ದಾವಣಗೆರೆ ಸೆ.18
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಇಂದು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ
ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ
ಜರುಗಿತು.
ಪ್ರಮುಖವಾಗಿ ದಲಿತರಿಗೆ ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ
ಪತ್ರ ಪಡೆಯುತ್ತಿರುವವರ ವಿರುದ್ದ ಕ್ರಮ, ಬಹಳ
ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣ
ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು
ಬಂಧಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಸಭೆಯಲ್ಲಿ
ಹಾಜರಿದ್ದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು
ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು, ಈ ಸಭೆ ನಡೆದು 2 ವರ್ಷಗಳಾಗಿದ್ದು ನಾನು
ಜಿಲ್ಲಾಧಿಕಾರಿಯಾಗಿ ಬಂದ ನಂತರ ಮೊದಲ ಸಭೆ
ಇದಾಗಿದೆ. ತಮ್ಮ ಕುಂದು ಕೊರತೆಗಳನ್ನು ಮುಕ್ತವಾಗಿ ತಿಳಿಸಿ.
ನಾನೂ ಸೇರಿದಂತೆ ಅಧಿಕಾರಿಗಳ ತಂಡದಿಂದ ತಮ್ಮ ಮನವಿಗಳನ್ನು
ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದರು.
ಪ್ರಾರಂಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ
ಡಾ.ವೈ.ರಾಮಪ್ಪ, ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ
ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ನಾನೊಬ್ಬ ಜಿಲ್ಲಾ
ಪಂಚಾಯತ್ ಮಾಜಿ ಅಧ್ಯಕ್ಷ. ನನಗೆ ನಗರದ ಪ್ರಮುಖ
ವೃತ್ತದಲ್ಲಿ ಚಪ್ಪಲಿ ಹಾರ ಹಾಕುತ್ತಾರೆ. ದೂರು ನೀಡಿ
ಸಂಬಂಧಿಸಿದವರನ್ನು ಬಂಧಿಸಲು ಕೋರಿದರೆ, ಪೊಲೀಸರು
ಆರೋಪಿಗಳು ಕಣ್ಮರೆಯಾಗಿದ್ದಾರೆ ಎಂದು ಸಬೂಬು ಹೇಳುತ್ತಾರೆ.
ಆದರೆ ಪ್ರಕರಣದ ಪ್ರಮುಖ ಆರೋಪಿ ಮುಖ್ಯ ಸಮಾರಂಭಗಳಲ್ಲಿ
ಕಾಣಿಸಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಇದು ಇಲಾಖೆಯ
ವೈಫಲ್ಯವಲ್ಲವೇ? ನನ್ನಂತಹವನಿಗೇ ಹಾಗೆ ಆದರೆ ಸಾಮಾನ್ಯರ ಗತಿ
ಏನು ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ. ಇದರಲ್ಲಿ ಎಸ್ಸಿ/ಎಸ್ಟಿ
ಜನಾಂಗದವರು ಎಷ್ಟು ಜನರಿದ್ದಾರೆ? ಸ್ಮಾರ್ಟ್ ಸಿಟಿ ಯೋಜನೆಯಡಿ ಈ
ಜನಾಂಗದವರು ಇರುವ ಪ್ರದೇಶಗಳಲ್ಲಿ ಎಷ್ಟು
ಕಾಮಗಾರಿಗಳಾಗಿವೆ? ಈ ಜಿಲ್ಲೆಯಲ್ಲಿ ಸಮಾನತೆ ಎಂಬುದು ಏನಾದರೂ
ಇದ್ದರೆ ಅದು ಕರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ
ಮಾತ್ರ ಇದೆ. ಬೇರೆಲ್ಲಿಯೂ ಇಲ್ಲ.
ಕಳೆದ 10 ವರ್ಷಗಳಲ್ಲಿ ಈ ಸಮುದಾಯದವರ ಮೇಲೆ ಎಷ್ಟು
ದೌರ್ಜನ್ಯದ ಕೇಸ್ಗಳಾಗಿವೆ? ಎಷ್ಟರಲ್ಲಿ ಶಿಕ್ಷೆ ಆಗಿದೆ. ಎಷ್ಟು ‘ಬಿ’ ರಿಪೋರ್ಟ್
ಆಗಿದೆ ಮಾಹಿತಿ ಒದಗಿಸಿ. ಹಾಗೂ ಈ ಹಿಂದಿನ ಸಭೆಯ ಅನುಪಾಲನೆ
ವರದಿಯೇ ಇಲ್ಲದೇ ಮುಂದಿನ ಸಭೆ ನಡೆಸುವುದು ಹೇಗೆ ಎಂದರು.
