ದಾವಣಗೆರೆ ಏ.20
ಕೋವಿಡ್ 19 ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸದ್ಯಕ್ಕೆ
ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿದ್ದರೂ, ಸರ್ಕಾರದ
ಆದೇಶದಂತೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ
ಇಲಾಖೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಪರಿಸ್ಥಿತಿಯನ್ನು ಎದುರಿಸಲು
ಸನ್ನದ್ದರಾಗಿರಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೇಳಿದರು.
ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಕೋವಿಡ್ 19 ಹಿನ್ನೆಲೆ
ಅಧಿಕಾರಿಗಳೊಂದಿಗೆ ನಡೆಸಲಾದ ಕೋವಿಡ್ ಪ್ರಗತಿ ಪರಿಶೀಲನಾ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಆರೋಗ್ಯ ಇಲಾಖೆ
ವತಿಯಿಂದ ಕೋವಿಡ್ ಆಸ್ಪತ್ರೆಯಾಗಿರುವ ಜಿಲ್ಲಾಸ್ಪತ್ರೆಯಲ್ಲಿ 200
ಸೋಂಕಿತರಿಗಾಗುವಷ್ಟು ಬೆಡ್‍ಗಳ ಸಿದ್ದತೆ ನಡೆಸಲಾಗಿದೆ. ಜಿಲ್ಲಾ
ಶಸ್ತ್ರ ಚಿಕಿತ್ಸಿಕರು ಆದಷ್ಟು ಬೇಗ ಇದರ ಸಿದ್ದತೆ
ಸಂಪೂರ್ಣಗೊಳಿಸಬೇಕು ಎಂದರು.
ವಲಸೆ ಕಾರ್ಮಿಕರಿಗೆ ಅವರ ಕೆಲಸದ ಸ್ಥಳಕ್ಕೆ
ತಲುಪಿಸಲಾಗುವುದು: ಸರ್ಕಾರದ ಆದೇಶದಂತೆ ವಲಸೆ
ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಿಗೆ ತೆರಳುವ ವೇಳೆ
ದಾವಣಗೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಇದೀಗ ಅವರು ತಮ್ಮ
ಕೆಲಸದ ಸ್ಥಳಗಳಿಗೆ ಮರಳಲು ಇಚ್ಚಿಸಿದ್ದಲ್ಲಿ ತಹಶೀಲ್ದಾರರು
ಕಾರ್ಮಿಕ ಅಧಿಕಾರಿಗಳ ಸಹಯೋಗದೊಂದಿಗೆ ಪಟ್ಟಿ ಮಾಡಿ
ನೀಡಿದಲ್ಲಿ, ಜಿಲ್ಲಾಡಳಿತದ ವತಯಿಂದ ವಲಸಿಗ ಕಾರ್ಮಿಕರ ಕೆಲಸದ
ಸ್ಥಳಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ವಲಸೆ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ಮತ್ತು ಆಪ್ತ
ಸಮಾಲೋಚನೆ: ಜಿಲ್ಲೆಯಲ್ಲಿರುವ ಎಲ್ಲ ವಲಸೆ ಕಾರ್ಮಿಕರ
ಶಿಬಿರಗಳಲ್ಲಿನ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ
ನಡೆಸಬೇಕು. ಹಾಗೂ ಆಪ್ತ ಸಮಾಲೋಚನೆಯನ್ನು
ನಡೆಸಬೇಕು. ಹಾಗೂ ಆಹಾರದ ಕಿಟ್‍ಗಳನ್ನು ಸಮರ್ಪಕವಾಗಿ
ವಿತರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆರ್‍ಸಿಹೆಚ್ ಡಾ.ಮೀನಾಕ್ಷಿ ಮಾತನಾಡಿ, ಆರ್‍ಬಿಎಸ್‍ಕೆ ವೈದ್ಯರ
ತಂಡಗಳು ಎಲ್ಲ ಕಾರ್ಮಿಕ ಶಿಬಿರಗಳಿಗೆ ತೆರಳಿ ವೈದ್ಯಕೀಯ
ತಪಾಸಣೆ ನಡೆಸುತ್ತಿದ್ದು, ಆಪ್ತ ಸಮಾಲೋಚನೆಯನ್ನೂ
ಸಹ ಮಾಡಲಾಗುತ್ತಿದೆ ಎಂದರು.
ಆಹಾರ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ ಮಾತನಾಡಿ,
ಜಿಲ್ಲೆಯಲ್ಲಿ ಆಹಾರ ಪಡಿತರ ವಿತರಣೆ ಕಾರ್ಯ ಸಂಪೂರ್ಣಗೊಂಡಿದೆ.
