ಅನಾಹುತಗಳನ್ನು ತಪ್ಪಿಸುವ ಜವಾಬಾರಿ ನಮ್ಮ

ಮೇಲಿದೆ : ಅಪರ ಜಿಲ್ಲಾಧಿಕಾರಿ

ದಾವಣಗೆರೆ ಜ.13  
ಶಾಲೆಗಳು, ವಠಾರಗಳು ಮತ್ತು ಮನೆಗಳಲ್ಲಿನ
ಮನುಷ್ಯರ ದೈಹಿಕ ಭಾಷೆ ಮತ್ತು ನಡವಳಿಕೆಯಿಂದ
ಅವರು ಎಂಥವರು ಎಂದು ಅರಿತು, ಎಚ್ಚೆತ್ತುಕೊಂಡು
ಮುಂದೆ ನಮ್ಮ ಮಕ್ಕಳ ಮೇಲೆ ಅವರಿಂದ ಆಗಬಹುದಾದ
ಲೈಂಗಿಕ ದೌರ್ಜನ್ಯ ಅಥವಾ ಇತರೆ ಅನಾಹುತಗಳಿಂದ
ಮಕ್ಕಳನ್ನು ತಪ್ಪಿಸಬಹುದು ಎಂದು ಅಪರ ಜಿಲ್ಲಾಧಿಕಾರಿ
ಪೂಜಾರ ವೀರಮಲ್ಲಪ್ಪ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬುಧವಾರ
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರು
ಮತ್ತು ಸಿಬ್ಬಂದಿ ವರ್ಗದವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ
2006 ತಿದ್ದುಪಡಿ ಕಾಯ್ದೆ 2016ಹಾಗೂ ಪೋಕ್ಸೊ ಕಾಯ್ದೆ 2012
ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು
ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಾಮಾನ್ಯವಾಗಿ ಶಾಲೆಯಲ್ಲಿ, ತಮ್ಮ
ವಠಾರಗಳಲ್ಲಿ, ಮನೆಗಳಲ್ಲಿ ದೌರ್ಜನ್ಯ ನಡೆಯುತ್ತಿದೆ. ಆದ
ಕಾರಣ ಈ ವಾತಾವರಣದಲ್ಲಿ ಮಕ್ಕಳಿಗೆ ದೌರ್ಜನ್ಯ ಅಥವಾ
ಅಪಾಯವೆಸಗಬಹುದಾದ ವ್ಯಕ್ತಿಗಳನ್ನು ನಾವು ಗುರುತಿಸಿ
ಆಗಬಹುದಾದ ಅನಾಹುತ ತಪ್ಪಿಸುವುದು ನಮ್ಮ
ಜವಾಬ್ದಾರಿಯಾಗಿದೆ.
ನಾವೆಲ್ಲೂ ತುಂಬಾ ಬ್ಯುಸಿ ಇರುವಂತೆ ಇರುತ್ತೇವೆ. ಆದರೆ ನಿಜವಾಗಿ
ಅಷ್ಟು ಬ್ಯುಸಿ ಇರುವುದಿಲ್ಲ. ಆದ ಕಾರಣ ಮಕ್ಕಳ ವಿಚಾರವಾಗಿ
ಅವರ ಸುತ್ತಮುತ್ತಲಿನ ಜನ ಹೇಗೆ ವರ್ತಿಸುತ್ತಿದ್ದಾರೆಂದು
ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವುದು ನಮ್ಮ
ಹೊಣೆಯಾಗಿದೆ. ಇಲ್ಲವಾದಲ್ಲಿ ದೌರ್ಜನ್ಯಕ್ಕೆ ತುತ್ತಾದ ಮಗು
ಉತ್ತಮ ಭವಿಷ್ಯ ಕಾಣದೆ ನಲುಗುತ್ತದೆ. ಹಾಗಾಗಿ ಶಿಕ್ಷಕರು
ಸೇರಿದಂತೆ ಎಲ್ಲ ಪ್ರಜ್ಞಾವಂತರು ಎಲ್ಲ ಮಕ್ಕಳನ್ನು ತಮ್ಮ
ಮಕ್ಕಳೆಂದು ಭಾವಿಸಿ ಮಕ್ಕಳನ್ನು ಮತ್ತು ಅವರ
ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವೆಂದು
ಭಾವಿಸಿ ನಡೆದುಕೊಳ್ಳಬೇಕು ಎಂದರು.

