ದಾವಣಗೆರೆ ಅ.01
ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆ
ಹಂತದಿಂದ ತೆಂಡೆ ಒಡೆಯುವ ಹಂತದಲ್ಲಿದ್ದು, ಕೆಲ
ಪ್ರದೇಶಗಳಲ್ಲಿ ಕವಚ ಕೊಳೆ ರೋಗದ ಬಾಧೆ
ಕಾಣಿಸಿಕೊಂಡಿದೆ. ಈ ರೋಗವು ರೈಜೊಕ್ಟೋನಿಯ ಸೋಲನಿ
ಎಂಬ ಶಿಲೀಂದ್ರದಿಂದ ಹರಡಲಿದ್ದು, ಮೋಡ ಮುಸುಕಿದ
ವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ
ಇರುವುದು.
ರೋಗದ ಲಕ್ಷಣಗಳು : ಪ್ರಾರಂಭಿಕ ಹಂತದಲ್ಲಿ ಎಲೆಯ
ಕವಚದ ಮೇಲೆ ಕಂದು ಅಂಚುಳ್ಳ ಒಣಗಿದ ಹುಲ್ಲಿನ ಬಣ್ಣದ
ಅನಿರ್ಧಿಷ್ಟಾಕಾರದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು
ಒಣಗುತ್ತವೆ. ನಂತರದ ಹಂತಗಳಲ್ಲಿ ಎಲೆ ಕವಚಗಳು
ಹಾಗೂ ಗಿಡದ ಬುಡಗಳು ಕಪ್ಪಾಗಿ ಪೂರ್ತಿಯಾಗಿ
ಕೊಳೆತಂತಾಗುತ್ತದೆ.
ನಿರ್ವಹಣಾ ಕ್ರಮಗಳು: ನೀರನ್ನು ಹೆಚ್ಚಾಗಿ ನಿಲ್ಲಿಸುವ
ಜಮೀನುಗಳಲ್ಲಿ ಈ ರೋಗದ ಬಾಧೆ ಹೆಚ್ಚಾಗಿ ಕಂಡು
ಬರುವುದರಿಂದ ನೀರನ್ನು ಬೆಳೆಗೆ ಕೊಡುವಾಗ ನೀರು ಇಂಗಿದ
ಒಂದು ದಿನದ ನಂತರ 2 ಅಂಗುಲದಷ್ಟು ನೀರನ್ನು
ನೀಡುವುದು. ಸಾವಯವ ಹಾಗೂ ನೈಸರ್ಗಿಕ ಕೃಷಿ
ಅನುಸರಿಸುತ್ತಿರುವ ರೈತರು 10 ಲೀ. ನೀರಿಗೆ 1 ಲೀ. ಹುಳಿ
ಮಜ್ಜಿಗೆ ಬೆರೆಸಿ ಸಿಂಪಡಿಸುವುದು. ರಾಸಾಯನಿಕ ಸಿಂಪರಣೆಗಾಗಿ 1
ಗ್ರಾಂ. ಕಾರ್ಬನ್‍ಡೈಜಿಂ 50 ಡಬ್ಲ್ಯುಪಿ ಅಥವಾ 1ಮಿ.ಲೀ.
ಪ್ರೊಪಿಕೋನಜೋಲ್ 25 ಇ.ಸಿ ಅಥವಾ 2 ಮಿ.ಲೀ
ಹೆಕ್ಸಾಕೋನಜೋಲ್ 5 ಇ.ಸಿ ಯನ್ನು 1 ಲೀ ನೀರಿನಲ್ಲಿ ಬೆರೆಸಿ
ಸಿಂಪಡಿಸುವುದು. ಭತ್ತ ಕಟಾವಾದ ನಂತರ ಭೂಮಿಯನ್ನು
ಉಳುಮೆ ಮಾಡಿ ದ್ವಿಧಳ ಧಾನ್ಯಗಳನ್ನು / ಹಸಿರೆಲೆ
ಗೊಬ್ಬರಗಳನ್ನು ಬೆಳೆಯುವುದರಿಂದ ಮುಂದಿನ ಬೆಳೆಗೆ ಈ
ರೋಗದ ಬಾಧೆ ಕಡಿಮೆಯಾಗುವುದು ಎಂದು ಜಂಟಿ ಕೃಷಿ
ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.