ದಾವಣಗೆರೆ ಸೆ.23
ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಲಾಕ್‍ಡೌನ್ ಸಂದರ್ಭದಲ್ಲಿ ಅನುಸರಿಸಿದ ಮುಂಜಾಗ್ರತಾ ಕ್ರಮಗಳನ್ನು ಈಗ ಅನುಸರಿಸುತ್ತಿಲ್ಲ, ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಕೋವಿಡ್ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಕೋವಿಡ್ ನಿರ್ಮೂಲನೆಗೆ ಆದಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲೇಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ದಾವಣಗೆರೆ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ ಏರ್ಪಡಿಸಲಾದ ವಿಶೇಷ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಶುಭ ಹಾರೈಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೋವಿಡ್ ವೈರಸ್ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸಲುವಾಗಿ ಸರ್ಕಾರ ಕಳೆದ ಮಾರ್ಚ್ ತಿಂಗಳಿನಿಂದ ಸುಮಾರು ಎರಡ್ಮೂರು ತಿಂಗಳುಗಳ ಕಾಲ ಲಾಕ್‍ಡೌನ್ ಜಾರಿಗೊಳಿಸಿತು. ಈ ಅವಧಿಯಲ್ಲಿ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದು ಇಡೀ ದೇಶದ ಪ್ರಶಂಸೆಗೆ ರಾಜ್ಯ ಪಾತ್ರವಾಯಿತು. ಆದರೆ ಲಾಕ್‍ಡೌನ್ ಸಂಪೂರ್ಣ ಸಡಿಲಿಸಿದ ಬಳಿಕ ಸಾರ್ವಜನಿಕರು ಕೋವಿಡ್ ನಿಯಂತ್ರಿಸುವಲ್ಲಿ ಇರುವ ತಮ್ಮ ಹೊಣೆಗಾರಿಕೆಯನ್ನು ಮರೆತು ವರ್ತಿಸುತ್ತಿದ್ದಾರೆ ಎಂದು ಹೇಳಲು ಬೇಸರವೆನಿಸುತ್ತಿದೆ. ಹೀಗಾದರೆ ಕೋವಿಡ್ ನಿರ್ಮೂಲನೆ ಕಷ್ಟಕರವಾಗಲಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಮರೆಯುತ್ತಿದ್ದು, ಮಾಸ್ಕ್ ಧರಿಸದೆ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಕೋವಿಡ್ ಸೋಂಕಿನ ಬಗ್ಗೆ ಜನರು ಹೆದರುವ ಅಗತ್ಯವಿಲ್ಲ, ಆದರೆ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರಿಂದ ಹೆಚ್ಚು ಹೆಚ್ಚು ಜನರಲ್ಲಿ ಹರಡುವುದನ್ನು ತಡೆಗಟ್ಟಲು ಸಾಧ್ಯವಿದೆ. ಈ ಕುರಿತಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ. ಜಿಲ್ಲೆಯಲ್ಲಿ ಈಗಾಗಲೆ ಸುಮಾರು 230 ಕ್ಕೂ ಹೆಚ್ಚು ಜನ ಕೋವಿಡ್‍ನಿಂದಾಗಿ ಸಾವನ್ನಪ್ಪಿದ್ದಾರೆ. 13 ಸಾವಿರಕ್ಕೂ ಹೆಚ್ಚು ಜನ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವ ಪ್ರಮಾಣ ಹೆಚ್ಚು ಮಾಡಿದ್ದೇವೆ. 60 ವರ್ಷ ಮೇಲ್ಪಟ್ಟ ಹಾಗೂ ನಾನಾ ರೋಗಗಳಿಂದ ಬಳಲುತ್ತಿರುವವರ ಸಮೀಕ್ಷೆ ಮಾಡಿ ಅವರಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿದ್ದೇವೆ. ಆದರೆ ಕೆಲವೆಡೆ ಇದಕ್ಕೆ ಸಾರ್ವಜನಿಕರಿಂದ ಸಹಕಾರ ದೊರೆಯುತ್ತಿಲ್ಲ. ರೋಗ ಬೇಗ ಪತ್ತೆಯಾದಲ್ಲಿ, ಚಿಕಿತ್ಸೆ ನೀಡಿ ಬೇಗ ಗುಣಪಡಿಸಲು ಸಾಧ್ಯವಿದೆ. ಹೀಗಾಗಿ ಪರೀಕ್ಷೆಗೆ ಬಂದವರಲ್ಲಿ ರೋಗ ಲಕ್ಷಣಗಳು ಕಂಡುಬಂದರೆ, ಚಿಕಿತ್ಸೆಯನ್ನು ತಕ್ಷಣವೇ ಪ್ರಾರಂಭಿಸುವ ಪದ್ಧತಿಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿಹೆಚ್ಚು ಪರೀಕ್ಷೆ ಮಾಡುತ್ತಿದ್ದು, ಹೆಚ್ಚಾಗಿ ಪಾಸಿಟಿವ್ ಬರುತ್ತಿದೆ. ಇದರಿಂದಾಗಿ ಮರಣ ಪ್ರಮಾಣವು ಕಳೆದೊಂದು ವಾರದಿಂದ ಕಡಿಮೆಯಾಗುತ್ತಿದೆ. ಮರಣ ಪ್ರಮಾಣ ತಗ್ಗಿಸಲು ಸಾರ್ವಜನಿಕರು ಬೇಗ ಪರೀಕ್ಷೆಗೆ ಒಳಗಾಗಿ, ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕಾಗಿದೆ ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಸುಮಾರು ಶೇ. 50 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಎಲ್ಲ ತಾಲ್ಲೂಕುಗಳನ್ನೂ ಅತಿವೃಷ್ಟಿ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚು ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 165 ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ತರಿಗೆ ಮನೆ ಹಾನಿಯ ಪ್ರಮಾಣ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಎ,ಬಿ,ಸಿ ಕೆಟಗರಿಯಾಗಿ ವಿಂಗಡಿಸಿ, ಅದರನ್ವಯ ಪರಿಹಾರವನ್ನು ಶೀಘ್ರ ನೀಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್ ವಿಜಯಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *