ಕೆಲವರು ಎಷ್ಟೇ ಓದಿದರೂ, ಓದಿದೆಲ್ಲಾ ಮರೆತು ಹೋಗುತ್ತದೆ. ಹೇಗೆ ಓದಬೇಕು ಅಂತಾನೆ ಗೊತ್ತಾಗುತ್ತಿಲ್ಲ ಎನ್ನುತ್ತಾರೆ. ಅಂತವರಿಗಾಗಿ ಇಲ್ಲಿ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ.

ಪರೀಕ್ಷಾ ದೃಷ್ಟಿಯಿಂದ ಓದಿದ ವಿಷಯ ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಆದರೆ ಮರೆವು ಬಹುಸಂಖ್ಯಾತರ ಸಮಸ್ಯೆ. ಇಂದಿನ ಲೇಖನದಲ್ಲಿ ಓದಿದ, ಅಭ್ಯಾಸ ಮಾಡಿದ ವಿಷಯಗಳು ಏಕೆ ಮರೆತು ಹೋಗುತ್ತವೆ?, ಕಾರಣಗಳು ಯಾವುವು?, ಅದಕ್ಕೆ ಪರಿಹಾರವೇನು? ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

ಮರೆಯಲು ಕಾರಣಗಳು ನೂರಾರು ಇರುತ್ತವೆ. ಆದರೆ ಮರೆವಿಗೆ ಸಾಮಾನ್ಯವಾದ ಕಾರಣಗಳು ಯಾವುವು ಎಂದು ತಿಳಿದರೆ, ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳಿಗೆ ಸಹಕಾರಿಯಾಗುತ್ತದೆ.

♣️ ​ಕಂಠಪಾಠ:

ಕಂಠಪಾಠ ಮಾಡುವ ಹವ್ಯಾಸವು ಕೇವಲ ಪದ್ಯಗಳ ಕಂಠಪಾಠಕ್ಕೆ ಮಾತ್ರ ಸೀಮಿತವಾಗಿರಲಿ. ಪರೀಕ್ಷೆಗಳಿಗೂ ಸಹ ಈ ಅಭ್ಯಾಸ ಮುಂದುವರೆಸುವುದು ಸೂಕ್ತವಲ್ಲ. ಅದರ ಬದಲಾಗಿ ಓದುವ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಓದುವುದನ್ನು ಮೈಗೂಡಿಸಿಕೊಳ್ಳಬೇಕು.

♣️​ ಓದುವಾಗ ಕೆಟ್ಟ ಅನುಭವಗಳು, ಅಲೋಚನೆಗಳು ಮನಸ್ಸಿಗೆ ಬರುವುದು:

ಜೀವನದಲ್ಲಿ ಸಮಸ್ಯೆಗಳು ಇದ್ದದ್ದೆ.
ಹಾಗಂತ ಹಿಂದಿನ ಅಥವಾ ಮುಂದಿನ ಘಟನೆಗಳನ್ನು ಓದಿನ ನಡುವೆ ನೆನಪಿಸಿಕೊಂಡರೆ ಓದಿಗೆ ಅಡ್ಡಿಯಾಗುತ್ತದೆ. ಯಾವುದೇ ಅಂಶಗಳು ತಲೆಯೊಳಗೆ ಹೋಗುವುದಿಲ್ಲ. ಯಾವಾಗಲೋ ನಡೆದ ಕೆಟ್ಟ ಘಟನೆಗಳನ್ನು ನೆನೆದುಕೊಂಡು ಇಂದಿನ ಸಂತೋಷವನ್ನು ಮತ್ತು ಮಹತ್ವದ ಕ್ಷಣಗಳನ್ನು ಹಾಳುಮಾಡಿಕೊಳ್ಳಬಾರದು.

✍? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಡಲೇಬಾರದ ತಪ್ಪುಗಳು ಇವು: ✍?