ಜಿಲ್ಲಾ ದಲಿತ ಸಮಿತಿ ಅಧ್ಯಕ್ಷ ದುಗ್ಗಪ್ಪ ಮಾತನಾಡಿ, ಅಂಬೇಡ್ಕರ್
ಭವನಕ್ಕೆ ಹಣ ಮಂಜೂರಾತಿಯಾಗಿ 15 ವರ್ಷ ಆಯಿತು. ಬಂದವರೆಲ್ಲ ಈಗ
ಮುಗಿಯುತ್ತದೆ ಎನ್ನುತ್ತಾರೆ. ಕನಿಷ್ಟ ಪಕ್ಷ ಎಲ್ಲಿ ಭವನ
ನಿರ್ಮಿಸುತ್ತೀರಿ ತಿಳಿಸಿ ಎಂದರು. ಹಾಗೂ ಪ್ರತಿ ವರ್ಷ ಮಳೆಯಿಂದ
ತೊಂದರೆಗೊಳಗಾಗುವ ಹೊಸ ಚಿಕ್ಕನಹಳ್ಳಿ ಗ್ರಾಮ
ಸ್ಥಳಾಂತರಿಸಲು ಅಂದಿನ ಜಿಲ್ಲಾಧಿಕಾರಿ ಅಂಜನಕುಮಾರ್ರವರು 4 ಎಕರೆ
ಭೂಮಿ ಮಂಜೂರು ಮಾಡಿದ್ದರು. ಆದರೆ ಇಂದಿಗೂ ಅಲ್ಲಿಗೆ
ಸ್ಥಳಾಂತರ ಆಗಿಲ್ಲ. ಸಿ.ಜಿ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಕೆಳ
ಹಂತದ ನೌಕರರಿಗೆ ಸಂಬಳ ಸರಿಯಾಗಿ ಆಗುತ್ತಿಲ್ಲ. ಈ ಹಿಂದೆ ಬ್ಲಾಕ್ ಲಿಸ್ಟ್ಗೆ
ಸೇರಿಸಿದ್ದ ಸ್ವಾಮಿ ಏಜೆನ್ಸಿಗೆ ಮತ್ತೆ ಟೆಂಡರ್ ನೀಡಿದ್ದೀರಿ. ಈ ಬಗ್ಗೆ
ತನಿಖೆಯಾಗಲಿ ಎಂದರು.
ಜಿ.ಪಂ ಸದಸ್ಯ ಓಬಳಪ್ಪ ಮಾತನಾಡಿ, ದುರುಗ್ಮುರ್ಗಿ
ಜನಾಂಗದವರು ಕಲ್ಕೆರೆಗುಡ್ಡದಲ್ಲಿ ಗುಡಿಸಲು ಹಾಕಿಕೊಂಡು ಬಹಳ
ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಿಲ್ಲ ಎಂದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಪ್ರತಿಕ್ರಿಯಿಸಿ ಸಾಮಿತ್ವ ಯೋಜನೆಯಡಿ
ಮಾರ್ಕಿಂಗ್ ನಡೆಯುತ್ತಿದ್ದು ಅವರಿಗೆ ತಮ್ಮ ನಿವೇಶನಗಳ
ಮಾಲೀಕತ್ವ ನೀಡಲಾಗುವುದು. ಆದರೆ ಅವರು ಮೂರ್ನಾಲ್ಕು
ಸೈಟ್ಗಳಿಗಾಗುವಷ್ಟು ಜಾಗ ಅತಿಕ್ರಮಿಸಿರುವುದರಿಂದ ಸರ್ವೇ ಮಾಡಿಸಿ
ನಿಯಮದಂತೆ ನೀಡಲಾಗುವುದು ಎಂದರು.
