ದಾವಣಗೆರೆ ನ.16
ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ, ದೇಶದ ಅರ್ಥ ಮತ್ತು
ಆರ್ಥಿಕ ವ್ಯವಸ್ಥೆ ಹಿಂಜರಿಕೆ ಕಂಡಿರುವ ಈ ಸಂದರ್ಭದಲ್ಲಿ ಆರ್ಥಿಕ ಸ್ಪಂದನ
ಕಾರ್ಯಕ್ರಮದ ಮೂಲಕ ಸಹಕಾರ ಸಂಸ್ಥೆಗಳಿಂದ 39300 ಕೋಟಿ
ರೂ. ಗಳಿಗೂ ಅಧಿಕ ಮೊತ್ತದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ
ಅರ್ಹ ಸಹಕಾರಿಗಳಿಗೆ, ನಾಗರಿಕರಿಗೆ, ವಲಸೆ ಕಾರ್ಮಿಕರಿಗೆ ನೀಡುವ
ಮೂಲಕ ಸಹಕಾರ ತತ್ವವನ್ನು ಅರ್ಥಪೂರ್ಣವಾಗಿಸಿದೆ ಎಂದು ಸಹಕಾರ
ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್
ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು,
ಹಾಗೂ ವಿವಿಧ ಸಹಕಾರ ಮಹಾಮಂಡಳಗಳು, ಸಹಕಾರ
ಬ್ಯಾಂಕ್‍ಗಳು, ಸೌಹಾರ್ದ ಸಹಕಾರಿಗಳು ಮತ್ತು ಸಹಕಾರ ಇಲಾಖೆ
ಇವರ ಸಂಯುಕ್ತ ಆಶ್ರಯದೊಂದಿಗೆ ನಗರದ ಶಾಮನೂರು
ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ
ಸೋಮವಾರ ಏರ್ಪಡಿಸಲಾಗಿದ್ದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ
ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಹಕಾರ ಕ್ಷೇತ್ರವು ಬೃಹದಾಕಾರವಾಗಿ ಬೆಳೆದಿದ್ದು, 43
ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು, 2.43 ಕೋಟಿಗೂ ಹೆಚ್ಚು
ಸಹಕಾರಿ ಸದಸ್ಯರನ್ನು ಹೊಂದಿದೆ. ಸಹಕಾರ ಸಪ್ತಾಹ ಅವಧಿಯಲ್ಲಿ
ನಾಗರಿಕರಿಗೆ, ಸಮಾಜಕ್ಕೆ ಸಹಕಾರ ಚಳುವಳಿಯ ಮಾಹಿತಿ ಬಗ್ಗೆ
ಜಾಗೃತಿ ಮೂಡಿಸಲಾಗುತ್ತಿದೆ. ಸಹಕಾರ ಕ್ಷೇತ್ರ ಲಕ್ಷಾಂತರ
ಜನರಿಗೆ ಉದ್ಯೋಗ ನೀಡಿದ್ದು, ಸದ್ಯ ದೇಶದಲ್ಲಿ ಪ್ರತಿಯೊಂದು
ಉದ್ದಿಮೆ, ಕ್ಷೇತ್ರದಲ್ಲಿಯೂ ಸಹಕಾರ ಕ್ಷೇತ್ರ ನೆಲೆಯೂರಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಸಹಕಾರ ಕ್ಷೇತ್ರದಿಂದಲೇ
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅತಿ ಹೆಚ್ಚು 53 ಕೋಟಿ ರೂ.
