ದಾವಣಗೆರೆ ನ.29
ಕುಟುಂಬದ ಯಜಮಾನ ತೀರಿಹೋದ ನಂತರ ಮನೆಯ
ವಾರುಸದಾರರಿಗೆ ಎಷ್ಟೋ ವರ್ಷಗಳ ಕಾಲ ಖಾತೆ ಬದಲಾವಣೆಯಾಗದೆ
ಅನೇಕ ರೈತರಿಗೆ ಬೆಳೆವಿಮೆ, ಸಾಲ ಇತರೆ ಸರ್ಕಾರದ ಸೌಲಭ್ಯಗಳು
ದೊರಕುತ್ತಿರಲಿಲ್ಲ. ಇದನ್ನು ಅರಿತ ಸರ್ಕಾರ ಇದೀಗ ಖಾತೆ ಬದಲಾವಣೆ
ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಪೋತಿ ಖಾತೆ
ಆಂದೋಲನದ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ
ಎಂದು ಹೊನ್ನಾಳಿ ಕ್ಷೇತ್ರದ ಶಾಸಕರು ಹಾಗೂ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ
ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರದಂದು
ತಹಶೀಲ್ದಾರ್ ಕಚೇರಿಯಿಂದ ಆಯೋಜಿಸಲಾಗಿದ್ದ ಪೌತಿ ಖಾತೆ ಆಂದೋಲನ
ಹಾಗೂ ವಿವಿಧ ಸೌಲಭ್ಯಗಳ ಆದೇಶ ಪ್ರತಿಗಳ ವಿತರಣಾ
ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾತೆ ಬದಲಾವಣೆಯಲ್ಲಿ ಆಗುತ್ತಿದ್ದ ಸಮಸ್ಯೆಗಳ ಬಗ್ಗೆ ಜನರಿಂದ
ಸಾಕಷ್ಟು ದೂರುಗಳು ಬಂದಿದ್ದವು. ಈ ಕುರಿತು ಸರ್ಕಾರಕ್ಕೆ
ಮನವರಿಕೆ ಮಾಡಿದಾಗ ಸರ್ಕಾರ ಪೌತಿ ಖಾತೆ ಬದಲಾವಣೆಯ
ನಿಯಮಗಳನ್ನು ಸರಳಗೊಳಿಸಿ ಶೀಘ್ರವಾಗಿ ಖಾತೆ ಬದಲಾವಣೆ
ಮಾಡಲು ಇದೀಗ ಅನುವು ಮಾಡಿಕೊಟ್ಟಿದೆ. ಮನೆಮನೆಗೆ ತೆರಳಿ
ಸಮೀಕ್ಷೆ ನಡೆಸಿ, ಪೋತಿ ಖಾತೆ ಬದಲಾವಣೆ ಮಾಡಿಸಲು ಅರ್ಜಿ
ಸ್ವೀಕರಿಸುವಂತೆ ಸೂಚನೆ ನೀಡಿರುವನ್ವಯ ಜಿಲ್ಲೆಯಲ್ಲಿಯೇ
ಪ್ರಥಮವಾಗಿ ಹೊನ್ನಾಳಿ ತಾಲ್ಲೂಕಿನಲ್ಲಿ 1441 ಅರ್ಜಿಗಳನ್ನು
ಸ್ವೀಕರಿಸಲಾಗಿದೆ ಎಂದರು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ
ಮತ್ತು ರೈತಪರ ಯೋಜನೆಗಳನ್ನು ಜಾರಿಗೆ ತಂದಿವೆ. ಜನರ
ಅಹವಾಲುಗಳನ್ನು ಸ್ವೀಕರಿಸಿ ಉತ್ತಮವಾಗಿ ಸ್ಪಂದಿಸುತ್ತಿದ್ದು
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ
ಜಿಲ್ಲೆಯಲ್ಲಿ ಉತ್ತಮ ಕಾರ್ಯಗಳು ಆಗುತ್ತಿವೆ.
