ದಾವಣಗೆರೆ ಡಿ.30
ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ದಾವಣಗೆರೆ, ಹೊನ್ನಾಳಿ
ಮತ್ತು ಜಗಳೂರು ತಾಲ್ಲೂಕು ವ್ಯಾಪ್ತಿಯ 88
ಗ್ರಾ.ಪಂಗಳು ಹಾಗೂ ಎರಡನೇ ಹಂತದಲ್ಲಿ ಹರಿಹರ, ಚನ್ನಗಿರಿ
ಮತ್ತು ನ್ಯಾಮತಿ ತಾಲ್ಲೂಕು ವ್ಯಾಪ್ತಿಯ 101 ಗ್ರಾ.ಪಂ ಗಳಿಗೆ
ನಡೆದ ಚುನಾವಣಾ ಮತದಾನದ ಮತ ಎಣಿಕೆ ಕಾರ್ಯವು
ಬುಧವಾರ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಿತು.
ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆ
ಕಾರ್ಯವನ್ನು ವೀಕ್ಷಿಸಲು ಅಭ್ಯರ್ಥಿಗಳು ಹಾಗೂ ಅವರ
ಬೆಂಬಲಿಗರು ಮತ ಎಣಿಕೆ ಕೇಂದ್ರಗಳ ಮುಂದೆ
ಜಮಾಯಿಸಿದ್ದರು. ಪ್ರತಿ ಸುತ್ತಿನಲ್ಲಿ ವಿಜೇತ ಅಭ್ಯರ್ಥಿಗಳನ್ನು
ಘೋಷಿಸಿದಾಗ ಅವರ ಬೆಂಬಲಿಗರು ಜೋರಾದ ಶಿಳ್ಳೆ, ಚಪ್ಪಾಳೆ
ತಟ್ಟುವ ಮೂಲಕ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಮತ ಎಣಿಕೆಗೂ ಮುನ್ನ ಅಭ್ಯರ್ಥಿಗಳ ಸಮ್ಮುಖದಲ್ಲಿ
ಸಂಬಂಧಿಸಿದ ಅಧಿಕಾರಿಗಳು ಸ್ಟ್ರಾಂಗ್‍ರೂಂನ್ನು
ನಿಯಮಾನುಸಾರ ತೆರೆದು, ಮತ ಎಣಿಕೆಗೆ ಚಾಲನೆ
ನೀಡಲಾಯಿತು. ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮತ
ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಸಿಬ್ಬಂದಿಗಳು, ಅಭ್ಯರ್ಥಿಗಳು
ಮತ್ತು ಏಜೆಂಟರನ್ನು ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್
ಮಾಡಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ದಾವಣಗೆರೆ ಮತ್ತು
ಹರಿಹರದ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ
ನಡೆಸಿ, ಸೂಕ್ತ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ
ನೀಡಿದರು.
ಮತ ಎಣಿಕೆ ಕೇಂದ್ರ ವಿವರ : ದಾವಣಗೆರೆ ತಾಲ್ಲೂಕಿನಲ್ಲಿ ಮೋತಿ
ವೀರಪ್ಪ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು,
ದಾವಣಗೆರೆ. ಜಗಳೂರು ತಾಲ್ಲೂಕಿನಲ್ಲಿ ಸರ್ಕಾರಿ ಜ್ಯೂನಿಯರ್
ಕಾಲೇಜ್, ಜಗಳೂರು. ಹೊನ್ನಾಳಿ ತಾಲ್ಲೂಕಿನಲ್ಲಿ ಶ್ರೀಮತಿ
ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ
ಕೇಂದ್ರ ಹಿರೇಕಲ್ಮಠ, ಹೊನ್ನಾಳಿ. ನ್ಯಾಮತಿ ತಾಲ್ಲೂಕಿನಲ್ಲಿ
ಕರ್ನಾಟಕ ಪಬ್ಲಿಕ್ ಸ್ಕೂಲ್, ಶಿವಾನಂದಪ್ಪ ಬಡಾವಣೆ ರಸ್ತೆ,
ನ್ಯಾಮತಿ. ಹರಿಹರ ತಾಲ್ಲೂಕಿನಲ್ಲಿ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆ,
ಹರಪನಹಳ್ಳಿ ರಸ್ತೆ, ಹರಿಹರ ತಾಲ್ಲೂಕು. ಚನ್ನಗಿರಿ ತಾಲ್ಲೂಕಿನ
ಸರ್ಕಾರಿ ಪದವಿಪೂರ್ವ ಕಾಲೇಜು, ಚನ್ನಗಿರಿ ಇಲ್ಲಿ ಸ್ಥಾಪಿಸಲಾಗಿದ್ದ
ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ
ನಡೆಯಿತು.
ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ 200 ಮೀಟರ್
ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ಸೆಕ್ಷನ್ ರನ್ವಯ ನಿಷೇಧಾಜ್ಞೆ
ಜಾರಿ ಮಾಡಲಾಗಿತ್ತು. ಪೊಲೀಸ್ ಇಲಾಖೆ ವತಿಯಿಂದ ಮತ ಎಣಿಕಾ
ಕೇಂದ್ರಗಳ ಸುತ್ತಮುತ್ತ ಸೂಕ್ತ ಬಂದೋಬಸ್ತ್ ವ್ಯವಸ್ಥೆ
ಮಾಡಲಾಗಿತ್ತು.