ಕ್ರಿಸ್‍ಮಸ್ ಹಾಗೂ ಹೊಸ ವರ್ಷ
ಸಂಭ್ರಮಾಚರಣೆಗೆ ಮಾರ್ಗಸೂಚಿ
ದಾವಣಗೆರೆ ಡಿ.19
ಕೇಂದ್ರೀಯ ಗೃಹ ಮಂತ್ರಾಲಯದ ಆದೇಶದಂತೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ
ನಿರ್ದೇಶನದನ್ವಯ ಕೋವಿಡ್-19 ನಿಗಾವಣೆ, ನಿಯಂತ್ರಣ
ಮತ್ತು ಜಾಗ್ರತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು
ಹೊರಡಿಸಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿರುತ್ತದೆ.
ಈ ಆದೇಶವು ಡಿ.31 ರವರೆಗೆ ಜಾರಿಯಲ್ಲಿರುತ್ತಚೆ.
ಕೋವಿಡ್-19 ಸೋಂಕು ಹರಡುವಿಕೆಯನ್ನು
ನಿಯಂತ್ರಿಸುವ ಸಂಬಂಧದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು
ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ
ಕಂಡುಬಂದು ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ
ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್‍ಮಸ್ ಹಬ್ಬ ಹಾಗೂ ಹೊಸ
ವರ್ಷದ ಸಂಭ್ರಮಾಚರಣೆಯನ್ನು ಸರಳವಾಗಿ,
ಭಕ್ತಿಪೂರ್ವಕವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸುವ
ಅವಶ್ಯಕತೆ ಇದೆ.
ಈ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಾಮಾಜಿಕ ಅಂತರವಿಲ್ಲದೇ
ಹೆಚ್ಚಿನ ಜನರು ಸೇರುವ ಸಾಮೂಹಿಕ ಕೂಟ(ಪಾರ್ಟಿ)ಗಳನ್ನು
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚು
ಜನಸಂಖ್ಯೆಯುಳ್ಳ ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ
ಸೇರತಕ್ಕಂತ ಸ್ಥಳಗಳಲ್ಲಿ ಆಯೋಜಿಸುವುದನ್ನು
ನಿಷೇಧಿಸಲಾಗಿದೆ. ಅಲ್ಲದೇ ಆಚರಣೆಯಲ್ಲಿ ಹಸಿರು
ಪಟಾಕಿಗಳನ್ನು ಮಾತ್ರ ಹಚ್ಚಲು ಹೊರಡಿಸಿರುವ ಸರ್ಕಾರದ
ಆದೇಶ ದಿನಾಂಕ ನ.6 ಮತ್ತು 13 ರಲ್ಲಿನ
ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರ
ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾ
ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷನಾಗಿ ಈ ಕೆಳಗೆ ಸಹಿ
ಮಾಡಿರುವ ನಾನು ಈ ಕೆಳಕಂಡಂತೆ ಸರ್ಕಾರದ
ಮಾರ್ಗಸೂಚಿಗಳನ್ನು ಹೊರಡಿಸಿರುತ್ತೇನೆ. ಈ
ಮಾರ್ಗಸೂಚಿಗಳು ದಿ: 20-12-2020 ರಿಂದ 02-01-2020 ರವರೆಗೆ
ಚಾಲ್ತಿಯಲ್ಲಿರುತ್ತವೆ.
ಈ ಮಾರ್ಗಸೂಚಿಗಳನ್ನು ಮತ್ತು ಕೋವಿಡ್-19 ರ ನಿಗಾವಣೆ,
ನಿಯಂತ್ರಣ ಮತ್ತು ಜಾಗ್ರತೆ ಕ್ರಮಗಳನ್ನು
ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂಬುದನ್ನು
ಖಚಿತಪಡಿಸಿಕೊಳ್ಳುವುದು ಸಂಬಂಧಿಸಿದ ಜಿಲ್ಲಾ ಮಟ್ಟದ,
ತಾಲ್ಲೂಕು ಮಟ್ಟದ ಪ್ರಾಧಿಕಾರಿಗಳು ಹಾಗೂ ಪೊಲೀಸರ
ಜವಾಬ್ದಾರಿಯಾಗಿರುತ್ತದೆ ಮತ್ತು ಮಾರ್ಗಸೂಚಿಗಳನ್ನು
ಮಹಾನಗರಪಾಲಿಕೆ/ನಗರಸಭೆ/ಪುರಸಭೆ ಹಾಗೂ
ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲಾ ಇಲಾಖಾ
ಮುಖ್ಯಸ್ಥರು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕೆಂದು
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ
ಜಿಲ್ಲಾಧಿಕಾರಿಗಳಾದ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಮಾರ್ಗಸೂಚಿಗಳು : ಕ್ರೈಸ್ತ ಧರ್ಮದ ಚರ್ಚ್‍ಗಳಲ್ಲಿ
ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ
ಅಂತರವನ್ನು ಕಾಯ್ದುಕೊಳ್ಳಲು
ಮೇಲ್ವಿಚಾರಕರು/ಆಯೋಜಕರು ಕಟ್ಟುನಿಟ್ಟಿನ ಕ್ರಮ
ವಹಿಸತಕ್ಕದ್ದು.
ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋವಿಡ್-19
ಸಾಂಕ್ರಾಮಿಕ ಸೋಂಕು ತಡೆಗಟ್ಟಲು ಸಾರ್ವಜನಿಕ ಹಸ್ತಲಾಘವ
ಮತ್ತು ಆಲಿಂಗನವನ್ನು ನಿಷೇಧಿಸಿದೆ. ದಿನಾಂಕ 30-12-2020 ರಿಂದ
02-01-2021 ರವರೆಗೆ ಕ್ಲಬ್/ಪಬ್/ರೆಸ್ಟೋರೆಂಟ್ ಹಾಗೂ ಅದೇ
ತೆರನಾದ ಸ್ಥಳ/ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೇ
ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ,
ವಿಶೇಷ ಡಿ.ಜೆ.ಡಾನ್ಸ್ ಕಾರ್ಯಕ್ರಮಗಳನ್ನು, ವಿಶೇಷ ಪಾರ್ಟಿ,
ಇತ್ಯಾದಿ ನಿಷೇಧಿಸಿದೆ. ಆದರೆ ಕ್ಲಬ್/ಪಬ್/ರೆಸ್ಟೋರೆಂಟ್‍ಗಳನ್ನು
ಪ್ರತಿನಿತ್ಯದಂತೆ ತೆರೆದಿದ್ದು, ನಡೆಸಲು ನಿರ್ಬಂಧವಿಲ್ಲ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ
ಸ್ಥಳಗಳಲ್ಲಿ ಮುಖ್ಯ ರಸ್ತೆಗಳಲ್ಲಿ ಮತ್ತು ಸಾಮಾಜಿಕ
ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರ
ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು
ನಿಷೇಧಿಸಿದೆ. ಆದರೆ ಈ ಸ್ಥಳಗಳಲ್ಲಿ ಪ್ರತಿನಿತ್ಯದ ಸಾಮಾನ್ಯ
ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧವಿಲ್ಲ.
ಆಯ್ದ ರಸ್ತೆ ಸ್ಥಳಗಳಿಗೆ ಸಂಬಂಧಿಸಿದಂತೆ ಸ್ಥಳೀಯ
ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹೆಚ್ಚಿನ
ನಿರ್ಬಂಧಗಳನ್ನು ವಿಧಿಸಬಹುದು. ಸರ್ಕಾರದ ಆದೇಶ
ದಿನಾಂಕ : 27.11.2020 ರಲ್ಲಿನ ಮಾರ್ಗಸೂಚಿಗಳನ್ನು
ಕಡ್ಡಾಯವಾಗಿ ಪಾಲಿಸತಕ್ಕದ್ದು. ಅದರಂತೆ ಬಹುಮುಖ್ಯವಾಗಿ 65
ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ
ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ
ಅಂತರವನ್ನು ಕಾಯ್ದುಕೊಳ್ಳುವುದು ಮತ್ತು
ಹೋಟೆಲ್‍ಗಳು/ಮಾಲ್‍ಗಳು/ಪಬ್/ರೆಸ್ಟೋರೆಂಟ್‍ಗಳು
ಹಾಗೂ ಅಂತಹ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ
ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಇರಿಸತಕ್ಕದ್ದು.
ಹೋಟೆಲ್‍ಗಳು/ಮಾಲ್‍ಗಳು/ಪಬ್/ರೆಸ್ಟೋರೆಂಟ್‍ಗಳು
ಹಾಗೂ ಅಂತಹ ಸ್ಥಳ/ಪ್ರದೇಶಗಳಲ್ಲಿ ಅದರ ಮಾಲೀಕರು
ಕಡ್ಡಾಯವಾಗಿ ಸರ್ಕಾರದ ಆದೇಶದಂತೆ ಕೋವಿಡ್-19 ರ
ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರದಿಂದ ಜನರು ಸೇರಲು
ಜಾಗೃತೆ ವಹಿಸುವುದು. ಅಗತ್ಯವಿದ್ದಲ್ಲಿ, ಜನರನ್ನು
ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್‍ಲೈನ್
ಮುಖಾಂತರ/ಟೋಕನ್ ಪದ್ದತಿಯಲ್ಲಿ ಸ್ಥಳ ಕಾಯ್ದಿರಿಸಲು
ವ್ಯವಸ್ಥೆಯನ್ನು ಕಲ್ಪಿಸುವುದು.
ಪ್ರಾಂಗಣಗಳಲ್ಲಿ, ಉಪಹಾರ ಸ್ಥಳಗಳಲ್ಲಿ ವ್ಯವಸ್ಥಿತ ಕಟ್ಟಡ
ಸಮುಚ್ಚಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ
ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ
ಕಲ್ಪಿಸತಕ್ಕದ್ದು. ಸರ್ಕಾರದ ಮಾರ್ಗಸೂಚಿಯಂತೆ
ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ
ಹಚ್ಚತಕ್ಕದ್ದು. ಕೋವಿಡ್-19 ಸಾಂಕ್ರಾಮಿಕ ಸೋಂಕು
ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ
ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರವು ಹೊರಿಸಿದ
ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು
ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ ಸಾರ್ವಜನಿಕರ
ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ,
ಮಹಾನಗರಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ,
ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ
ಇಲಾಖೆ/ಕಾರ್ಪೋರೇಷನ್/ಪ್ರಾಧಿಕಾರಗಳಿಂದ ಹೊರಡಿಸಲಾದ
ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ
ಪಾಲಿಸತಕ್ಕದ್ದು.
ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ
ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ದ
ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ
ಸಂಹಿತೆ ಸೆಕ್ಷನ್ 188 ರಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ
ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು
ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು
ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.