ಶಿಕಾರಿಪುರ
ಪರೋಪಕಾರO. ಶಿವಮೊಗ್ಗ ತಂಡದ ರೂವಾರಿ ಶ್ರೀಧರ್ ರವರು ತಮ್ಮ ಗಾದ ನೋವಿನ ಅನುಭವವನ್ನು ಮಾಧ್ಯಮದವರ ಜೊತೆ ಹಂಚಿಕೊಂಡಿದ್ದಾರೆ.
ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ನನ್ನ ಅಜ್ಜಿಯು ಹಸಿವು ಇಲ್ಲವೆಂದು ಊಟವನ್ನೇ ಮಾಡುತ್ತಿರಲಿಲ್ಲ. ಇದರಿಂದ ಸಹಜವಾಗಿ ಆಹಾರ ಸೇವಿಸದೇ ಅವರಿಗೆ ದೇಹದಲ್ಲಿ ನಿಶ್ಯಕ್ತಿ ಉಂಟಾಗಿತ್ತು. ಅಲ್ಲಿಂದ ಕೂ
ಶುರುವಾಯಿತು ಆಸ್ಪತ್ರೆಗಳಿಗೆ ಅಲೆದಾಟ
ಅವರನ್ನು ಮೊದಲು ಕೋವಿಡ್ ಟೆಸ್ಟ್ ಮಾಡಿಸಲಾಯಿತು, ಅದು ನೆಗೆಟಿವ್ ಬಂದ ನಂತರ, ಅವರಿಗೆ ಶೂಶ್ರಷೆ ಅಗತ್ಯವಿದೆ ಎಂದು, ಶಿವಮೊಗ್ಗದ ಹಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೆ ಎಲ್ಲಿಯೂ ಸ್ಥಳವಿಲ್ಲ, ಇನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವಯಸ್ಸಾದ ಇವರನ್ನು ಸೊಂಕಿನ ಭೀತಿಯಿಂದ ಕರೆದುಕೊಂಡು ಹೋಗಲು ನಮಗೆ ಭಯ,
ಹೀಗೆ ಹಲವು ಆಸ್ಪತ್ರೆಗಳ ಬಾಗಿಲು ತಟ್ಟಿದ ನಂತರ ಶಿವಮೊಗ್ಗದ ಪ್ರತಿಷ್ಠಿತ ಹೃದಯ ಸಂಬಂಧಿ ಆಸ್ಪತ್ರೆಯಲ್ಲಿ ಹೃದಯದ ತೊಂದರೆ ಎನಾದರೂ ಇದೆಯೋ ಎಂದು ಸಹ ಪರಿಶೀಲನೆ ಮಾಡಿಸಿದೇವು, ಅವರು ಹೃದಯದ ಯಾವುದೇ ಸಮಸ್ಯೆ ಇಲ್ಲ ಎಂದು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರು,
ನರಕವೇ ಧರೆಗಿಳಿದಂತೆ
ಶಿವಮೊಗ್ಗದ ಇನ್ನೊಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮತ್ತೊಂದು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿ, ಹಲವು ಸಮಯ ಕಾಯಿಸಿದ ನಂತರ ಅಂತೂ ಇಂತೂ ಪ್ರವೇಶ ನೀಡಲಾಯಿತು.
ಜೀವಂತ ಹೋದವರು ಶವವಾಗಿ ಹೊರ ಬಂದರು
MICU ವಾರ್ಡ್ ಗೆ ಒಳಗೆ ಕರೆದುಕೊಂಡು ಹೋದ ನಂತರ ನಮ್ಮ ಅಜ್ಜಿಯ ಜೊತೆ ಸಂಪರ್ಕವೂ ಕಡಿದು ಹೋಯಿತು.
ಊಟವಿಲ್ಲದೆ ನಿಶ್ಯಕ್ತರಾಗಿದ್ದ 80 ವಯಸ್ಸಿನ ನಮ್ಮ ಅಜ್ಜಿ ಮಾತನಾಡುತ್ತಾ ಆಸ್ಪತ್ರೆ ಒಳಗೆ ಹೋದವರು ಕೇವಲ ಹನ್ನೆರಡು ತಾಸಿನಲ್ಲಿ (ಅತ್ಯಂತ ಹೆಚ್ಚಿನ ನಿಗಾ ಘಟಕದಲ್ಲಿ ಇದ್ದೂ ಸಹ) ತಮ್ಮ ಪ್ರಾಣ ಬಿಟ್ಟರು.
