ಸಚಿವರ ಸೂಚನೆ
ದಾವಣಗೆರೆ ಜ.06
ಗ್ರಾಮೀಣ ಭಾಗದ ಬಡವರ ಕುಡಿಯುವ ನೀರಿಗೆ
ಅನ್ಯಾಯವಾಗದಂತೆ ಕಾಮಗಾರಿಗಳನ್ನು ನಿಗದಿತ
ಸಮಯದೊಳಗೆ ಪೂರ್ಣಗೊಳಿಸಬೇಕು. ಹಾಗೂ ಕಾಮಗಾರಿ
ಪ್ರಗತಿ ಕುರಿತು ಸಮರ್ಪಕವಾದ ವರದಿ ನೀಡಬೇಕೆಂದು
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ
ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಜಿ.ಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು.
2020-21 ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ
ನೀರು ಸರಬರಾಜು ಯೋಜನೆಯ ಮುಂದುವರೆದ
ಕಾಮಗಾರಿಗಳ ಪ್ರಗತಿ ವರದಿ ಪರಿಶೀಲನೆ ವೇಳೆ ಸಚಿವರು,
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ
12 ಕಾಮಗಾರಿಗಳಿಗೆ ಬಜೆಟ್‍ನಲ್ಲಿ ಹೆಚ್ಚುವರಿ ಅನುದಾನ
ಕೇಳಲಾಗಿದೆ. ಈ ಕಾಮಗಾರಿಗಳಿಗೆ ರೂ.11.17 ಕೋಟಿ
ನಿಗದಿಪಡಿಸಲಾಗಿದೆ. ಈ ಪೈಕಿ 9 ಕಾಮಗಾರಿಗಳನ್ನು
ಪೂರ್ಣಗೊಳಿಸಲಾಗಿದೆ. ಆದರೆ ಕೇವಲ 2.26 ಕೋಟಿ ವೆಚ್ಚ
ಮಾಡಲಾಗಿದೆ ಎಂದು ವರದಿ ನೀಡಿದ್ದೀರಿ. ಸಂಬಂಧಿಸಿದ ಕಂಟ್ರಾಕ್ಟರ್
ಕೆಲಸ ಮಾಡಿಯೂ ಬಿಲ್ ಪಾವತಿಗೆ ಸಲ್ಲಿಸಿಲ್ಲವೇ? ಅಥವಾ ಕೆಲಸವೇ
ಆಗಿಲ್ಲವೇ ಎಂದು ಪ್ರಶ್ನಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ
ಕಾರ್ಯಪಾಲಕ ಅಭಿಯಂತರ ನಾಗಪ್ಪ ಗ್ರಾಮೀಣ
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮುಂದುವರೆದ
ಕಾಮಗಾರಿಗಳ ಪ್ರಗತಿ ವಿವರ ನೀಡಿ, ಜಿಲ್ಲೆಯಲ್ಲಿ ವಿವಿಧ
ಯೋಜನೆಯಡಿ 726 ಕಾಮಗಾರಿಗಳಿಗೆ 72.94 ಕೋಟಿ ಅನುದಾನ
ಕೇಳಿದ್ದು, ಈವರೆಗೆ 604 ಕಾಮಗಾರಿಗಳು ಪೂರ್ಣಗೊಂಡಿವೆ.
ರೂ.23.77 ಕೋಟಿ ವೆಚ್ಚ ಮಾಡಲಾಗಿದೆ. 119 ಕಾಮಗಾರಿ
ಪ್ರಗತಿಯಲ್ಲಿವೆ ಎಂದರು. ಹಲವು ಕಾಮಗಾರಿಗಳ ಭೌತಿಕ
ಪ್ರಗತಿ ಆಗಿದ್ದು ಆರ್ಥಿಕ ಪ್ರಗತಿ ಆಗಬೇಕಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ, ಇತರೆ ಇಲಾಖೆಗಳಲ್ಲಿ ಅನುದಾನದ
ಕೊರತೆ ಇರುತ್ತದೆ. ನಮ್ಮ ಇಲಾಖೆಯಲ್ಲಿ ಅನುದಾನದ
ಕೊರತೆ ಇಲ್ಲ. ಭೌತಿಕವಾಗಿ ಕೆಲಸವಾಗಿಯೂ ಕಂಟ್ರಾಕ್ಟರ್ ಬಿಲ್
ನೀಡಿಲ್ಲವೆಂದರೆ ಹೇಗೆ. ಜಿ.ಪಂ ಸಿಇಓ ಕಂಟ್ರಾಕ್ಟರ್‍ನ್ನು ಕರೆಯಿಸಿ
ವಿಚಾರಣೆ ಮಾಡುವಂತೆ ಹಾಗೂ ಮಾರ್ಚ್ ಒಳಗೆ ನಿಗದಿತ ಗುರಿ
ಸಾಧಿಸುವಂತೆ ಸೂಚನೆ ನೀಡಿದ ಅವರು, ಗ್ರಾಮೀಣ ಕುಡಿಯುವ
ನೀರು, ಶುದ್ದ ಕುಡಿಯುವ ನೀರಿನ ಘಟಕಗಳಿಗೆ
ಸಂಬಂಧಿಸಿದಂತೆ ಶೀಘ್ರದಲ್ಲೇ ಜಂಟಿ ಸಮಿತಿ ಪರಿವೀಕ್ಷಣೆಗೆ
ಬರಲಿದ್ದು, ಈ ರೀತಿ ಲೋಪದೋಷಗಳು ಆಗ ಕಂಡು ಬಂದರೆ
ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ. ಆದ್ದರಿಂದ
ಜಾಗ್ರತೆಯಿಂದ ಕೆಲಸ ಮಾಡಬೇಕು. ಹಾಗೂ ಸಮರ್ಪಕವಾದ,
ವಾಸ್ತವಿಕ ವರದಿಯನ್ನು ನೀಡಬೇಕೆಂದು ಎಚ್ಚರಿಕೆ ನೀಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕಳೆದ 10
ವರ್ಷಗಳಿಂದ ಸಂತೆಮುದ್ದಾಪುರ ಬಹುಗ್ರಾಮ ಕುಡಿಯುವ
ನೀರಿನ ಯೋಜನೆ ನೆನೆಗುದಿಗೆ ಬಿದ್ದಿದ್ದು ಇದೀಗ 175
ಹಳ್ಳಿಗಳನ್ನು ಒಳಗೊಳ್ಳುವ ಯೋಜನೆ ತಯಾರಾಗಿದೆ.
ಆದಷ್ಟು ಬೇಗ ಈ ಯೋಜನೆಗೆ ಅನುಮೋದನೆ ನೀಡುವಂತೆ
ಕೋರಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮಾತನಾಡಿ,
ಸಂತೆಮುದ್ದಾಪುರ ಯೋಜನೆಯು
2 – 3 ಬಾರಿ ಪರಿಷ್ಕøತವಾಗಿ ಇದೀಗ ರೂ. 275 ಕೋಟಿ ವೆಚ್ಚದಲ್ಲಿ 175
ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಸಿದ್ದವಾಗಿದ್ದು ಈ ಬಗ್ಗೆ
ಮುಖ್ಯ ಅಭಿಯಂತರರ ಬಳಿ ಚರ್ಚೆ ನಡೆಸಲಾಗುವುದು
ಎಂದರು.
ಜಿಲ್ಲೆಯಲ್ಲಿ 793 ಶುದ್ದ ಕುಡಿಯುವ ನೀರಿನ ಘಟಕಗಳ
ಪೈಕಿ 774 ಸುಸ್ಥಿತಿಯಲ್ಲಿದ್ದು ಕೆಲಸ ನಿರ್ವಹಿಸುತ್ತಿವೆ. 17 ಕೆಲಸ
ಮಾಡುತ್ತಿಲ್ಲವೆಂದು ವರದಿ ನೀಡಿದ್ದೀರಿ. ಆದರೆ ಸದನಗಳಲ್ಲಿ ಈ
ಘಟಕಗಳ ಬಗ್ಗೆಯೇ ಹೆಚ್ಚಿನ ದೂರು ಇದೆ. ಆದ್ದರಿಂದಲೇ
ಇವುಗಳನ್ನು ಪರಿವೀಕ್ಷಿಸಿ ಕ್ರಮ ಕೈಗೊಳ್ಳಲು
ಶೀಘ್ರದಲ್ಲೇ ಜಂಟಿ ಸದನ ಸಮತಿ ರಚನೆಯಾಗಿ
ಪರಿವೀಕ್ಷಣೆಗೆ ಆಗಮಿಸಲಿದೆ. ಆ ವೇಳೆಯಲ್ಲಿ ಇವು ಸುಸ್ಥಿತಿಯಲ್ಲಿ
ಇರದೇ ಇರುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ದ
ಕ್ರಮ ಕೈಗೊಳ್ಳಲಿದೆ. ಆದ ಕಾರಣ ಸಿಇಓ ಇನ್ನೊಮ್ಮೆ
ಇವುಗಳನ್ನು ಪರೀಕ್ಷಿಸಿ ನೈಜ ವರದಿ ನೀಡಬೇಕೆಂದು ಸೂಚನೆ
ನೀಡಿದರು.
ಜಗಳೂರು ಕ್ಷೇತ್ರದ ಶಾಸಕರಾದ ಎಸ್.ವಿ.ರಾಮಚಂದ್ರ
ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿಯೂ ಅನೇಕ ಕಡೆ
ಶುದ್ದ ಕುಡಿಯುವ ನೀರಿನ ಘಟಕಗಳು ಕೆಲಸ
ಮಾಡುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಭಿಯಂತರರು ಕ್ರಮ
ಕೈಗೊಳ್ಳಬೇಕೆಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ
ಕಾರ್ಯಪಾಲಕ ಅಭಿಯಂತರ ನಾಗಪ್ಪ ಮಾತನಾಡಿ, ಜಿಲ್ಲೆಯಲ್ಲಿ
ಬಹುಗ್ರಾಮ ಯೋಜನೆಯಡಿ ಒಟ್ಟು 28 ಕಾಮಗಾರಿ
ಪೂರ್ಣಗೊಂಡಿದ್ದು, 3 ಪ್ರಗತಿಯಲ್ಲಿವೆ. 1 ಹೊಸದಾಗಿ
ಪ್ರಸ್ತಾಪಿಸಲಾಗಿದೆ ಎಂದರು. ಈ ಪೈಕಿ ಕೊಂಡಜ್ಜಿ ಬಿಟ್ಟು ಉಳಿದೆಲ್ಲೆಡೆ
ಕಾರ್ಯ ನಿರ್ವಹಿಸುತ್ತಿವೆ. ಪ್ರಗತಿಯಲ್ಲಿರುವ ಆನಗೋಡು
ಮತ್ತು ಇತರೆ 18 ಗ್ರಾಮ ಹಿರೇಕೋಗಲೂರು ಮತ್ತು
ಇತರೆ 22 ಗ್ರಾಮ, ಹೊಟ್ಯಾಪುರ ಮತ್ತು ಇತರೆ 11
ಗ್ರಾಮಗಳಲ್ಲಿ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಕ್ಕೆ ಗುರಿ
ಇದೆ ಎಂದರು.
ಸಚಿವರು, ವಿಳಂಬವಾಗಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.
ಮಾರ್ಚ್ ಅಂತ್ಯದೊಳಗೆ ಕಾಮಗಾರಿ
ಪೂರ್ಣಗೊಳ್ಳಬೇಕೆಂದರು.
