ದಾವಣಗೆರೆ ಡಿ.08
ಹೊಸ ಶಿಕ್ಷಣ ನೀತಿ ಕೇವಲ ಔದ್ಯೋಗಿಕ ಶಿಕ್ಷಣ ನೀಡುವುದಿಲ್ಲ.
ಬದಲಾಗಿ ಸಂಸ್ಕಾರ ಮತ್ತು ಸೌಜನ್ಯದ ಶಿಕ್ಷಣವನ್ನು ನೀಡುವ
ಗುರಿಯನ್ನೂ ಹೊಂದಲಾಗಿದೆ ಎಂದು ಸಾಮರಸ್ಯ ವೇದಿಕೆಯ
ಅಖಿಲ ಭಾರತೀಯ ಸಂಯೋಜಕರಾದ ಶ್ಯಾಮ್ ಪ್ರಸಾದ್
ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆ
ಪ್ರಾದೇಶಿಕ ಕೇಂದ್ರ ಹಾಗೂ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು
ಸುಧಾರಣಾ ಸಮಿತಿ ಸಹಯೋಗದೊಂದಿಗೆ ಕೆಎಸ್‍ಓಯು
ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಹೊಸ
ಶೈಕ್ಷಣಿಕ ನೀತಿ ಮತ್ತು ಸಾಮರಸ್ಯದ ಸಾಧ್ಯತೆಗಳು ಎಂಬ
ವಿಷಯದ ಕುರಿತಾದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣದ ಜೊತೆ
ಜೊತೆಯಲ್ಲಿಯೇ ಔದ್ಯೋಗಿಕ ಕಲಿಕೆಯನ್ನು ಕೂಡ
ಒಳಗೊಳ್ಳುವುದರ ಮುಖಾಂತರ ಭಾರತೀಯತೆಯ ಶಿಕ್ಷಣ
ನೀಡಲು ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ ಎಂದರು.
ಇದು ಸಮಾಜದಲ್ಲಿ ಜಾತಿಮುಕ್ತ ವ್ಯವಸ್ಥೆಗಾಗಿ
ಸಾಮರಸ್ಯವನ್ನು ಪ್ರಸರಿಸುವ ಯೋಜನೆಯನ್ನು ಹೊಂದಿದ್ದು,
ನಾವೆಲ್ಲರೂ ಈ ನಿಟ್ಟಿನಲ್ಲಿ ಯೋಚಿಸುವಂತಾಗಬೇಕು ಎಂದು ಕರೆ
ನೀಡಿದರು.
ಕೆಎಸ್‍ಓಯು ಪ್ರಾದೇಶಿಕ ನಿರ್ದೇಶಕ ಹಾಗೂ ಹೊಸ ಶಿಕ್ಷಣ
ನೀತಿಯ ರಾಯಭಾರಿ ಸುಧಾಕರ ಹೊಸಳ್ಳಿ ಮಾತನಾಡಿ, ಹೊಸ ಶಿಕ್ಷಣ
ನೀತಿಯ ಅನುಷ್ಟಾನ ಕೇವಲ ಸರ್ಕಾರದ ಜವಾಬ್ದಾರಿಯಲ್ಲ.
ಪ್ರಜೆಗಳು, ಸಂಘಸಂಸ್ಥೆಗಳು, ಕುಟುಂಬಗಳು ಈ ದಿಸೆಯಲ್ಲಿ
ಆಲೋಚಿಸುವಂತೆ ಆಗಬೇಕು.
ಹೊಸ ಶಿಕ್ಷಣ ನಮ್ಮನ್ನು ಸೇರಿದಂತೆ ಯುವಕರ ಮೇಲೆ
ಘನೀಭೂತವಾದ ಪ್ರಭಾವ ಬೀರುವಂತೆ ಜಾಗರೂಕತೆ
ವಹಿಸಬೇಕೆಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಂಐಟಿ ಆಡಳಿತ
ಅಧಿಕಾರಿ ರುದ್ರಯ್ಯ ವಹಿಸಿದ್ದರು. ಅಜಿತ್ ಓಸ್ವಾಲ್, ಗುರು
ಬಸವರಾಜ್, ಸೋಮೇಶ್ವರ ಶಿಕ್ಷಣ ಸಂಸ್ಥೆಯ ವೀಣಾ, ಪ್ರಭಾವತಿ
ಹಾಗೂ ಹಲವು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು
ಶಿಕ್ಷಕರು ಪಾಲ್ಗೊಂಡಿದ್ದರು.