ಇದೀಗ ಮನೇ ಬಾಗಿಲಿಗೆ ಆಡಳಿತ ಯಂತ್ರ ಬಂದಿದ್ದು, ಸಾರ್ವಜನಿಕರು
ಇದರ ಸದುಪಯೋಗ ಪಡೆಯಬೇಕು ಎಂದ ಅವರು ಕಳೆದ
ಸಾಲಿನಲ್ಲಿ ಸ್ಥಳದಲ್ಲೇ ಅರ್ಜಿ ಸ್ವೀಕರಿಸುವ ಕಾರ್ಯಕ್ರಮ
ಹಮ್ಮಿಕೊಳ್ಳುವ ಮೂಲಕ ಸುಮಾರು 7 ಸಾವಿರ ವಿವಿಧ
ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಗಿತ್ತು ಎಂದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ಸರ್ವತೋಮುಖ
ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ಹೊನ್ನಾಳಿ ತಾಲ್ಲೂಕಿನಲ್ಲಿ ಮನೆ ಮನೆಗೆ ಶುದ್ದ ಕುಡಿಯುವ ನೀರು
ಒದಗಿಸುವ ಯೋಜನೆಗಾಗಿ ರೂ.76 ಕೋಟಿ ಮಂಜೂರಾಗಿದೆ. ಧೂಳು
ಮುಕ್ತನಗರಕ್ಕಾಗಿ ಉತ್ತಮ ರಸ್ತೆ, ಚರಂಡಿ, ಶಿಕ್ಷಣ ಹೀಗೆ ಎಲ್ಲ
ಕ್ಷೇತ್ರಗಳಲ್ಲಿ ಅಭಿವೃದ್ದಿಗಾಗಿ ಶ್ರಮಿಸಲಾಗುತ್ತಿದೆ ಎಂದರು.
ಪೌತಿ ಖಾತೆ ಬದಲಾವಣೆಗಾಗಿ ಕಸಬಾ ಹೋಬಳಿ, ಗೋವಿನಕೋವಿ,
ಸಾಸ್ವೇಹಳ್ಳಿ ಸೇರಿದಂತೆ ಒಟ್ಟು 1441 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 94ಸಿ
ಅಡಿಯಲ್ಲಿ 51 ಅರ್ಜಿ ಸ್ವೀಕರಿಸಲಾಗಿದೆ. ಮನೆಗಳ ಹಾನಿ ಪರಿಹಾರ
ಮಂಜೂರಾತಿಗೆ ಒಟ್ಟು 221 ಆದೇಶ ಪತ್ರಗಳನ್ನು ಹಾಗೂ
ಸಂಧ್ಯಾಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲ ವೇತನ,
ವೃದ್ದಾಪ್ಯವೇತನ ಮತ್ತು ಮನಸ್ವಿನಿ ಯೋಜನೆಯಡಿ ಒಟ್ಟು 355
ಮಂಜೂರಾತಿ ಆದೇಶ ಪ್ರತಿ ಸೇರಿದಂತೆ ಇಂದು ವಿವಿಧ ಸೌಲಭ್ಯಗಳಡಿ
ಒಟ್ಟು 627 ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ
ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ,
ಹಿಂದೆ ಯಾವಾಗಲೋ ಮನೆ ಯಜಮಾನ ತೀರಿಕೊಂಡು ಮನೆಯ
ಸದಸ್ಯರಿಗೆ ನಿಯಮಾನುಸಾರ ಖಾತೆ ಬದಲಾವಣೆಯಾಗದೇ
ಅನುಭವಿಸುತ್ತಿದ್ದ ನಷ್ಟಗಳು ಮತ್ತು ಸೌಲಭ್ಯಗಳು ಸಿಗದೇ
ವಂಚಿತರಾಗಿದ್ದ ಅನೇಕರಿಗೆ ಪೌತಿ ಖಾತೆ ಆಂದೋಲನದಿಂದ ನಮ್ಮ
ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರದ ಆದೇಶದನ್ವಯ
ಈಗ ಮನೆ ಮನೆಗೆ ತೆರಳಿ ಅರ್ಜಿ ಸ್ವೀಕರಿಸಿ ಖಾತೆ ಬದಲಾವಣೆ
ಮಾಡಿಕೊಡಲಾಗುತ್ತಿದೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ
ಹೊನ್ನಾಳಿಯಲ್ಲಿ ಪೋತಿ ಖಾತೆ ಆಂದೋಲನದಡಿ 1442 ಅರ್ಜಿ
ಸ್ವೀಕರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಖಾತೆ ಇಲ್ಲದ ಕಾರಣ
ಅನೇಕ ರೈತರಿಗೆ ಬೆಳೆವಿಮೆ, ಪ್ರಧಾನಮಂತ್ರಿ ಕೃಷಿ ಸಮ್ಮಾನ್
ಯೋಜನೆ ಸೇರಿದಂತೆ ಅನೇಕ ಸೌಲಭ್ಯಗಳು ಸಿಕ್ಕಿರಲಿಲ್ಲ. ಸ್ಥಳೀಯ
ಶಾಸಕರ ಆಸಕ್ತಿ ಮತ್ತು ಕ್ರಿಯಾಶೀಲತೆಯಿಂದ ಇಂದು ಇಷ್ಟು
ಜನರಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದರು.
