ದಾವಣಗೆರೆ ಡಿ.04
ಜಾತಿ, ಧರ್ಮಗಳನ್ನು ಮೀರಿ ಸಾಮಾಜಿಕ ನ್ಯಾಯ,
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ದಾರ್ಶನಿಕ,
ತತ್ವಜ್ಞಾನಿ ಕನಕದಾಸರು. ಅವರ ಚಿಂತನೆ, ಆದರ್ಶಗಳು
ಇಂದಿಗೂ ಪ್ರಸ್ತುತವಾಗಿವೆ ಎಂದು ದಾವಣಗೆರೆ
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ
ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ
ಕನಕ ಜಯಂತಿ ಕಾರ್ಯಕ್ರಮವನ್ನು ಪ್ರೊ. ಶರಣಪ್ಪ ವಿ.
ಹಲಸೆ ಉದ್ಘಾಟಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಏರ್ಪಡಿಸಿದ್ದ
ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದ ಉದ್ಘಾಟಿಸಿ
ಮಾತನಾಡಿದರು. ಶ್ರೀಮಂತಿಕೆಯ ಸುಪ್ಪತ್ತಿನಲ್ಲಿ ಬೆಳೆದು,
ಐಷಾರಾಮಿ ಜೀವನ ಮಾಡಬಹುದಾಗಿದ್ದ ಕನಕದಾಸರು ಲೌಕಿಕ
ಸುಖಕ್ಕಿಂತ ಪಾರಮಾರ್ಥಿಕ ಸುಖವನ್ನು ಅರಸಿದರು.
ಭಗವಂತನ ಸನ್ನಿಧಾನದಲ್ಲಿ ಶಾಶ್ವತ ನೆಲೆ
ಕಂಡುಕೊಂಡರು. ಅವರ ತ್ಯಾಗ, ಅಚಲ ಭಕ್ತಿ, ದೇವನ
ಆರಾಧನೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡು
ಅಜರಾಮರರಾದರು ಎಂದರು.
ಕನಕದಾಸರು ತಮ್ಮನ್ನು ದಾಸರ ದಾಸ ಎನ್ನುವ ಮೂಲಕ
ಸಮರ್ಪಣಾ ಭಾವವನ್ನು ತೋರಿದ್ದಾರೆ. ಆ ಹಂತವನ್ನು
ತಲುಪುವುದು ಸುಲಭವಲ್ಲ. ಅವರ ಭಕ್ತಿ,
ಸೇವಾಕಾಂಕ್ಷೆಗಳು ಅವರನ್ನು ಉನ್ನತಿಗೆ ಏರಿಸಿದವು. ಅಲ್ಲದೆ
ತಾವೇ ಪದಗಳನ್ನು ರಚಿಸಿ, ಹಾಡಿ ತಮಗೆ ಅರಿವಿಲ್ಲದೆಯೇ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇಯಾದ ಕೊಡುಗೆ
ನೀಡಿದ್ದಾರೆ. ಅವರ ಕಾವ್ಯಗಳು ವಾಸ್ತವಕ್ಕೆ ಹಿಡಿದ ಕನ್ನಡಿ ಎಂದು
ತಿಳಿಸಿದರು.
ಕÀನಕದಾಸರ ಸಾಹಿತ್ಯ ಅನುಭವದಿಂದ ಕೂಡಿದೆ. ಅವುಗಳೆಲ್ಲ
ಭಕ್ತಿ, ಸಮಾಜ ಚಿಂತನೆಗಳನ್ನು ಒಳಗೊಂಡಿವೆ.
ಲೋಕವನ್ನು ಆಡುಭಾಷೆಯಲ್ಲಿಯೇ ಹೇಳಿ ತಿದ್ದುವ
ಪ್ರಯತ್ನ ಮಾಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಹೇಗೆ
ಬದುಕಬೇಕು, ರಾಜ ಸರ್ಕಾರವನ್ನು ಹೇಗೆ ನಡೆಸಬೇಕು
ಎಂಬುದನ್ನು ತಿಳಿಸಿಕೊಟ್ಟ ದಾರ್ಶನಿಕ. ದ್ವೇಷವನ್ನು ಪ್ರೀತಿಯಿಂದ
ಗೆದ್ದು ಸಮಾನತೆಯ ಸಮಾಜ ಕಟ್ಟಲು ನೆರವಾದ
ಮಾರ್ಗದರ್ಶಿ ಎಂದು ನುಡಿದರು.
ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ದೇವರು
ಭಕ್ತನಿಗೆ ದರ್ಶನ ನೀಡದಿದ್ದಾಗ, ನಿಷ್ಕಲ್ಮಷ ಭಕ್ತಿ, ಅಚಲ
ಸಂಕಲ್ಪ ಇದ್ದಾಗ ಭಕ್ತನ ಬಳಿಗೆ ದೇವರು ಬರುತ್ತಾನೆ
ಎಂಬುದನ್ನು ತೋರಿಸಿಕೊಟ್ಟ ಮಹಾನ್ ದಾರ್ಶನಿಕ ಕನಕದಾಸರು.
ಅವರು ವಿಚಾರಗಳು ಕಟುವೆನಿಸಿದರು ಸತ್ಯದ ಮಾರ್ಗಕ್ಕೆ
ಹತ್ತಿರವಾಗಿವೆ ಎಂದು ಹೇಳಿದರು. ಕನ್ನಡ ಅಧ್ಯಯನ
ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಚ್. ವಿಶ್ವನಾಥ ಪ್ರಾಸ್ತಾವಿಕವಾಗಿ
ಮಾತನಾಡಿ, ಕನಕದಾಸರು ಬದುಕುವ ಶೈಲಿಯನ್ನು
ಕಲಿಸುವ ಜೊತೆಗೆ ಅನಿಷ್ಠ, ಅನಾಚಾರಗಳನ್ನು ಬಂಡೆದ್ದು
ಪ್ರತಿಭಟಿಸಿದ ಛಲಗಾರ. ಜಾತ್ಯತೀತ ಮನೋಭಾವವನ್ನು
ಎಲ್ಲರಿಗೂ ಅರಿವು ಮೂಡಿಸುವ ಮೂಲಕ ಮಾದರಿಯಾಗಿದ್ದಾರೆ
ಎಂದು ಅಭಿಪ್ರಾಯಪಟ್ಟರು.
ಕಲಾ ನಿಕಾಯದ ಡೀನ್ ಪ್ರೊ.ಕೆ.ಬಿ.ರಂಗಪ್ಪ, ಉಪಕುಲಸಚಿವ
ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ
ಅಭಿವೃದ್ಧಿ ವಿಭಾಗದ ಸಂಯೋಜನಾಧಿಕಾರಿ ಕುಮಾರ
ಸಿದ್ಧಮಲ್ಲಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.