ದಾವಣಗೆರೆ ಏ.14
ಶೀಘ್ರದಲ್ಲಿಯೇ ದಾವಣಗೆರೆ ಜಿಲ್ಲೆಗೆ ಕೋವಿಡ್ ತಪಾಸಣಾ ಲ್ಯಾಬ್
ಮಂಜೂರು ಮಾಡಲಾಗುವುದು ಎಂದು ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ
ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್-
19 ಕೊರೊನಾ ರೋಗ ನಿಯಂತ್ರಣ ಕುರಿತ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ
ಕೊರೊನಾ ತಪಾಸಣೆಗಾಗಿ 16 ಲ್ಯಾಬ್‍ಗಳಿವೆ. 10 ಹೊಸದಾಗಿ
ಮಂಜೂರು ಮಾಡಲಾಗುವುದು. ಅದರಲ್ಲಿ ಒಂದನ್ನು ಜಿಲ್ಲೆಗೆ
ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 258 ಕೊರೊನಾ ಪಾಸಿಟಿವ್ ಪ್ರಕರಣಗಳು
ಪತ್ತೆಯಾಗಿದ್ದು, ಅದರಲ್ಲಿ 65 ಜನರು ಗುಣಮುಖರಾಗಿದ್ದಾರೆ. ಈ
ಮೊದಲು ಕೊರೊನಾ ಸೋಂಕಿತರಲ್ಲಿ ರಾಜ್ಯ 3ನೇ ಸ್ಥಾನದಲ್ಲಿತ್ತು.
ನಂತರ ನಿಯಂತ್ರಣ ಕ್ರಮ ಕೈಗೊಂಡ ಮೇಲೆ 12ನೇ
ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 10 ಸಾವಿರ ಐಸಿಯು ಬೆಡ್ ಸೌಲಭ್ಯ
ಹೊಂದಿದ್ದೇವೆ. ಸರ್ಕಾರಿ ಹಾಗೂ ಖಾಸಗಿ ಸೇರಿ 700 ವೆಂಟಿಲೇಟರ್
ಸೌಲಭ್ಯವಿದೆ. ರಾಜ್ಯದ ಯಾವೊಬ್ಬ ರೋಗಿಯು ಸಹ ವೆಂಟಿಲೇಟರ್‍ಗೆ
ಹೋಗದಂತೆ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಬೇಕು.
ವೆಂಟಿಲೇಟರ್ ಆಪರೇಟರ್‍ಗಳಿಗೆ ತರಬೇತಿ ನೀಡಲು
ಕ್ರಮವಹಿಸಲಾಗುವುದು. ಅದೇ ರೀತಿ ದಾವಣಗೆರೆ
ಜಿಲ್ಲೆಯಲ್ಲಿಯೂ ಸಹ ವೈದ್ಯರು, ನರ್ಸ್, ಸಿಬ್ಬಂದಿ ಹಾಗೂ ಮೆಡಿಕಲ್‍ಗೆ
ಸಂಬಂಧಿಸಿದಂತೆ ಉತ್ತಮ ಸೌಲಭ್ಯವಿದೆ. ಬೇರೆ ರಾಷ್ಟ್ರಗಳ ಜನರಿಗೆ

ಹೋಲಿಸಿದಲ್ಲಿ ನಮ್ಮ ದೇಶದ ಜನರಲ್ಲಿ ರೋಗ ನಿರೋಧಕ
ಶಕ್ತಿ ಅಧಿಕವಾಗಿದ್ದು, ಇದು ಕೊರೊನಾ ವೈರಾಣು ನಿಯಂತ್ರಿಸಲು
ಸಹಕಾರಿಯಾಗಿದೆ. ಈವರೆಗೂ ಸಹ ಕೋವಿಡ್ ರೋಗಕ್ಕೆ ಔಷಧಿ
ಕಂಡುಹಿಡಿದಿಲ್ಲ. ಆದರೆ ನಮ್ಮಲ್ಲಿರುವ ರೋಗ ನಿರೋಧಕ
ಶಕ್ತಿ ಹೆಚ್ಚಿಸಿಕೊಂಡು ವೈರಾಣುವಿನಿಂದ ಅಂತರ
ಕಾಯ್ದುಕೊಳ್ಳಬೇಕು ಎಂದರು.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 7
ಸೂಚನೆ ನೀಡಿದ್ದಾರೆ. ಅವುಗಳನ್ನು ಎಲ್ಲರೂ ಪಾಲಿಸೋಣ.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಜಿಲ್ಲಾವಾರು
ಮಾಹಿತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೆಲ್ಲರೂ
ಮನೆಯಲ್ಲಿಯೇ ಇದ್ದು, ಕೊರೊನಾ ವೈರಸ್ ನಿಯಂತ್ರಣಕ್ಕೆ
ಸಹಕರಿಸೋಣ ಎಂದರು.
