ರೀತಿಯ ರೈತ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು. ಆರೋಗ್ಯ, ಪೊಲೀಸ್, ಆಹಾರ, ಕಂದಾಯ ಸೇರಿದಂತೆ ಕೋವಿಡ್‍ಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆಯು ಕೊವಿಡ್ 19 ಹಿನ್ನೆಲೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಬೇಕು.
ಎಲ್ಲ ಅಧಿಕಾರಿಗಳು ಸಮರ್ಥವಾಗಿ ಹಾಗೂ ಎಚ್ಚರಿಕೆಯಿಂದ ಕ್ರಮ ವಹಿಸುವ ಮೂಲಕ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಬೇಕು ಹಾಗೂ ಜೊತೆಗೆ ಪಾಲಿಕೆ ಸದಸ್ಯರು ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಶಾಸಕರಾದ ಶಿವಶಂಕರಪ್ಪನವರು ನಗರದಲ್ಲಿ ವಲಸಿಗ ಕಾರ್ಮಿಕರು, ನಿರ್ಗತಿಕರಿಗೆ ಸಮರ್ಪಕವಾಗಿ ಆಹಾರಕಿಟ್ ವಿತರಣೆಯಾಗುತ್ತಿಲ್ಲ. ಜಿಲ್ಲಾಡಳಿತದ ಗೋಡಾನ್‍ನಲ್ಲಿ ದಾಸ್ತಾನಿಟ್ಟರೆ ಸಾಲದು ಅದನ್ನು ಸರಿಯಾಗಿ ಹಂಚಬೇಕು. ಬೆಳಗಾವಿಯಿಂದ ಬಂದವರು ಸೇರಿದಂತೆ ನಿನ್ನೆ ಸುಮಾರು ಎರಡು ಸಾವಿರದಷ್ಟು ಜನರು ಆಹಾರಕಿಟ್‍ಗಾಗಿ ಸೇರಿದ್ದರು. ಪಾಲಿಕೆ ಸದಸ್ಯರಿಂದ ಆಯಾ ವಾರ್ಡ್‍ಗಳ ಬಡವರ, ನಿರ್ಗತಿಕರ ಮಾಹಿತಿ ಪಡೆದು, ಸದಸ್ಯರನ್ನೊಳಗೊಂಡು ಅಂತಹವರಿಗೆ ಆಹಾರದ ಕಿಟ್‍ಗಳ ವಿತರಣೆಯಾಗಬೇಕು. ನಾನು ನಿನ್ನೆ ಕಾರ್ಮಿಕ ಸಚಿವರೊಂದಿಗೆ ಮಾತನಾಡಿದ್ದು, ಜಿಲ್ಲೆಯಲ್ಲಿ ಎಷ್ಟೇ ಕಾರ್ಮಿಕರಿದ್ದರೂ ಅವರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಎಸ್‍ಡಿಆರ್‍ಎಫ್ ನಿಧಿಯಲ್ಲಿಯೂ ಅವರಿಗೆ ಅಗತ್ಯವಾದ ಊಟ, ವಸತಿ ಇತರೆ ಖರೀದಿಗೆ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಲಾಗಿದೆ ಎಂದಿದ್ದಾರೆ. ಈ ಪ್ರಕಾರ ಡಿಸಿಯವರು ಕ್ರಮ ಕೈಗೊಳ್ಳಬೇಕೆಂದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಎಲ್ಲರನ್ನೂ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನ್‍ಧನ್ ಖಾತೆಗೆ ರೂ.500, ಕಿಸಾನ್ ಸಮ್ಮಾನ್ ನಿಧಿಗೆ ರೂ.2000, ಮೂರು ತಿಂಗಳು ಉಚಿತ ಅನಿಲ, 2 ತಿಂಗಳ ಪಡಿತರ ಸೇರಿದಂತೆ ಅನೇ ಸವಲತ್ತು ನೀಡಿದ್ದು, ದಾನಿಗಳೂ ಕೂಡ ಕಿಟ್‍ಗಳನ್ನು ನೀಡುತ್ತಿದ್ದಾರೆ. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದರೆ ಮಾತ್ರ ರಕ್ಷಣೆ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 1806 ಕಾರ್ಮಿಕರನ್ನು ಗುರುತಿಸಲಾಗಿದೆ. ಇದರಲ್ಲಿ 377 ಕಾರ್ಮಿಕರು ಅನ್ಯರಾಜ್ಯದಿಂದ ಬಂದಿದ್ದಾರೆ. ಹರಿಹರದಲ್ಲಿ 27 ಜನರು, ನ್ಯಾಮತಿಯಲ್ಲಿ 31, ಹೊನ್ನಾಳಿಯಲ್ಲಿ 10 ಜನರಿದ್ದಾರೆ. ಮಾಲೀಕರ ಶೆಲ್ಟರ್‍ನಲ್ಲಿ ಸುಮಾರು 720 ಕಾರ್ಮಿಕರಿದ್ದು, 790 ಜನರು ವಿವಿಧೆಡೆ ಶೆಲ್ಟರ್‍ಗಳಿದ್ದಾರೆ ಇವರೆಲ್ಲರಿಗೂ ಆಹಾರದ ಕಿಟ್‍ಗಳನ್ನು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಶೇ.91 ಪಡಿತರ ವಿತರಣೆಯಾಗಿದೆ. ಜೊತೆಗೆ 3271 ಕಿಟ್‍ಗಳನ್ನು ದಾನಿಗಳಿಂದ ಸಂಗ್ರಹಿಸಿ ನೀಡಲಾಗುತ್ತಿದೆ ಎಂದರು.
ಉಸ್ತುವಾರಿ ಸಚಿವರು ರೇಷನ್‍ಕಾರ್ಡಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟಿದೆ ಅವರಿಗೂ ಪಡಿತರ ನೀಡುವ ವ್ಯವಸ್ಥೆಯನ್ನು ಈ ದಿನದಿಂದಲೇ ಮಾಡಿರಿ ಎಂದರು. ಆಹಾರ ಇಲಾಖೆ ಡಿಡಿ ಮಂಟೇಸ್ವಾಮಿ ಮಾತನಾಡಿ, 3440 ಜನರು ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೂ ಪಡಿತರ ನೀಡಲಾಗುವುದು ಎಂದರು.
ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿ, ಕೆಲವರು ಸಾಲ ಮಾಡಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿದ್ದು ಅವರ ಬಿಪಿಎಲ್ ಕಾರ್ಡನ್ನು ರದ್ದುಪಡಿಸಲಾಗಿದೆ. ಅವರೂ ಕೂಡ ಬಡವರೇ. ಇದರಿಂದ ಅವರಿಗೆ ತುಂಬಾ ತೊಂದರೆಯಾಗಿದ್ದು ಅವರಿಗೆ ಪಡಿತರ ಕೊಡಿಸಬೇಕೆಂದು ಉಸ್ತುವಾರಿ ಸಚಿವರಿಗೆ ಕೋರಿದರು.
ಪಾಲಿಕೆ ಸದಸ್ಯರಾ ಎ.ನಾಗರಾಜ್ ಮಾತನಾಡಿ, ಪಾಲಿಕೆ ಸದಸ್ಯರು ಎಲ್ಲ ವಾರ್ಡುಗಳಲ್ಲಿ ಬಿಪಿಎಲ್ ಇದ್ದವರು ಮತ್ತು ಇಲ್ಲದೇ ಇರುವ ಬಡವರ ಲಿಸ್ಟ್‍ನ್ನು ತಯಾರಿಸಲಾಗಿದೆ. ಕೇವಲ ಆಹಾರ ಕಿಟ್ ನೀಡಿದರೆ ಸಾಕಾಗುವುದಿಲ್ಲ. ಅನೇಕರಿಗೆ ಅಡುಗೆ ಮಾಡುವ ಸೌಲಭ್ಯವಿಲ್ಲದ ಕಾರಣ ಗಂಜಿ ಕೇಂದ್ರ ತೆರೆಯುವಂತೆ ಮನವಿ ಮಾಡಿದರು.
ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಕೋವಿಡ್ ಹಿನ್ನೆಲೆಯಲ್ಲಿ ಆ ರೀತಿ ಪಡಿತರ ಚೀಟಿ ರದ್ದಾದವರಿಗೂ ಪಡಿತರ ನೀಡುವಂತೆ ಆಹಾರ ಇಲಾಖೆಗೆ ಸೂಚಿಸಿ, ಯಾರೂ ಹಸಿವಿನಿಂದ ಬಳಲಬಾರದೆಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಆದರೆ ಇಲ್ಲಿ ಮಾತ್ರ ಗಂಜಿ ಕೇಂದ್ರ ತೆರೆಯಲು ಬರುವುದಿಲ್ಲ. ಆದರೆ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಕೋವಿಡ್ ಸಂಕಷ್ಟ ಮುಗಿಯುವವರೆಗೆ ಬಡವರ, ನಿರ್ಗತಿಕರನ್ನು ಜಿಲ್ಲಾಡಳಿತ ನೋಡಿಕೊಳ್ಳಬೇಕು. ಜೊತೆಗೆ ಪಾಲಿಕೆ ಸದಸ್ಯರು, ಶಾಸಕರು ಕೈಜೋಡಿಸಬೇಕೆಂದರು.
ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿಯಲ್ಲಿ ವಲಸಿಗರು ಮತ್ತು ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಟಪದಲ್ಲಿ ವಸತಿ ಊಟ ನೀಡಲಾಗುತ್ತಿದೆ. ದಾನಿಗಳನ್ನು ಬಳಸಿಕೊಂಡು ಸಹ ಇಂತಹವರಿಗೆ ಊಟದ ವ್ಯವಸ್ಥೆ ಮಾಡಬಹುದು. ಹಾಗೂ ಶಾಸಕರ ಅನುದಾನದಲ್ಲಿ ಮಾಸ್ಕ್‍ಮತ್ತು ಸ್ಯಾನಿಟೈಸರ್‍ಗಳನ್ನು ಖರೀದಿಸಲು ಕ್ರಮ ವಹಿಸಬೇಕು. ಜೊತೆಗೆ ಪಡಿತರ ನೀಡಲು ಹಣ ತೆಗೆದುಕೊಳ್ಳುತ್ತಿರುವ ಪಡಿತರ ಅಂಗಡಿಗಳ ವಿರುದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕ ಅಧಿಕಾರಿಗಳು ಸಮರ್ಪಕವಾಗಿ ಕಾರ್ಮಿಕರನ್ನು ಗುರುತಿಸಿಲ್ಲ. ನೀವು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಎಚ್ಚರಿಸಿದ ಅವರು ನಾಳೆಯಿಂದಲೇ ನನ್ನ ಕ್ಷೇತ್ರದಲ್ಲಿ ನಾನೇ ಸ್ವಂತ ಆಹಾರ ಕಿಟ್‍ಗಳನ್ನು ನೀಡಲಿದ್ದೇನೆ. ನೀರಿಲ್ಲದೇ ತೋಟಗಳು ಒಣಗುತ್ತಿದ್ದು ಬೋರ್‍ವೆಲ್ ಕೊರೆಯಲು ಅನುಮತಿ ನೀಡಬೇಕೆಂದರು.
ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಮತ್ತು ಜಿ.ಎಂ.ಸಿದ್ದೇಶ್ವರವರು ಬಡವರಿಗೆ ದಾನ ಮಾಡುವ ಮೂಲಕ ಇಡೀ ದಾವಣಗೆರೆಯ ಸಮಸ್ಯೆಯನ್ನು ಬಗೆಹರಿಸಬಹುದೆಂದರು.
ಶಾಸಕರಾದ ರಾಮಪ್ಪ ಮಾತನಾಡಿ, ಹರಿಹರದಲ್ಲಿಯೂ ಸಾಕಷ್ಟು ಕಟ್ಟಡ ಮತ್ತು ವಲಸಿಗ ಕಾರ್ಮಿಕರಿದ್ದು ಅವರಿಗೆ ಸೂಕ್ತ ಊಟ, ವಸತಿ ವ್ಯವಸ್ಥೆಯಾಗಬೇಕು. ಕಾರ್ಮಿಕ ಇಲಾಖೆಯವರು ಇವರ ಬಗ್ಗೆ ಗಮನ ಹರಿಸಬೇಕು. ಮಡಿವಾಳರು, ಸವಿತಾ ಸಮಾಜ ಸೇರಿದಂತೆ ಇತರೆ ಸಮಾಜದವರಿಗೆ ಅಗತ್ಯ ಆಹಾರ ಕಿಟ್‍ಗಳ ವಿತರಣೆಯಾಗಬೇಕು ಎಂದು ಮನವಿ ಮಾಡಿದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕೋವಿಡ್ ಪರೀಕ್ಷೆಗಳಾಗುತ್ತಿಲ್ಲ. ಟೆಸ್ಟ್ ಕಿಟ್ಸ್‍ಗಳಿಗೆ ವ್ಯವಸ್ಥೆ ಮಾಡಿಕೊಂಡು ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಬೇಕೆಂದರು.
ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಮಾತನಾಡಿ, ಕೊರೊನಾ ಹಿನ್ನೆಲೆ ಜರ್ಮನಿಯಲ್ಲಿ ಪ್ರತಿ ಮನೆಗಳಿಗೆ ವೈದ್ಯರು ತೆರಳಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಇದೇ ರೀತಿ ದಾವಣಗೆರೆಯಲ್ಲೂ ಪ್ರತಿ ಮನೆಗೆ ತೆರಳಿ ಪರೀಕ್ಷೆ ಕೈಗೊಂಡರೆ ಉತ್ತಮ. ತಮ್ಮ ವತಿಯಿಂದ ವೈದ್ಯರು ಮತ್ತು ಶುಶ್ರೂಷಕರನ್ನು ಒದಗಿಸಲಾಗುವುದು. ಆದರೆ ಸರ್ಕಾರದಿಂದ ಕಿಟ್ಸ್‍ಗಳ ವ್ಯವಸ್ಥೆ ಮಾಡಬೇಕು. ಹೀಗೆ ಎಲ್ಲರಿಗೆ ಪರೀಕ್ಷೆ ಮಾಡುವ ಮೂಲಕ ದೇಶಕ್ಕೇ ನಮ್ಮ ಜಿಲ್ಲೆ ಮಾದರಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಪ್ರಸ್ತುತ ರಾಜ್ಯ ಸರ್ಕಾರ 12 ಲಕ್ಷ ಕಿಟ್ಸ್ ತರಿಸುತ್ತಿದ್ದು, ಶಾಸಕರ ಈ ಸಲಹೆ ಕುರಿತು ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕರಾದ ಅಬ್ದುಲ್ ಜಬ್ಬಾರ್ ಮಾತನಾಡಿ, ದಾವಣಗೆರೆಯ ಹಿಂದುಳಿದ ಬಡಾವಣೆವೊಂದರಲ್ಲಿ ಆಂಬುಲೆನ್ಸ್ ಬರೋವಷ್ಟರಲ್ಲಿ ಹೆರಿಗೆಯಾದ ಪ್ರಕರಣ ನಡೆದಿದ್ದು, ವಾಹನ ವ್ಯವಸ್ಥೆ ಇಲ್ಲದೇ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪ್ರತಿ ವಾರ್ಡುವಾರು ಒಂದೊಂದು ವಾಹನ ವ್ಯವಸ್ಥೆ ಮಾಡಬೇಕು ಹಾಗೂ ಸ್ಲಂ ಗಳಲ್ಲಿರುವ ಬಿಪಿ, ಶುಗರ್ ಕಾಯಿಲೆಯವರಿಗೆ ಮಾತ್ರೆಗಳನ್ನು ಪೂರೈಸಬೇಕೆಂದರು.
