ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದ ಸಹಕಾರದಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಆಯೋಜಿಸಿದ್ದ “ಕ್ಯಾನ್ಸರ್ ನಡೆ-ಕೋವಿಡ್ ತಡೆ ಜಾಗೃತಿ ಅಭಿಯಾನ ಪರೋಕ್ಷವಾಗಿ ಸೋಷಿಯಲ್ ಮೀಡಿಯಾಗಳ ಮೂಲಕ ಮತ್ತು ಪ್ರತ್ಯಕ್ಷವಾಗಿ ಕುಂದುವಾಡ ಕೆರೆಯ ಅಂಗಳದಲ್ಲಿ ಚಿಕ್ಕ ಮತ್ತು ಚೊಕ್ಕಕಾರ್ಯಕ್ರಮದ ಮೂಲಕ ಗಮನ ಸೆಳೆಯಿತು.

ಬೆಳಿಗ್ಗೆ ಆರು ಮೂವತ್ತರಿಂದಲೇ ಕುಂದುವಾಡ ಕೆರೆಯ ಏರಿ ಮೇಲೆ ವಾಕ್ ಮಾಡುವವರಿಗೆ ಜಾಗೃತಿ ಮೂಡಿಸಲು ಕಲಾವಿದ ರವೀಂದ್ರ ಅರಳಿಗುಪ್ಪಿ ರಚಿಸಿದ ಚಿತ್ರಗಳನ್ನು ಮತ್ತು ಕಲಾ ಕೃತಿಗಳನ್ನು ರಸ್ತೆ ಒಂದೆಡೆ ಪ್ರದರ್ಶನಕ್ಕೆ ಇಡಲಾಗಿತ್ತು. ನಂತರ ಎಂಟು ಗಂಟೆಗೆ ನಡೆದ ಸಮಾರಂಭದಲ್ಲಿ ಇಂಡಿಯನ್ ಮೆಡಿಕಲ್ ಅಸ್ಸೋಷಿಯೇಶನ್ ಅಧ್ಯಕ್ಷ ಡಾ.ಅಂದನೂರು ರುದ್ರುಮುನಿ ಕ್ಯಾನ್ಸರ್-ಕೋವಿಡ್ ಎದುರಿಸುವ ಜಾಗೃತಿ ಹಾಡಿನ ವಿಡಿಯೋ ಪ್ರತಿಯನ್ನು ಬಿಡುಗಡೆ ಮಾಡಿದರು. ಇಂಡಿಯನ್ ರೆಡ್ ಕ್ರಾಸ್, ಲೈಫ್ ಲೈನ್ ಚೇರ್ಮನ್ ಹಾಗೂ ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ನಿರ್ದೇಶಕ ಡಾ.ಎ.ಎಂ. ಶಿವಕುಮಾರ್ ಮತ್ತು ಕಾರ್ಯದರ್ಶಿ ಸುನಿಲ್ ಬ್ಯಾಡಗಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಲೈಫ್ ಲೈನ್ ಕಾರ್ಯದರ್ಶಿ ಅನಿಲ್ ಬಾರಂಗಳ್, ಶೇಷಾಚಲ, ಡಾ.ಶಿಲ್ಪಾ, ಮಾಧವ ಪದಕಿ, ಶ್ರೀಕಾಂತ್, ಇನಾಯತ್, ಗೋಪಾಲ್ ಕೃಷ್ಣ, ಪೃತ್ವಿ ಬದಾಮಿ, ವಿಜಯ್ ಕುಮಾರ್ ಇತರರು, ರೋಟರಿ ಸಂಸ್ಥೆಯ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ, ಆನಂದ್, ಕೆ.ಬಿ.ದಯಾನಂದ್, ನಟರಾಜ್ ಮುಂತಾದ ಸದಸ್ಯರು, ಭಾರತೀಯ ವಿಕಾಸ್ ಪರಿಷತ್ ನ ಡಾ.ಹೆಗಡೆ, ಆರತಿ ಸುಂದರೇಶ್, ಜಯರುದ್ರೇಶ್, ತಿಪ್ಪೇಸ್ವಾಮಿ ಹಾಗೂ ಇತರೆ ಸದಸ್ಯರು, ಆರ್.ಜಿ.ಐ.ಸಿ.ಎಂ ಕಾಲೇಜಿನ ಪ್ರಾಂಶುಪಾಲ ಸುನಿಲ್ ಅವರೊಂದಿಗೆ ರಕ್ಷಕ್ ರಾಯಕರ್ ನೇತೃತ್ವದ ವಿದ್ಯಾರ್ಥಿಗಳ ತಂಡ, ಸಂಕಲನ ಸಮೂಹ ಸಂಸ್ಥೆಯ ಅರಳಿ ಗುಪ್ಪಿ, ಇಂಪನಾ ಮತ್ತು ಇತರೆ ಕಲಾವಿದರು ಭಾಗವಹಿಸಿದ್ದರು.