ಕಾರ್ಮಿಕ ಮುಖಂಡ ಉಮೇಶ್ ಮಾತನಾಡಿ, ನಗರಗಳಲ್ಲಿ ಬರೀ
ಸಮುದಾಯ ಭವನಗಳು ಸದ್ಬಳಕೆಯಾಗುತ್ತಿಲ್ಲ.
ಇವುಗಳನ್ನು ಸ್ಥಳೀಯ ಪ್ರತಿನಿಧಿಗಳು ಸಮಿತಿ ರಚಿಸಿ ಮಹಿಳಾ ಸ್ವ
ಸಹಾಯ ಸಂಘಗಳಿಗೆ ನೀಡಿದರೆ ನಿರ್ವಹಣೆ ಸಾಧ್ಯ ಎಂದರು. ಹಾಗೂ
ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಸರಿಯಾಗಿ ಸಿಗುತ್ತಿಲ್ಲ. ಹಾಗೂ
ಅಕ್ರಮ ಗಣಿಗಾರಿಕೆ ಮಿತಿ ಮೀರಿದೆ ಎಂದರು.
ಮುಖಂಡ ಆವರಗೆರೆ ವಾಸು ಮಾತನಾಡಿ, ಕಲ್ಲೇಶ್ವರ ರೈಸ್ ಮಿಲ್
ಪಕ್ಕದಲ್ಲಿ 20 ರಿಂದ 30 ಗುಡಿಸಲುಗಳಲ್ಲಿ ವಾಸವಿದ್ದು, ಅವರಿಗೆ ಶೌಚಾಲಯ
ವ್ಯವಸ್ಥೆ ಇಲ್ಲ. ಅಲ್ಲಿರುವವರು ಹಸಿ ಹುಲ್ಲು ಮಾರಿಕೊಂಡು ಜೀವನ
ನಡೆಸುವವರು. ಅಲ್ಲಿ ಶೌಚಾಲಯ ಕಟ್ಟಲು ಆಕ್ಸ್ಫರ್ಡ್
ಸಂಸ್ಥೆಯವರು ವಿರೋಧಿಸುತ್ತಾರೆ. ಹಾಗಿದ್ದಾಗ ಅಲ್ಲಿಯ ಜನ
ಶೌಚಾಲಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂದರು.
ಮುಖಂಡರಾದ ಹೆಚ್.ಮಲ್ಲೇಶ್ ಮಾತನಾಡಿ ದಾವಣಗೆರೆ ವಿವಿ ಯಲ್ಲಿ
ಪ್ರೊ.ಬಿ.ಕೃಷ್ಣಪ್ಪ ಅಧ್ಯಯನ ಪೀಠ ಆರಂಭಿಸಲು ಕ್ರಮ
ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹೆಚ್.ಸಿ.ಗುಂಡಪ್ಪ ಮಾತನಾಡಿ, ಜಿಲ್ಲೆಯ ಕೆಲವು ತಾಲೂಕುಗಳಲ್ಲಿ
ಸುಳ್ಳು ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ಗಳು
ನೀಡುತ್ತಿದ್ದು, ಅದು ನಮ್ಮ ಹಕ್ಕಾಗಿದ್ದು ಬೇರೆಯವರಿಂದ ನಮಗೆ
ವಂಚನೆಯಾಗುತ್ತಿದೆ. ಬಾಬು ಜಗಜೀವನ್ರಾಂ ನಗರದಲ್ಲಿ ಆಶ್ರಯ
ಮನೆಗಳನ್ನು ನೀಡಿದ್ದು, ಅದರ ಪಕ್ಕದಲ್ಲಿ ಮದ್ಯದಂಗಡಿ ಇದೆ.
