ದಾವಣಗೆರೆ ಡಿ.11
2020 ರ ಜನವರಿ 17 ರಿಂದ 20 ರವರೆಗೆ ನಡೆಯುವ
ಸಾರ್ವತ್ರಿಕ ಪಲ್ಸ್ ಪೊಲೀಯೊ ಕಾರ್ಯಕ್ರಮವನ್ನು
ಜಿಲ್ಲೆಯಲ್ಲಿ ಈ ಹಿಂದಿನಂತೆ ಯಶಸ್ವಿಯಾಗಿ ನಡೆಸಿದಂತೆ ಈ
ಬಾರಿಯೂ ಯಾವ ಅರ್ಹ ಮಗವೂ ಲಸಿಕಾ ವಂಚಿತವಾಗದಂತೆ
ಕಾರ್ಯ ನಿರ್ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ
ಏರ್ಪಡಿಸಲಾಗಿದ್ದ ಸಾರ್ವತ್ರಿಕ ಪಲ್ಸ್ ಪೋಲಿಯೊ ಲಿಸಿಕಾ
ಅಭಿಯಾನದ ಕುರಿತಾದ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಹಲವಾರು ಹಂತಗಳಲ್ಲಿ ಪಲ್ಸ್ ಪೋಲಿಯೊ ಲಸಿಕಾ
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು, ಈಗಲೂ ಸಹ
ವೈದ್ಯರು, ಸಿಬ್ಬಂದಿಗಳು, ಆಶಾ, ಅಂಗನವಾಡಿ
ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು
ಎಂದ ಅವರು ಬೆಸ್ಕಾಂ ವತಿಯಿಂದ ಲಸಿಕಾ ಕಾರ್ಯಕ್ರಮದ
ಪೂರ್ವದಲ್ಲಿ ಮೂರು ದಿನಗಳ ಮುಂಚಿತವಾಗಿ ಹಾಗೂ ಲಸಿಕೆ
ನೀಡುವ ದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು
ನೀಡಿಬೇಕೆಂದರು.
ವಿಶ್ವ ಆರೋಗ್ಯ ಸಂಸ್ಥೆಯ ಎಸ್‍ಎಂಓ ಡಾ.ಶ್ರೀಧರ್ ಮಾತನಾಡಿ,
ಸಾರ್ವತ್ರಿಕ ಪಲ್ಸ್ ಪೋಲಿಯೊ ಕಾರ್ಯಕ್ರಮ ಜ.17 ರಿಂದ 20
ರವರೆಗೆ ನಡೆಯಲಿದ್ದು, ನಮ್ಮ ದೇಶದಲ್ಲಿ ಕಳೆದ 10
ವರ್ಷಗಳಿಂದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ.
ಈಗಾಗಲೇ ಪೋಲಿಯೊವನ್ನು ನಿರ್ಮೂಲನೆ ಮಾಡಿದ್ದೇವೆ.
ಕರ್ನಾಟಕ ರಾಜ್ಯದಲ್ಲಿಯೂ 2007 ರಿಂದ ಯಾವುದೇ ಪ್ರಕರಣ
ವರದಿಯಾಗಿಲ್ಲ. ಆದರೆ ನಮ್ಮ ನೆರೆ ರಾಷ್ಟ್ರಗಳಾದ ಪಾಕಿಸ್ತಾನ
ಮತ್ತು ಆಫ್ಘಾನಿಸ್ತಾನಗಳಲ್ಲಿ ಕ್ರಮವಾಗಿ 72 ಮತ್ತು 56
ಪ್ರಕರಣಗಳು ಇದ್ದು, ಇವುಗಳು ನಮ್ಮ ನೆರೆಯ
ರಾಷ್ಟ್ರಗಳಾಗಿರುವುದರಿಂದ ನಾವುಗಳು
ಎಚ್ಚರದಿಂದರಬೇಕಿದೆ. ಹಾಗೂ ಆಫ್ರಿಕಾ ದೇಶದಲ್ಲಿ ಟೈಪ್ -2

ಪೋಲಿಯೊ ಪತ್ತೆಯಾಗಿದೆ. ಹಾಗಾಗಿ ನಾವು ಇನ್ನಷ್ಟು ದಿನ
ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ ಜ.17
ರಂದು ಪೋಲಿಯೊ ಬೂತ್‍ಗಳಲ್ಲಿ 0 ಯಿಂದ 5 ವರ್ಷದ
ಮಕ್ಕಳಲ್ಲಿ ಲಸಿಕೆ ಹಾಕಲಾಗುವುದು. ಹಾಗೂ ಜ.18 ರಿಂದ 20
ರವರೆಗೆ ಮನೆ-ಮನೆಗೆ ಭೇಟಿ ಮಾಡಿ ಬೂತ್‍ನಲ್ಲಿ ಬಿಟ್ಟು ಹೋದ
ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುವುದು. ಒಟ್ಟಾರೆ 0
ಯಿಂದ 5 ವರ್ಷದ ಯಾವುದೇ ಮಗು ಪೋಲಿಯೊ ಹನಿಯಿಂದ
ವಂಚಿತವಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಈಲ್ಲೆಯಲ್ಲಿ 0 ಯಿಂದ 5 ವರ್ಷದ ಮಕ್ಕಳ ಸಂಖ್ಯೆ ಗ್ರಾಮೀಣ
ಭಾಗದಲ್ಲಿ 100784, ನಗರ ಪ್ರದೇಶದಲ್ಲಿ 66,487 ಸೇರಿದಂತೆ
ಒಟ್ಟು 167771 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ
ಹೊಂದಲಾಗಿದೆ. ಇದರಲ್ಲಿ 52 ಹೈರಿಸ್ಕ್ ಪ್ರದೇಶಗಳಿದ್ದು ಅದರಲ್ಲಿ
6256 ಮಕ್ಕಳನ್ನು ಗುರುತಿಸಲಾಗಿದೆ. ಇದಕ್ಕಾಗಿ 1129 ಸ್ಥಿರ
ಬೂತ್‍ಗಳು, 50 ಟ್ರಾನ್ಸಿಸ್ಟ್ ಬೂತ್‍ಗಳು, 41 ಮೊಬೈಲ್ ಬೂತ್‍ಗಳು
ಹಾಗೂ 1855 ಲಸಿಕಾ ಕಾರ್ಯಕರ್ತರು, 221
ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಹಾಗೂ ಕೋವಿಡ್ 19
ನಿಮಿತ್ತ ಪ್ರತಿ ಬೂತ್‍ಗಳಲ್ಲಿ ಗರಿಷ್ಟ 200 ಮಕ್ಕಳಿಗೆ ಲಸಿಕೆ
ಹಾಕುವಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದರು.
ಸಭೆಯಲ್ಲಿ ಎಸಿ ಮಮತಾ ಹೊಸಗೌಡರ್, ನಗರಾಭಿವೃದ್ದಿ
ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ.ನಾಗರಾಜ್,
ಡಿಎಸ್‍ಓ ಡಾ.ರಾಘವನ್, ಡಾ.ಗಂಗಾಧರ್, ಡಾ.ನಟರಾಜ್, ಜಿಲ್ಲಾ
ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಎಸ್‍ಎಸ್‍ಐಎಂಎಸ್
ಕಮ್ಯುನಿಟಿ ಮೆಡಿಸಿನ್ ಮುಖ್ಯಸ್ಥೆ ಡಾ.ಗೀತಾಲಕ್ಷ್ಮಿ, ಬೆಸ್ಕಾಂ, ಜಿ.ಪಂ
ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *