ದಾವಣಗೆರೆ ಡಿ. 03
ಅಂಗವೈಕಲ್ಯ ಕೇವಲ ದೇಹಕ್ಕೇ ಹೊರತು, ಮನಸ್ಸಿಗಲ್ಲ. ಸಾಧಿಸುವ
ಛಲ, ಪರಿಶ್ರಮವಿದ್ದರೆ ವಿಕಲಚೇತನರೂ ಕೂಡ ಸಾಮಾನ್ಯರಂತೆ
ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಸದಸ್ಯ ಕಾರ್ಯದರ್ಶಿ ಸಾಬಪ್ಪ ವಿಶ್ವಾಸದ ನುಡಿಗಳನ್ನಾಡಿದರು.
ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಅಂಧ
ಹೆಣ್ಣುಮಕ್ಕಳ ಸರ್ಕಾರಿ ಪಾಠಶಾಲೆ ಆವರಣದಲ್ಲಿ ಗುರುವಾರ
ಜಿಲ್ಲಾಡಳಿತ, ಜಿ.ಪಂ., ವಿಕಲಚೇತನರ ಮತ್ತು ಹಿರಿಯ ನಾಗರಿಕರ
ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿಕಲಚೇತನರ
ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ
ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾದ ವಿಶ್ವ ವಿಕಲಚೇತನರ
ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ವಿಕಲಚೇತನರು ವಿಶಿಷ್ಟ ಶಕ್ತಿ, ಜ್ಞಾನ ಹಾಗೂ ಸಾಮಥ್ರ್ಯ
ಹೊಂದಿರುತ್ತಾರೆ. ಮಾನಸಿಕವಾಗಿ ಸದೃಢರಾದರೆ ಸಾಧನೆಗೆ
ಅಂಗವಿಕಲತೆ ಎಂದಿಗೂ ಅಡ್ಡಿಯಾಗುವುದಿಲ್ಲ. ಶಕ್ತಿ, ಸಾಮಥ್ರ್ಯ,
ಪ್ರತಿಭೆಯಲ್ಲಿ ಅವರು ಯಾರಿಗೇನು ಕಮ್ಮಿ ಇರುವುದಿಲ್ಲ. ಎಲ್ಲ
ರಂಗದಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸುವ ಶಕ್ತಿ
ಹೊಂದಿದ್ದಾರೆ. ಸಾಧಿಸುವ ಛಲವಿರಬೇಕು. ಜೊತೆಗೆ ಪರಿಶ್ರಮಪಟ್ಟರೆ,
ಸಾಮಾನ್ಯರಂತೆಯೇ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ.
ವಿಕಲಚೇತನರು ಸಮಾಜದಲ್ಲಿ ಗೌರವಯುತವಾಗಿ ಬದುಕಲು
ನಾವೆಲ್ಲರೂ ಸಹಕರಿಸಬೇಕಿದೆ. ವಿಕಲಚೇತನರಿಗಾಗಿ ಸರ್ಕಾರ ಹಲವಾರು
ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಎಲ್ಲ ಯೋಜನೆಗಳನ್ನು
ಸದುಪಯೋಗಪಡಿಸಿಕೊಂಡು ದೈಹಿಕ ಅಂಗವಿಕಲತೆ ಹಾಗೂ
ಮಾನಸಿಕ ಅಂಗವಿಕಲತೆಯನ್ನು ಮೆಟ್ಟಿನಿಂತು, ವಿವಿಧ
ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಾಧನೆ ಮಾಡುವ ಮೂಲಕ
ಸಮಾಜಮುಖಿ ಸೇವೆ ಸಲ್ಲಿಸಲು ವಿಕಲಚೇತನರು ಮುಂದಾಗಬೇಕು
ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪ ಹೇಳಿದರು.