ರಾಜ್ಯದ ಕಲಬುರುಗಿ ಜಿಲ್ಲೆಯಿಂದ ಚಾಮರಾಜನಗರ
ಜಿಲ್ಲೆಯವರೆಗೆ ಒಟ್ಟು 20 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನಾ ಸಭೆ
ನಡೆಸಲಾಗಿದೆ. ಒಂದೊಂದು ಜಿಲ್ಲೆಯಲ್ಲಿ ಸಹ ಒಂದೊಂದು ದಂಥ
ಕತೆ ಇದೆ. ಎಲ್ಲ ರಾಜಕೀಯ ಪಕ್ಷದವರು ಸಹ ಪಕ್ಷಾತೀತಾವಾಗಿ
ಕೋವಿಡ್ ನಿಯಂತ್ರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಇಂದು
ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಮೊದಲು ಮೂರು ಕೊರೊನಾ ಪಾಸಿಟಿವ್
ಪ್ರಕರಣಗಳು ಪತ್ತೆಯಾದಾಗ ಆತಂಕ ವಾತಾವರಣ
ನಿರ್ಮಾಣವಾಗಿತ್ತು. ನಂತರದಲ್ಲಿ ಜಿಲ್ಲಾಡಳಿತ ಹಾಗೂ ವೈದ್ಯಕೀಯ
ಇಲಾಖೆಗಳ ನಿರಂತರ ಶ್ರಮದಿಂದ ಕೊರೊನಾ ಪಾಸಿಟಿವ್
ಸೋಂಕಿತರು ಗುಣಮುಖರಾಗಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತಕ್ಕೆ
ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದರು.
ಕೋವಿಡ್ ತಪಾಸಣೆಗಾಗಿ 2 ಲಕ್ಷ ಕಿಟ್‍ಗಳನ್ನು ಖರೀದಿಸಲಾಗಿದ್ದು,
ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲಾಗುವುದು. ಇದರಿಂದ
ಪ್ರೈಮರಿ ಕಾಂಟ್ಯಾಕ್ಟ್ ಹಾಗೂ ಸೆಕೆಂಡರಿ
ಕಾಂಟ್ಯಾಕ್ಟ್‍ನಲ್ಲಿರುವವರನ್ನು ತಪಾಸಣೆಗೆ ಒಳಪಡಿಸಲು
ಕ್ರಮವಹಿಸುವಂತೆ ತಿಳಿಸಿದರು.
ಮೈಸೂರಿನ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಲ್ಲಿ 58
ಜನರಿಗೆ ಕೋವಿಡ್ ಪಾಸಿಟಿವ್ ಪ್ರಕರಣ ಬಂದಿದೆ. ಇಲ್ಲಿಗೆ ಚೀನಾ, ಜಪಾನ್
ಹಾಗೂ ದೆಹಲಿಯಿಂದ ಅನೇಕರು ಭೇಟಿ ನೀಡಿ ಹೋಗಿದ್ದಾರೆ.