ಬಿಡುಗಡೆಯಾದ ಹೆದರಬೇಡಿ ಬೆದರಬೇಡಿ….ಎಂಬ ಸಾಲಿನೊಂದಿಗೆ ಆರಂಭವಾಗುವ ಸಮಾಜಕ್ಕೆ ಧೈರ್ಯ ತುಂಬುವ ಗೀತೆಯ ಕುರಿತು ಮಾತನಾಡಿದ ಕಲಾವಿದ ಅರುಣ್ ಕುಮಾರ್ ಆರ್.ಟಿ.ಈ ಗೀತೆಯನ್ನು ಡಾ.ಎ.ಎಂ. ಶಿವಕುಮಾರ್ ಸೂಚನೆಯ ಮೇರೆಗೆ ತಾವು ರಚಿಸಿದ್ದು ದಾವಣಗೆರೆಯ ಪ್ರತಿಭೆಗಳಾದ ಗಂಗಾಧರ ಸ್ವಾಮಿ, ಚೇತನ್ ಕುಮಾರ್.ಜೆ, ಕು. ಸರ್ವಂಗಳ ಬಿ.ಎಸ್, ಕು. ನಿಶ್ಕಾ ಕೆ.ಎಂ. ಹಾಡಿದ್ದಾರೆ. ಗಂಗಾ-ಶಂಕರ್ ಜೋಡಿ ಸಂಗೀತ ನಿರ್ದೇಶನ ಮಾಡಿದರೆ ಉಮಾಶಂಕರ್ ಕುರುಡಿ ಸಂಕಲನ ಮಾಡಿದ್ದಾರೆ. ಈ ವಿಡಿಯೋ ಪರಿಣಾಮಕಾರಿಯಾಗಿ ಮೂಡಿ ಬಂದಿದ್ದು ಹಲವು ಸೋಷಿಯಲ್ ಮೀಡಿಯಾಗಳಲ್ಲಿ, ಸ್ಥಳೀಯ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗಲಿದೆ ಎಂದು ಆರ್.ಟಿ. ಹೇಳಿದ್ದಾರೆ.

ಪರೋಕ್ಷ ಅಭಿಯಾನದಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ಪ್ರತಿಕ್ರಿಯೆ ಬರಲಾರಂಭಿಸಿದ್ದು ದಾವಣಗೆರೆ ಮತ್ತು ಸುತ್ತ ಮುತ್ತಲಿನ, ಬೆಂಗಳೂರು, ಸೋಮವಾರಪೇಟೆ, ಮುಂಬೈ, ದುಬೈ, ಶಾರ್ಜಾದಲ್ಲಿ ನೆಲೆಸಿರುವ ದಾವಣಗೆರೆ ಮೂಲದವರು ವಾಕ್ ಮಾಡಿದ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾ ನಿರ್ವಹಿಸುತ್ತಿರುವ ರಕ್ಷಕ್ ಆರ್ ಹಾಗೂ ಸಂದೇಶ್ ಆರ್.ಎಂ. ತಿಳಿಸಿದ್ದಾರೆ. ಬನ್ನಿಕೋಡು ಗ್ರಾಮದ ಶಿಕ್ಷಕಿ ತಮ್ಮ ಸಹಪಾಠಿಗಳೊಂದಿಗೆ ಭಾಗವಹಿಸಿದ ವಿಡಿಯೋ, ದುಬೈ ಕನ್ನಡ ಬಳಗ, ಕನ್ನಡ ಪಾಠ ಶಾಲೆಯ ಶಶಿಧರ್ ನಾಗರಾಜಪ್ಪ ಮತ್ತು ಸ್ನೇಹಿತರು, ಸನ್ನಿ ಅಬ್ರಹಾಂ ನೇತೃತ್ವದ ಇಂಜಿನಿಯರ್ ಬಳಗ, ಶಾರ್ಜಾದ ಲೆಕ್ಕೆ ಪರಿಶೋಧಕ ಎಚ್. ಎಚ್. ಬೆಲಗೂರು ಅವರ ಬಳಗ ಕಳುಹಿಸಿರುವ ವಿಡಿಯೋಗಳನ್ನು ನೋಡಿದಾಗ ನಮ್ಮ ವರ್ಚ್ಯುಯಲ್ ಅಂದರೆ ಪರೋಕ್ಷ ಅಭಿಯಾನ ಯಶಸ್ವಿಯಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು ಎಂದು ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಕಾರ್ಯದರ್ಶಿ ಡಾ.ಸುನೀಲ್ ಬ್ಯಾಡಗಿ ತಿಳಿಸಿದರು. ನಮಗೆ ಕೈ ಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ವಿಶೇಷವಾಗಿ ಜಿಲ್ಲಾ ವರದಿಗಾರರ ಕೂಟಕ್ಕೆ ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಅಧ್ಯಕ್ಷ ಡಾ. ಶ್ರೀ ಶೈಲ ಬ್ಯಾಡಗಿ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *