ದಾವಣಗೆರೆ ಡಿ. 29
ಕೋವಿಡ್-19 ಸಾಂಕಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿಯ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡಿ. 30 ರಿಂದ ಜ. 02 ರವರೆಗೆ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ಡಿಜೆ, ಡ್ಯಾನ್ಸ್ ಕಾರ್ಯಕ್ರಮಗಳು, ವಿಶೇಷ ಪಾರ್ಟಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹೊಸ ವರ್ಷಾಚರಣೆ ಸಂಬಂಧ ಸರ್ಕಾರ ಕಳೆದ ಡಿ. 17 ರಂದು ಮಾರ್ಗಸೂಚಿ ಹೊರಡಿಸಿದ್ದು, ಅದರನ್ವಯ ಕೋವಿಡ್-19 ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನ ನಿಷೇಧಿಸಿದೆ. ಡಿ. 30 ರಿಂದ ಜ. 02 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಸ್ಥಳ, ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ಡಿಜೆ, ಡ್ಯಾನ್ಸ್ ಕಾರ್ಯಕ್ರಮಗಳು, ವಿಶೇಷ ಪಾರ್ಟಿಗಳನ್ನು ನಿಷೇಧಿಸಿದೆ. ಆದರೆ, ಕ್ಲಬ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಪ್ರತಿನಿತ್ಯದ ಚಟುವಟಿಕೆಗಳಂತೆ ತೆರೆದು, ನಡೆಸಲು ನಿರ್ಬಂಧ ವಿಧಿಸಿಲ್ಲ. ಹೊಸ ವರ್ಷಾಚರಣೆ ಸಂಬಂಧ ಸಾರ್ವಜನಿಕ ರಸ್ತೆ, ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆ ಹಾಗೂ ಸಂಭ್ರಮಾಚರಣೆ ನಿಷೇಧಿಸಿದೆ, ಆದರೆ ಈ ಸ್ಥಳಗಳಲ್ಲಿ ಪ್ರತಿನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆ ಕೈಗೊಳ್ಳಲು ನಿರ್ಬಂಧವಿಲ್ಲ. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯರು ಮನೆಯಲ್ಲಿಯೇ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್‍ಗಳು ಹಾಗೂ ಅಂತಹ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು. ಸಾಮಾಜಿಕ ಅಂತರದಿಂದ ಜನರು ಸೇರಲು ಜಾಗೃತಿ ವಹಿಸಬೇಕು, ಅಗತ್ಯವಿದ್ದಲ್ಲಿ ಜನರನ್ನು ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್‍ಲೈನ್ ಮೂಲಕ ಅಥವಾ ಟೋಕನ್ ಪದ್ಧತಿಯಲ್ಲಿ ಸ್ಥಳ ಕಾಯ್ದಿರಿಸಲು ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮಾತನಾಡಿ, ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಉಪಹಾರ ಸ್ಥಳಗಳಲ್ಲಿ, ವ್ಯವಸ್ಥಿತ ಕಟ್ಟಡ ಸಮುಚ್ಛಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಯಂತೆ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲು ಅವಕಾಶವಿದೆ. ಹೊಸ ವರ್ಷಾಚರಣೆ ಸಂಬಂಧ ಜಿಲ್ಲೆಯಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯರಸ್ತೆ, ಸಾರ್ವಜನಿಕ ಸ್ಥಳಗಳು, ವಸತಿ ಸಮುಚ್ಛಯ, ಅಪಾರ್ಟ್‍ಮೆಂಟ್‍ಗಳಲ್ಲಿ ಸಂಭ್ರಮಾಚರಣೆಗೆ ಅವಕಾಶವಿಲ್ಲ. ರಾತ್ರಿ 12.30 ರವರೆಗೆ ಜನರು ತಮ್ಮ ತಮ್ಮ ಮನೆ ತಲುಪಲು ಅವಕಾಶ ನೀಡಲಾಗುವುದು. 12.45 ರ ಬಳಿಕ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ತೀವ್ರ ತಪಾಸಣೆ ನಡೆಸಲು ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿ ಪಾಲನೆ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *