ದಾವಣಗೆರೆ ಸೆ.24
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಈ ಬಾರಿ ಅ. 02 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತಿ ಆಚರಣೆ ಕುರಿತಂತೆ ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಭಯ ಮಹನೀಯರ ಜಯಂತಿ ಆಚರಣೆಯನ್ನು ಅ. 02 ರಂದು ಬೆಳಿಗ್ಗೆ 09 ಗಂಟೆಗೆ ದಾವಣಗೆರೆ ಮಹಾನಗರಪಾಲಿಕೆ ಆವರಣದಲ್ಲಿ ಆಚರಿಸಲಾಗುವುದು. ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಎಲ್ಲ ಶಿಷ್ಠಾಚಾರಗಳನ್ನು ಪಾಲಿಸಿ, ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುವುದು. ಕಾರ್ಯಕ್ರಮ ನಿಮಿತ್ಯ ಅಂದು ಬೆಳಿಗ್ಗೆ ಮಹಾತ್ಮಾ ಗಾಂಧೀಜಿಯವರ ಹಾಗೂ ವಿವಿಧ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು, ಬಳಿಕ ವೇದಿಕೆ ಕಾರ್ಯಕ್ರಮ ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಜೀವನ ಸಾಧನೆ ಕುರಿತಂತೆ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು. ಗಾಂಧೀಜಿಯವರಿಗೆ ಪ್ರಿಯವಾಗಿದ್ದ ರಘುಪತಿ ರಾಜಾರಾಂ, ವೈಷ್ಣವಜನತೋ ಸೇರಿದಂತೆ ಇತರೆ ಹಾಡುಗಳ ಗೀತ ಗಾಯನ ಪ್ರಸ್ತುತಪಡಿಸಲಾಗುವುದು. ಪ್ರತಿಬಾರಿ ಕಾರ್ಯಕ್ರಮಕ್ಕೆ ಮಕ್ಕಳನ್ನು ಆಹ್ವಾನಿಸಿ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಭೀತಿಯ ಕಾರಣಕ್ಕಾಗಿ ಸರಳವಾಗಿ ಆಚರಿಸಲಾಗುವುದರಿಂದ ಗೀತ ಗಾಯನಕ್ಕೆ ಈ ಸಲ ಸಂಗೀತ ಶಿಕ್ಷಕರನ್ನು ನಿಯೋಜಿಸಲಾಗುವುದು. ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ವ್ಯವಸ್ಥೆ ಇರುತ್ತದೆ. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ಬಳಸಿ ಪರೀಕ್ಷೆ ಮಾಡಿ ಪ್ರವೇಶ ನೀಡುವ ವ್ಯವಸ್ಥೆ ಕೈಗೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಎಲ್ಲ ಇಲಾಖೆ, ಅಧಿಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ವೇದಿಕೆ ನಿರ್ಮಾಣ, ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ, ಕುಡಿಯುವ ನೀರು ಪೂರೈಕೆ, ಶಾಮಿಯಾನ, ಕುರ್ಚಿ ಮತ್ತಿತರ ವ್ಯವಸ್ಥೆ ಕೈಗೊಳ್ಳಲು ಮಹಾನಗರ ಪಾಲಿಕೆ ಆಯುಕ್ತರಿಗೆ ಜವಾಬ್ದಾರಿ ನೀಡಲಾಯಿತು. ಅಲ್ಲದೆ ಕಾರ್ಯಕ್ರಮದಲ್ಲಿ ವೇದಿಕೆ ಅಲಂಕಾರ, ಖಾದಿ ಮತ್ತು ಹೂವಿನ ಹಾರದ ವ್ಯವಸ್ಥೆಯನ್ನು ಪಿಆರ್‍ಇಡಿ ಇಲಾಖೆಗೆ, ಆಹ್ವಾನ ಪತ್ರಿಕೆ ಮುದ್ರಣ ಮತ್ತು ಗಣ್ಯಮಾನ್ಯರಿಗೆ ಹಂಚಿಕೆ ಹೊಣೆಯನ್ನು ದಾವಣಗೆರೆ ತಹಸಿಲ್ದಾರರಿಗೆ, ಕಾರ್ಯಕ್ರಮದಲ್ಲಿ ಭಜನೆ, ಗೀತಗಾಯನದ ವ್ಯವಸ್ಥೆಯ ಜವಾಬ್ದಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಫೋಟೋ ಮತ್ತು ವಿಡಿಯೋ ವ್ಯವಸ್ಥೆ ಅಬಕಾರಿ ಇಲಾಖೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ಆಯಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರಿ ಸಭೆ, ಸಮಾರಂಭಗಳ ಆಯೋಜನೆ, ಆಹ್ವಾನ ಪತ್ರಿಕೆಗಳ ಮುದ್ರಣ, ಜನಪ್ರತಿನಿಧಿಗಳು ಹಾಗೂ ಗಣ್ಯರ ಆಹ್ವಾನ ಮುಂತಾದ ಶಿಷ್ಠಾಚಾರಗಳ ಪಾಲನೆ ಕುರಿತಂತೆ ಎಲ್ಲ ಇಲಾಖೆ ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳ ಕುರಿತು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‍ಕುಮಾರ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ್‍ನಾಯಕ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ದಾವಣಗೆರೆ ತಹಸಿಲ್ದಾರ್ ಗಿರೀಶ್, ಮಹಾನಗರ ಪಾಲಿಕೆಯ ಪ್ರಭುಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *