ಶಿವಮೊಗ್ಗ, ಫೆ.16 ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ 384ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ವರ್ಷದ ಒಳಗಾಗಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರು ಮಂಗಳವಾರ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲ ಹಂತದಲ್ಲಿ ರನ್ವೇ ಮತ್ತು ಕಂಪೌಂಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ ಟರ್ಮಿನಲ್ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕಿದ್ದು, ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಾ ಕಾಮಗಾರಿಗಳನ್ನು ಜತೆಯಾಗಿಯೇ ನಡೆಸಲು ಸೂಚನೆ ನೀಡಲಾಗಿದ್ದು, ಅನುದಾನಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನಿಲ್ದಾಣ ಕಾಮಗಾರಿ ನಿರೀಕ್ಷೆಯಂತೆ ತ್ವರಿತವಾಗಿ ನಡೆಯುತ್ತಿದ್ದು, ಇನ್ನಷ್ಟು ವೇಗವಾಗಿ ಯೋಜನೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಾಮಗಾರಿಗೆ ಯಾವುದೇ ಅಡಚಣೆಯಾಗದಂತೆ ಜಲ್ಲಿ ಒದಗಿಸಲು ಸ್ಥಳೀಯವಾಗಿ 4ಎಕ್ರೆ ಕ್ವಾರಿ ಒದಗಿಸಲಾಗಿದೆ. ಎರಡು ತಿಂಗಳ ಬಳಿಕ ಮತ್ತೆ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗೆ ಆಗಮಿಸಲಾಗುವುದು. ಇದು ಪೂರ್ಣ ಪ್ರಮಾಣದ ವಿಮಾನ ನಿಲ್ದಾಣವಾಗಿದ್ದು, ರಾತ್ರಿ ವಿಮಾನಗಳ ಇಳಿಯುವಿಕೆಗೂ ವ್ಯವಸ್ಥೆ ಕಲ್ಪಿಸಲಾಗುವುದು. ವಿಮಾನ ನಿಲ್ದಾಣದಿಂದಾಗಿ ಈ ಭಾಗದ ಕೈಗಾರಿಕಾ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಅನರ್ಹರು ವಾಪಾಸು ಮಾಡಿ: ಬಿಪಿಎಲ್ ಕಾರ್ಡ್ ಕುರಿತಾಗಿ ಸರ್ಕಾರದ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಇದರ ಸೌಲಭ್ಯ ಕೇವಲ ಬಡವರಿಗೆ ಮಾತ್ರ ಸಿಗಬೇಕು. ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆಯುವುದನ್ನು ತಪ್ಪಿಸಲು ಸೂಚನೆ ನೀಡಿದ್ದೇನೆ. ಕಾನೂನುಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರು ಸ್ವಯಂಪ್ರೇರಿತವಾಗಿ ಅದನ್ನು ತಕ್ಷಣ ವಾಪಾಸು ಮಾಡಬೇಕು. ಇಲ್ಲದಿದ್ದರೆ ಅಂತವರನ್ನು ಗುರುತಿಸಿ ಹಣವನ್ನು ವಸೂಲು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಕ್ರೀಡಾ ಸಚಿವರ ಭೇಟಿ: ಶಿವಮೊಗ್ಗದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಫೆ.21ರಂದು ಶಿವಮೊಗ್ಗ ಆಗಮಿಸಿ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಸಹ್ಯಾದ್ರಿ ಕಾಲೇಜಿನಲ್ಲಿ 4ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ 4ಕೋಟಿ ರೂ. ಕಾಮಗಾರಿಗಳಿಗೆ ಅವರು ಶಂಕು ಸ್ಥಾಪನೆ ನೆರವೇರಿಸುವರು. ಶಿವಮೊಗ್ಗದಲ್ಲಿ ವಿಶೇಷ ಕ್ರೀಡಾ ವಲಯ ಸ್ಥಾಪನೆ ಕುರಿತು ಸ್ಥಳ ಪರಿಶೀಲನೆಯನ್ನು ಸಹ ಸಚಿವರು ಕೈಗೊಳ್ಳಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಶಾಸಕರಾದ ಅಶೋಕ ನಾಯ್ಕ್, ಆಯನೂರು ಮಂಜುನಾಥ, ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.