ದಾವಣಗೆರೆ ಏ.24
ವೈರಸ್ ನಿಯಂತ್ರಿಸಲು ಹಾಗೂ ರೋಗ ನಿರೋಧಕ ಶಕ್ತಿ
ಹೆಚ್ಚಿಸಿಕೊಳ್ಳಲು ಆಯುಷ್ ಉತ್ಪನ್ನಗಳನ್ನು ಬಳಸಬೇಕು
ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ ನೀಡಿದರು.
ಜಿಲ್ಲಾ ಯೋಗ ಒಕ್ಕೂಟದ ವತಿಯಿಂದ ಶುಕ್ರವಾರ ಜಿಲ್ಲಾಡಳಿತ
ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಆಯುಷ್ ಉತ್ಪನ್ನವಾದ
ಚ್ಯವನ್‍ಪ್ರಾಶ್‍ನ್ನು ಪತ್ರಿಕಾ ಮಾಧ್ಯಮದವರಿಗೆ ವಿತರಿಸಿ
ಮಾತನಾಡಿದ ಅವರು, ರೋಗ ನಿರೋಧಕ ಶಕ್ತಿ
ಹೆಚ್ಚಿಸಿಕೊಳ್ಳಲು ಆಯುಷ್ ಉತ್ಪನ್ನ ಬಳಸುವ ಮೂಲಕ ಅದರ
ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ನಿಮ್ಮ ಕಾಳಜಿ ನಮ್ಮ ಕಳಕಳಿ ಎಂದು ಹೇಳಲು ಬಹಳಷ್ಟು
ದಾರಿ, ಸಾಧನ ಹಾಗೂ ಸಂವೇಧನೆಗಳಿವೆ. ಅದರಂತೆ ಜಿಲ್ಲೆಯ
ಯೋಗ ಒಕ್ಕೂಟವು ನಾವು ನಿಮ್ಮ ಜೊತೆ, ಜಿಲ್ಲಾಡಳಿತ ಹಾಗೂ
ಮಾಧ್ಯಮದವರ ಜೊತೆಯಲ್ಲಿ ಇದ್ದೇವೆ ಎಂದು ತೋರಿಸಲು ಈ
ಕಾರ್ಯ ಕೈಗೊಂಡಿದ್ದಾರೆ. ಇದು ಬಹಳಷ್ಟು ಅರ್ಥಪೂರ್ಣವಾದ
ಕೆಲಸವಾಗಿದೆ. ಹಾಗಾಗಿ ಜಿಲ್ಲಾಡಳಿತದ ವತಿಯಿಂದ ಅಭಿನಂದನೆ
ಸಲ್ಲಿಸುತ್ತೇನೆ. ಜೊತೆಗೆ ಅವರ ಹಾಗೇ ಇತರ ದಾನಿಗಳು ಕೂಡ
ಮುಂದಾಗಬೇಕು ಎಂದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲವು ವಲಯಗಳಿಗೆ ಸಡಿಲಿಕೆ
ನೀಡಲಾಗಿದೆ. ಅದರಂತೆ ಎಲೆಕ್ಟ್ರಿಕ್ ಫ್ಯಾನ್ ಶಾಪ್‍ಗಳು, ಪುಸ್ತಕದ
ಅಂಗಡಿಗಳು, ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿಗಳು,
ಪ್ಲಾಂಟೇಶನ್‍ಗಳಲ್ಲಿ ಬೊಂಬು, ಕೋಕನಟ್, ಅರೇಕನಟ್