ಇದುವರೆಗೂ ಪ್ರಕರಣದ ಮೂಲವನ್ನು ಪತ್ತೆಹಚ್ಚಲು
ಸಾಧ್ಯವಾಗಿಲ್ಲ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯ ಎಲ್ಲ
ಅಧಿಕಾರಿಗಳು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ರೋಗ
ನಿಯಂತ್ರಣಕ್ಕೆ ಕ್ರಮ ವಹಿಸಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಅನೇಕ
ದಾನಿಗಳು ಸಹ ಮುಂದೆ ಬಂದು ತಮ್ಮ ಕೈಲಾದಷ್ಟು ಸಹಾಯ
ಮಾಡಿದ್ದಾರೆ. ಇನ್ನೂ ಹೆಚ್ಚಿನ ದಾನಿಗಳು ಬಂದು ಬಡವರಿಗೆ
ನೆರವಾಗುವಂತೆ ಕೋರಿದರು.
ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು.
ಇದರಿಂದ ಕೊರೊನಾ ವೈರಸ್ ಕುರಿತಾದ ಮಾಹಿತಿ ದೊರೆಯಲಿದ್ದು,
ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪ್ರಧಾನಮಂತ್ರಿಯವರು
ಲಾಕ್‍ಡೌನ್ ಅವಧಿಯನ್ನ ಮೇ 3 ರವರೆಗೆ ವಿಸ್ತರಿಸಿದ್ದಾರೆ. ಇನ್ನೂ 20
ರಿಂದ 25 ದಿನಗಳವರೆಗೆ ಎಚ್ಚರಿಕೆಯಿಂದ ಶ್ರಮವಹಿಸಿ ರೋಗ
ನಿಯಂತ್ರಣ ಮಾಡೋಣ ಎಂದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಡವರು
ಹಸಿವಿನಿಂದ ಬಳಲದಂತೆ ಸಕಾಲಕ್ಕೆ ಜಿಲ್ಲಾಡಳಿತ ಕ್ರಮ
ಕೈಗೊಳ್ಳಬೇಕು. ನಮ್ಮಲ್ಲಿ ಬೇಕಾದಷ್ಟು ವೈದ್ಯರು ಹಾಗೂ
ನರ್ಸ್‍ಗಳಿದ್ದಾರೆ. ನೀವು ಜಿಲ್ಲಾಡಳಿತದಿಂದ ಕೋವಿಡ್ ಪರೀಕ್ಷೆಗೆ ಕಿಟ್
ಒದಗಿಸಿದಲ್ಲಿ ತಪಾಸಣೆಗಾಗಿ ಇವರನ್ನು ಬಳಸಿಕೊಳ್ಳಬಹುದು.
ಜಿಲ್ಲಾಡಳಿತಕ್ಕೆ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ ಮತ್ತು
ದವಸ ಧಾನ್ಯ ಹರಿದು ಬಂದಿದೆ. ಅದನ್ನು ಸರಿಯಾಗಿ ಬಳಕೆ
ಮಾಡಬೇಕು. ಪಕ್ಷಬೇಧ ಮರೆತು ನಾವೆಲ್ಲರೂ ರೋಗ
ನಿಯತ್ರಂಣಕ್ಕಾಗಿ ಶ್ರಮಿಸೋಣ ಎಂದರು.
ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಲಾಕ್‍ಡೌನ್ ವಿಸ್ತರಣೆ
ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಹಾಗೂ
ಗ್ಯಾರೇಜ್ ಕೆಲಸಗಾರು ಸೇರಿದಂತೆ ಕೂಲಿ ಕಾರ್ಮಿಕರು
ತೊಂದರೆಗೆ ಸಿಲುಕಿದ್ದಾರೆ. ಈಗಗಾಲೇ 21 ದಿನ ಕಳೆದಿದೆ. ಇವರಿಗೆ
ಜೀವನ ಸಾಗಿಸಲು ಯಾವುದೇ ಕಷ್ಟವಾಗದಂತೆ ಜಿಲ್ಲಾಡಳಿತ
ನೋಡಿಕೊಳ್ಳಬೇಕು. ಬಡವರು, ಹಸಿದವರಿಗೆ ಊಟ ಕೊಡುವ
ವ್ಯವಸ್ಥೆ ಸುಗುಮವಾಗಿ ನಡೆಯಬೇಕು. ಶಾಸಕರ ಅನುದಾನ
ಬಳಸಿಕೊಂಡು ಆಹಾರದ ಕಿಟ್ ತಯಾರಿಯಾಗಬೇಕು. ಜೊತೆಗೆ
ರೈತರ ಮೇಲೆ ಅನಾವಶ್ಯಕವಾಗಿ ಪೊಲೀಸರಿಂದ ಹಲ್ಲೆ ಆಗುತ್ತಿದೆ.
ದಯಾಮಾಡಿ ಈ ಬಗ್ಗೆ ಗಮನಹರಿಸಬೇಕಿದೆ ಎಂದರು.
ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,
ಜಗಳೂರ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಕೊರೊನಾ
ಸೋಂಕು ಪ್ರಕರಣ ಕಂಡುಬಂದಿಲ್ಲ. ತಾಲ್ಲೂಕು
ಕೇಂದ್ರಸ್ಥಾನವಾಗಿರುವುದರಿಂದ. ಕೂಡ್ಲಿಗಿ, ಕೊಟ್ಟೂರು,

ಮೊಳಕಾಲ್ಮುರು ಸೇರಿದಂತೆ ಸುತ್ತಮುತ್ತಲಿನ ಜನರು
ತಪಾಸಣೆಗೆ ಬರುತ್ತಾರೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ
ವೈದ್ಯರ ಕೊರತೆ ಇದೆ. ಜೊತೆಗೆ ವೆಂಟಿಲೇಟರ್ ಇದ್ದರೂ
ಅದನ್ನು ಆಪರೇಟ್ ಮಾಡುವ ಸಿಬ್ಬಂದಿಗಳಿಲ್ಲ ಎಂದರು. ಇದಕ್ಕೆ
ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಜಿಲ್ಲೆಯ ಖಾಸಗಿ ಆಸ್ಪತ್ರೆ
ಹಾಗೂ ನರ್ಸಿಂಗ್ ಹೋಮ್‍ಗಳಲ್ಲಿನ ಕೆಲ ಸಿಬ್ಬಂದಿಗಳನ್ನು
ನಿಯೋಜಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಕೊರೊನಾ
ಪ್ರಕರಣ ನಿಯಂತ್ರಣಕ್ಕೆ ಬಂದಕೂಡಲೇ ಎಲ್ಲಾ ಆಸ್ಪತ್ರೆಗಳಿಗೆ
ಬೇಕಾದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸುವ
ಭರವಸೆ ನೀಡಿದರು.