ಬಾಲ್ಯ ವಿವಾಹ ತಡೆಯುವಲ್ಲಿ ಶಿಕ್ಷಕರ ಪಾತ್ರ ಕೂಡ
ಮಹತ್ವವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಬಾಲ್ಯ
ವಿವಾಹ ತಡೆ ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು
ರಕ್ಷಿಸುವ (ಪೋಕ್ಸೊ) ಕಾಯ್ದೆ ಕುರಿತು ಕಾರ್ಯಾಗಾರ
ಏರ್ಪಡಿಸಿರುವುದು ಉತ್ತಮ ಕಾರ್ಯವಾಗಿದೆ. ಕಾಯ್ದೆ ಬಗ್ಗೆ
ಶಿಕ್ಷಕರು ಅರಿತು ಅನುಷ್ಟಾನಗೊಳಿಸುವುದು ಬಹಳ
ಮುಖ್ಯವಾಗುತ್ತದೆ.
ಶಾಲೆ, ವಠಾರ, ಮನೆ ಸೇರಿದಂತೆ ನನ್ನ ಪರಿಸರದ ವ್ಯಾಪ್ತಿಯಲ್ಲಿ
ಯಾವುದೇ ಮಕ್ಕಳಿಗೆ ಯಾವುದೇ ರೀತಿಯಲ್ಲಿ ದೌರ್ಜನ್ಯ,
ಅನಾಹುತ ಆಗದಂತೆ ನಾನು ನನ್ನ ಕರ್ತವ್ಯ ನಿರ್ವಹಿಸುತ್ತೇನೆ
ಎಂಬ ಸಂದೇಶವನ್ನು ಶಿಕ್ಷಕರು ಈ ಕಾರ್ಯಾಗಾರದಿಂದ
ತೆಗೆದುಕೊಂಡು ಹೋಗಿ ಕಾರ್ಯರೂಪಕ್ಕೆ ತರಬೇಕು.
-ಪೂಜಾರ ವೀರಮಲ್ಲಪ್ಪ, ಅಪರ
ಜಿಲ್ಲಾಧಿಕಾರಿ
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಮಾತನಾಡಿ,
ಸಾಮಾನ್ಯವಾಗಿ ಶಿಕ್ಷಕರಿಗೆ ಬಾಲ್ಯ ವಿವಾಹ ಮತ್ತು ಪೋಕ್ಸೊ
ಕಾಯ್ದೆ ಬಗ್ಗೆ ತಿಳುವಳಿಕೆ ಇದೆ. ಆದರೆ ಈ ಕಾಯ್ದೆಗಳನ್ನು
ಅನುಷ್ಟಾನಗೊಳಿಸುವಲ್ಲಿ ಕೆಲವು ನ್ಯೂನ್ಯತೆಗಳು
ಕಾಣುತ್ತಿವೆ. ಆದ ಕಾರಣ ಈ ಕಾಯ್ದೆ ಬಗ್ಗೆ ವಿವರವಾಗಿ
ತಿಳಿದುಕೊಂಡು ಬದ್ದತೆಯಿಂದ ಪರಿಣಾಮಕಾರಿಯಾಗಿ
ಅನುಷ್ಟಾನಗೊಳಿಸಬೇಕೆಂದರು.
ಬಾಲ್ಯ ವಿವಾಹವನ್ನು ತಡೆಯಲು ಇಲಾಖೆಗಳು ಶ್ರಮಿಸಿದಾಗ್ಯೂ
ಲಾಕ್‍ಡೌನ್ ವೇಳೆ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ
ಹೆಚ್ಚಿದೆ. ಇದನ್ನು ತಡೆಯಲು ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ
ಇಲಾಖೆಗಳು ಸಹಕರಿಸಬೇಕು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಕ್ಕಳಿಗೆ ‘ಓದುವ
ಬೆಳಕು’ ಕಾರ್ಯಕ್ರಮ ಆರಂಭಿಸಿದ್ದು, ಮಕ್ಕಳಿಗೆ
ಲೈಬ್ರರಿಯಲ್ಲಿ ಓದುವ ವ್ಯವಸ್ಥೆ ಮಾಡಲಾಗಿದೆ. ಹಾಗೂ ಗ್ರಾ.ಪಂ
ಗಳಲ್ಲಿ ಡಿಜಿಟಲ್ ಲೈಬ್ರರಿ ವ್ಯವಸ್ಥೆ ಸಹ ಮಾಡಲಾಗಿದ್ದು, ಪಿಡಿಓ ಗಳ
ಜೊತೆ ಶಿಕ್ಷಕರು ಸಮನ್ವಯ ಸಾಧಿಸಿ ಮಕ್ಕಳಿಗೆ ಈ ಸೌಲಭ್ಯ
ಲಭಿಸುವಂತೆ ಮಾಡಬೇಕೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
ಪರಮೇಶ್ವರಪ್ಪ ಮಾತನಾಡಿ, 2020 ಕರಾಳ ವರ್ಷವಾಗಿದ್ದು,
ಜನವರಿ 1 ರಿಂದ ಶಾಲೆಗಳನ್ನು ಪುನರಾರಂಭಿಸುವ ಮೂಲಕ
ಹೊಸ ಶಕೆ ಆರಂಭಿಸಲಾಗಿದೆ ಎನ್ನಬಹುದು. ಜ.1 ರಿಂದ 10 ನೇ
ತರಗತಿ ಮತ್ತು 6 ರಿಂದ 9 ನೇ ತರಗತಿವರೆಗೆ ವಿದ್ಯಾಗಮ
ಆರಂಭಿಸಲಾಗಿದ್ದು ನಿಧಾನವಾಗಿ ಹಾಜರಾತಿ ಹೆಚ್ಚುತ್ತಿದೆ. ಈ ತಿಂಗಳ
ಕೊನೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾಜರಾತಿ ಹೆಚ್ಚಿಸಲು
ಶಿಕ್ಷಕರು ಮಕ್ಕಳಲ್ಲಿ ಭರವಸೆ ಮೂಡಿಸುವ ಕೆಲಸ
ಮಾಡಬೇಕಿದೆ.
ಲಾಕ್‍ಡೌನ್ ವೇಳೆ ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ, ಬಾಲ
ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಭಿಕ್ಷಾಟನೆ ಮತ್ತು ಇತರೆ
ಚಟುವಟಿಕೆಯಲ್ಲಿ ಸಹ ಮಕ್ಕಳು ತೊಡಗಿದ್ದುದು
ಕಂಡುಬಂದಿತ್ತು. ಶಾಲೆ ಬಿಟ್ಟ ಮಕ್ಕಳ ಮೇಲೆ ಲೈಂಗಿಕ
ದೌರ್ಜನ್ಯ, ಕಾಣೆಯಾದ ಪ್ರಕರಣಗಳು ಸಹ ಹೆಚ್ಚಿದ್ದವು.

ಒಂದು ವರದಿಯ ಪ್ರಕಾರ ಕೇವಲ 1 ವರ್ಷದಲ್ಲಿ 1.5 ಲಕ್ಷ
ಮಕ್ಕಳು ಕಾಣೆಯಾಗಿದ್ದು ಶೇ.55 ಮಕ್ಕಳು ಸಿಕ್ಕಿದ್ದರೆ
ಶೇ.45 ಮಕ್ಕಳು ಸಿಗದೇ ಇರುವ ಅಂಕಿ ಅಂಶ ಆತಂಕಕ್ಕೀಡು
ಮಾಡಿದೆ.
ಆದ ಕಾರಣ ಪ್ರತಿ ಮಗುವಿನ ನಿರಂತರ ಹಾಜರಾತಿ ಬಗ್ಗೆ ಹಾಗೂ
ಚಲನವಲನದ ಬಗ್ಗೆ ಶಿಕ್ಷಕು ಗಮನ ಹರಿಸಬೇಕು. ಹೀಗಾದಲ್ಲಿ
ಖಂಡಿತ ಮಕ್ಕಳನ್ನು ಅನಾಹುತಗಳಿಂದ ರಕ್ಷಿಸಲು
ಸಾಧ್ಯವಾಗುತ್ತದೆ. ಪ್ರಸ್ತುತ ಗ್ರಾ.ಪಂ ಹಾಗೂ ಮಹಿಳಾ
ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶಾಲೆ
ಬಿಟ್ಟ ಮಕ್ಕಳ ಸಮೀಕ್ಷೆ ನಡೆಯುತ್ತಿದ್ದು, ಶಾಲೆ ಬಿಟ್ಟ 6 ರಿಂದ
18 ರೊಳಗಿನ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರುವ ಕೆಲಸ
ನಡೆಯುತ್ತಿದೆ ಎಂದರು.
ಮಹಿಳಾ ಠಾಣೆಯ ವೃತ್ತ ನಿರೀಕ್ಷಕಿ ಶಿಲ್ಪಾ ಮಾನತಾಡಿ,
ಶಿಕ್ಷಕರಿಗೆ ಈ ಕಾರ್ಯಾಗಾರ ನಡೆಸುತ್ತಿರುವುದು
ಸ್ವಾಗತಾರ್ಹವಾಗಿದ್ದು, ಮಕ್ಕಳಿಗೆ ಮೌಲ್ಯಯುತ ಮತ್ತು
ನೈತಿಕ ಶಿಕ್ಷಣ ನೀಡುವ ಮೂಲಕ ಹಾಗೂ ಮಕ್ಕಳಲ್ಲಿ ಅರಿವು
ಮೂಡಿಸುವ ಮೂಲಕ ಮಕ್ಕಳನ್ನು ರಕ್ಷಿಸುವ, ಸರಿದಾರಿಯಲ್ಲಿ
ನಡೆಯುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲೆ ಹೆಚ್ಚಿದೆ.
ಲಾಕ್‍ಡೌನ್ ವೇಳೆ ಶಾಲೆ ಇಲ್ಲದ ಕಾರಣ ಬಾಲ್ಯ ವಿವಾಹ ಮತ್ತು
ಪೋಕ್ಸೊ ಪ್ರಕರಣಗಳು ಹೆಚ್ಚಿದ್ದವು. ಮಕ್ಕಳು ಶಾಲೆಗೆ
ಹೋದರೆ ಪೋಷಕರು ನೆಮ್ಮದಿಯಾಗಿ ಇರಬಹುದು. ಆದರೆ
ಆನ್‍ಲೈನ್ ಬಳಕೆಯಿಂದ ಕೂಡ ಮಕ್ಕಳು ಹಾದಿ ತಪ್ಪಿ ಮಿಸ್ಸಿಂಗ್
ಪ್ರಕರಣ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಮಕ್ಕಳನ್ನು
ಸಂರಕ್ಷಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ.
ಜನರಲ್ಲಿ ಈ ಕಾಯ್ದೆಗಳ ಬಗ್ಗೆ ಅರಿವು ಹೆಚ್ಚಬೇಕು. ಶಿಕ್ಷೆ
ಬಗ್ಗೆ ಕೂಡ ತಿಳಿಯಬೇಕು, ಇತ್ತೀಚೆಗೆ ದಾವಣಗೆರೆಯಲ್ಲಿ
ಪೊಕ್ಸೊ ಪ್ರಕರಣವೊಂದರಲ್ಲಿ ನ್ಯಾಯಾಲಯ ಆರೋಪಿಗೆ 20
ವರ್ಷ ಜೈಲು ಶಿಕ್ಷೆ ನೀಡಿದೆ. ಹಾವೇರಿಯಲ್ಲಿ ಅತ್ಯಾಚಾರ ಪ್ರಕರಣಕ್ಕೆ
ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ
ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಬಾಲ್ಯ ವಿವಾಹ
ತಡೆಯುವಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮುಖ್ಯವಾಗಿ
ಸಹಕರಿಸಬೇಕು. ಹಾಗೂ ಮಕ್ಕಳ ಜನನ ಪ್ರಮಾಣ ದಾಖಲೆ
ಕೇಳಿದಾಗ ನೀಡಬೇಕು. ಇದು ವೈಯಕ್ತಿಕ ಮಾಹಿತಿ ಆಗದ
ಕಾರಣ ಹಾಗೂ ಮಗುವನ್ನು ಬಾಲ್ಯ ವಿವಾಹದಿಂದ
ರಕ್ಷಿಸಬೇಕಾದ್ದರಿಂದ ನೇರವಾಗಿ ನೀಡಬಹುದು.
ಯಾವುದೇ ಶಿಕ್ಷಕರು ಅಥವಾ ಸಾರ್ವಜನಿಕರಿಗೆ ಬಾಲ್ಯ ವಿವಾಹದ
ಬಗ್ಗೆ ಸುಳಿವು ಸಿಕ್ಕಿಲ್ಲಿ 1098 ಗೆ ಕರೆ ಮಾಡಿದರೆ ಸಾಕು. ಕರೆ
ಮಾಡಿದವರ ಹೆಸರನ್ನು ಸಹ ಗೌಪ್ಯವಾಗಿ ಇಡಲಾಗುವುದು.
