ರಾಜಕೀಯವಾಗಿ ಸ್ವತಂತ್ರ ಭಾರತವನ್ನು ಹೊಂದಿದರೆ ಸಾಕಾಗುವುದಿಲ್ಲ. ಪ್ರತಿಯೊಬ್ಬ ನಾಗರೀಕನು ಧಾರ್ಮಿಕ ಮತ್ತು ರಾಜಕೀಯ ಹಕ್ಕುಗಳನ್ನು ಹೊಂದಿರುವ ಭಾರತೀಯ ರಾಷ್ಟ್ರವನ್ನು ಹೊಂದುವುದು ಅಗತ್ಯವಾಗಿದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿಯು ಅಭಿವೃದ್ಧಿ ಹೊಂದಲು ಸಮಾನ ಅವಕಾಶವನ್ನು ಹೊಂದಿರುತ್ತಾನೆ.

-ಡಾ.ಬಾಬಾ ಸಾಹೇಬ್ ಅಂಬೇಡ್ಕರ್

  ಹತ್ತೊಂಬತ್ತನೇ ಶತಮಾನದಲ್ಲಿ ಜನಿಸಿ ಸ್ವತಂತ್ರ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ರಾಜ್ಯ ವ್ಯವಸ್ಥೆಯ ಮೇಲೆ ಅಳಿಸಲಾಗದ ಮುದ್ರೆಯನ್ನು ಅಂಕಿತಗೊಳಿಸಿದ ಮಹಾನುಭಾವರ ಸಾಲಿನಲ್ಲಿ ಡಾ.ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಅವರ ಹೆಸರು ಅಜರಾಮರ. ಅವರು ನಮ್ಮ ಸಂವಿಧಾನದ ರೂವಾರಿ, ಸದಾ ದಲಿತರ ಆಂದೋಲನದ ಸೇನಾನಿ.
  ಏಪ್ರಿಲ್ 14 ಭಾರತದ ಪ್ರಸಿದ್ಧ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್ ಅಂಬೇಡ್ಕರ್ ಅವರ ಸ್ಮರಣೆಯನ್ನು ಶಾಶ್ವತಗೊಳಿಸಿ ಅವರ ಕೊಡುಗೆಗಳನ್ನು ಗೌರವದಿಂದ ಸ್ಮರಿಸುವ ಅವರ ಜನ್ಮದಿನ. ಸಮಾಜದ ಅಂಚಿನಲ್ಲಿ ನರಳುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಅರ್ಹವಾದ ಸ್ಥಾನಮಾನ ಮತ್ತು ಗೌರವಗಳನ್ನು ಒದಗಿಸುವುದರ ಜೊತೆಗೆ ದೀನ ದಲಿತರ ಉದ್ದಾರಕ್ಕಾಗಿ ಹೋರಾಡಿದ ಧೀಮಂತ ನಾಯಕ ಅಂಬೇಡ್ಕರ್.
   1981 ರ ಏಪ್ರಿಲ್ 14 ರಂದು ಮಧ್ಯಪ್ರದೇಶದ ಮಹೌ ಎಂಬಲ್ಲಿ ರಾಮ್‍ಜೀ ಸಕ್ಪಾಲ್ ಮತ್ತು ಭೀಮಾಬಾಯಿ ಅವರ 14ನೇ ಮಗನಾಗಿ ಅಂಬೇಡ್ಕರ್ ಜನಿಸಿದರು. ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸುವವರೆಗೂ ತಾವು ಮಹಾರ್ ಜಾತಿಗೆ ಸೇರಿದವರೆಂದಾಗಲಿ, ಅದೊಂದು ಅಸ್ಪøಶ್ಯ ಜಾತಿ ಎಂದಾಗಲಿ ಗೊತ್ತಿರದ ಬಾಲಕ ಭೀಮಾ ಯಾವಾಗ ಸತಾರೆಯಲ್ಲಿನ ಹೈಸ್ಕೂಲಿಗೆ ಸೇರಿದರೋ ಅಲ್ಲಿಂದ ತಾವು ಅಸ್ಪøಶ್ಯರು ಎಂಬ ಕಟು ವಾಸ್ತವ ಅರಿವಿಗೆ ಬರಲಾರಂಭಿಸಿತು.
 ಸತಾರೆಯಲ್ಲಿನ ಕ್ಷೌರಿಕನೊಬ್ಬ ಭೀಮನನ್ನು ಮುಟ್ಟಬೇಕಾಗುತ್ತದಲ್ಲ ಎಂಬ ಕಾರಣದಿಂದ ಕೂದಲು ಕತ್ತರಿಸಲು ನಿರಾಕರಿಸಿದ. ಆದರೆ ಅದೇ ಕ್ಷೌರಿಕ ಊರಿನ ಎಮ್ಮಗಳ ಮೈಮೇಲಿನ ಕೂದಲು ತೆಗೆಯುವುದನ್ನು ಕಣ್ಣಾರೆ ಕಂಡ ಭೀಮ, ಮನುಷ್ಯರಾದ ತಾವು ಪ್ರಾಣಿಗಳಿಗಿಂತಲೂ ಕೀಳಾದೇವೆ ಎಂದು ಮರುಗಿದರು.
  ಇವೆಲ್ಲ ತಾರತಮ್ಯಗಳ ನಡುವೆಯೂ 1908ರಲ್ಲಿ ಭೀಮರಾವ್ ಮೆಟ್ರಿಕ್ಯೂಲೇಷನ್‍ನ್ನು ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣನಾಗಿ ಅಸ್ಪøಶ್ಯ ಜಾತಿಯಲ್ಲಿಯೇ ಮೊದಲಿಗನಾದ. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭವಾಗುವ ಅಂಬೇಡ್ಕರ್ ಅವರ ಶಿಕ್ಷಣ ಇತಿಹಾಸವು ಅವರೊಬ್ಬ "ಜ್ಞಾನದ ಸಂಕೇತ" ಎಂದು ಬಿಂಬಿಸುತ್ತದೆ.
   1913ರಲ್ಲಿ ಎಲ್ಫಿನ್‍ಸ್ಟೋನ್ ಕಾಲೇಜಿನಲ್ಲಿ ಬಿ.ಎ ಪದವಿ ಮುಗಿಸಿ ಬರೋಡ ಮಹಾರಾಜರ ಸಹಾಯದಿಂದ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಗಾಗಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯವನ್ನು ಆಯ್ದುಕೊಂಡು 2 ವರ್ಷಗಳ ಕಾಲ ಸತತ ಅಭ್ಯಾಸ ನಡೆಸಿ, 1915ರಲ್ಲಿ "ಪ್ರಾಚೀನ ಭಾರತದ ವ್ಯಾಪರೋದ್ಯಮ" ಎಂಬ ಪ್ರಬಂಧವನ್ನು ಮಂಡಿಸಿದರು. ಕೊಲಂಬಿಯಾ ವಿ.ವಿ. ಪ್ರಬಂಧದ ಗುಣಮಟ್ಟವನ್ನು ಪರಿಗಣಿಸಿ ಎಂ.ಎ ಪದವಿಯನ್ನು ಪ್ರದಾನ ಮಾಡಿತು. "ಭಾರತೀಯ ಹಣಕಾಸು ವ್ಯವಸ್ಥೆ"ಯನ್ನು ಕೇಂದ್ರವಾಗಿಟ್ಟುಕೊಂಡು "ನ್ಯಾಷನಲ್ ಡಿವೈಡೆಂಟ್ ಆಫ್ ಇಂಡಿಯಾ - ಎ ಹಿಸ್ಟಾರಿಕಲ್ ಅಂಡ್ ಅನಾಲಿಟಿಕಲ್ ಸ್ಟಡಿ" ಎಂಬ ಪ್ರೌಢಪ್ರಬಂಧವನ್ನು 1916ರಲ್ಲಿ ಮಂಡಿಸಿ ಅದಕ್ಕಾಗಿ 1917ರಲ್ಲಿ ಅದೇ ವಿ.ವಿ.ಯಿಂದ ಪಿ.ಹೆಚ್.ಡಿ ಪಡೆದರು. ಅಂಬೇಡ್ಕರ್ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ ಪಡೆದ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ.
  ದೀನ ದಲಿತರ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಬಾಬಾ ಸಾಹೇಬರು ಲಂಡನ್‍ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಅವರು ನೀಡಿದ ಅತ್ಯುತ್ತಮ ಪ್ರಸ್ತುತಿಗಾಗಿ ಅವರು ಬ್ರಿಟಿಷ್ ಪ್ರಿಮೀಯರ್ ಮತ್ತು ರಾಣಿ ಸೇರಿದಂತೆ ಎಲ್ಲ ಮೂಲೆಗಳಿಂದ ಸಾಕಷ್ಟು ಮೆಚ್ಚಗೆಯನ್ನು ಪಡೆದರು. ಇದಕ್ಕಾಗಿ ಬ್ರಿಟಿಷ್ ಪ್ರಿಮಿಯರ್ ಬ್ರಿಟಿಷ್ ಸಾಮ್ರಾಜ್ಞೆ ಅಂಬೇಡ್ಕರ್ ಅವರನ್ನು ವಿಶೇಷವಾಗಿ ಚಹಾ ಕೂಟಕ್ಕೆ ಆಹ್ವಾನಿಸಿದರು. ಅಂತಹ ಗೌರವವನ್ನು ಪಡೆದ ಮೊದಲ ಭಾರತೀಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್.
    ಕಾರ್ಮಿಕ ವರ್ಗದ ಹಿತ ಸಾಧನೆಗಾಗಿ ಅಗತ್ಯವಾದ ರಕ್ಷಣೆಯನ್ನು ಕಾನೂನುಬದ್ಧವಾಗಿಸುವುದು, ಕೆಳ ಮಧ್ಯಮ ವರ್ಗದವರಿಗೆ ನಗರಗಳಲ್ಲಿ ವಸತಿ ಸೌಕರ್ಯಗಳನ್ನು ಏರ್ಪಡಿಸುವುದು, ಹಳ್ಳಿಗಳಲ್ಲಿ ಜೀವನ ಸೌಕರ್ಯಗಳನ್ನು ಹೆಚ್ಚಿಸಿ ಅವನ್ನು ಆಧುನೀಕರಿಸುವುವ ಧ್ಯೇಯಗಳನ್ನು ಸಾಕಾರಗೊಳಿಸಲು 1936ರಲ್ಲಿ "ಸ್ವತಂತ್ರ ಕಾರ್ಮಿಕ ಪಕ್ಷ"ವನ್ನು ಸ್ಥಾಪಿಸಿದರು.
   ಆಗಸ್ಟ್ 15ರಂದು ಸ್ವತಂತ್ರಗೊಂಡ ಭಾರತದಲ್ಲಿ ನೆಹರು ಅವರ ಸೂಚನೆಯಂತೆ ಅಂಬೇಡ್ಕರ್ ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. ಆಗಸ್ಟ 29 ರಂದು ಸಂವಿಧಾನದ ಕರಡನ್ನು ಸಿದ್ಧಪಡಿಸುವುದಕ್ಕೆ ರಚಿಸಲಾದ ಸಮಿತಿಗೆ ಅಂಬೇಡ್ಕರ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.
 ಅಸ್ಪøಶ್ಯನಾಗಿ ಹುಟ್ಟಿದಕ್ಕೆ ಎತ್ತಿನ ಬಂಡಿಯಿಂದ ಹೊರದೂಡಿಸಿಕೊಂಡ ಬಾಲಕ, ಶಾಲೆಯ ತರಗತಿಗಳಲ್ಲಿ ಒಂದು ಮೂಲೆಯಲ್ಲಿ ಕುಳಿತಿರಬೇಕಾದರೆ ವಿದ್ಯಾರ್ಥಿ, ಅಧ್ಯಾಪಕರಿಂದ ಅಪಮಾನಕ್ಕೆ ಒಳಗಾಗಿ, ಉಪಹಾರ ಮಂದಿರ, ವಸತಿ ಗೃಹ, ಕ್ಷೌರದಂಗಡಿ, ದೇವಾಲಯಗಳಿಗೆ ಪ್ರವೇಶ ಪಡೆಯಲಾಗದೆ ಮನುಷ್ಯನಾಗಿ ಹುಟ್ಟಿ ಪ್ರಾಣಿಗಳಿಗಿಂತ ಹೀನ ಬದುಕು ನಡೆಸಿದ ಒಬ್ಬ ದಲಿ ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮಾತ್ರವಲ್ಲದೇ, ರಾಷ್ಟದ ಧ್ಯೇಯೊದ್ದೇಶಗಳನ್ನು, ರಾಜ್ಯದ ಆಡಳಿತ ವಿಧಾನಗಳನ್ನು ನಿದಿಷ್ಟಪಡಿಸುವ ಸಂವಿಧಾನವನ್ನೆ ರೂಪಿಸಬಲ್ಲ ಅಧಿಕಾರವನ್ನು ಪಡೆದ ಸಾಧನೆಯು ಒಂದು ಅತ್ಯಾಮೂಲ್ಯ ಸಾಧನೆ.
    ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಗಳಲ್ಲಿ ಸಂವಿಧಾನ ಮಾತ್ರವಲ್ಲದೆ  ದೇಶದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಮಹಾನ್ ನಾಯಕ. ದೇಶದ ವೈವಿಧ್ಯಮಯ ಕ್ಷೇತ್ರಗಳಿಗೆ ಅಂಬೇಡ್ಕರ್ ನೀಡಿದ ಕೊಡುಗೆ ಅಪಾರ. ದೇಶದ ಮೂಲ ಸೌಕರ್ಯ ಅಭಿವೃದ್ಧಿಯ ತಮ್ಮ ಅಮೂಲಾಗ್ರವಾಗಿದ್ದ ಅಧ್ಯಯನದ ಫಲಶೃತಿಯಾಗಿ "ಸೆಂಟ್ರಲ್ ವಾಟರ್ವೇಸ್ಟ್ ಇರಿಗೇಷನ್ ಅಂಡ್ ನ್ಯಾವಿಗೇಷನ್ ಕಮಿಷನ್" ಎಂಬ ವಿನೂತನ ಸಂಸ್ಥೆಯ ಉಗಮಕ್ಕೆ ಕಾರಣರಾದರು. ವಿದ್ಯುತ್ ಯೋಜನೆಗಳೊಟ್ಟಿಗೆ ಜಲ ನಿರ್ವಹಣೆ, ಒಳನಾಡು ಜಲಮಾರ್ಗ ಮತ್ತು ಬೃಹತ್ ನೀರಾವರಿ ಯೋಜನೆಗಳನ್ನು ರೂಪಿಸುವ ಮಹತ್ತರ ಕಾರ್ಯವನ್ನು ಮಾಡಿದರು.
  ಭಾರತದಲ್ಲಿ ಪ್ರಪ್ರಥಮ ನದಿ ಕಣಿವೆ ಯೋಜನೆಯಾದ " ದಾಮೋದರ್ ವ್ಯಾಲಿ ಯೋಜನೆ"ಯನ್ನು ಕೇವಲ ಪ್ರವಾಹ ನಿಯಂತ್ರಣವೊಂದಕ್ಕೆ ರೂಪಿಸಲಾಗಿದ್ದನ್ನು ಬಲವಾಗಿ ವಿರೋಧಿಸಿದ ಅಂಬೇಡ್ಕರ್, ವಿದ್ಯುತ್ ಉತ್ಪಾದನೆ ಮತ್ತು ಜಲ ಮಾರ್ಗಗಳನ್ನು ರೂಪಿಸಿದರು.     ಇಂದು ದಾಮೋದರ್ ವ್ಯಾಲಿ ಕಾರ್ಪೋರೇಷನ್ ಸುಮಾರು 8 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಬಹುತೇಕ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತಿದೆ.
ದೇಶದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಮೊಟ್ಟಮೊದಲ ಕ್ರಾಂತಿಕಾರಿ ಹೆಜ್ಜೆಯಾದ ಉದ್ಯೋಗ ವಿನಿಮಯ ಕೇಂದ್ರಗಳನ್ನು, ಕಾರ್ಮಿಕ ಕೆಲಸದ ಸಮಯವನ್ನು 8 ಗಂಟೆಗಳಿಗೆ ನಿಯಮಿತಗೊಳಿಸುವ ಕಾನೂನನ್ನು ರೂಪಿಸಿ ಕಾರ್ಮಿಕ ಕಲ್ಯಾಣಕ್ಕೆ ಕಾರಣರಾದರು.
