ದಾವಣಗೆರೆ ಸೆ.27
ಜಿಲ್ಲೆಯಲ್ಲಿ ಟೂರಿಸಂ ಸಕ್ರ್ಯೂಟ್ ಮಾಡಬೇಕೆಂಬ ಉದ್ದೇಶದಿಂದ
ಸುಮಾರು 35 ಕೋಟಿ ವೆಚ್ಚದ ಪ್ರಸ್ತಾವನೆ ತಯಾರಿಸಿ ರಾಜ್ಯ
ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ
ಭಾನುವಾರ ಹರಿಹರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ
ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ
ಸ್ವಚ್ಛತಾ ಪಕ್ವಾಡ-2020 ಹಾಗೂ ಆರೋಗ್ಯ ಸುರಕ್ಷತೆ ಅರಿವು
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯು ರಾಜ್ಯದ ಹೃದಯ ಭಾಗದಲ್ಲಿದ್ದು, ಸಂಪರ್ಕದ
ಕೊಂಡಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ
ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು
ಇದರ ಉದ್ದೇಶವಾಗಿದೆ ಎಂದರು.
ರಾಜ್ಯದಿಂದ ಈ ಪ್ರಸ್ತಾವನೆಯು ಕೇಂದ್ರ ಸರ್ಕಾರಕ್ಕೆ ಕಳುಹಿಸಿ
ಕೊಡಲಾಗುವುದು. ಬಳಿಕ ಅನುಮೋದನೆಗೊಳ್ಳಲಿದೆ. ಇದಕ್ಕಾಗಿ
ಜಿಲ್ಲೆಯ ಜನಪ್ರತಿನಿಧಿಗಳು ಕೈ ಜೋಡಿಸಿದ್ದಾರೆ. ಪ್ರವಾಸೋದ್ಯಮ
ಇಲಾಖೆಗೆ ಏನೇನು ಅವಶ್ಯಕತೆ ಇದಿಯೋ ಅದರ ಕುರಿತು ನೀಲನಕ್ಷೆ
ಸಿದ್ದಪಡಿಸುವ ಮೂಲಕ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು,
ನಾಗರಿಕರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡಿ
ಆನಂದಿಸುವ ಮೂಲಕ ಪ್ರವಾಸೋದ್ಯಮ ಬೆಳೆಸಬೇಕಿದೆ ಎಂದು
ಹೇಳಿದರು.
ಕೊರೊನಾದಿಂದಾಗಿ ರಜೆ ಮರೆಯುತ್ತಿದ್ದೇವೆ. ಎಲ್ಲಾ ದಿನ
ಕೊರೊನಾ ದಿನವಾಗಿದ್ದು, ಪ್ರತಿದಿನ ಕೊರೊನಾ ಕುರಿತು
ಯೋಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೊರೊನಾಕ್ಕೆ ಪ್ರಥಮ
ಪ್ರಶಾಸ್ತ್ಯ ನೀಡಿ ನಂತರ ಉಳಿದ ಇತರ ಕೆಲಸ ಮಾಡಬೇಕಾಗಿದೆ. ಈ
ಸಂದರ್ಭದಲ್ಲಿ ಆರೋಗ್ಯ ಇಲಾಖೆ ಬಹಳಷ್ಟು ಜಾಗೃತಿ
ವಹಿಸಬೇಕಾಗಿದೆ. ಕೊರೊನಾ ಕುರಿತು ಸಂದೇಶ ಇರುವಂತಹ
ವಿಡಿಯೋಗಳನ್ನು ಜನರಿಗೆ ತಲುಪಿಸಿ ಅವರಲ್ಲಿನ ತಪ್ಪು ಕಲ್ಪನೆ
ದೂರವಾಗಿಸಬೇಕಿದೆ ಎಂದು ಸಲಹೆ ನೀಡಿದರು.
ಅಧಿಕಾರಿಗಳಿಗಲ್ಲ ಕೊರೊನಾಕ್ಕೆ ಅಂಜಿ: ಅಧಿಕಾರಿಗಳು, ಪೆÇಲೀಸ್
ಸಿಬ್ಬಂದಿಗಳು ಕಂಡಲ್ಲಿ ಮಾತ್ರ ಜನರು ಮಾಸ್ಕ್ ಧರಿಸುವ ಪ್ರವೃತ್ತಿ
ಬೆಳೆಸಿಕೊಂಡಿದ್ದಾರೆ. ಇದು ಸರಿಯಲ್ಲ. ಕೊರೊನಾ ಕುರಿತು
ಯಾವುದೇ ಜಾಗೃತಿ ವಹಿಸುತ್ತಿಲ್ಲ ಎಂದು ದೂರಿದ ಅವರು,
ಸಾರ್ವಜನಿಕರು ಅಧಿಕಾರಿಗಳಿಗೆ ಅಂಜಬೇಕಿಲ್ಲ. ಬದಲಾಗಿ ಮಹಾಮಾರಿ
ಸಾಂಕ್ರಾಮಿಕ ರೋಗವಾದ ಕೊರೊನಾಕ್ಕೆ ಅಂಜುವ ಮೂಲಕ
ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಾಲಾಕ್ಷಿ
ಪ್ರಾಸ್ತಾವಿಕವಾಗಿ ಮಾತನಾಡಿ, 1997 ರಿಂದ ಅಧಿಕೃತವಾಗಿ ಪ್ರತಿವರ್ಷವೂ
ಒಂದೊಂದು ಸಂದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷ ಪ್ರವಾಸೋದ್ಯಮ ಮತ್ತು
ಗ್ರಾಮೀಣಾಭಿವೃದ್ಧಿ ಎಂಬ ಸಂದೇಶದೊಂದಿಗೆ ಆಚರಣೆ
ಮಾಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ
ಕುಂಠಿತಗೊಂಡಿದ್ದು, ಚುರುಕುಗೊಳಿಸುವ ನಿಟ್ಟಿನಲ್ಲಿ ಎಲ್ಲೆಡೆ
ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ ಎಂದರು.