ಹೊನ್ನಾಳಿ ಶಾಸಕರು ಹೊನ್ನಾಳಿ-ನ್ಯಾಮತಿ ಭಾಗದಲ್ಲಿ ಆಗಬೇಕಿರುವ
ಕೆಲಸಗಳ ಬಗ್ಗೆ ಪಟ್ಟಿ ತಯಾರಿಸಿ ಮಂತ್ರಿಗಳನ್ನು ಭೇಟಿ ಮಾಡಿ
ಕೆಲಸ ಮಾಡಿಸುತ್ತಿದ್ದು, ಅತ್ಯಂತ ಕ್ರಿಯಾಶೀಲರಾಗಿ ಸೇವೆ
ಸಲ್ಲಿಸುತ್ತಿದ್ದಾರೆ. ತಾಲ್ಲೂಕನ್ನು ಜಿಲ್ಲೆಗೆ ಮಾತ್ರವಲ್ಲ, ಇಡೀ
ರಾಜ್ಯದಲ್ಲೇ ನಂ.1 ತಾಲ್ಲೂಕು ಮಾಡುವ ಗುರಿ ಹೊಂದಿದ್ದಾರೆ.
ತಾಲ್ಲೂಕಿನಲ್ಲಿ ಸಂಪೂರ್ಣ ನೀರಾವರಿ ವ್ಯವಸ್ಥೆ ಮಾಡಲು ಯೋಜನೆ
ಹಾಕಿಕೊಳ್ಳುತ್ತಿದ್ದಾರೆ.
ಜಿ.ಎಂ.ಸಿದ್ದೇಶ್ವರ, ಸಂಸದರು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಅತ್ಯಂತ ಕಡಿಮೆ
ಅವಧಿಯಲ್ಲಿ ಪೌತಿ ಖಾತೆ ಆಂದೋಲನ ಮತ್ತು ಸೌಲಭ್ಯ ವಿತರಣೆ
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಜನರ
ಮನೆ ಬಾಗಿಲಿಗೇ ಸರ್ಕಾರಿ ಸೌಲಭ್ಯ ಒದಗಿಸುವ ಸದುದ್ದೇಶವನ್ನು ಈ
ಕಾರ್ಯಕ್ರಮ ಹೊಂದಿದೆ. ಮಧ್ಯವರ್ತಿಗಳ ಹಾವಳಿ ನಿಲ್ಲಬೇಕು,
ಕಾನೂನಿನ ಅರಿವಿನ ಕೊರತೆ, ಅನುಕೂಲ ಇಲ್ಲದವರಿಗೆ
ಅನುಕೂಲವಾಗುವ ಉದ್ದೇಶದಿಂದ ಈ ಆಂದೋಲನ ಏರ್ಪಡಿಸಿದ್ದು
ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಜನಪ್ರತಿನಿಧಿಗಳು ಸಹ
ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುವಂತಹ ಪೂರಕ
ವಾತಾವರಣ ನಿರ್ಮಿಸಿದ್ದಾರೆ ಎಂದರು.

ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ,
ಪೋತಿ ಖಾತೆ ಬದಲಾವಣೆಯಲ್ಲಿ ಆಗುತ್ತಿದ್ದ ವಿಳಂಬ ಮತ್ತು
ಗೊಂದಲಗಳನ್ನು ನಿವಾರಿಸಿ ಜನರಿಗೆ ಅನುಕೂಲ ಮಾಡಿಕೊಡಲು
ಸರ್ಕಾರ ಪೋತಿ ಖಾತೆ ಆಂದೋಲನಕ್ಕೆ ಆದೇಶಿಸಿದ್ದು, ಕೆಲವು
ನಿಯಮಗಳನ್ನು ಸರಳಗೊಳಿಸಿ ಖಾತೆ ಬದಲಾವಣೆ ಮಾಡಲು
ಅವಕಾಶ ಕಲ್ಪಿಸಲಾಗಿದೆ. ಜನರು ಇದರು ಸದುಪಯೋಗ
ಪಡೆಯಬೇಕೆಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವೇದಿಯಲ್ಲಿದ್ದ ಗಣ್ಯರು ಸರ್ಕಾರದ ವಿವಿಧ
ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ
ಪತ್ರಗಳನ್ನು ವಿತರಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಪಟ್ಟಣ ಪಂಚಾಯ್ತಿ
ಅಧ್ಯಕ್ಷ ಕೆ.ವಿ.ಶ್ರೀಧರ್ ಮಾತನಾಡಿದರು. ಹೊನ್ನಾಳಿ ತಹಶೀಲ್ದಾರ್
ತುಷಾರ ಬಿ.ಹೊಸೂರ ಸ್ವಾಗತಿಸಿದರು. ಉಪ ತಹಶೀಲ್ದಾರ್ ಪರಮೇಶ್
ವಂದಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ವೀರಶೇಖರಪ್ಪ, ತಾಲ್ಲೂಕು
ಪಂಚಾಯ್ತಿ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಉಪಾಧ್ಯಕ್ಷ
ರಂಗನಾಥ್, ಅಧಿಕಾರಿಗಳು, ಫಲಾನುಭವಿಗಳು ಇದ್ದರು.

Leave a Reply

Your email address will not be published. Required fields are marked *