ಹೊಸದಾಗಿ ರೇಷನ್ ಕಾರ್ಡಿಗೆ 3140 ಜನರು ಅರ್ಜಿ ಸಲ್ಲಸಿದ್ದು ಇವರಲ್ಲಿ
305 ಜನರು ಎಪಿಎಲ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಪಿಎಲ್ ಅರ್ಜಿದಾರರಿಗೆ ಉಚಿತವಾಗಿ 10
ಕೆ.ಜಿ ಅಕ್ಕಿ ಮತ್ತು ಎಪಿಎಲ್ ಅರ್ಜಿದಾರರಿಗೆ ತಲಾ ಕೆ.ಜಿ.ಗೆ ರೂ.15 ರಂತೆ 10
ಕೆ.ಜಿ ಅಕ್ಕಿ ವಿತರಿಸಲಾಗುವುದು. ಅರ್ಜಿದಾರರು ಯಾವುದೇ ಪಡಿತರ
ಅಂಗಡಿಗಳಲ್ಲಿ ಪಡಿತರ ಪಡೆಯಬಹುದೆಂದರು.
ಈ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ತಮ್ಮ ಸ್ವಂತ ಜಿಲ್ಲೆಗಳಿಗೆ
ತೆರಳಿ ಇದೀಗ ಸರ್ಕಾರದ ಆದೇಶದಂತೆ ಕರ್ತವ್ಯ ನಿರ್ವಹಿಸಲು
ನಮ್ಮ ಜಿಲ್ಲೆಗೆ ಹಾಟ್‍ಸ್ಟಾಪ್ ಜಿಲ್ಲೆಗಳಿಂದ ಆಗಮಿಸುವ
ಅಧಿಕಾರಿ/ಸಿಬ್ಬಂದಿಗಳನ್ನು ಆಯಾ ಇಲಾಖಾ ಮುಖ್ಯಸ್ಥರು ಮೊದಲಿಗೆ
ಅವರನ್ನು 14 ದಿನಗಳ ಕಾಲ ಅವರ ಮನೆಗಳಲ್ಲೇ
ಕ್ವಾರೆಂಟೈನ್ ಇರಿಸಿ ನಂತರ ಕೆಲಸಕ್ಕೆ ತೆಗೆದುಕೊಳ್ಳುವ
ವ್ಯವಸ್ಥೆ ಮಾಡಿಕೊಳ್ಳಬೇಕು.
ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಹಾಟ್‍ಸ್ಪಾಟ್ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಬೆಳಗಾಂ,
ಬಾಗಲಕೋಟೆ, ವಿಜಯಪುರ, ಗದಗ, ಚಿಕ್ಕಬಳ್ಳಾಪುರ, ಬೀದರ್,
ಮಂಗಳೂರು ಇಲ್ಲಿಂದ ಲಾಕ್‍ಡೌನ್ ಆದ ನಂತರ ಯಾರಾದರೂ
ಜಿಲ್ಲೆಗೆ ಆಗಮಿಸಿದ್ದು, ಅಂತಹವರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ
ಇದ್ದಲ್ಲಿ ತಕ್ಷಣ ಅವರ ಮಾಹಿತಿಯನ್ನು ಸಹಾಯವಾಣಿ 1077 ಗೆ
ಅಥವಾ 104 ಗೆ ನೀಡಬೇಕು.
ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ನಗರದ ಏಳು ಚೆಕ್‍ಪೋಸ್ಟ್‍ಗಳಲ್ಲಿ ಲಾರಿ ಡ್ರೈವರ್ ಮತ್ತು
ಸಿಬ್ಬಂದಿಗಳ ಆರೋಗ್ಯ ತಪಾಸಣೆ ತಪ್ಪದೇ ಆಗಬೇಕು.
ಹೆಬ್ಬಾಳು ಚೆಕ್‍ಪೋಸ್ಟ್‍ನಲ್ಲಿ ಆರೋಗ್ಯ ತಪಾಸಣೆ
ನಡೆಯುತ್ತಿಲ್ಲ. ಹಾಗೂ ಅಲ್ಲಿನ ಚೆಕ್‍ಪೋಸ್ಟ್ ಸಿಬ್ಬಂದಿಗಳನ್ನು
ಕೂಡ ಸಮರ್ಪಕವಾಗಿ ಕೆಲಸ ಮಾಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಚೆಕ್‍ಪೋಸ್ಟ್‍ಗಳಲ್ಲಿನ
ಸಿಬ್ಬಂದಿಗಳನ್ನು ಮರು ವಿನ್ಯಾಸಗೊಳಿಸಿ ನಿಯೋಜಿಸಲಾಗುವುದು.