ಕಾರ್ಮಿಕ ಇಲಾಖೆಯ ಜವಾಬ್ದಾರಿಯೂ ಈ ಸಮಯದಲ್ಲಿ ಹೆಚ್ಚಿದ್ದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ನಿರ್ಲಕ್ಷ್ಯ ವಹಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ವರದಿಯಾಗಿದ್ದ ಮೂರು ಪಾಸಿಟಿವ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಅವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟಾಕ್ಟ್‍ಗಳ ಪರೀಕ್ಷೆ ನಡೆಸಲಾಗಿ ಎಲ್ಲರ ವರದಿ ನೆಗೆಟಿವ್ ಬಂದಿದೆ. ದೆಹಲಿ ಪ್ರವಾಸ ಹಿನ್ನೆಲೆ ಹೊಂದಿದ್ದ 41 ಜನರ ಟೆಸ್ಟ್ ಮಾಡಿಸಲಾಗಿ ಎಲ್ಲ ನೆಗೆಟಿವ್ ಬಂದಿದ್ದು ಇವರಲ್ಲಿ ನಾಲ್ಕು ವರದಿ ಬರುವುದು ಬಾಕಿ ಇದೆ. ಸರ್ಕಾರದ ಆದೇಶದಂತೆ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಎರಡು ಎಪಿಸೆಂಟರ್ ಜೋನ್‍ಗಳನ್ನು ಜೋಡಿಸಿ ಒಂದು ಕ್ಲಸ್ಟರ್ ಕಂಟೈನ್‍ಮೆಂಟ್ ಜೋನ್ ಮಾಡಿ ಆ ಪ್ರದೇಶದಲ್ಲಿ ಎಲ್ಲ ಮನೆಗಳಿಗೆ ತೆರಳಿ ಆರೋಗ್ಯ ಸರ್ವೇ ಮಾಡಲಾಗಿದೆ. (ಐಎಲ್‍ಐ)ಫ್ಲೂ ಮತ್ತು (ಎಸ್‍ಎಆರ್‍ಐ) ಗಂಭೀರ ಉಸಿರಾಟದ ತೊಂದರೆ ಇರುವ ಪ್ರಕರಣಗಳನ್ನೂ ಟೆಸ್ಟ್‍ಗೆ ಕಳುಹಿಸಲಾಗುತ್ತಿದೆ. ಸದ್ಯಕ್ಕೆ ಇಂತಹ ಪ್ರಕರಣಗಳು ಹೆಚ್ಚಿಲ್ಲ.
ತರಕಾರಿ, ಹಣ್ಣು, ಕಿರಾಣಿ ಅಂಗಡಿಗಳ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿದೆ. ರೈತರ ಯಾವುದೇ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಗ್ರಾಮೀಣ ಭಾಗದಲ್ಲೂ ಟಾಸ್ಕ್‍ಪೋರ್ಸ್ ಸಮಿತಿ ರಚಿಸಿ ಸಕ್ರಿಯ ಸರ್ವೆಲೆನ್ಸ್ ಕ್ರಮ ಕೈಗೊಳ್ಳಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಜಿಲ್ಲೆಯಲ್ಲಿ ಕೊರೊನಾ ಸಂಬಂಧ ಯಾವುದೇ ಭಯದ ವಾತಾವರಣ ಇಲ್ಲದಿದ್ದರೂ ಸರ್ಕಾರದ ಆದೇಶದಂತೆ ಹೆಚ್ಚಿನ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಕೋವಿಡ್ ಆಸ್ಪತ್ರೆಗಳನ್ನು ಗುರುತಿಸಿ ಸುಮಾರು 500 ರಿಂದ 600 ಕೋವಿಡ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಾನ್ಯ ಮುಖ್ಯಮಂತ್ರಿಗಳು ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂದು ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಎಪಿಎಲ್, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಎರಡು ತಿಂಗಳ ಪಡಿತರವನ್ನು ನೀಡುವಂತೆ ಸೂಚಿಸಿದೆ. ಹಾಗೂ ಎಸ್‍ಡಿಆರ್‍ಎಫ್ ನಿಧಿಯಲ್ಲಿ ಆಹಾರಧಾನ್ಯ ಖರೀದಿಸಿ ಜೊತೆಗೆ ಜಿಲ್ಲಾ ವ್ಯಾಪ್ತಿಯಲ್ಲಿರುವ ದಾನಿಗಳಿಗೆ ಮನವಿ ಮಾಡಿ ಕಟ್ಟಡ ಕಾರ್ಮಿಕರು, ವಲಸಿಗರು, ಬಡವರು ನಿರ್ಗತಿಕರಿಗೆ ಆಹಾರದ ಕಿಟ್‍ಗಳನ್ನು ನೀಡುವಂತೆ ಸೂಚನೆ ನೀಡಿರುವಂತೆ ಎಲ್ಲರೂ ಕ್ರಮ ವಹಿಸಬೇಕು. ಏನೇ ಸಮಸ್ಯೆ ಇದ್ದರೂ ನನಗೆ ಸಂಪರ್ಕಿಸಿ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಕೋವಿಡ್ ವಿರುದ್ದ ಸಮರ ಸಾರಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ದಾನಿಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಮತ್ತು ಕಂಟೈನ್‍ಮೆಂಟ್ ಪ್ಲಾನ್ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮಹಾಪೌರ ಬಿ.ಜಿ.ಅಜಯ್‍ಕುಮಾರ್ ಎಸ್.ಪಿ ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.