ರಾತ್ರಿಯೇ ಪ್ರಾಣ ಬಿಟ್ಟ ಇವರ ಶವವನ್ನು ತಗೆದುಕೊಳ್ಳಲು ನಾವು ಬೆಳಗಿನ 10 ಘಂಟೆವರೆಗೆ ಆಸ್ಪತ್ರೆಯ ಹೊರಗೆ ಕಾದುಕೊಂಡು ಇರಬೇಕಾಯಿತು.
ಕೇವಲ 12 ತಾಸಿನ ಸಮಯದ ಇವರ ಶೂಶ್ರಷೆ ಗೆ ಶವ ಕೊಡಲು ಮಾಡಿದ ಬಿಲ್ ಎಂಬತ್ತು ಸಾವಿರ (80000) ರೂಪಾಯಿ ಎಂದರೆ ಯಾರೂ ನಂಬುವುದಿಲ್ಲ. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲ ವೆಂಟಿಲೇಟರ್ ಇಲ್ಲ, ಹಾಗಾದರೆ ಇಷ್ಟೊಂದು ದೊಡ್ಡ ಬಿಲ್ ಇಷ್ಟು ಸಣ್ಣ ಸಮಯಕ್ಕೆ ಏಕೆ? ಎಂದರೆ ಉತ್ತರ ಮಾತ್ರ ಯಾರ ಬಳಿಯೂ ಇಲ್ಲ, ಅವರ ಮೌನ ಹೇಳುವ ಉತ್ತರ ಇಷ್ಟೇ, ಹಣ ಕೊಡಿ, ಶವ ತಗೆದುಕೊಂಡು ಹೋಗಿ,
ಪ್ರೀತಿ ಪಾತ್ರರಾದ ಅಜ್ಜಿಯ ಸಾವಿಗೆ ಅಳಬೇಕೋ? ಆದ ಅನ್ಯಾಯವನ್ನು ಪ್ರಶ್ನಿಸಬೇಕೋ? ತಿಳಿಯದ ಅಯೋಮಯ ಸ್ಥಿತಿ. ಇದೇ ಸ್ಥಿತಿಯನ್ನು ಈಗಾಗಲೇ ಹಲವರು ಅನುಭವಿಸಿರಬೇಕು.
ಸತ್ತವರೇ ಸುಖಿಗಳು, ಬಿಲ್ ಕಟ್ಟುವರ ಪಾಲು ಯಾರಿಗೂ ಬೇಡ ಅವರೇ ನಿಜವಾಗಿಯೂ ಸತ್ತವರು
ಅನಿವಾರ್ಯವಾಗಿ , ಪ್ರಾಮಾಣಿಕ ವಾಗಿ ದುಡಿದ ನನ್ನ ಹಣವನ್ನು ನೊಂದುಕೊಂಡು ಅಂತೂ ಇಂತೂ ಹಣವನ್ನು ಕಟ್ಟಿ ಶವ ಹೊರಗೆ ತಂದೇವು.
ಇದು ಕೇವಲ ನನಗೆ ಅಷ್ಟೇ ಅಲ್ಲ
ನನ್ನ ಅಜ್ಜಿಯು ತೀರಿಕೊಂಡ ನೋವು ಮರೆಯವುದರಲ್ಲಿಯೇ ನಮ್ಮ ಸ್ನೇಹಿತರು ಅನೇಕರಿಗೆ ಇದೇ ರೀತಿಯ ದೊಡ್ಡ ದೊಡ್ಡ ಬಿಲ್ಲುಗಳು ಹೈರಾಣ ಮಾಡಿ ಬಿಟ್ಟಿದ್ದಾವೆ.
ಹೇಳಲು ಆಗದೇ ಅನುಭವಿಸಲೂ ಆಗದೇ ಹಲವರದ್ದು ಇದೇ ಪಾಡು.
ರಣಹದ್ದುಗಳು ಸತ್ತ ಪ್ರಾಣಿಗಳ ಹೆಣವನ್ನು ಕೆದಕಿ ಕೆದಕಿ ತಿನ್ನುತ್ತವೆ, ಆದರೆ ಈ ಖಾಸಗಿ ಆಸ್ಪತ್ರೆಗಳು ಜೀವಂತವಾಗಿರುವವರನ್ನೇ ಕರೋನಾ ಭೂತ ತೋರಿಸಿ ಕುಕ್ಕಿ ತಿನ್ನುತ್ತಿದ್ದಾರೇನೋ ಎನಿಸುತ್ತಿದೆ.
- ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರು ತಾವು ಓದುವಾಗ ಹಾಗೂ ನರ್ಸಿಂಗ್ ಹೋಂ ತೆರೆಯುವಾಗ ಕೊಟ್ಟ ಟೇಬಲ್ ಕೆಳಗಿನ ಹಣವನ್ನು, ಈ ಸಂಧರ್ಭ ಉಪಯೋಗಿಸಿಕೊಂಡು ಸೇಡಿಗೆ, ಸೇಡು ಎಂಬಂತೆ ಸಾರ್ವಜನಿಕರಿಂದ ವಸೂಲು ಮಾಡುತ್ತಿದ್ದಾರೆ ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಬಡತನ ಹಾಗೂ ಮಧ್ಯಮ ವರ್ಗದವರನ್ನು ಬಿಡಿ, ಅನೇಕ ಶ್ರೀಮಂತರು ಸಹ ಇಂದು ಈ ಖಾಸಗಿ ಆಸ್ಪತ್ರೆಗೆ ಹೋಗಲು ನೂರು ಬಾರಿ ಯೋಚಿಸುತ್ತಿದ್ದಾರೆ.
ಕೆಲವು ಹಿರಿಯರು, ವಯಸ್ಕರು, ಹಾಗೂ ಅನಾರೋಗ್ಯ ಪೀಡಿತರು ಈಗಿನ ಸಂಧರ್ಭದಲ್ಲಿ ಖಾಸಗಿ ವೈದ್ಯರ ಹಾಗೂ ನರ್ಸಿಂಗ್ ಹೋಂ ಗಳ ಧನದಾಹಕ್ಕೆ ಹೆದರಿ ನಿಯಮಿತವಾದ ಆರೋಗ್ಯ ತಪಾಸಣೆಗೆ ಸಹ ಹೋಗಲಾರದೇ ತಮ್ಮ ಪ್ರಾಣ ಕಳೆದುಕೊಂಡ ಅನೇಕ ಘಟನೆಗಳು ನಮ್ಮ ಅಕ್ಕಪಕ್ಕದಲ್ಲಿಯೇ ಇವೆ.
ಪರಿಹಾರ ಏನು?
ಇಡೀ ಜಗತ್ತಿಗೆ ಇಂತಹ ಸಂಕಟ ಒಕ್ಕರಿಸಿರುವಾಗ, ಪ್ರತಿಯೊಬ್ಬ ಖಾಸಗಿ ವೈದರು ಹಾಗೂ ಆಸ್ಪತ್ರೆಗಳು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು.
ಹಲವು ಜನಸ್ನೇಹಿ ಹಾಗೂ ಸಮಾಜಮುಖಿ ಆಗಿರುವ ವೈದ್ಯರು, ಇಂತಹ ಧನದಾಹಿಗಳ ಬಣ್ಣ ಬಯಲು ಮಾಡಬೇಕು. ಇವರು ತೆಗೆದುಕೊಳ್ಳುತ್ತಿರುವ ಹಣ ವಿಶ್ಲೇಷಣೆಗೆ ಒಳಪಡಬೇಕು.
ನಮ್ಮ ದೇಶದ ಸಂಪತ್ತಾದ ವೈದ್ಯರು ಇಂತಹ ಸಂಕಟ ಸಮಯದಲ್ಲಿ ಸ್ವಾರ್ಥವನ್ನು ತೊರೆದು ದೇಶದ ಕೈ ಹಿಡಿದು ನಡೆಸಬೇಕು, ಸಾಧ್ಯವಿಲ್ಲವೇ ಸಮಾಜಕ್ಕೆ ಒಳ್ಳೆಯ ರೀತಿಯಲ್ಲಿ ಮಾರ್ಗದರ್ಶನವನ್ನಾದರೂ ಮಾಡಬೇಕು.
ಹಣ ಮಾಡುವುದೇ ತಮ್ಮ ಮುಖ್ಯ ಕಾಯಕವೆಂಬಂತಹ ವೈದ್ಯರನ್ನು ಹಾಗೂ ಆಸ್ಪತ್ರೆಗಳನ್ನು ಅಸ್ಪೃಶ್ಯರಂತೆ ಕಾಣಬೇಕು.
ಅನೇಕ ಜನಸ್ನೇಹಿ ವೈದ್ಯರುಗಳು ಧನದಾಹಿ ವೈದ್ಯರುಗಳಿಗೆ ನೀವು ಹೀಗೆ ತಗೆದುಕೊಂಡ ಅನ್ಯಾಯದ ಹಣ ಅಜೀರ್ಣವಾಗುವುದು ಹಾಗೂ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಮನವರಿಕೆ ಮಾಡಿಕೊಡಬೇಕು.
ವೈದ್ಯನಾಗಿ ಹೊರಬರುವಾಗ ಮಾಡಿದ ಪ್ರಮಾಣವನ್ನು ನೆನಪಿಸಬೇಕು.
ಪ್ರತಿಯೊಬ್ಬ ಕಾರ್ಪೊರೇಟ್ ರ್ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಬೇಕು, ಇದಕ್ಕಾಗಿ ಅಗತ್ಯ ಇದ್ದರೆ ತುರ್ತು ಕಾನೂನು ನಿಯಮಗಳನ್ನು ಸಹ ತರಬೇಕು.
ಮಿತಿ ಮೀರಿದರೆ, ಸರ್ಕಾರವು ಇಂತಹ ಧನದಾಹಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ರಾಷ್ಟ್ರೀಕರಣ ಗೊಳಿಸಬೇಕು..
ದೇಶ ಹಾಗೂ ಜನಹಿತಕ್ಕಿಂತ ಯಾವುದೂ ಸಹ ದೊಡ್ಡದಲ್ಲ ಎನ್ನುವ ವಿಚಾರ ಇವರಿಗೆ ಸ್ಪಷ್ಟಗೊಳಿಸಬೇಕು.
ಸಾರ್ವಜನಿಕರು ಸಹ ಖಾಸಗಿ ಆಸ್ಪತ್ರೆಗಳಿಂದ ತಮಗೆ ಆದ ಅನ್ಯಾಯವನ್ನು ಯಾವುದೇ ಮುಚ್ಚು ಮರೆ ಮಾಡದೇ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು ಇದರಲ್ಲಿ ಸಮಾಜ ಮುಖಿ ಕಳಕಳಿ ಇರುವುದು ಅವಶ್ಯ.(ಸಾಕ್ಷ್ಯ ಇರಲೇಬೇಕು, ವಯ್ಯಕ್ತಿಕ ತೇಜೋವಧೆ ಖಂಡಿತ ಬೇಡ )
ಲಂಗೂ ಲಗಾಮು ಇಲ್ಲದ ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ರಾಜ್ಯ ಹಾಗೂ ರಾಷ್ಟ್ರ ಆಡಳಿತ ನಡೆಸುತ್ತಿರುವ ಸರ್ಕಾರಗಳಿಗೆ ಕೆಟ್ಟ ಹೆಸರು ಬರುವುದರಲ್ಲಿ ಸಂಶಯವಿಲ್ಲ. ಸಮಾಜದಲ್ಲಿ ಅರಾಜಕತೆ ಉಂಟಾದರೆ ಆ ಮಾರಿ ಕರೋನಾ ಸೊಂಕಿಗಿಂತ ಅಪಾಯಕಾರಿ ಎಂಬುದನ್ನು ಮರೆಯಬೇಡಿ
ಸಮಾಜದ ಹಿತವನ್ನು ಮರೆತವರು ಹಾಗೂ ಸ್ವಾರ್ಥಿಗಳು ತಾತ್ಕಾಲಿಕವಾಗಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಸಹ ನಂತರದ ದಿನಗಳಲ್ಲಿ ಶಾಶ್ವತವಾಗಿ ಮೂಲೆ ಗುಂಪಾಗಿರುವುದನ್ನು ಇತಿಹಾಸದಲ್ಲಿ ನೋಡಬಹುದು
ನೀನೂ ಬದುಕು ಬೇರೆಯವರನ್ನು ಬದುಕಲು ಬಿಡು ಈ ಮೂಲಮಂತ್ರವನ್ನು ಯಾರೂ ಮರೆಯದಿದ್ದರೆ ಸಾಕು.ಇದಕ್ಕೆ ವೈದ್ಯರುಗಳ ಆತ್ಮಾವಲೋಕನ ಸರಿಯಾದ ದಾರಿ