ಸಮಾರಂಭ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ
ಮಾತನಾಡಿ, ವಿಕಲಚೇತನರು ಇಂದು ಪ್ರತಿಯೊಂದು
ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ವಿಕಲಚೇತನರು
ಕೂಡ ಉನ್ನತ ಗುರಿ ಇಟ್ಟುಕೊಂಡು ಸಮಾಜದ ಉನ್ನತಿಗೆ ಶ್ರಮಿಸುವ
ಅಗತ್ಯವಿದೆ. ಸಾಮಾನ್ಯ ಮನುಷ್ಯರು ಕೂಡ ಇವರಿಂದ ಸ್ಪೂರ್ತಿ
ಪಡೆದುಕೊಳ್ಳುವಂತಾಗಿದೆ. ವಿಕಲಾಂಗತೆ ಹೊಂದಿರುವವರು
ಮಾನಸಿಕವಾಗಿ ಸದೃಢವಾಗಬೇಕು ಅಂದಾಗ ಮಾತ್ರ ಅಂಗವಿಕಲತೆ
ಅಡ್ಡಿಯಾಗುವುದಿಲ್ಲ. ಸರ್ಕಾರದ ಪ್ರತಿಯೊಂದು
ಕ್ಷೇತ್ರದಲ್ಲಿಯೂ ವಿಕಲಚೇತನರಿಗಾಗಿ ಅನುದಾನ ಮೀಸಲಿರಿಸಿದ್ದು,
ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯ
ಪಡೆಯುತ್ತಿರುವ ವಿಕಲಚೇತನರು, ಇತರರಿಗೂ ಯೋಜನೆಯ
ಸವಲತ್ತು ತಲುಪುವಂತೆ ಮಾಡಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ
ಅಧಿಕಾರಿಗಳು ವಿಕಲಚೇತನರ ಹಿತಕ್ಕಾಗಿ ಮಾಡುವ ಸೇವೆ ಶ್ರೇಷ್ಠ
ಮಟ್ಟದ್ದಾಗಿದ್ದು, ನಿಜಕ್ಕೂ ಖುಷಿ ನೀಡುತ್ತದೆ. ವಿಕಲಚೇತನರು ಸರ್ಕಾರಿ
ಯೋಜನೆಗಳಿಗಾಗಿ ನೀಡುವ ಅರ್ಜಿಗಳನ್ನು ಕುಂಟು ನೆಪವೊಡ್ಡಿ,
ಅಧಿಕಾರಿಗಳು ತಿರಸ್ಕರಿಸುವುದು ಸಮಂಜಸವಲ್ಲ ಎಂದು ಹೇಳಿದ
ಅಪರ ಜಿಲ್ಲಾಧಿಕಾರಿಗಳು, ತಾವು ತಹಸಿಲ್ದಾರರಾಗಿ ವಿವಿಧೆಡೆ ಸೇವೆ
ನಿರ್ವಹಿಸುವ ಸಂದರ್ಭದಲ್ಲಿ, ವಿಕಲಚೇತನರಿಗೆ ವಿಶೇಷ ಕಾಳಜಿ ನೀಡಿ,
ಅವರಿಗೆ ಸರ್ಕಾರದ ಸೌಲಭ್ಯ ತಲುಪಿಸಿದ ಕಾರ್ಯವನ್ನು ಈ ಸಂದರ್ಭದಲ್ಲಿ
ಸ್ಮರಿಸಿಕೊಂಡರು.
ಸ್ಫೂರ್ತಿ ಸಂಸ್ಥೆಯ ರೂಪ್ಲಾನಾಯ್ಕ ಮಾತನಾಡಿ, ಸಂಸದರು,
ಶಾಸಕರುಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಡಿ
ವಿಕಲಚೇತನರಿಗೆ ಬರೀ ವಾಹನಗಳನ್ನು ವಿತರಿಸುವ ಸಲುವಾಗಿಯೇ
ಬಳಸುತ್ತಿದ್ದಾರೆ. ಅದರ ಜೊತೆಗೆ, ಅವರ ಪುನರ್ವಸತಿಗಾಗಿ,
ಶಿಕ್ಷಣಕ್ಕಾಗಿ ಸೌಲಭ್ಯ ಕಲ್ಪಿಸಲು ಅನುದಾನ ವಿನಿಯೋಗಿಸುವುದು ಸೂಕ್ತ.