ಹಾಗೂ ಈಗಾಗಲೇ ಎಲ್ಲ ಚೆಕ್‍ಪೋಸ್ಟ್‍ಗಳಿಗೆ ಸ್ಯಾನಿಟೈಸರ್,
ಮಾಸ್ಕಗಳನ್ನು ನೀಡಿದ್ದು, ಮತ್ತೊಮ್ಮೆ ವಿತರಿಸಲಾಗುವುದು
ಎಂದರು.
ಎಪಿಎಂಸಿ ಹಮಾಲರಿಗೆ ಪಾಸ್‍ಗಳನ್ನು ಎಪಿಎಂಸಿ ಯಿಂದಲೇ ಪಾಸ್‍ಗಳನ್ನು
ವಿತರಿಸಬೇಕು. ಹಾಗೂ ಆ ಪಾಸ್‍ಗಳನ್ನು ಕೇವಲ ಕೆಲಸದ
ಪ್ರದೇಶಕ್ಕೆ ಬಂದು ಹೋಗಲು ಮಾತ್ರ ಬಳಕೆ
ಮಾಡಿಕೊಳ್ಳಬೇಕೆಂದು ಎಸ್‍ಪಿ ಹನುಮಂತರಾಯ ತಿಳಿಸಿದರು.
ಆದೇಶ ಬರುವವರೆಗೆ ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆ ಇಲ್ಲ :
ಇದುವರೆಗೆ ಜಿಲ್ಲಾಡಳಿತಕ್ಕೆ ಲಾಕ್‍ಡೌನ್ ಸಡಿಲಿಕೆ ಕುರಿತು
ಸರ್ಕಾರದಿಂದ ಆದೇಶ ಬಂದಿಲ್ಲ. ಆದ ಕಾರಣ ಆದೇಶ ಬರುವವರೆಗೆ
ಈಗಿನಂತೆಯೇ ಲಾಕ್‍ಡೌನ್ ಜಾರಿಯಲ್ಲಿದ್ದು ಎಲ್ಲರೂ ಪಾಲಿಸುವಂತೆ
ಜಿಲ್ಲಾಧಿಕಾರಿಗಳು ತಿಳಿಸಿದರು.
ಸ್ಮಾರ್ಟ್ ಸಿಟಿ ವತಿಯಿಂದ ಕೋವಿಡ್ 19 ಹಿನ್ನೆಲೆ ಆರೋಗ್ಯ
ಇಲಾಖೆಯ ವೈದ್ಯರಿಗೆ ಮತ್ತು ರೋಗಿಗಳಿಗೆ
ಅನುಕೂಲವಂತಹ ಸಾಫ್ಟ್‍ವೇರ್‍ನ್ನು ಅಭಿವೃದ್ದಿ ಪಡಿಸಿದೆ. ಪೇಷಂಟ್
ಟ್ರ್ಯಾಕಿಂಗ್, ಸೋಂಕಿತರ ಕಾಂಟಾಕ್ಟ್ ಟ್ರ್ಯಾಕಿಂಗ್, ಮಾನಿಟರ್
ಪ್ರೊಗ್ರೆಸ್ ಮತ್ತು ವರದಿಗಳನ್ನು
ಅಭಿವೃದ್ದಿಪಡಿಸಬಹುದಾಗಿದೆ. ಡಿಹೆಚ್‍ಓ ಮತ್ತು ಡಿಎಸ್‍ಓ, ಡಿಎಎಸ್ ಇವರ
ಸಲಹೆಗಳನ್ನು ಪಡೆದು ಮತ್ತಷ್ಟು ಬಳಕೆದಾರರ
ಸ್ನೇಹಿಯಾಗಿ ಅಭಿವೃದ್ದಿ ಪಡಿಸಲಾಗುವುದು ಎಂದು ಸ್ಮಾರ್ಟ್‍ಸಿಟಿ
ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೋವಿಡ್ ವಾರ್ ರೂಂ
ಮುಖ್ಯಸ್ಥರಾದ ರವೀಂದ್ರ ಮಲ್ಲಾಪುರ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಸಿ ಮಮತಾ
ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಮಟ್ಟದ
ಅಧಿಕಾರಿಗಳು ಹಾಜರಿದ್ದರು.