5 ಐತಿಹಾಸಿಕ ಪ್ರಸಿದ್ಧ ಸ್ಥಳ: ಹರಿಹರ ಲಿಂಗೇಶ್ವರ ದೇವಸ್ಥಾನ,
ಸಂತೆಬೆನ್ನೂರಿನ ಪುಷ್ಕರಣಿ, ತೀರ್ಥರಾಮೇಶ್ವರ, ಶಾಂತಿಸಾಗರ
ಹಾಗೂ ಕೊಂಡಜ್ಜಿ ಕೆರೆಗಳು ಜಿಲ್ಲೆಯಲ್ಲಿ ಮಹತ್ವ ಪಡೆದ 5
ಐತಿಹಾಸಿಕ ಪ್ರಸಿದ್ಧ ಸ್ಥಳಗಳಾಗಿವೆ. ಜಿಲ್ಲಾ ಪ್ರವಾಸೋದ್ಯಮ ಮತ್ತು
ಅಭಿವೃದ್ಧಿ ಸಮಿತಿ ವತಿಯಿಂದ 20 ಕ್ಕಿಂತ ಅಧಿಕ ಸ್ಥಳಗಳನ್ನು
ಗುರುತಿಸಲಾಗಿದ್ದು, ಜಿಲ್ಲೆಯಲ್ಲಿ 25 ಕ್ಕಿಂತ ಹೆಚ್ಚು ಐತಿಹಾಸಿಕ
ಸ್ಥಳವಿದೆ. ಕೆಲ ಐತಿಹಾಸಿಕ ಸ್ಥಳಗಳಿಗೆ ಕೆಲವೊಂದು ಸರ್ಕಾರದ
ನಿಯಮವಿದ್ದು, ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು
ಸಾಧ್ಯವಾಗುತ್ತಿಲ್ಲ ಎಂದರು.
ಐತಿಹಾಸಿಕ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ
ಒದಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ
ಪ್ರವಾಸಿಗರಿಗೆ ಬರಲು ಅನುಕೂಲವಾಗುವ ಎಲ್ಲಾ ಸೌಲಭ್ಯ ಒದಗಿಸುವ
ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಲಾಗುತ್ತಿದ್ದು,
ಜಿಲ್ಲಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿನ ಶಾಂತಿ
ಸಾಗರ ಹಾಗೂ ಗಾಜಿನಮನೆ ಪ್ರದೇಶಗಳು ಯಾವುದೇ ಪ್ರವಾಸಿ
ತಾಣಗಳಿಗೆ ಕಡಿಮೆ ಇಲ್ಲ. ಇಲ್ಲಿಗೆ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಲ್ಲಾ
ಸೌಲಭ್ಯ ನೀಡಿದರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುವಲ್ಲಿ
ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಹರಿಹರ ತಾಲ್ಲೂಕು ತಹಸೀಲ್ದಾರ್ ರಾಮಚಂದ್ರಪ್ಪ ಮಾತನಾಡಿ,
ಯಾವುದೇ ದಿನಾಚರಣೆ ಪ್ರಮುಖ ಉದ್ದೇಶ ಅದರ ಮಹತ್ವ
ತಿಳಿಸುವುದು ಮತ್ತು ಆ ಕ್ಷೇತ್ರ ಅಭಿವೃದ್ಧಿ ಪಡಿಸುವುದಾಗಿದೆ.
ಅದರಂತೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಮ್ಮಿಕೊಂಡಿದ್ದು,
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಿದೆ ಎಂದರು.
ಜಿಡಿಪಿಯಲ್ಲಿ ಶೇ.9 ರಷ್ಟು ಆದಾಯ: ಹರಿಹರ ತಾಲ್ಲೂಕಿನ ಕೊಂಡಜ್ಜಿ
ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕಿದೆ.
ಕೊರೊನಾದಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಕುಂಠಿತಗೊಂಡಿದ್ದು,
ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿದೆ. ಪ್ರವಾಸೋದ್ಯಮದಿಂದಾಗಿ
ದೇಶಕ್ಕೆ ಜಿಡಿಪಿಯಲ್ಲಿ ಶೇ. 9 ರಷ್ಟು ಆದಾಯ ಹಾಗೂ ಶೇ. 8 ರಷ್ಟು
ಉದ್ಯೋಗ ಒದಗಿಸುವ ಮೂಲಕ ತನ್ನದೆಯಾದ ಕೊಡುಗೆ ನೀಡಿದೆ. ಈ
ಹಿನ್ನೆಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು
ಸರ್ಕಾರ ಚಿಂತನೆ ನಡೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹರಿಹರ ನಗರಸಭೆ ಸದಸ್ಯ ಸಿದ್ದೇಶ್,
ನಗರಸಭೆ ಪೌರಾಯುಕ್ತೆ ಲಕ್ಷ್ಮಿ, ಪುರಾತತ್ವ ಇಲಾಖೆಯ
ಸುಧೀರ್, ಆರೋಗ್ಯ ಇಲಾಖೆಯ ಉಮಣ್ಣ, ಆಹಾರ ಮತ್ತು ನಾಗರಿಕ
ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಬಿ.ಟಿ.ಪ್ರಕಾಶ್,
ರೇವಣಸಿದ್ಧಪ್ಪ ಅಂಗಡಿ, ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ
ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.