ಅವಕಾಶ ಹಾಗೂ ಪ್ರೋತ್ಸಾಹ ದೊರೆತರೆ, ಯಾರಿಗೂ
ಹೊರೆಯಾಗದಂತೆ ವಿಕಲಚೇತನರು ಸ್ವಾವಲಂಬಿ ಬದುಕು
ರೂಪಿಸಿಕೊಳ್ಳಲು ಸಾಧ್ಯ. ಕೇಂದ್ರ ಸರ್ಕಾರದ ಯೋಜನೆಯಡಿ
ವಿಕಲಚೇತನ ವಿದ್ಯಾರ್ಥಿಗಳಿಗೆ 10 ಸಾವಿರದಿಂದ 2.5 ಲಕ್ಷ ರೂ. ವರೆಗೆ
ವಿದ್ಯಾರ್ಥಿವೇತನ ಪಡೆಯಲು ಅವಕಾಶವಿದೆ. ಆದರೆ ಮಾಹಿತಿಯ
ಕೊರತೆಯಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ ಕೇವಲ 4 ರಿಂದ 5
ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ನಾದರೂ,
ಶಿಕ್ಷಣ ಇಲಾಖೆ ಈ ಯೋಜನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಿ
ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ್ ಮಾತನಾಡಿ,
ಜಿಲ್ಲೆಯಲ್ಲಿ ವಿಕಲಚೇತನರಿಗೆ ದೇಶಾದ್ಯಂತ ಏಕ ಮಾದರಿಯ ಯುನಿಕ್
ಐಡಿ ಕಾರ್ಡ್ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಸುಮಾರು 22933
ವಿಕಲಚೇತನರ ಪೈಕಿ ಈವರೆಗೆ 9323 ಜನ ಮಾತ್ರ ಯೂನಿಕ್ ಐಡಿ ಕಾರ್ಡ್
ಪಡೆದಿದ್ದಾರೆ. ಈಗಾಗಲೆ ಇಲಾಖೆಯಿಂದ ಪಡೆದಿರುವ ಭಾವಚಿತ್ರವಿರುವ
ಗುರುತಿನ ಚೀಟಿಯು ಮುಂದಿನ ದಿನಗಳಲ್ಲಿ ತಂತಾನೆ
ರದ್ದಾಗಲಿದ್ದು, ಪ್ರತಿಯೊಬ್ಬರೂ ಯೂನಿಕ್ ಐಡಿ ಕಾರ್ಡ್
ಪಡೆಯುವುದು ಕಡ್ಡಾಯವಾಗಿದೆ. ಬಸ್ ಪಾಸ್‍ಗಾಗಿ ಕಚೇರಿಗೆ ಅರ್ಜಿ
ಸಲ್ಲಿಸುವ ಅಗತ್ಯವಿಲ್ಲ. ಇನ್ನು ಮುಂದೆ ಕೆಎಸ್‍ಆರ್‍ಟಿಸಿ ಗೆ ಆನ್‍ಲೈನ್
ಮೂಲಕ ಅರ್ಜಿ ಸಲ್ಲಿಸಿ, ವಿಕಲಚೇತನರು ಬಸ್ ಪಾಸ್
ಪಡೆದುಕೊಳ್ಳಬೇಕು ಎಂದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ
ಇಲಾಖೆಯ ಅಧಿಕಾರಿ ಕೆ.ಕೆ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ,
ಪ್ರಸಕ್ತ ವರ್ಷ 335 ವಿಕಲಚೇತನರಿಗೆ 14.50 ಲಕ್ಷ ರೂ. ವೆಚ್ಚದಲ್ಲಿ
ಸಾಧನ ಸಲಕರಣೆ ಪೂರೈಕೆಗೆ ಟೆಂಡರ್ ಕರೆಯಲಾಗಿದೆ.
ಪ್ರಸಕ್ತ ವರ್ಷ ವಿಕಲಚೇತನರಿಗೆ ದ್ವಿಚಕ್ರ ವಾಹನಕ್ಕಾಗಿ ಅರ್ಜಿ
ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಡಿ. 21 ಕೊನೆಯ ದಿನಾಂಕವಾಗಿದೆ.
ವಿಕಲಚೇತನ ವ್ಯಕ್ತಿಗಳನ್ನು ಸಾಮಾನ್ಯ ವ್ಯಕ್ತಿ
ಮದುವೆಯಾಗುವಂತೆ ಪ್ರೋತ್ಸಾಹಿಸಲು 50 ಸಾವಿರ ರೂ.
ಪ್ರೊತ್ಸಾಹಧನ ನೀಡುತ್ತಿದ್ದು, ಈವರೆಗೆ 316 ಜನರಿಗೆ
ಪ್ರೋತ್ಸಾಹಧನ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಸಹಾಯಕ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ಈರಯ್ಯ
ಸ್ವಾಮಿ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು
ಉಪಸ್ಥಿತರಿದ್ದರು. ಕೋವಿಡ್ ಸಂದರ್ಭದಲ್ಲಿ ವಿಶಿಷ್ಟ ಸೇವೆ ನೀಡಿದ
ವಿಕಲಚೇತನ ಕೋವಿಡ್ ವಾರಿಯರ್ಸ್‍ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ ವಿಕಲಚೇತನ ವ್ಯಕ್ತಿಗಳನ್ನು ವಿವಾಹವಾದ ಸಾಮಾನ್ಯ ವ್ಯಕ್ತಿಗೆ
ನೀಡಲಾಗುವ 50 ಸಾವಿರ ರೂ. ಪ್ರೋತ್ಸಾಹಧನದ ಠೇವಣಿ
ಬಾಂಡ್‍ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

Leave a Reply

Your email address will not be published. Required fields are marked *