ಜಲ ಜೀವನ ಮಿಷನ್ : ಸರ್ಕಾರದ ಪ್ರಧಾನ ಕಾರ್ಯದರ್ಶಿ
ಎಲ್.ಕೆ.ಅತೀಕ್ ಮಾತನಾಡಿ, ಜಲಜೀವನ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ
ಒಟ್ಟು 714 ಗ್ರಾಮಗಳ ಪೈಕಿ 370 ಗ್ರಾಮಗಳ ಮನೆಗಳಿಗೆ
ಕುಡಿಯುವ ನೀರಿನ್ನು ನೀಡುವ ಯೋಜನೆ ಹಾಕಿಕೊಂಡಿದ್ದು 220
ಗ್ರಾಮಗಳಿಗೆ ಡಿಪಿಆರ್ ತಯಾರಿಸಲಾಗಿದೆ. 181 ಕಾಮಗಾರಿಗಳಿಗೆ
ಟೆಂಡರ್ ಕರೆಯಲಾಗಿದೆ, ಕೆಲವೆಡೆ ಟೆಂಡರ್‍ದಾರರು ಮುಂದೆ
ಬರದ ಕಾರಣ, ಮರು ಟೆಂಡರ್ ಕರೆಯಲಾಗಿದ್ದು, 6 ಕಡೆ
ಕೆಲಸ ಆರಂಭಿಸಲಾಗಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ ಸಿಇಓ ಅವರು ಜಿಲ್ಲೆಯಲ್ಲಿನ ಉತ್ತಮ
ಕಂಟ್ರಾಕ್ಟುದಾರರನ್ನು ಕರೆಯಿಸಿ ಯೋಜನೆ ಬಗ್ಗೆ ವಿವರಿಸಿ ತಿಳಿಸಿ
ಹೇಳಬೇಕೆಂದರು.
ಸ್ವಂತ ಕಟ್ಟಡ ಹೊಂದಲು ಸಚಿವರ ಸೂಚನೆ :
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ
ನಿರ್ದೇಶಕ ವಿಜಯಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 1723
ಅಂಗನವಾಡಿ ಕೇಂದ್ರಗಳಿದ್ದು ನಗರದಲ್ಲಿ 344 ಮತ್ತು
ಗ್ರಾಮೀಣ ಭಾಗದಲ್ಲಿ 1379 ಕೇಂದ್ರಗಳಿವೆ ಈ ಪೈಕಿ ನಗರದಲ್ಲಿ
53 ಮತ್ತು ಗ್ರಾಮೀಣ ಭಾಗದಲ್ಲಿ 253 ಕೇಂದ್ರಗಳು ಬಾಡಿಗೆ
ಕಟ್ಟಡದಲ್ಲಿ ನಡೆಯುತ್ತಿವೆ. ಪ್ರಸಕ್ತ ಸಾಲಿನಲ್ಲಿ 250 ಸ್ವಂತ
ಕಟ್ಟಡಗಳಿಗೆ ತಲಾ ರೂ.50 ಸಾವಿರ ವೆಚ್ಚದಲ್ಲಿ ರಿಪೇರಿ ಕೆಲಸಕ್ಕೆ
ಪಿಆರ್‍ಇಡಿಗೆ ಆದೇಶಿಸಲಾಗಿದೆ ಎಂದರು.
ಸಚಿವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ
ಅಂಗನವಾಡಿಗಳನ್ನು ಸ್ವಂತ ಕಟ್ಟಡದಲ್ಲಿ ನಡೆಸಬೇಕು. ಈ
ಬಗ್ಗೆ ಶಾಸಕರು ಮತ್ತು ಎಂಪಿ ಯವರು ತಮ್ಮ
ಅನುದಾನದಲ್ಲಿ ಅಥವಾ ಇನ್ನಿತರೆ ಅನುದಾನದಲ್ಲಿ ಸ್ವಂತ ಕಟ್ಟಡ
ಹೊಂದುವ ಬಗ್ಗೆ ಕ್ರಮ ವಹಿಸಬೇಕು. ನರೇಗಾ ಹಾಗೂ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ತಲಾ ರೂ.5
ಲಕ್ಷ ಮ್ಯಾಚಿಂಗ್ ಗ್ರಾಂಟ್‍ನಲ್ಲಿ ಕಟ್ಟಡ ನಿರ್ಮಿಸುವಂತೆ
ಹೇಳಿದರು.