ದೇಣಿಗೆ ನೀಡಿದೆ. ಕೋವಿಡ್ ಸೋಂಕು ಹರಡುವುದನ್ನು
ನಿಯಂತ್ರಿಸಲು ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕ
ಇಲಾಖೆಗಳು ಹಗಲಿರುಳು ಶ್ರಮಿಸಿದ್ದಾರೆ. ಕೊರೋನಾ
ವಾರಿಯರ್ಸ್‍ಗಳಾಗಿ ಕಾರ್ಯ ನಿರ್ವಹಿಸಿದ ರಾಜ್ಯದ 42524 ಆಶಾ

ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಗಳಂತೆ 12.75 ಕೋಟಿ
ರೂ. ಗಳ ಪ್ರೋತ್ಸಾಹಧನವನ್ನು ನೀಡಲಾಗಿದೆ. ರಾಜ್ಯದ ಎಲ್ಲ
ವಿಭಾಗಗಳಲ್ಲೂ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು
ಏರ್ಪಡಿಸುವ ಮೂಲಕ ಸಹಕಾರ ಸಂಸ್ಥೆಗಳಿಂದ 39300 ಕೋಟಿ ರೂ.
ಗಳಿಗೂ ಅಧಿಕ ಮೊತ್ತದ ಆರ್ಥಿಕ ನೆರವನ್ನು ಅರ್ಹ ಸಹಕಾರಿಗಳಿಗೆ,
ನಾಗರಿಕರಿಗೆ, ವಲಸೆ ಕಾರ್ಮಿಕರಿಗೆ ನೀಡಿದೆ. ರೈತರಿಗೆ ಶೂನ್ಯ
ಬಡ್ಡಿದರದಲ್ಲಿ ಸಾಲ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಬಡ್ಡಿ
ರಹಿತ ಸಾಲ ನೀಡಿದೆ. ಕಳೆದ ವರ್ಷ 13 ಸಾವಿರ ಕೋಟಿ ರೂ. ಸಾಲ
ನೀಡಲಾಗಿದೆ. ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಯೋಜನೆಯಡಿ 20 ಲಕ್ಷ
ಕೋಟಿ ರೂ. ಗಳಿಗೂ ಅಧಿಕ ಮೊತ್ತ ಆರ್ಥಿಕ ನೆರವನ್ನು
ಘೋಷಿಸಿದ್ದು, ಈ ಪೈಕಿ ಸಹಕಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನ
ಒದಗಿಸಿದೆ. ಹೀಗಾಗಿ ಈ ಬಾರಿಯ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನ.
14 ರಿಂದ 20 ರವರೆಗೆ ‘ಕೊರೋನಾ ಸೋಂಕು- ಆತ್ಮ ನಿರ್ಭರ
ಭಾರತ- ಸಹಕಾರ ಸಂಸ್ಥೆಗಳು’ ಧ್ಯೇಯವಾಕ್ಯವನ್ನಾಗಿಸಿ
ಆಚರಿಸಲಾಗುತ್ತಿರುವುದು ಅರ್ಥಪೂರ್ಣವೆನಿಸಿದೆ. ರಾಜ್ಯದಲ್ಲಿ ರೈತರಿಗೆ,
ಸಹಕಾರಿಗಳಿಗೆ ಸಾಲ ನೀಡುವುದು, ಠೇವಣಿಗೆ ಬಡ್ಡಿ ನೀಡಿವುದು
ಸೇರಿದಂತೆ ಹಲವು ವ್ಯವಹಾರಗಳನ್ನು ಸಹಕಾರಿ ಬ್ಯಾಂಕುಗಳು
ಅಚ್ಚುಕಟ್ಟಾಗಿ, ಪ್ರಾಮಾಣಿಕವಾಗಿ ನಡೆಸುತ್ತಿವೆ ಎಂದು ಸಚಿವ ಎಸ್.ಟಿ.
ಸೋಮಶೇಖರ್ ಹೇಳಿದರು.