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಲಾಕ್‍ಡೌನ್
ವಿಸ್ತರಣೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ
ಮೋದಿಯವರ ಮುಂಜಾಗ್ರತಾ ಕ್ರಮವಾಗಿ ಬೇರೆ ದೇಶಕ್ಕೆ
ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ಕೋವಿಡ್ ಪ್ರಕರಣಗಳು ಹಾಗೂ
ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆಶಾ ಕಾರ್ಯಕರ್ತೆಯರ
ಮೇಲೆ ಹಲ್ಲೆಗಳಾಗುತ್ತಿದ್ದು, ಅಂತಹವರ ಮೇಲೆ ಪ್ರಕರಣ
ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಬೆಂಗಳೂರಿನಲ್ಲಿ
ಇರುವಂತೆ ಜಿಲ್ಲೆಯಲ್ಲಿಯೂ ಸಹ ಗುಣಮಟ್ಟದ
ಸೌಲಭ್ಯಗಳನ್ನು ಒಳಗೊಂಡ ವಾರ್ ರೂಂ ಕಾರ್ಯ
ನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಶೇ.95
ರಷ್ಟು ಪಡಿತರ ವಿತರಣೆ ಮಾಡಲಾಗಿದೆ. ಲಾಕ್‍ಡೌನ್ ಆದಾಗಿನಿಂದ ಜನ
ಸಾಮಾನ್ಯರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆಗೆ
ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ 2 ಎಪಿಸೆಂಟರ್ ಮಾಡಿ ಅಲ್ಲಿರುವವರಿಗೆ
ಫ್ಲೂ ಸರ್ವೇ ಮಾಡಲಾಗಿದೆ. ಈವರೆಗೆ ಪ್ರೈಮರಿ
ಕಾಂಟ್ಯಾಕ್ಟ್‍ನಲ್ಲಿರುವರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಸೆಕೆಂಡರಿ
ಕಾಂಟ್ಯಾಕ್ಟ್‍ನಲ್ಲಿರುವವರನ್ನು ಗುರುತಿಸಲಾಗಿದ್ದು,
ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಜೊತೆಗೆ
ಸಾಕಷ್ಟು ದಾನಿಗಳು ಮುಂದಾಗಿದ್ದು, ಅವರೊಂದಿಗೆ ಎನ್‍ಡಿಆರ್‍ಎಫ್,
ಎಸ್‍ಡಿಆರ್‍ಎಫ್ ಅನುದಾನ ಬಳಸಿಕೊಂಡು ವಲಸೆ ಕಾರ್ಮಿಕರಿಗೆ ಆಹಾರ
ಧಾನ್ಯದ ಕಿಟ್ ವಿತರಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 22 ಚೆಕ್‍ಪೋಸ್ಟ್
ಸ್ಥಾಪಿಸಿದ್ದು, ಅದರಲ್ಲಿ ಜಿಲ್ಲೆಯೊಳಗೆ 11 ಹಾಗೂ ಜಿಲ್ಲೆಯು ಗಡಿ
ಭಾಗದಲ್ಲಿ 11 ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆಯೊಂದಿಗೆ ಸೇರಿ

ಬರುವವರನ್ನು ತಡೆದು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೋವಿಡ್
ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಸೇರಿಸಲಾಗುವುದು
ಎಂದು ತಿಳಿಸಿದರು.
ಮೂಲಭೂತ ದಿನನಿತ್ಯದ ಅವಶ್ಯಕ ವಸ್ತುಗಳನ್ನು
ಸಾಗಿಸುವ ಟ್ರಕ್ ಹಾಗೂ ಲಾರಿ ಡ್ರೈವರ್‍ಗಳ ಅನುಕೂಲಕ್ಕಾಗಿ
ಜಿಲ್ಲೆಯಲ್ಲಿ ಮುಖ್ಯವಾದ ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರ
ಹೈವೈಗಳಲ್ಲಿನ ಡಾಬಾಗಳನ್ನು ಪರಿಶೀಲಿಸಿ 21 ಡಾಬಾಗಳನ್ನು
ತೆರೆಯಲು ಅನುಮತಿ ನೀಡಲಾಗಿದೆ. ಇಲ್ಲಿ ಪಾರ್ಸಲ್ ಮಾತ್ರ
ಒದಗಿಸಲಾಗುತ್ತಿದೆ. ಜೊತೆಗೆ ಅವಶ್ಯಕವಾದ ವಸ್ತು
ಸಾಮಾಗ್ರಿಗಳನ್ನು ಸಾಗಿಸಲು ವಿವಿಧ ವಾಹನಗಳ ಓಡಾಟಕ್ಕೆ
ಅನುಕೂಲ ಕಲ್ಪಿಸಲಾಗಿದ್ದು, ಪಾಸ್‍ಗಳನ್ನು ಕೊಡಲಾಗಿದೆ
ಎಂದರು.