♣️​ ಹೆದರುವುದು:

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ, ಫೇಲ್‌ ಆದರೆ ಅವಮಾನ ಆಗುತ್ತದೆ. ಪೋಷಕರು ಬೈಯುತ್ತಾರೆ, ಕ್ಷಮಿಸುವುದಿಲ್ಲ, ನಾನು ಬಡವನಾಗೆ ಇರಬೇಕಾಗುತ್ತದೆ ಎಂಬೆಲ್ಲ ದುರಾಲೋಚನೆಗಳಲ್ಲಿ ಮುಳುಗಿ ಓದುತ್ತಿದ್ದರೆ ಅರ್ಥವು ಆಗುವುದಿಲ್ಲ. ಓದಿದ್ದು ಮರೆತು ಹೋಗುವಲ್ಲಿ ಸಂಶಯವು ಇಲ್ಲ.

♣️ ಓದುವ ಆಸಕ್ತಿ ಇಲ್ಲದಿರುವುದು:

ಶಿಕ್ಷಣದಲ್ಲಿ ಆಸಕ್ತಿ, ಹಂಬಲ ಇಲ್ಲದಿರುವುದು, ದೊಡ್ಡ ವ್ಯಕ್ತಿ ಆಗಬೇಕು, ಒಳ್ಳೆಯ ಹುದ್ದೆ ಪಡೆಯಬೇಕು, ಸಮಾಜದಲ್ಲಿ ಗೌರವ ಪಡೆಯಬೇಕು ಎಂಬ ಹಂಬಲ ಇಲ್ಲದಿದ್ದಾಗ ಓದಿನೆಡೆಗೆ ಲಕ್ಷ್ಯ ವಹಿಸುವುದೇ ಇಲ್ಲ. ಇಂಥವರು ಎಷ್ಟೇ ಓದಿದರೂ ಪ್ರಯೋಜನವಿಲ್ಲ.

♣️​ ಮೊಬೈಲ್‌ ಬಳಕೆ:

ಇಂದು ಸ್ಮಾರ್ಟ್‌ಫೋನ್‌ಗಳನ್ನು ಒಳ್ಳೆಯದಕ್ಕು ಬಳಸಬಹುದು, ಕೆಟ್ಟದಕ್ಕೂ ಬಳಸಬಹುದು. ಆದರೆ ಇಂದಿನ ಯುವ ಜನಾಂಗ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕಾಗಿ, ಮಾಹಿತಿಗಿಂತ ಮನರಂಜನೆಗಾಗಿ ಹೆಚ್ಚು ಬಳಸುತ್ತಿದೆ. ಹೆಚ್ಚು ಇದನ್ನು ಬಳಸುವವರ ಮನಸ್ಸು ವಿಕಾರವಾಗುವುದು ಹೌದು, ಹೆಚ್ಚು ವಿಚಲಿತಗೊಳ್ಳುವುದು ಹೌದು. ಇದರಿಂದ ಓದಿದ್ದು ಮರೆಯುವುದು ಹೌದು.

♣️ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಇಲ್ಲದಿರುವುದು:

ಕಣ್ಣು, ಕಿವಿ, ಮೂಗು, ಬಾಯಿ ಹಾಗೂ ಚರ್ಮ ಇವುಗಳ ಮೇಲೆ ಹಿಡಿತ ಇರಬೇಕು. ಇಂದ್ರಿಯಗಳ ತಾಳಕ್ಕೆ ತಕ್ಕಂತೆ ಕುಣಿಯುವುದರಿಂದ ಕಲಿಕೆ ಯಶಸ್ವಿ ಆಗುವುದಿಲ್ಲ.

♣️ ಗಲಾಟೆ, ಗದ್ದಲಗಳ ನಡುವೆ ಓದುವುದು:

ಶಾಂತ ವಾತಾವರಣ ಯಶಸ್ವಿ ಓದಿಗೆ ಪೂರಕ ಹಾಗೂ ಸ್ಫೂರ್ತಿ. ಸುತ್ತ ಮುತ್ತ ಹೆಚ್ಚು ಶಬ್ಧ, ಗಲಾಟೆ, ಗದ್ದಲಗಳು ಇದ್ದಲ್ಲಿ ಓದಿಗೆ ಭಂಗ ಉಂಟುಮಾಡುತ್ತವೆ.

♣️ ಪುನರಾವರ್ತನೆ ಮಾಡದಿರುವುದು:

ನೆನಪುಗಳಲ್ಲಿ ಎರಡು ವಿಧ. ಆಗ ತಾನೆ ಓದಿದ ಮಾಹಿತಿ ಅಲ್ಪಾವಧಿ ನೆನಪಿಗೆ ಹೋಗುತ್ತದೆ. ಎರಡನೆಯದು ದೀರ್ಘಾವಧಿ ನೆನಪು. ಯಾವುದೇ ವಿಷಯ ಹೆಚ್ಚುಕಾಲ ನೆನಪಿನಲ್ಲಿ ಅಂದರೆ ದೀರ್ಘಕಾಲ ಉಳಿಯಬೇಕೆಂದರೆ ಆಗಾಗ ಪುನರ್ ಮನನ ಮಾಡಬೇಕು.

♣️ ಟಿಪ್ಪಣಿ ಬರೆಯದಿರುವುದು:

ಯಾವಾಗಲು ಶಾರ್ಟ್‌ ನೋಟ್ಸ್‌ಗಳನ್ನು ಓದಬಾರದು. ಪುಸ್ತಕಗಳನ್ನು ಓದಿ ಶಾರ್ಟ್‌ ನೋಟ್ಸ್‌, ಟಿಪ್ಪಣಿಗಳನ್ನು ಮಾಡಿಕೊಳ್ಳಬೇಕು. ಈ ಎರಡು ಓದುವ ಕ್ರಮದಿಂದ ಹೆಚ್ಚು ವಿಷಯ ಸಂಗ್ರಹವಾಗುತ್ತದೆ ಮತ್ತು ಇನ್ನೊಮ್ಮೆ ಓದುವಾಗ ಟಿಪ್ಪಣಿಗಳನ್ನು ಓದುವುದರಿಂದ ಸಮಯವು ಉಳಿಯುತ್ತದೆ.

♣️ ದುಶ್ಚಟಗಳು:

ಗುಟಕಾ, ಮದ್ಯಪಾನ, ಧೂಮ್ರಪಾನ ಮಾಡುವವರಿಗೆ ಅವುಗಳು ಸಿಗದಿದ್ದಾಗ ಉತ್ತೇಜನ ಕಳೆದುಕೊಳ್ಳುತ್ತಾರೆ. ಅವುಗಳನ್ನು ಪಡೆಯುವುದಕ್ಕೆ ವಿವಿಧ ರೀತಿಯ ಕಸರತ್ತು ಪ್ರಾರಂಭಿಸುತ್ತಾರೆ.

♣️ ಬೇರೆಯವರ ನೋಟ್ಸ್‌ ಓದುವುದು ಮತ್ತು ನಿರಂತರ ಓದುವುದು:

ಬೇರೆಯವರ ನೋಟ್ಸ್‌ನಲ್ಲಿ ನಮ್ಮ ಅಕ್ಷರಗಳು ಕಾಣುವುದಿಲ್ಲ. ಆದ್ದರಿಂದ ಅದು ನಮ್ಮದು ಎನಿಸುವುದು ಇಲ್ಲ.ಬೇರೆಯವರ ನೋಟ್ಸ್ ನಮಗೆ ಕೇವಲ Reference ಆಗಿರಲಿ ಆದರೆ ಅದೇ ಭಗವದ್ಗೀತೆ ಆಗದಿರಲಿ. ಹಾಗೆಯೇ ನಿರಂತರ ಓದುವುದರಿಂದ ಮೆದುಳಿಗೆ ಒತ್ತಡ ಹೆಚ್ಚಾಗಿ ಓದಿದ ವಿಷಯಗಳು ತಲೆಯೊಳಗೆ ಹೋಗುವುದಿಲ್ಲ.

Leave a Reply

Your email address will not be published. Required fields are marked *