ಹಾಗೂ 250 ಅಂಗನವಾಡಿ ಕೇಂದ್ರಗಳ ರಿಪೇರಿ ಕೆಲಸಕ್ಕೆ ಪಿಆರ್‍ಇಡಿ
ಯವರು ಜನವರಿ ಬಂದರೂ ಎಸ್ಟಿಮೇಟ್ ಸಿದ್ದಪಡಿಸಿಲ್ಲ.
ಯಾಕಿಷ್ಟು ವಿಳಂಬ ಮಾಡಿದ್ದೀರಾ? ಇನ್ನು ಒಂದು ತಿಂಗಳ
ಒಳಗೆ ಈ 250 ಅಂಗನವಾಡಿ ಕೇಂದ್ರಗಳ ರಿಪೇರಿ ಮಾಡಬೇಕು
ಎಂದು ಗಡುವು ನೀಡಿದರು.
ಹಾಗೂ ಶಾಲಾ ಮಕ್ಕಳಿಗೆ ನಲ್ಲಿಯಲ್ಲಿ ಕುಡಿಯುವ ನೀರಿನ
ವ್ಯವಸ್ಥೆ ಮಾಡಲು ಕಾರ್ಯಪಾಲಕ ಅಭಿಯಂತರರ ಜೊತೆ
ಡಿಡಿಪಿಐ ರವರು ಕೂಡ ಸಹಕರಿಸಬೇಕು ಎಂದರು.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ
ಯೋಜನೆ ಯೋಜನೆಯಡಿ ಹರಿಹರ ಮತ್ತು ಜಗಳೂರಿನಲ್ಲಿ
ಪ್ರಗತಿ ಕಡಿಮೆ ಆಗಿದ್ದು, ನಿಗದಿತ ಗುರಿ ಸಾಧಿಸಲು ಕ್ರಮ
ವಹಿಸಬೇಕು ಎಂದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಅತೀಕ್ ಮಾತನಾಡಿ,
ನರೇಗಾ ಯೋಜನೆಯಡಿ ಅರಣ್ಯ ಇಲಾಖೆಯಿಂದ
ನರ್ಸಿಂಗ್‍ಗಳನ್ನು ಹೆಚ್ಚಿಸಿ ಸಸಿಗಳ ಸಂಖ್ಯೆ ಹೆಚ್ಚಿಸಿದಲ್ಲಿ ಹೆಚ್ಚು
ಮಾನವ ದಿನಗಳನ್ನು ಸೃಜಿಸಬಹುದು. ಸಂಬಂಧಿಸಿದ ಅಧಿಕಾರಿ ಈ
ಬಗ್ಗೆ ಕ್ರಮ ವಹಿಸಬೇಕು ಹಾಗೂ ಫಾರಂ, ರಸ್ತೆ ಬದಿ, ಹೈವೇ ಬದಿ
ಅರಣ್ಯೀಕರಣಕ್ಕೆ ಕ್ರಮ ವಹಿಸಬೇಕೆಂದರು.
ಸಭೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾದ
ಎಸ್.ಎ.ರವೀಂದ್ರನಾಥ್, ಜಿ.ಪಂ.ಅಧ್ಯಕ್ಷೆ ಶಾಂತಕುಮಾರಿ
ಕೆ.ವಿ,ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಜಿ.ಪಂ.ಸದಸ್ಯ
ಮಹೇಶ್, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಉಪ ಕಾರ್ಯದರ್ಶಿ
ಆನಂದ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.