ಹೊರ ರಾಜ್ಯದ ಕಾರ್ಮಿಕರು ಹಾಗೂ ವಲಸೆ ಕಾರ್ಮಿರಿಗೆ ಕಾರ್ಮಿಕ
ಇಲಾಖೆಯೊಂದಿಗೆ ಸೇರಿ ಊಟ, ವಸತಿ ಹಾಗೂ ಕುಡಿಯುವ ನೀರಿನ
ವ್ಯವಸ್ಥೆ ಜೊತೆಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಲ್ಲದೆ
ದೆಹಲಿಯ ಪ್ರವಾಸ ಹಿನ್ನೆಲೆ ಹೊಂದಿದ್ದ ಜಿಲ್ಲೆಯ 42 ಜನರು 14 ದಿನ
ಹಾಗೂ 28 ದಿನ ಕ್ವಾರಂಟೈನ್ ಪೂರ್ಣಗೊಳಿಸಿ ಆರೋಗ್ಯ ತಪಾಸಣೆ
ಮಾಡಿಸಿಕೊಂಡಿದ್ದಾರೆ. ಇವರ ಪರೀಕ್ಷೆ ನೆಗೆಟಿವ್ ಬಂದಿದೆ. ಲಾಕ್‍ಡೌನ್ ವೇಳೆ
ಅನಾವಶ್ಯಕವಾಗಿ ಓಡಾಡಿದ್ದ 2431 ಬೈಕ್‍ಗಳನ್ನು ಸೀಜ್
ಮಾಡಲಾಗಿದ್ದು, ಲಾಕ್‍ಡೌನ್ ಉಲ್ಲಂಘಿಸಿದವರ ಮೇಲೆ 12 ಪ್ರಕರಣ
ದಾಖಲಿಸಲಾಗಿದೆ. 23 ಅಬಕಾರಿ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದೆ.
ಸಾವರ್ಜನಿಕರ ಕ್ಷೇಮಾಭಿವೃದ್ಧಿಗೆ ಜಿಲ್ಲಾಡಳಿತದೊಂದಿಗೆ ಸೇರಿ
ಪೊಲೀಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು
ಹೇಳಿದರು.
ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಜಿಲ್ಲೆÀಯ 209
ಗ್ರಾಮ ಪಂಚಾಯತ್‍ಗಳಲ್ಲಿ ಟಾಸ್ಕ್‍ಫೋರ್ಸ್ ಸಮಿತಿ
ರಚಿಸಲಾಗಿದ್ದು, ಸಭೆ ಮೂಲಕ ಜನ ಎಲ್ಲಿ ಗುಂಪು ಸೇರುತ್ತಾರೂ
ಅಲ್ಲಿ ಸಾಮಾಜಿಕ ಅಂತರ ಕಾಯಯ್ದುಕೊಳ್ಳುವ ಕುರಿತುಂತೆ
ಇತರೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ
ಚರಂಡಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಸ್ಯಾನಿಟೈಸರ್,
ಮಾಸ್ಕ್ ಸೇರಿದಂತೆ ಸಿಬ್ಬಂದಿಗಳಿಗೆ ಸುರಕ್ಷತಾ ಕಿಟ್‍ಗಳನ್ನು
ನೀಡಲಾಗಿದೆ ಎಂದರು.
ಅಕ್ಷರ ದಾಸೋಹ ಯೋಜನೆಯಡಿ ಮನೆ ಮನೆಗೆ ತೆರಳಿ
1,50,231 ಮಕ್ಕಳಿಗೆ 21 ದಿನಗಳಿಗಾಗುವಷ್ಟು ಆಹಾರ ಧಾನ್ಯದ
ಕಿಟ್ ವಿತರಣೆ ಮಾಡಲಾಗಿದೆ. ಅದೇ ರೀತಿ ಅಂಗನವಾಡಿ ಮಕ್ಕಳಿಗೂ,
ಕಿಶೋರಿಯರು ಹಾಗೂ ಗರ್ಭಿಣಿಯವರಿಗೂ ಸಹ ಮನೆ

ಮನೆಗೆ ತೆರಳಿ ಅವರಿಗೆ ಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನು
ನೀಡಲಾಗಿದೆ.
ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ದಾವಣಗೆರೆ ಜಿಲ್ಲೆಗೆ 19600 ಜನರು
ಆಗಮಿಸಿದ್ದು, ಅವರೆಲ್ಲರಿಗೂ ಸಹ ಆಶಾ ಕಾರ್ಯಕರ್ತೆಯರ
ಮೂಲಕ ಗುರುತಿಸಿ ನಿಗಾ ವಹಿಸಲಾಗಿದೆ. ನರೇಗಾ ಯೋಜನೆಯಡಿ
ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಸುರಕ್ಷತಾ ಕಿಟ್‍ಗಳಾದ
ಮಾಸ್ಕ್ ಹಾಗೂ ಸ್ಯಾನಿಟೈಜರ್ ನೀಡಿ ಅಂತರ ಕಾಯ್ದುಕೊಳ್ಳಲು
ಸೂಚಿಸಿ ಪ್ರತಿ 5 ಜನ ಕಾರ್ಮಿಕರಲ್ಲಿ ಒಬ್ಬರನ್ನು ಮುಖಂಡರನ್ನಾಗಿ
ಮಾಡಿ ಅವರಿಗೆ ವೈರಸ್ ನಿಯಂತ್ರಣ ಕುರಿತು ನಿಗಾವಹಿಸಲು ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು 195 ಶೌಚಾಲಯಗಳನ್ನು ಪೂರ್ಣವಾಗಿ ನಿರ್ಮಿಸಿದ್ದು,
ಅವುಗಳಿಗೆ ಅನುದಾನವನ್ನು ನೀಡಲಾಗುತ್ತಿದೆ ಎಂದು ಮಾಹಿತಿ
ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಮಾರ್ಚ್ 04 ರಿಂದ
ಇದುವರೆಗೆ 499 ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ
ಬಂದಿದ್ದು, 28 ದಿನಗಳ ಅವಲೋಕನ ಅವಧಿಯನ್ನು 277 ಜನರು
ಪೂರ್ಣಗೊಳಿಸಿದ್ದಾರೆ. ಹಾಗೂ 194 ಜನರು 14 ದಿನಗಳ
ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 28
ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, 61
ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಹಾಗೂ
ಇದುವರೆಗೂ 57 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ
ಬಿಡುಗಡೆ ಹೊಂದಿದ್ದಾರೆ.
    ಕೊರೋನಾ ವೈರಸ್ ಪರೀಕ್ಷೆಗಾಗಿ 203 ಮಾದರಿಗಳನ್ನು
ಇದುವರೆಗೆ ಕಳುಹಿಸಲಾಗಿದ್ದು, 148 ಮಾದರಿಗಳು ನೆಗೆಟಿವ್
ಎಂದು ಫಲಿತಾಂಶ ಬಂದಿರುತ್ತದೆ. ಇದುವರೆಗೂ ಜಿಲ್ಲೆಯಲ್ಲಿ
ಕೋವಿಡ್-19 ಸೋಂಕು ಖಚಿತಪಟ್ಟ ಮೂರು (03) ಪ್ರಕರಣಗಳ
ಪೈಕಿ ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಹೊಂದಿದ್ದಾರೆ ಎಂದು ಸಭೆಗೆ ಮಾಹಿತಿ ಒದಗಿಸಿದರು.
ಸಭೆಯ ನಂತರ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಚಿಕಿತ್ಸಾ
ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಎಂಎಲ್‍ಸಿ ಅಬ್ದುಲ್ ಜಬ್ಬಾರ್,
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ,
ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ದೂಡಾ ಅಧ್ಯಕ್ಷ
ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ, ಎಡಿಸಿ ಪೂಜಾರ
ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *