ದಾವಣಗೆರೆ ಜ. 12
ಕೃಷಿಯನ್ನು ಲಾಭದಾಯಕವಾಗಿಸಲು ರೈತರು ಸಮಗ್ರ ಕೃಷಿ ನೀತಿ ಅಳವಡಿಕೊಳ್ಳುವುದರ ಜೊತೆಗೆ, ಬೆಳೆ ಸಂಸ್ಕರಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಕರೆ ನೀಡಿದರು.
ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ವಿನೂತನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ನೀರಿದ್ದರೂ ರೈತರ ಆತ್ಮಹತ್ಯೆ ಸಂಭವಿಸುತ್ತಿವೆ. ಕೋಲಾರದಲ್ಲಿ ಹೆಚ್ಚು ನೀರಿಲ್ಲ. ಆದರೂ ಇಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿಲ್ಲ. ಕಾರಣಗಳನ್ನು ಹುಡುಕಿದಾಗ, ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ ನೀತಿ ಅನುಸರಿಸುತ್ತಿದ್ದಾರೆ. ಇಲ್ಲಿನ ರೈತರು, ಹೆಚ್ಚು, ತರಕಾರಿ, ಹಣ್ಣು ಸೇರಿದಂತೆ ವಿಭಿನ್ನ ಬೆಳೆಗಳನ್ನು ಬೆಳೆದು ಪ್ರಗತಿಪರ ರೈತರು ಎನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕೇವಲ ಭತ್ತ ಮತ್ತು ಕಬ್ಬು ಮಾತ್ರ ಬೆಳೆಯುತ್ತಾರೆ. ದಾವಣಗೆರೆ ಜಿಲ್ಲೆಯಲ್ಲಿಯೂ ಬಹಳಷ್ಟು ರೈತರು ಭತ್ತ ಬೆಳೆಯುತ್ತಿದ್ದಾರೆ. ಭತ್ತ, ಕಬ್ಬು ನಂಬಿಕೊಂಡವರು ಹೊಟ್ಟೆಬಟ್ಟೆಗಷ್ಟೇ ಆದಾಯ ಕಂಡುಕೊಳ್ಳಬಹುದು. ವಿಭಿನ್ನ ಬೆಳೆ ಬೆಳೆಯುವ ಮೂಲಕ ಕೋಲಾರ ಜಿಲ್ಲೆಯ ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2014-15 ರಲ್ಲಿ ಮಂಡ್ಯ ಜಿಲ್ಲೆಯಲ್ಲಿ 90 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೋಲಾರ ಜಿಲ್ಲೆಯಲ್ಲಿ-05 ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಸರ್ಕಾರ ಮನೆಬಾಗಿಲಿಗೆ ತಲುಪಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ರೈತರಿಗೆ ನಾವು ಕೊಡಬೇಕಿದೆ. ರೈತರಿಗೆ ಆತ್ಮಸ್ಥೈರ್ಯ, ನೈತಿಕ ಬಲ ತುಂಬಬೇಕಿದೆ. ಸರ್ಕಾರ ಮನೆಬಾಗಿಲಿಗೆ ಬಂದಿದೆ ಎನ್ನುವ ಭಾವನೆ ಮೂಡುವಂತಾಗಬೇಕು. ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಸಂದೇಶ ಮುಟ್ಟಿಸಬೇಕು. ನ. 14 ತಮ್ಮ ಹುಟ್ಟು ಹಬ್ಬ ದಿನದಂದು ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣ ವರದಿಯಾದ ಗ್ರಾಮವೊಂದರಲ್ಲಿ ಈ ಕಾರ್ಯಕ್ರಮ ಮಾಡಿದ್ದೆವು. ಅಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿತ್ತು. ‘ರೈತರೊಂದಿಗೆ ಒಂದು ದಿನ’ ಪ್ರತಿ ಜಿಲ್ಲೆಯ ಒಂದು ಗ್ರಾಮದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ರೈತರೊಂದಿಗೆ ಸಂವಾದ ನಡೆಸಿ, ಅಲ್ಲಿನ ಮಣ್ಣು, ಸಂಸ್ಕøತಿ, ಬೆಳೆಯ ಸಂಸ್ಕøತಿ, ಜನರ ಬೇಕು ಬೇಡಗಳನ್ನು ತಿಳಿದುಕೊಳ್ಳಲು ಯತ್ನಿಸಲಾಗುವುದು. ರೈತರೊಂದಿಗೆ ಚರ್ಚಿಸಿ, ಅವರ ಸಮಸ್ಯೆಗಳು, ಅಹವಾಲುಗಳು, ಸಲಹೆ ಸೂಚನೆಗಳನ್ನು ಪಡೆಯಲಾಗುವುದು. 30 ಜಿಲ್ಲೆಗಳ ವರದಿಯನ್ನು ಕ್ರೋಢೀಕರಿಸಿ, ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಯತ್ನಿಸಲಾಗುವುದು. ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಬೇಕು, ಕೋವಿಡ್ ಕಾರಣ ಯುವಕರು ಗ್ರಾಮಗಳಿಗೆ ಮರಳಿದ್ದಾರೆ. ಯುವಕರು ಮಾರುಕಟ್ಟೆ ಪ್ರವೇಶಿಸಬೇಕು. ಹಳ್ಳಿ ಹಳ್ಳಿಯಲ್ಲಿ ಸಹಕಾರ ಸಂಘಗಳು ಸ್ಥಾಪನೆಯಾಗಬೇಕು. ಸಹಕಾರ ಸಂಘಗಳ ಮೂಲಕ ಕೃಷಿ ಉತ್ಪನ್ನ ಮಾರಾಟವಾದಲ್ಲಿ ಮದ್ಯವರ್ತಿಗಳ ಹಾವಳಿ ಇಲ್ಲವಾಗಿ, ಲಾಭ ನೇರ ರೈತರ ಕೈಗೆ ಸೇರಲು ಸಾಧ್ಯ. ರೈತರ ಆದಾಯ ದ್ವಿಗುಣಗೊಳ್ಳಬೇಕು ಎನ್ನುವುದು ಪ್ರಧಾನಮಂತ್ರಿಗಳ ಆಶಯವಾಗಿದೆ. ಆತ್ಮನಿರ್ಭರ ಯೋಜನೆಯಡಿ 01 ಲಕ್ಷ ಕೋಟಿ ರೂ. ಕೃಷಿ ಮೂಲಭೂತ ಸೌಕರ್ಯಕ್ಕೆ ಇಟ್ಟಿದ್ದು, 10 ಸಾವಿರ ಕೋಟಿ ರೂ. ಗಳನ್ನು ಆಹಾರ ಸಂಸ್ಕøರಣಾ ಘಟಕಗಳಿಗಾಗಿ ಮೀಸಲಿಟ್ಟಿದ್ದಾರೆ. ಹಳ್ಳಿಹಳ್ಳಿ ಗಳಲ್ಲಿ ರೈತ ಉತ್ಪಾದಕ ಸಂಸ್ಥೆ (ಎಫ್‍ಪಿಒ) ಗಳು ಆಗಬೇಕು. ರಾಜ್ಯದಲ್ಲಿ 100 ಎಫ್‍ಪಿಒ ಗಳು ಸ್ಥಾಪನೆ ಆಗಬೇಕಿದೆ. 500 ಜನ ರೈತರು ಸೇರಿ, ತಲಾ 10 ಸಾವಿರ ರೂ. ಹಾಕಿ ಎಫ್‍ಪಿಒ ಮಾಡಿದರೆ, ಕೇಂದ್ರ ಸರ್ಕಾರ 2.5 ಕೋಟಿ ರೂ. ಗಳನ್ನು ಶೇ. 3 ರ ಬಡ್ಡಿ ದರದಲ್ಲಿ ಸಾಲ ನೀಡಲಿದೆ. 1000 ರೈತರು ಎಫ್‍ಪಿಒ ಮಾಡಿಕೊಂಡರೆ 5 ಕೋಟಿ ರೂ. ನೀಡಲಿದೆ. ಆಹಾರ ಸಂಸ್ಕರಣೆ ಘಟಕ ಮಾಡಿಕೊಂಡು, ರೈತರು ತಮ್ಮ ಬೆಳೆಗೆ ತಾವೇ ಲಾಭ ತಂದುಕೊಳ್ಳಬಹುದು. ರೈತರು ತಾವು ಬೆಳೆದ ಬೆಳೆ ಸಂಸ್ಕರಣೆ ಮಾಡುವುದನ್ನು ಕಲಿಯದಿದ್ದರೆ ಇದೇ ಪರಿಸ್ಥಿತಿ ಮುಂದಿನ 100 ವರ್ಷಗಳಾದರೂ ಬದಲಾಗುವುದಿಲ್ಲ. ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆ ಇದೀಗ ಹೆಚ್ಚು ಚಾಲ್ತಿಯಲ್ಲಿದೆ. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರೈತರು ಮುಂದಾಗಬೇಕು. ಕೃಷಿ ವಿಜ್ಞಾನ ಕೇಂದ್ರಗಳು ವಿವಿ. ಗಳ ಪ್ರಾಧ್ಯಾಪಕರು, ತಜ್ಞರು, ವಿಜ್ಞಾನಿಗಳು ವಿವಿ ಕ್ಯಾಂಪಸ್‍ನಲ್ಲಿರುವುದು ಅಷ್ಟೇ ಅಲ್ಲ, ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ರೈತರೊಂದಿಗೆ ಸಂಪರ್ಕ ಸಂವಹನ ನಡೆಸಬೇಕು ಎಂದು ಸೂಚನೆ ನೀಡಿದ್ದೇನೆ. ಜಿಪಿಎಸ್ ಆಧಾರಿತ ಬೆಳೆ ಸಮೀಕ್ಷೆಯಲ್ಲಿಯೂ ಸಮಸ್ಯೆ ಕಂಡುಬಂದ ಕಾರಣ, ರೈತರೇ ತಮ್ಮ ಬೆಳೆ ಸಮೀಕ್ಷೆ ಕೈಗೊಳ್ಳುವಂತೆ ಮಾಡಿದ ಹಿನ್ನೆಲೆಯಲ್ಲಿ ಮೊದಲನೆ ವರ್ಷದಲ್ಲಿ 46 ಲಕ್ಷ ರೈತರು ಬೆಳೆ ಸಮೀಕ್ಷೆ ಮಾಡಿದ್ದಾರೆ. ಹಿಂಗಾರು ಬೆಳೆ ಸಮೀಕ್ಷೆ ಕೂಡ ಇದೇ ರೀತಿ ಮಾಡಲಾಗುವುದು. ಮುಖ್ಯಮಂತ್ರಿಗಳೂ ಕೂಡ ಇದಕ್ಕೆ ಸಮ್ಮತಿಸಿದ್ದಾರೆ. ಮುಂದಿನ ವರ್ಷದಿಂದ ರೈತರೇ ತಮ್ಮ ಬೆಳೆಯನ್ನು ಸಮೀಕ್ಷೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಮಾತನಾಡಿ, ‘ರೈತರೊಂದಿಗೆ ಒಂದು ದಿನ’ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆಗಳು ರೈತರ ಆದಾಯ ಹೆಚ್ಚಿಸುವಂತಹ ಯೋಜನೆಗಳಾಗಿವೆ. ಪ್ರತಿ ಮನೆ ಮನೆಗೆ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆ ಹಮ್ಮಿಕೊಂಡಿದ್ದು, 371 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ 1200 ಗ್ರಾಮಗಳಿಗೂ ಹಂತ ಹಂತವಾಗಿ ಯೋಜನೆ ಜಾರಿಗೊಳಿಸಿ, ನೀರು ಪೂರೈಸಲಾಗುವುದು. ಕೋವಿಡ್ ನಿಂದ ಆರ್ಥಿಕ ತೊಂದರೆ ಇದ್ದರೂ, ರಸ್ತೆ, ನೀರು, ಶಾಲಾ ಕಟ್ಟಡಗಳ ಅಭಿವೃದ್ಧಿ ಕುಂಠಿತವಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆಗಳು ಜಾರಿಯಲ್ಲಿದ್ದು, ಭದ್ರ ಮೇಲ್ದಂಡೆ ಯೋಜನೆಯಡಿ ಜಗಳೂರು ತಾಲ್ಲೂಕುಗಳ ಕೆರೆ ತುಂಬಿಸುವ ಯೋಜನೆಯಲ್ಲಿದೆ. ಹವಾಮಾನ ವೈಪರಿತ್ಯದಿಂದ ರೈತರ ಬಾಳು ಹಸನಾಗುತ್ತಿಲ್ಲ. ಹೀಗಾಗಿ ಕೆರೆ ತುಂಬಿಸಿಕೊಟ್ಟರೆ ರೈತರಿಗೆ ಅನುಕೂಲವಾಗಲಿದೆ. ಹೊನ್ನಾಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಸದ್ಯದಲ್ಲೇ ರಾಜ್ಯ ಸರ್ಕಾರ ಅನುಮೋದನೆ ನೀಡಲಿದ್ದು, ಮುಖ್ಯಮಂತ್ರಿಗಳನ್ನು ಕರೆಯಿಸಿ, ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಾತನಾಡಿ, ರಾಜ್ಯ ಕೃಷಿ ಸಚಿವರು ರೈತರ ಮನೆಬಾಗಿಲಿಗೆ ಸರ್ಕಾರವನ್ನು ತೆಗೆದುಕೊಂಡು ಹೊರಟಿರುವುದು ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮವಾಗಿದೆ. ರೈತರ ಬದುಕು ಹಸನಾಗಬೇಕು. ರೈತರಲ್ಲಿ ಜಾಗೃತಿ ಮೂಡಬೇಕು. ರೈತರ ಬದುಕು ಹಸನಾಗಿಸಲು, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೈತರೊಂದಿಗೆ ಚರ್ಚಿಸಿ, ವರದಿ ಕ್ರೋಢೀಕರಿಸಿ, ಬಜೆಟ್‍ನಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಹೊನ್ನಾಳಿ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದ್ದು ಕಳೆದ ವರ್ಷವೇ ಅನುಮೋದನೆ ದೊರೆಯಬೇಕಿತ್ತು. ಆದರೆ ಕೋವಿಡ್ ಕಾರಣ ಆರ್ಥಿಕ ತೊಂದರೆಯಿಂದ ವಿಳಂಬವಾಯಿತು. ಇದೀಗ 435 ಕೋಟಿ ರೂ. ಗಳ ಯೋಜನೆಗೆ ಅನುಮತಿ ದೊರೆತಿದ್ದು, ಶೀಘ್ರ ಸಚಿವ ಸಂಪುಟ ಅನುಮೋದನೆ ನೀಡಲಿದೆ. ಈಗಾಗಲೆ ತುಂಗಭದ್ರಾದಿಂದ ಶೇ. 70 ರಷ್ಟು ಗ್ರಾಮಗಳಿಗೆ ಶುದ್ಧ ನೀರು ಪೂರೈಸಲಾಗುತ್ತಿದ್ದು ಬಾಕಿ ಶೇ. 30 ರಷ್ಟು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 76 ಕೋಟಿ ರೂ. ಗಳ ಯೋಜನೆಗೆ ಅನುಮೋದನೆಯಾಗಿದ್ದು, ಟೆಂಡರ್ ಶೀಘ್ರ ಕರೆಯಲಾಗುವುದು. ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಶೀಘ್ರ ಕೈಗೊಂಡು ಪೂರ್ಣಗೊಳಿಸಲಾಗುವುದು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಕಷ್ಟದಲ್ಲಿದ್ದವರಿಗೆ ನೆರವು ನೀಡಲಾಗಿದೆ ಎಂದರು.
ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ನಿಗಮದ ಅಧ್ಯಕ್ಷ ಹಾಗೂ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತನಾಡಿ, ರೈತ ದೇಶದ ಬೆನ್ನೆಲುಬು, ರೈತ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ರೈತರ ಕಷ್ಟ ಸುಖಗಳನ್ನು ಅವರೊಂದಿಗೇ ಚರ್ಚಿಸಿ, ತಿಳಿದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೃಷಿ ಸಚಿವರು ಮುಂದಾಗಿರುವುದು ಸ್ವಾಗತಾರ್ಹ. ಅತ್ಯಂತ ಕಡಿಮೆ ನೀರು ಹೊಂದಿರುವ ಇಸ್ರೇಲ್‍ನಂತಹ ಸಣ್ಣ ದೇಶ ಹಲವಾರು ದೇಶಗಳಿಗೆ ಗುಣಮಟ್ಟದ ಆಹಾರ ರಫ್ತು ಮಾಡುತ್ತಿದೆ. ತಂತ್ರಜ್ಞಾನ ಹಾಗೂ ನೀರಿನ ಸದ್ಬಳಕೆಯಾದಲ್ಲಿ ದೇಶದಲ್ಲಿ ಇನ್ನೂ ಹೆಚ್ಚು ಆಹಾರ ಬೆಳೆಯಲು ಸಾಧ್ಯವಿದೆ. ಅಡಿಕೆ, ತೆಂಗಿಗೆ ಮಾತ್ರ ಇಲ್ಲಿನ ರೈತರು ಸೀಮಿತರಾಗುತ್ತಿದ್ದಾರೆ. ಶ್ರೀಗಂಧದಿಂದ ಪ್ರತಿ ಎಕರೆಗೆ 10 ಕೋಟಿ ರೂ. ಆದಾಯ ಪಡೆಯಲು ಸಾಧ್ಯವಿದೆ. ಇದಕ್ಕೆ ಬೇಕಾದ ನೆರವನ್ನು ನೀಡಲು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ನಿಗಮ ಸಿದ್ಧವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ವಿ. ಶೇಖರಪ್ಪ, ಉಮಾ ರಮೇಶ್, ಎಂ.ಆರ್. ಮಹೇಶ್, ಸುರೇಂದ್ರ ನಾಯ್ಕ, ದೀಪಾ ಜಗದೀಶ್, ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸೇರಿದಂತೆ ತಾಲ್ಲೂಕು ಪಂಚಾಯತ್ ಸದಸ್ಯರು, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಜಿ.ಎಂ. ಸಿದ್ಧೇಶ್ವರ್ ಸೇರಿದಂತೆ ಹಲವು ಗಣ್ಯರನ್ನು ಎತ್ತಿನಗಾಡಿಯಲ್ಲಿ ವಿಶೇಷ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತಂದರು, ಪೂರ್ಣಕುಂಭ ಹೊತ್ತ ಮಹಿಳೆಯರು ಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು. ವೇದಿಕೆ ಸಮಾರಂಭಕ್ಕೂ ಪೂರ್ವದಲ್ಲಿ ಕೃಷಿ ಸಚಿವರು ಕಮ್ಮಾರಗಟ್ಟೆ ಗ್ರಾಮದಲ್ಲಿ ಶ್ರೀನಿವಾಸ ಪಾಟೀಲ್ ಎಂಬ ರೈತರು ವೈಜ್ಞಾನಿಕವಾಗಿ ಗೋಮೂತ್ರ ಸಂಸ್ಕರಿಸಿ ಲಾಭದಾಯಕವಾಗಿ ಮಾರಾಟ ಮಾಡುತ್ತಿರುವ ವಿವರ ಪಡೆದುಕೊಂಡರು, ಬಳಿಕ ಭತ್ತ ನಾಟಿ ಯಂತ್ರದ ಮೂಲಕ ಹೊಸದಲ್ಲಿ ಭತ್ತ ನಾಟಿ ಮಾಡಿದರು. ಇಲ್ಲಿನ ಹಳ್ಳಿಕಟ್ಟೆಯಲ್ಲಿ ರೈತರೊಂದಿಗೆ ಸಂವಾದ ನಡೆಸಿ, ಅವರಿಂದ ಅವಹಾಲು ಹಾಗೂ ಸಲಹೆಗಳನ್ನು ಪಡೆದುಕೊಂಡರು. ಆರುಂಡಿ ಗ್ರಾಮದಲ್ಲಿ ಹೊಲದಲ್ಲಿ ನೆಲ ಸಮತಟ್ಟುಗೊಳಿಸುವ ಕೃಷಿಯಂತ್ರವನ್ನು ಚಾಲನೆ ಮಾಡಿ, ಅನುಭವ ಹಂಚಿಕೊಂಡರು.