ಬಾಲ್ಯ ವಿವಾಹ ತಡೆಯುವಲ್ಲಿ ಇಲಾಖೆಯ ಸಿಡಿಪಿಓ ಗೆ ನೀಡಲಾದ
ಅಧಿಕಾರವನ್ನು ಶಾಲಾ ಮುಖ್ಯೋಪಾಧ್ಯಾಯರು, ವಿಎ, ಆರ್‍ಐ,
ಪಿಡಿಓ, ಪೊಲೀಸರು ಸೇರಿದಂತೆ ಇತರೆ ಅಧಿಕಾರಿಗಳಿಗೆ
ನೀಡಲಾಗಿದ್ದು ಎಲ್ಲರೂ ಜವಾಬ್ದಾರಿಯಿಂದ
ಕಾರ್ಯವೆಸಗಬೇಕೆಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ.ಬಸವರಾಜಯ್ಯ
ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ಮಗುವಿನ ವ್ಯಕ್ತಿತ್ವ

ರೂಪುಗೊಳ್ಳುವಲ್ಲಿ ಶಾಲೆ ಮುಖ್ಯ ಪಾತ್ರ ವಹಿಸುತ್ತದೆ. ಆದ
ಕಾರ ಶಾಲೆಯ ಮುಖ್ಯೋಪಾಧ್ಯಾಯರಿಂದ ಹಿಡಿದು ಎಲ್ಲ
ಸಿಬ್ಬಂದಿಗಳು ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು.
ಸರ್ಕಾರ ಮಕ್ಕಳಿಗೆ ಹಕ್ಕುಗಳನ್ನು ನೀಡಿದೆ. ಆದರೆ
ಮಕ್ಕಳಿಗೆ ಅದು ತಿಳಿಯುವುದಿಲ್ಲ. ನಾವು ಮತ್ತು ಶಿಕ್ಷಕರು
ಅವರ ಹಕ್ಕುಗಳನ್ನು ಮನನ ಮಾಡಿಸಬೇಕು.
‘ಮಕ್ಕಳ ಹಕ್ಕುಗಳು-ನಮ್ಮ ಕರ್ತವ್ಯ’ವಾಗಿದೆ.
ಮಕ್ಕಳು ಅವರ ಹಕ್ಕುಗಳ ಬಗ್ಗೆ ತಿಳಿಯುವಷ್ಟು
ಪ್ರಬುದ್ದರಲ್ಲದ ಕಾರಣ ಶಿಕ್ಷಕರು ಜವಾಬ್ದಾರಿಯಿಂದ ಮಗುವಿಗೆ
ಎಲ್ಲ ಹಕ್ಕುಗಳನ್ನು ದೊರಕಿಸಬೇಕು. ಹಾಗೂ ನಮ್ಮ
ಪರಿವಾರ ನಮ್ಮ ಶಾಲೆ ಮತ್ತು ಮಕ್ಕಳು ಎಂದು
ನಡೆಯಬೇಕು ಎಂದರು.
ಪೊಲೀಸ್ ಇಲಾಖೆಯ ಮಲ್ಲಪ್ಪ ಜಲಗಾರ್ ಸಂಪನ್ಮೂಲ
ವ್ಯಕ್ತಿಗಳಾಗಿ ಪಾಲ್ಗೊಂಡು ಬಾಲ್ಯ ವಿವಾಹ ಕಾಯ್ದೆ ಹಾಗೂ
ಪೋಕ್ಸೊ ಕಾಯ್ದೆ ಕುರಿತು ತರಬೇತಿ ನೀಡಿದರು. ಮಹಿಳಾ
ಮತ್ತು ಮಕ್ಕಳ ಇಲಾಖೆಯ ನಿರೂಪಣಾಧಿಕಾರಿ ಜಗದಂಬಾ
ಇದ್ದರು.
ಪೋಷಣ್ ಅಭಿಯಾನದ ಜಿಲ್ಲಾ ಸಂಯೋಜಕಿ ಪ್ರಾರ್ಥಿಸಿದರು.
ಪ್ರಕಾಶ್ ಸ್ವಾಗತಿಸಿದರು, ಪ್ರತಿಭಾ ನಿರೂಪಿಸಿದರು ಹಾಗೂ
ಚಂದ್ರಶೇಖರ್ ವಂದಿಸಿದರು.

Leave a Reply

Your email address will not be published. Required fields are marked *