ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ 2015 ರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆನ್‍ಲೈನ್ ಪ್ರಕ್ರಿಯೆ ಇರುವುದರಿಂದ ಇದರಲ್ಲಿ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಯಾವುದೇ ದೂರು ಬಾರದ ರೀತಿಯಲ್ಲಿ ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಬೇಕು. ಅಲ್ಲದೆ ಪ್ರಕ್ರಿಯೆ ಮೇಲ್ವಿಚಾರಣೆಗೆ ಎಸಿ, ಎಡಿಸಿ ಸೇರಿದಂತೆ ಸಮಿತಿ ರಚಿಸಿ ಅರ್ಹತೆ ಇರುವವರಿಗೆ ಮಾತ್ರ ಅವಕಾಶ ಮಾಡಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಭತ್ತ ಖರೀದಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಾಡಲಾಗುವುದು. ಆದರೆ ಮೆಕ್ಕೆಜೋಳಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಬಂದರೆ ಅಗತ್ಯ ಇರುವ ಕಡೆ ಭತ್ತ ಹಾಗೂ ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯಲಾಗುವುದು ಎಂದರು.
ಈ ವೇಳೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಭತ್ತದ ಬೆಳೆಗಾರರು ಹೆಚ್ಚಿರುವಲ್ಲಿ ಖರೀದಿ ಕೆಂದ್ರ ತೆರೆಯಿರಿ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಹರಿಹರ ಶಾಸಕ ರಾಮಪ್ಪ ಮಾತನಾಡಿ, ಕಳೆದ ಬಾರಿ ಮೆಕ್ಕೆಜೋಳವನ್ನು ಶಿವಮೊಗ್ಗ ಹಾಗೂ ಬಾತಿಗೆ ತೆಗೆದುಕೊಂಡು ವಾಪಾಸು ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಆಯಾ ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಿರಿ ಎಂದರು.
ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸರ್ಕಾರದ ಅನುಮತಿ ಬಂದ ಮೇಲೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ಜಿಲ್ಲೆಯಲ್ಲಿ ಎಲ್ಲೆಲ್ಲಿ ಖರೀದಿ ಕೆಂದ್ರ ತೆರೆಯುವ ಅವಶ್ಯಕತೆ ಇದಿಯೋ ಅಲ್ಲಲ್ಲಿ ತೆರೆಯೋಣ. ಆದರೆ ಅದಕ್ಕೆ ನೀವೆಲ್ಲರೂ ಸೇರಿ ಅನುಮತಿ ಕೊಡಿಸಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಎಡಿಸಿ ಪೂಜಾರ್ ವೀರಮಲ್ಲಪ್ಪ, ಡಿಎಚ್‍ಓ ರಾಘವೇಂದ್ರ ಸ್ವಾಮಿ, ಡಾ.ಗಂಗಾಧರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದ್ದರು.

Leave a Reply

Your email address will not be published. Required fields are marked *