ಸಹಕಾರ ಧ್ವಜಾರೋಹಣ ನೆರವೇರಿಸಿದ ನಗರಾಭಿವೃದ್ಧಿ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ
ಸರ್ಕಾರಗಳು ಹೆಚ್ಚಿನ ಅನುದಾನ ನೀಡುವ ಮೂಲಕ
ಪ್ರೋತ್ಸಾಹಿಸುತ್ತಿವೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ
ನಷ್ಟ ಅನುಭವಿಸಿದ ಹೂವು, ಹಣ್ಣು ಬೆಳೆಗಾರರು, ಆಟೋ, ಟ್ಯಾಕ್ಸಿ
ಚಾಲಕರಿಗೆ ಸರ್ಕಾರ ಪರಿಹಾರ ಧನ ನೀಡುವ ಮೂಲಕ ನೆರವಿಗೆ
ಧಾವಿಸಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಆರ್ಥಿಕ
ಸಂದಿಗ್ಧತೆ ಉಂಟಾಗಿದ್ದು, ಸಹಕಾರಿ ಸಂಘಗಳು ಹೈನುಗಾರಿಕೆ,
ಮೀನುಗಾರಿಕೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ
ಹೆಚ್ಚಿನ ನೆರವು ನೀಡುವ ಮೂಲಕ ಆರ್ಥಿಕ ಸದೃಢತೆಗೆ ಸಹಕಾರ
ನೀಡಬೇಕಿದೆ ಎಂದರು.
ಎಮಿರೇಟಸ್, ನ್ಯಾಫ್‍ಕಬ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ್
ಅವರು ಮಾತನಾಡಿ, ಉತ್ತಮ ಆರ್ಥಿಕ ವಹಿವಾಟು ನಡೆಸುತ್ತಿರುವ ಸಣ್ಣ
ಪುಟ್ಟ ಬ್ಯಾಂಕ್‍ಗಳನ್ನು ದೊಡ್ಡ ದೊಡ್ಡ ರಾಷ್ಟ್ರೀಕೃತ
ಬ್ಯಾಂಕ್‍ಗಳೊಂದಿಗೆ ವಿಲೀನಗೊಳಿಸುತ್ತಿರುವುದು ಸಹಕಾರ
ಕ್ಷೇತ್ರಕ್ಕೆ ಮಾರಕವಾಗಿದೆ. ಪತ್ತಿನ ಸಹಕಾರ ಸಂಘಗಳು,
ಸಹಕಾರಿ ಬ್ಯಾಂಕ್‍ಗಳು ಬಡವರ ಸ್ವಾಭಿಮಾನ ಎತ್ತಿಹಿಡಿಯುವ
ಕ್ಷೇತ್ರಗಳಾಗಿವೆ. ಸಣ್ಣ ಸಣ್ಣ ಬ್ಯಾಂಕ್‍ಗಳನ್ನು ದೊಡ್ಡ
ಬ್ಯಾಂಕ್‍ಗಳೊಂದಿಗೆ ವಿಲೀನಗೊಳಿಸುತ್ತಿರುವ ಪ್ರಕ್ರಿಯೆಯಿಂದ
ಸಹಕಾರ ಕ್ಷೇತ್ರಕ್ಕೆ ಹರಿದು ಬರುವ ಹಣ ದೊಡ್ಡ ಬ್ಯಾಂಕ್‍ಗಳಿಗೆ
ವರ್ಗಾವಣೆಯಾಗುತ್ತಿದೆ. ವಾರ್ಷಿಕ ಸುಮಾರು 6 ಲಕ್ಷ ಕೋಟಿ ವಹಿವಾಟು
ನಡೆಸುವ ಸಣ್ಣ ಬ್ಯಾಂಕ್‍ಗಳಿಂದ ಸುಮಾರು 1.5 ಲಕ್ಷ ಕೋಟಿ ರೂ. ಹಣ
ಈ ರೀತಿ ವರ್ಗಾವಣೆಯಾಗುತ್ತಿದ್ದು, ಸಹಕಾರ ಕ್ಷೇತ್ರಕ್ಕೆ ಇದು
ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಸಹಕಾರಿ
ಸಂಘಗಳು, ಬ್ಯಾಂಕ್‍ಗಳು ಗ್ರಾಮೀಣ ಭಾಗದ ಜನರ ಸಹಾಯಕ್ಕೆ,
ನೆರವಿಗೆ ಬರಬೇಕಿದೆ. ಆದರೆ ಸೇವಾ ಮನೋಭಾವವನ್ನು ಮರೆತು,
ಲಾಭವನ್ನೇ ಏಕೈಕ ಉದ್ದೇಶವಾಗಿಸಿಕೊಂಡು, ಅನಾರೋಗ್ಯಕರ
ಪೈಪೋಟಿ ನಡೆಸುತ್ತ ಜನರ ಹಿತವನ್ನು ಮರೆಯುತ್ತಿವೆ. ಈ ರೀತಿ

ಮುಂದುವರೆದರೆ ಸಹಕಾರಿ ತತ್ವಕ್ಕೆ ಅರ್ಥವಿಲ್ಲ. ಸಹಕಾರಿ
ಕ್ಷೇತ್ರವನ್ನು ಆರೋಗ್ಯಕರವಾಗಿ ಬೆಳೆಸಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್
ಮಾತನಾಡಿ, ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ರೈತರಿಗೆ ಸಾಲ
ದೊರೆಯುವುದು ದುರ್ಲಭವೆನಿಸಿದ ಸಂದರ್ಭಗಳಲ್ಲಿ ಸಹಕಾರಿ
ಬ್ಯಾಂಕ್‍ಗಳು ರೈತರಿಗೆ ನೆರವು ನೀಡಿ, ಅವರನ್ನು ಆರ್ಥಿಕವಾಗಿ
ಸದೃಢರಾಗಲು ಸಹಕರಿಸುತ್ತಿವೆ. ರೈತರಿಗೆ ಸಾಲ ದೊರೆಯುವ
ಪ್ರಕ್ರಿಯೆ ಇನ್ನಷ್ಟು ಸರಳವಾಗಬೇಕು ಎಂದರು.
ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿ.ಪಂ. ಅಧ್ಯಕ್ಷೆ ದೀಪಾ
ಜಗದೀಶ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಮಾಯಕೊಂಡ ಶಾಸಕ
ಪ್ರೊ. ಎನ್. ಲಿಂಗಣ್ಣ, ಹರಿಹರ ಶಾಸಕ ಎಸ್. ರಾಮಪ್ಪ, ದಾವಣಗೆರೆ
ಮಹಾನಗರಪಾಲಿಕೆ ಮಹಾಪೌರರಾದ ಬಿ.ಜೆ. ಅಜಯ್‍ಕುಮಾರ್, ತೋಟ
ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಆರ್.ಎಂ. ರವಿ,
ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಚಂದ್ರಶೇಖರ್ ಸೇರಿದಂತೆ
ಹಲವು ಗಣ್ಯರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾ ಸಹಕಾರ
ಯೂನಿಯನ್ ಅಧ್ಯಕ್ಷ ಎನ್.ಎ. ಮುರುಗೇಶ್ ಸ್ವಾಗತಿಸಿದರು,
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಜೆ.ಆರ್.
ಷಣ್ಮುಖಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಜಿ. ಶ್ರೀನಿವಾಸಮೂರ್ತಿ
ವಂದಿಸಿದರು. ಸಂಗೀತಾ ರಾಘವೇಂದ್ರ ಪ್ರಾರ್ಥಿಸಿ, ನಾಡಗೀತೆ ಹಾಗೂ
ರೈತಗೀತೆ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಅಂಗವಾಗಿ
ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಹಲವು
ಸಹಕಾರಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭಕ್ಕೂ ಮುನ್ನ ಮಹಾತ್ಮಾ ಗಾಂಧೀಜಿ, ಸಹಕಾರಿ ಪಿತಾಮಹ
ಶಿದ್ದನಗೌಡ ಸಣ್ಣರಾಮನಗೌಡ ಪಾಟೀಲ, ಪಂಡಿತ್ ಜವಾಹರಲಾಲ್ ನೆಹರು
ಅವರ ಭಾವಚಿತ್ರಕ್ಕೆ ಎಲ್ಲ ಗಣ್ಯಮಾನ್ಯರು ಪುಷ್ಪ ನಮನ
ಸಲ್ಲಿಸಿದರು.

Leave a Reply

Your email address will not be published. Required fields are marked *