ದಯಾಮರಣಕ್ಕೆ ಅರ್ಜಿ ಸಲ್ಲಿಸಿ ಸಾವಿಗೆ ಸಿದ್ದರಾಗಿರುವ ನೌಕರರ ರಕ್ಷಣೆಗಾಗಿ ಆಹೋರಾತ್ರಿ ಅಮರಣಾಂತ ಉಪವಾಸ.
, ರಾಜ್ಯದ ಅನುಧಾನಿತ ವಿದ್ಯಾಸಂಸ್ಥೆಗಳಲ್ಲಿ ದಿನಾಂಕ:01-04-2006 ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಹಾಗೂ ಮೊದಲೇ ನೇಮಕಗೊಂಡು ನಂತರ ಅನುದಾನಕ್ಕೊಳಪಟ್ಟು ವೇತನ ಪಡೆಯುತ್ತ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಯಾವುದೇ ವಿಧದ ಪಿಂಚಣಿ ಸೌಲಭ್ಯ ಇರುವುದಿಲ್ಲ. (ಎನ್.ಪಿ.ಎಸ್ ಅಥವಾ ಓ.ಪಿ.ಎಸ್) ಎರಡೂ ಇರುವುದಿಲ್ಲ. ಪಿಂಚಣಿ ಸೌಲಭ್ಯ ದೊರೆಯದೆ ಈಗಾಗಲೇ ಸುಮಾರು 2000ಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ.
ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣಹೊಂದಿದ್ದಾರೆ, ಇವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆತಿಲ್ಲ.
ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು, ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನೀಡಿದ್ದರೂ ಸಹ ಸರ್ಕಾರ ಮಾತ್ರ ಬೇಡಿಕೆ ಈಡೇರಿಸುತ್ತಿಲ್ಲ.
ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದೆ, ಕೇವಲ ಕರ್ನಾಟಕದಲ್ಲಿ ಮಾತ್ರ ಈ ತಾರತಮ್ಯ ಇರುವುದು ಮತ್ತೊಂದು ದುರಂತ.
ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಅನುಧಾನಿತ ಸಂಸ್ಥೆಗಳ ನೌಕರರಿಗೆ ಪಿಂಚಣಿ ನೀಡುತ್ತಿವೆ.
ದಿನಾಂಕ:01-04-2006ಕ್ಕೂ ಮೊದಲು ವೇತನಾನುದಾನಕ್ಕೆ ಒಳಪಟ್ಟ ನೌಕರರಿಗೆ ಈಗಲೂ ನಮ್ಮ ಸರಕಾರವೇ ಪಿಂಚಣಿ ನೀಡುತ್ತಿದೆ.
ಕರ್ನಾಟಕ ಸರಕಾರದ 6 ನೇ ವೇತನ ಆಯೋಗವು ಪಿಂಚಣಿ ಸೌಲಭ್ಯ ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಇತ್ತೀಚೆಗೆ ಸ್ವಾಯತ್ತ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರಿಗೆ ಪಿಂಚಣಿ ಜಾರಿಗೊಳಿಸಿ ಸರಕಾರದ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಾಗಿದೆ.
ಪಿಂಚಣಿ ವಂಚಿತರಾಗಿ ನಿವೃತ್ತಿ ಆಗಿರುವ ನೌಕರರಿಗೆ ವಯೋಸಹಜ ಕಾಯಿಲೆಗಳು ಬಾಧಿಸುತ್ತಿವೆ. ಇವರಿಗೆ ಉದ್ಯೋಗವೂ ಇಲ್ಲ, ನಿವೃತ್ತಿ ವೇತನವೂ ಇಲ್ಲ ಮತ್ತು ಕೊರೋನಾ ಎಂಬ ಮಹಾ ಮಾರಿ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
ಸರ್ಕಾರದ ಈ ಅನ್ಯಾಯವನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಅನೇಕ ಹೋರಾಟಗಳನ್ನು ಮಾಡಿ ಗಮನ ಸೆಳೆಯಲಾಗಿದೆ. ಡಿಸೆಂಬರ್ 4 ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡುವ ಮೂಲಕ ಅಂತಿಮ ಗಡುವು ನೀಡಿದ್ದೇವೆ.
ಆದರೂ ನಮ್ಮ ಬೇಡಿಕೆ ಈಡೇರಿಲ್ಲ, ಹಾಗಾಗಿ ಸಂಘದ ತೀರ್ಮಾನದಂತೆ, ರಾಜ್ಯದ ಎಲ್ಲ ಜಿಲ್ಲೆಗಳ ಪಿಂಚಣಿ ವಂಚಿತ ನೌಕರರು, ದಿನಾಂಕ:04-01-2021 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ “ಪಿಂಚಣಿಗಾಗಿ ಆಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ” ನಡೆಸುತ್ತೇವೆ..
ಸರಕಾರ ನಮ್ಮ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಂಡರೂ ನಾವು ಈ ಅಂತಿಮ ಹೋರಾಟ ನಡೆಸುತ್ತೇವೆ.