ದಾವಣಗೆರೆ ಡಿ. 23
ದಾವಣಗೆರೆ ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಜಗಳೂರು ತಾಲ್ಲೂಕು ದೊಣ್ಣೆಹಳ್ಳಿ ಕ್ಷೇತ್ರದ ಜಿ.ಪಂ. ಸದಸ್ಯೆ ಕೆ.ವಿ. ಶಾಂತಕುಮಾರಿ ಅವರು ಆಯ್ಕೆಯಾದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದ ದೀಪಾ ಜಗದೀಶ್ ಅವರ ರಾಜೀನಾಮೆಯಿಂದ ಕಳೆದ ಡಿ. 08 ರಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರದಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಜರುಗಿತು.
ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಿರಿಸಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಕಾಲಮಿತಿಯಲ್ಲಿ ಕೆ.ವಿ. ಶಾಂತಕುಮಾರಿ ಅವರು ಮಾತ್ರ ಎರಡು ನಾಮಪತ್ರವನ್ನು ಸಲ್ಲಿಸಿದರು. ಮಧ್ಯಾಹ್ನ 3-00 ಗಂಟೆಗೆ ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಅವರು ನಾಮಪತ್ರ ಪರಿಶೀಲಿಸಿ, ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಪ್ರಕಟಿಸಿದರು. ಒಬ್ಬರೇ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಕೆ.ವಿ. ಶಾಂತಕುಮಾರಿ ಅವರು ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನವೀನ್‍ರಾಜ್ ಸಿಂಗ್ ಅವರು ಘೋಷಿಸಿದರು. ಜಿಲ್ಲಾ ಪಂಚಾಯತಿಯ ಒಟ್ಟು 29 ಸದಸ್ಯರ ಪೈಕಿ, ಸಂತೆಬೆನ್ನೂರು ಕ್ಷೇತ್ರದ ಜಿ.ಪಂ. ಸದಸ್ಯ ಪಿ. ವಾಗೀಶ್ ಅವರು ಕಳೆದ ನ. 05 ರಂದು ಮರಣ ಹೊಂದಿದ್ದರಿಂದ ಜಿ.ಪಂ. ಸದಸ್ಯರ ಸಂಖ್ಯಾಬಲ 28 ಕ್ಕೆ ಇಳಿದಿದೆ. ಚುನಾವಣೆ ಸಂದರ್ಭದಲ್ಲಿ ಒಟ್ಟು 28 ಜಿ.ಪಂ. ಸದಸ್ಯರುಗಳ ಪೈಕಿ 19 ಸದಸ್ಯರು ಹಾಜರಿದ್ದರು. ಎಂ.ಆರ್. ಮಹೇಶ್, ಅರ್ಚನಾ ಬಸವರಾಜ, ಬಸವರಾಜ ಕೆ.ಎಸ್., ಜಿ.ಸಿ. ನಿಂಗಪ್ಪ ಹದಡಿ, ರೇಣುಕ ಕರಿಬಸಪ್ಪ, ಕೆ.ಹೆಚ್. ಓಬಳಪ್ಪ, ಬಿ. ಫಕೀರಪ್ಪ, ತೇಜಸ್ವಿ ವಿ. ಪಾಟೀಲ್, ಎಂ. ಯೋಗೇಶ ಸೇರಿದಂತೆ ಜಿಲ್ಲಾ ಪಂಚಾಯತಿಯ ಒಟ್ಟು 09 ಸದಸ್ಯರು ಗೈರುಹಾಜರಾಗಿದ್ದರು.
ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರ ಅಧಿಕಾರ ಅವಧಿಯು 2020 ರ ಡಿಸೆಂಬರ್ 23 ರಿಂದ 2021 ರ ಮೇ. 02 ರವರೆಗೆ ಸೀಮಿತವಾಗಿರುತ್ತದೆ ಎಂದು ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಅವರು ಘೋಷಿಸಿದರು, ಅಲ್ಲದೆ ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.