ದಾವಣಗೆರೆ ಡಿ.19
ಕೋವಿಡ್-19ರ ಕಾರಣಕ್ಕಾಗಿ ಪರೀಕ್ಷೆಗೆ ಹಾಜರಾಗಲು
ಸಾಧ್ಯವಾಗದಿದ್ದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾಗಿದ್ದ
ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ
ದಾವಣಗೆರೆ ವಿಶ್ವವಿದ್ಯಾನಿಲಯವು 2021 ರ ಜನವರಿ 6 ರಿಂದ ವಿಶೇಷ
ಪೂರಕ ಪರೀಕೆಯನ್ನು ಏರ್ಪಡಿಸಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯಕ್ಕೆ
ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಶೇಷ ಪರೀಕ್ಷೆ
ನಡೆಸುತ್ತಿರುವ ರಾಜ್ಯದ ಏಕೈಕ ವಿಶ್ವವಿದ್ಯಾನಿಲಯ ಇದಾಗಿದೆ.
ಪ್ರಸ್ತುತ ವಿಶ್ವವಿದ್ಯಾನಿಲಯದ ಯೋಜನೆಯಿಂದ ಒಟ್ಟು 15,251
ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಲ್ಲಿ ಸ್ನಾತಕ
ಪದವಿಯ 15,155 ಮತ್ತು ಸ್ನಾತಕೋತ್ತರ ಪದವಿಯ 96
ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಅಥವಾ ಇನ್ನಿತರ
ಅನಿವಾರ್ಯ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ
ಹಾಜರಾಗಲು ಸಾಧ್ಯವಾಗಿರಲಿಲ್ಲ. ಸಾಂಕ್ರಾಮಿಕ ರೋಗದ
ಕಾರಣಕ್ಕಾಗಿ ಅವರ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆ ಆಗಬಾರದು
ಎಂಬುದು ವಿಶ್ವವಿದ್ಯಾನಿಲಯದ ಆಶಯ. ಪರೀಕ್ಷೆಗೆ ಹಾಜರಾಗದ
ವಿದ್ಯಾರ್ಥಿಗಳ ಜೊತೆಗೆ ಕಳೆದ ಸೆಪ್ಟೆಂಬರ್ ಮತ್ತು
ಅಕ್ಟೋಬರ್‍ನಲ್ಲಿ ನಡೆದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ
ವಿದ್ಯಾರ್ಥಿಗಳಿಗೂ ಒಂದು ಬಾರಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ಪರೀಕ್ಷೆಗೆ ದಂಡ ಸಹಿತ ಅರ್ಜಿ ಸಲ್ಲಿಸಲು ಡಿಸೆಂಬರ್ 16ರಿಂದ
21ರವರೆಗೆ ಅವಕಾಶ ನೀಡಲಾಗಿದೆ ಎಂದು ವಿಶ್ವವಿದ್ಯಾನಿಲಯದ
ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ತಿಳಿಸಿದ್ದಾರೆ.
ಪ್ರಸ್ತುತ ವಿಶೇಷ ಪೂರಕ ಪರೀಕ್ಷೆಯಿಂದ
ವಿಶ್ವವಿದ್ಯಾನಿಲಯದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ.
ಆದರೂ ವಿದ್ಯಾರ್ಥಿಗಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು
ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ವಿದ್ಯಾರ್ಥಿಗಳಿಂದಲೂ
ಉತ್ತಮ ಸ್ಪಂದನೆ ದೊರೆತಿದೆ ಎಂದೂ ಹೇಳಿದರು.
ಈಗಾಗಲೇ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ
ಮಾಡಿಕೊಳ್ಳಲಾಗಿದೆ. ಪರೀಕ್ಷೆಗಳು 2021ರ ಜನವರಿ 6ರಿಂದ

ನಡೆಯಲಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಪರೀಕ್ಷಾ
ಮೌಲ್ಯಮಾಪನ ಪೂರ್ಣಗೊಳಿಸಿದ ಒಂದು ಗಂಟೆಯಲ್ಲಿಯೇ
ಫಲಿತಾಂಶ ಪ್ರಕಟಿಸುವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ತಾಂತ್ರಿಕ ಕಾರಣಗಳಿದ್ದರೆ ಪರಿಹರಿಸಿ ಒಂದೇ ದಿನದಲ್ಲಿ ಫಲಿತಾಂಶ
ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.
ವಿಶೇಷ ಪೂರಕ ಪರೀಕ್ಷೆಗೆ ಈಗಾಗಲೇ ಸಿಂಡಿಕೇಟ್ ಮತ್ತು
ಅಕಾಡೆಮಿಕ್ ಕೌನ್ಸಿಲ್‍ನಲ್ಲಿ ಅನುಮೋದನೆ ಸಿಕ್ಕಿದೆ. ಸರ್ಕಾರದಿಂದಲೂ
ಮೌಖಿಕ ಸಹಕಾರ ಸಿಕ್ಕಿದೆ. ವಿದ್ಯಾರ್ಥಿಗಳ ಹಿತ, ಅವರ ಶೈಕ್ಷಣಿಕ
ಉನ್ನತಿಗೆ ಸಹಕಾರಿ ಆಗುವ ವಿಶ್ವಾಸವಿದೆ.
ದೇಶದ ಮೊದಲ ವಿಶ್ವವಿದ್ಯಾನಿಲಯ..
ಕೋವಿಡ್-19ರ ಕಾರಣಕ್ಕಾಗಿ ವಿದ್ಯಾರ್ಥಿಗಳ ಒಂದು ವರ್ಷದ
ಶೈಕ್ಷಣಿಕ ಭವಿಷ್ಯ ಹಾಳಾಗುವುದನ್ನು ಊಹಿಸಲು
ಕಷ್ಟವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಹಿತ ಕಾಪಾಡಿ
ಉತ್ತಮ ಭವಿಷ್ಯ ರೂಪಿಸಬೇಕು ಎಂಬ ಏಕೈಕ ಉದ್ದೇಶದಿಂದ
ವಿಶೇಷ ಪೂರಕ ಪರೀಕ್ಷೆ ನಡೆಸಲು ವಿಶ್ವವಿದ್ಯಾನಿಲಯ
ನಿರ್ಧರಿಸಿದೆ. ಇದೊಂದು ಕ್ಲಿಷ್ಟಕರ ಮತ್ತು ಶ್ರಮದ ಕೆಲಸ.
ಸಾಕಷ್ಟು ಸಮಸ್ಯೆಗಳಿದ್ದರೂ ಪರೀಕ್ಷೆ ನಡೆಸಲು ಆದ್ಯತೆ
ನೀಡಲಾಗಿದೆ. ಈ ರೀತಿ ಪರೀಕ್ಷೆ ನಡೆಯುತ್ತಿರುವ ದೇಶದ
ಮೊದಲ ವಿಶ್ವವಿದ್ಯಾನಿಲಯ ನಮ್ಮದಾಗಿದೆ. ಕೋವಿಡ್ ಕಾರಣಕ್ಕಾಗಿ
ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳ ಜೊತೆಗೆ
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ
ನೀಡಲಾಗಿದೆ. ನಮ್ಮ ನಿರ್ಧಾರಕ್ಕೆ ದೇಶದ ವಿವಿಧ
ವಿಶ್ವವಿದ್ಯಾಲಯಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಆ ಮೂಲಕ
ದಾವಣಗೆರೆ ವಿಶ್ವವಿದ್ಯಾನಿಲಯ ವಿದ್ಯಾರ್ಥಿಪರ, ಶೈಕ್ಷಣಿಕಪರ,
ಸಮುದಾಯಪರ ಎಂಬುದನ್ನು ತನ್ನ ಕೆಲಸದ ಮೂಲಕ
ಮತ್ತೊಮ್ಮೆ ಸಾಬೀತುಪಡಿಸಿದೆ.

  • ಪ್ರೊ. ಶರಣಪ್ಪ ವಿ. ಹಲಸೆ, ಕುಲಪತಿ,
    ದಾವಣಗೆರೆ ವಿಶ್ವವಿದ್ಯಾನಿಲಯ

Leave a Reply

Your email address will not be published. Required fields are marked *