ಜೊತೆಗೆ ಮೊಬೈಲ್ ರಿಚಾರ್ಜ್ ಅಂಗಡಿಗಳ ತೆರೆಯಲು ತಿದ್ದುಪಡಿ
ಮಾಡಿ ಅನುಮತಿ ನೀಡಲಾಗಿದೆ.
ನಗರ ಪ್ರದೇಶಗಳಲ್ಲಿ ಕೆಲಸಗಾರರು ಲಭ್ಯವಿದ್ದರೆ,
ಬೇರೆ ಕಡೆಯಿಂದ (ರಾಜ್ಯ ಅಥವಾ ಜಿಲ್ಲೆಯಿಂದ) ಕೆಲಸಗಾರರನ್ನು
ಕರೆದುಕೊಂಡು ಬರದೇ ಇದ್ದರೆ ಸೈಟ್‍ಗಳಲ್ಲಿ ಕೆಲಸ
ನಡೆಸಿಕೊಂಡು ಹೋಗಬಹುದಾಗಿದೆ. ಜೊತೆಗೆ ವಿವಿಧ ಅಭಿವೃದ್ಧಿ
ಕೆಲಸಗಳಾದ ಸ್ಮಾರ್ಟ್ ಸಿಟಿ, ಕಾರ್ಪೋರೇಶನ್ ಮತ್ತು ಗ್ರಾಮೀಣ
ಭಾಗದಲ್ಲಿನ ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ ಎಂದು
ತಿಳಿಸಿದರು.
ಚ್ಯವನ್ ಪ್ರಾಶ್‍ನಲ್ಲಿ ಯಾವುದೇ ಮೆಟಲ್ ಅಂಶ ಇಲ್ಲ. ಸಂಪೂರ್ಣ
ಹರ್ಬಲ್ ಉತ್ಪನ್ನವಾಗಿದೆ. ಇದರಲ್ಲಿ ಶೇ.70ರಷ್ಟು ನೆಲ್ಲಿಕಾಯಿ,
30ರಷ್ಟು ಉಳಿದ ವಿವಿಧ 32 ಡ್ರಗ್ ಹರ್ಬಲ್ ಔಷಧಗಳಿವೆ. ಜೊತೆಗೆ
ಶರ್ಕರ ಕಲ್ಲು ಸಕ್ಕರೆ ಅಂಶ ಒಳಗೊಂಡಿದೆ. ಇದನ್ನು ಪ್ರತಿ ದಿನ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ಗ್ರಾಂ ಹಾಗೂ ರಾತ್ರಿ ಊಟಕ್ಕೆ
ಮುಂಚಿತವಾಗಿ 5 ಗ್ರಾಂ ಸೇವಿಸಬೇಕು. ಇದರ ಜೊತೆಗೆ ಒಂದು
ಲೋಟ ಬಿಸಿ ಹಾಲಿಗೆ ಒಂದು ಚಿಟಿಕೆ ಅರಿಷಿಣ ಸೇರಿಸಿ ಸೇವಿಸುವುದರಿಂದ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು
ಅದರ ಉಪಯುಕ್ತತೆ ಕುರಿತು ಆಯುಷ್ ಅಧಿಕಾರಿ ಮಾಹಿತಿ
ನೀಡಿದರು.
ಜಿಲ್ಲಾ ಯೋಗ ಒಕ್ಕೂಟದ ಕಾರ್ಯದರ್ಶಿ ವಾಸುದೇವ್ ರಾಯ್ಕರ್
ಮಾತನಾಡಿ, ದೇಹದಲ್ಲಿ ಯಾವುದೇ ವೈರಸ್ ಬಂದಾಗ ಶ್ವಾಸಕೋಶ
ದುರ್ಬಲತೆಗೆ ಒಳಗಾಗುತ್ತದೆ. ಚ್ಯವನ್ ಪ್ರಾಶ್ ಸೇವನೆಯಿಂದ ಈ
ರೋಗ ತಡೆಗಟ್ಟಲು ಇದು ಸಹಕಾರಿಯಾಗಲಿದೆ. ಶ್ವಾಸಕೋಶಕ್ಕೆ
ಶಕ್ತಿ ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಇದರ
ಸದುಪಯೋಗ ಪಡೆದುಕೊಳ್ಳಬೇಕು. ಕೋವಿಡ್ ಜೊತೆಗಿನ
ಹೋರಾಟಕ್ಕೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪತ್ರಕರ್ತ ನಾಗರಾಜ್ ಬಡದಾಳ್ ಮಾತನಾಡಿ, ಇಂತಹ ಸಂದಿಗ್ಧ
ಪರಿಸ್ಥಿತಿಯಲ್ಲಿ ನಾವೆಲ್ಲರೂ ಸಾಮಾಜಿಕ ಅಂತರ
ಕಾಯ್ದುಕೊಳ್ಳುವ ಮೂಲಕ ಕೊರೊನಾ ವೈರಸ್
ನಿಯಂತ್ರಣಕ್ಕೆ ಸಹಕರಿಸಬೇಕಾಗಿದೆ. ಸಾರ್ವಜನಿಕರಲ್ಲಿ ಕೊರೊನಾ
ಕುರಿತು ಸಾಮಾಜಿಕ ಪ್ರಜ್ಞೆ ಮೂಡಿದಾಗ ಮಾತ್ರ ವೈರಸ್
ಹತೋಟಿಗೆ ಬರಲಿದೆ. ಜಿಲ್ಲಾ ಯೋಗ ಒಕ್ಕೂಟದ ಈ ಕಾರ್ಯ
ಪತ್ರÀಕರ್ತರ ಮೇಲಿನ ಕಾಳಜಿ ತೋರುತ್ತಿದೆ ಎಂದು
ಶ್ಲಾಘೀಸಿದರು.
ಪತ್ರಿಕೆ ಹಂಚುವ ಸಾಕಷ್ಟು ಹುಡುಗರು ಜಿಲ್ಲೆಯಲ್ಲಿದ್ದಾರೆ.
ಅವರು ಸಹ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ

ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಹಾರದ ಕಿಟ್ ಕೊಡಿಸುವಂತೆ
ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ
ಜಿಲ್ಲಾಧಿಕಾರಿಯವರು, ಶೀಘ್ರದಲ್ಲೇ ಪತ್ರಿಕೆ ಹಂಚುವವರಿಗೂ
ಆಹಾರ ಕಿಟ್ ನೀಡುವ ಭರವಸೆ ನೀಡಿದರರು. ಜೊತೆಗೆ ಈ
ಕಾರ್ಯಕ್ಕೆ ಯಾರಾದರೂ ದಾನಿಗಳು ಮುಂದಾಗÀಬೇಕು
ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ
ರವೀಂದ್ರ ಮಲ್ಲಾಪುರ, ಜಿಲ್ಲಾ ಯೋಗ ಒಕ್ಕೂಟದ ಸದಸ್ಯರು,
ಜಿಲ್ಲೆಯ ಎಲ್ಲಾ ಮಾಧ್ಯಮ ಮಿತ್ರರು ಹಾಜರಿದ್ದರು.

Leave a Reply

Your email address will not be published. Required fields are marked *