  ಭಾರತೀಯ ಕೇಂದ್ರೀಯ ಬ್ಯಾಂಕಿನ ಸ್ಥಾಪನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಅಪಾರ. "ಹಿಲ್ಟನ್ ಯಂಗ್ ಕಮಿಷನ್(ಭಾರತೀಯ ಕರೆನ್ಸಿ ಮತ್ತು ಹಣಕಾಸು ಕುರಿತ ರಾಯಲ್ ಕಮಿಷನ್)ನ್ನು ಅಂಬೇಡ್ಕರ್‍ರವರ ಪುಸ್ತಕ "ದಿ ಪ್ರಾಬ್ಲಂ ಆಫ್ ರುಪಿ- ಇಟ್ಸ್ ಓರಿಜಿನ್ ಅಂಡ್ ಸಲ್ಯೂಷನ್ಸ್ "ನ ಆಧಾರದ ಮೇಲೆ ಪ್ರಸ್ತುತ ಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಕಲ್ಪನೆ ಮಾಡಲಾಗಿದೆ.
  ಅಂಬೇಡ್ಕರ್‍ವರು ಮಹಿಳೆಯರ ಪ್ರಗತಿಯ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿದ್ದರು.  "ನಾನು ಸಮುದಾಯದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯುತ್ತೇನೆ" ಎಂದು ಹೇಳಿದ ಅಂಬೇಡ್ಕರ್ ಬಡ ಅನಕ್ಷರಸ್ಥ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿ ಬಾಲ್ಯ ವಿವಾಹದಂತಹ ಆಚರಣೆಗಳ ವಿರುದ್ದ ಹೋರಾಡಲು ಪ್ರೋತ್ಸಾಹಿಸುವುದರ ಜೊತೆಗೆ ದೇವದಾಸಿ ಮತ್ತು ವರದಕ್ಷಿಣೆ ಪದ್ಧತಿಗಳನ್ನು ವಿರೋಧಿಸಿ ಮಹಿಳೆಯರಿಗೆ ಶಿಕ್ಷಣ ಮತ್ತು ಸಾಮಾಜಿಕ, ಸಾಂಸ್ಕøತಿಕ ಹಕ್ಕುಗಳನ್ನು ನೀಡಬೇಕೆಂದು ಪ್ರತಿಪಾದಿಸಿದರು.
 1956 ಡಿಸೆಂಬರ್ 6ರ ಬೆಳಿಗ್ಗೆ ಅಂಬೇಡ್ಕರ್ ನಿಧನರಾದರು. ಇದರೊಂದಿಗೆ ಅವರ ಎಷ್ಟೋ ಆಶೋತ್ತರಗಳು, ಕನಸುಗಳು ಹಾಗೆಯೇ ಉಳಿದುಕೊಂಡವು. ಅಂದಿನ ದಿನ ಭಾರತ ಮಾತ್ರವಲ್ಲದೇ ಪ್ರಪಂಚದ ಹಲವು ದೇಶಗಳ ಗಣ್ಯರು, ನಾಯಕರು ಸಂತಾಪ ಸೂಚಿಸಿದರು. ಬಾಬಾ ಸಾಹೇಬರ ಮಹತ್ತರವಾದ ಕೊಡುಗೆಗಳನ್ನು ಮನಗಂಡ ಸರ್ಕಾರವು ಭಾರತ ರತ್ನ ಪ್ರಶಸ್ತಿ ನೀಡುವುದರಲ್ಲಿ ವಿಳಂಬಿಸಿದರೂ 1990ರಲ್ಲಿ ಮರಣೊತ್ತರವಾಗಿ ನೀಡಿ ಗೌರವಿಸಿತು.
   ದೇಶದ ಸರ್ವತೋಮುಖ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ ಮಹಾನ್ ನಾಯಕ ಬಾಬಾ ಸಾಹೇಬರನ್ನು ಶತಮಾನಗಳುರುಳಿದರು ದೇಶ ಕೃತಜ್ಞತೆಯಿಂದ ಸ್ಮರಿಸುತ್ತದೆ.

Leave a Reply

Your email address will not be published. Required fields are marked *