ಇದರಿಂದ ಕೆಲವು ಮದ್ಯ ವ್ಯಸನಿಗಳಿಂದ ಅನೇಕ ಹೆಣ್ಣು ಮಕ್ಕಳಿಗೆ
ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು. ನೀವು
ಬಸವತತ್ವ ಅನೂಯಾಯಿಗಳು. ನಿಮ್ಮ ಮೇಲೆ ನಮಗೆ ಭರವಿಸೆ
ಇದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಡಾ.ವೈ.ರಾಮಪ್ಪ ಮಾತನಾಡಿ, ಎಸ್ಸಿ ಮತ್ತು ಎಸ್ಟಿ ವಿಚಕ್ಷಣಾ
ಕಮಿಟಿಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರು ಮಾತ್ರ
ಇರಬೇಕು. ಅದರ ಬದಲಾಗಿ ಬೇರೆ ಜನಾಂಗದವರು ಆ ಕಮಿಟಿಯಲ್ಲಿ
ಸದಸ್ಯರಾಗಿದ್ದಾರೆ. ಈ 2 ವರ್ಷದಲ್ಲಿ ಯಾವ ಯಾವ ದಿನಾಂಕದಂದು
ಸಭೆ ಕರೆದಿದ್ದೀರಿ ಮಾಹಿತಿ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ
ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ
ಶಿವಾನಂದ ಕುಂಬಾರ್, ಎಸ್ಸಿ, ಎಸ್ಟಿ ಜನಾಂಗದ ಸದಸ್ಯರನ್ನು ಮಾತ್ರ
ತೆಗೆದುಕೊಳ್ಳಲು ನಮಗೆ ಸರ್ಕಾರದಿಂದ ಆದೇಶವಿದೆ. ಇದರಲ್ಲಿ
ಯಾರೂ ಬೇರೆ ಜನಾಂಗದವರು ಇಲ್ಲ ಎಂದು ಮಾಹಿತಿ ನೀಡಿದರು.
ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ. ಪ್ರೊ. ಕೃಷ್ಣಪ್ಪ
ಭವನ, ಅಂಬೇಡ್ಕರ್ ಭವನ, ಮಹರ್ಷಿ ವಾಲ್ಮೀಕಿ ಭವನಗಳು ಹಾಳಾಗಿವೆ
ಹಾಗೂ ಕೆಲವು ಅಧಿಕಾರಿಗಳ ತಪ್ಪಿನಿಂದ ಎಸ್ಸಿಪಿ ಮತ್ತು ಟಿಎಸ್ಪಿ
ಅನುದಾನವು ಸರ್ಕಾರಕ್ಕೆ ವಾಪಸ್ಸಾಗಿ ಹೋಗುತ್ತಿದೆ.
ಹೊನ್ನಾಳಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಕೊರಚ
ಸಮುದಾಯದವರು ತಿಪ್ಪೆ ಕರಾಬಿನಲ್ಲಿ ಗುಡಿಸಲು ಹಾಕಿಕೊಂಡಿದ್ದು,
ಅವರ ನಾಮಫಲಕವನ್ನು ಪಿಡಿಓ ಅವರು ಕಿತ್ತುಹಾಕಿ ಜಾಗ ಖಾಲಿ
ಮಾಡಿಸಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು
ಸಿಇಓ ಗೆ ಮನವಿ ಮಾಡಿದ ಅವರು, ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು
ಸರ್ಕಾರಕ್ಕೆ ಹಿಂದಿರುಗಿಸದೆ ಸರ್ಮಪಕವಾಗಿ ಬಳಕೆ ಮಾಡಿಕೊಳ್ಳಿ
ಎಂದರು.
ಎರಗುಂಟೆಯಲ್ಲಿ 1.27 ಗುಂಟೆ ಜಮೀನು ಖರೀದಿಸಲಾಗಿದೆ. ಆದರೆ
ಇದುವರೆಗೂ ಅಲ್ಲಿನ ಜನರಿಗೆ ಲೇಔಟ್ ಮಾಡಿಕೊಟ್ಟಿಲ್ಲ. ಅಲ್ಲಿ ನಿಜವಾದ
ಗುಡಿಸಲು ಹಾಕಿಕೊಂಡವರಿಗೆ ಹಕ್ಕುಪತ್ರ ನೀಡಿಲ್ಲ. ಈ ಹಿನ್ನೆಲೆಯಲ್ಲಿ
ಮೊತ್ತೊಮ್ಮೆ ಪಟ್ಟಿ ಪರೀಶಿಲಿಸುವ ಮೂಲಕ ನಿಜವಾದ
ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಬೇಕು. ಜೊತೆಗೆ
ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ
ಗುಡಿಸಲು ಹಾಕಿಕೊಂಡವರಲ್ಲಿ ಅರ್ಧ ಜನರಿಗೆ ಮಾತ್ರ ಹಕ್ಕುಪತ್ರ
ನೀಡಲಾಗಿದೆ. ಇನ್ನುಳಿದವರಿಗೂ ಪತ್ರ ನೀಡಬೇಕು ಎಂದು ಮನವಿ
ಮಾಡಿದರು.
ಜಿಲ್ಲೆಯಲ್ಲಿನ ಬಹಳಷ್ಟು ಸಮುದಾಯ ಭವನಗಳಲ್ಲಿ ಸಾಂಸ್ಕøತಿಕ
ಚಟುವಟಿಕೆ ಹಾಗೂ ಸಭೆ ಕಾರ್ಯಕ್ರಮಗಳು ನಡೆಯುತ್ತಿಲ್ಲ.
ಇದರ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಂಡು ಸದ್ಭಳಕೆ ಆಗುವ
ರೀತಿಯಲ್ಲಿ ನೋಡಿಕೋಳ್ಳಬೇಕು ಎಂದ ಅವರು, ಅಧಿಕಾರಿಗಳ
ಮಟ್ಟದಲ್ಲಿ ಸಮಸ್ಯೆ ಬಗೆಹರಿಸಬೇಕು. ಸಾಮಾಜಿಕ ನ್ಯಾಯದ
ಪರಿಕಲ್ಪನೆಯನ್ನು ಅಧಿಕಾರಿಗಳು ಪಾಲಿಸಬೇಕು ಎಂದರು.
ಮಹರ್ಷಿ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರು ಮಾತನಾಡಿ, ಮುಖ್ಯವಾಗಿ
ಎಸ್ಟಿ ಜನಾಂಗದ ವಿದ್ಯಾರ್ಥಿನಿಯರಿಗೆ ಮಹಿಳಾ ವಸತಿ ನಿಲಯಗಳು ಇಲ್ಲ.
ಪ್ರವಾಸ್ಯೋದ್ಯಮ ಇಲಾಖೆಯಲ್ಲಿ ಎಸ್ಟಿ ಫಲಾನುಭವಿಗಳಿಗೆ ವಾಹನ
ಸಾಲ ಸೌಲಭ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅದರ ಬಗ್ಗೆ ಹೆಚ್ಚಿನ ಮಾಹಿತಿ
ನೀಡಿ ಎಂದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎ.ರಾಜೀವ್ ಮಾತನಾಡಿ, ನಿಮ್ಮ ಕುಂದು
ಕೊರತೆಗಳು ನಮಗೆ ಅರ್ಥವಾಗಿದೆ. ನಮ್ಮ ಇಲಾಖೆಯು 10
ವರ್ಷದಲ್ಲಿ ಸುಮಾರು 349 ಜಾತಿ ನಿಂದನೆ ಕೇಸ್ಗಳನ್ನು
ದಾಖಲಿಸಿಕೊಂಡಿದ್ದು, ಇಲ್ಲಿ 7 ಜನರಿಗೆ ಮಾತ್ರ ಪರಿಹಾರ ಬರಬೇಕು.
ಜೊತೆಗೆ 99 ಕೇಸ್ಗಳು ಬಾಕಿ ಇದೆ ಎಂದು ಮಾಹಿತಿ ನೀಡಿದರು.
ತಾ.ಪಂ ಸದಸ್ಯ ಆಲೂರು ನಿಂಗರಾಜು, ಬಾಲಾಜಿ, ರಂಗನಾಥ, ಸಾಗರ್,
ಐಗೂರು ಹನುಮಂತಪ್ಪ, ರವಿಕುಮಾರ್ ಯಲೋದಹಳ್ಳಿ
ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ,
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್ಓ
ಡಾ.ರಾಘವೇಂದ್ರ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯ ನಿರ್ದೇಶಕ ವಿಜಯಕುಮಾರ್, ನಗರ ಡಿವೈಎಸ್ಪಿ ನಾಗೇಶ್
ಐತಾಳ್, ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಎಸ್ಸಿ ಮತ್ತು
ಎಸ್ಟಿ ಸಮಾಜದ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.