ಯೋಜನೆ
ಬೀದಿಬದಿ ವ್ಯಾಪಾರಸ್ಥರಿಗೆ ವಿಳಂಬ ಮಾಡದೆ ಸಾಲ ಸೌಲಭ್ಯ ಕಲ್ಪಿಸಿ :
ಮಹಾಂತೇಶ್ ಬೀಳಗಿ
ದಾವಣಗೆರೆ ಫೆ. 17
ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಸ್ಥರ ಆತ್ಮನಿರ್ಭರ್
ಯೋಜನೆಯಡಿ (ಪಿಎಂ ಸ್ವನಿಧಿ ಯೋಜನೆ) ಜಿಲ್ಲೆಯ ನಗರ, ಪಟ್ಟಣ
ಪ್ರದೇಶದ ಬೀದಿಬದಿ ವ್ಯಾಪಾರಸ್ಥರಿಗೆ ವಿಳಂಬ ಮಾಡದೆ ಕೂಡಲೆ
ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ
ಏರ್ಪಡಿಸಲಾದ ಪಿಎಂ ಸ್ವನಿಧಿ ಯೋಜನೆಯ ಪ್ರಗತಿ ಪರಿಶೀಲನಾ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಎಂ ಸ್ವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 7985 ಬೀದಿಬದಿ
ವ್ಯಾಪಾರಸ್ಥರಿಗೆ ತಲಾ 10 ಸಾವಿರ ರೂ. ಗಳ ಒಂದು ಬಾರಿ ಸಾಲ
ನೀಡುವ ಯೋಜನೆಯಿದೆ. ಸಾಲವನ್ನು ನಿಗದಿತ ಅವಧಿಯೊಳಗೆ
ಮರುಪಾವತಿಸುವವರಿಗೆ ಒಂದು ಸಾವಿರ ರೂ.
ಪ್ರೋತ್ಸಾಹಧನ ನೀಡಲು ಅವಕಾಶವಿದೆ. ಬೀದಿಬದಿ ವ್ಯಾಪಾರಿಗಳು
ಅಂದೇ ದುಡಿದು, ಅಂದಿನ ಜೀವನ ಸಾಗಿಸುವ ಶ್ರಮ ಜೀವಿಗಳು.
ಅಂತಹವರಿಗಾಗಿಯೇ ಈ ಯೋಜನೆ ರೂಪಿಸಲಾಗಿದೆ. ಹತ್ತು ಸಾವಿರ
ರೂ. ಮೊತ್ತ ಇವರಿಗೆ ಬದುಕು ಸಾಗಿಸಲು ಉತ್ತೇಜನ
ನೀಡುವಂತಹದ್ದು. ಜಿಲ್ಲೆಯಲ್ಲಿ ಈವರೆಗೆ 7643 ಜನ
ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದು, 4419 ಜನರಿಗೆ ಸಾಲ
ಮಂಜೂರಾಗಿದ್ದರೆ, ಈ ಪೈಕಿ 2362 ಜನರಿಗೆ ಸಾಲದ ಮೊತ್ತ
ವಿತರಣೆಯಾಗಿದೆ. ಹೀಗಾಗಿ ಮಂಜೂರಾತಿ ಬಾಕಿ ಉಳಿದಿದ್ದಲ್ಲಿ ಅರ್ಹ
ಫಲಾನುಭವಿಗಳಿಗೆ ಕೂಡಲೆ ಸಾಲ ಮಂಜೂರಾಗಬೇಕು.
ಅಲ್ಲದೆ ಸಾಲದ ಮೊತ್ತವೂ ವಿತರಣೆಯಾಗಬೇಕು.
ಇದುವರೆಗೂ ಮಂಜೂರಾಗದ ಅಥವಾ ಸಾಲ ಸೌಲಭ್ಯ
ವಿತರಣೆಯಾಗದ ಫಲಾನುಭವಿಗಳ ಬಗ್ಗೆ ಯಾವುದೇ
ತೊಂದರೆಗಳಿದ್ದಲ್ಲಿ, ನಗರ, ಸ್ಥಳೀಯ ಸಂಸ್ಥೆ
ಅಧಿಕಾರಿಗಳು, ಅರ್ಹರಿಗೆ ಸೌಲಭ್ಯ ವಿತರಣೆಯಾಗುವಂತೆ
ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಆಕ್ಸಿಸ್ ಬ್ಯಾಂಕ್ 15 ಜನರಿಗೆ ಸಾಲ ಸೌಲಭ್ಯ ಮಂಜೂರು
ಮಾಡಬೇಕಾದ ಗುರಿಗೆ, ಇದುವರೆಗೂ ಒಂದು
ಫಲಾನುಭವಿಗೂ ಸಾಲ ವಿತರಿಸದ ಬಗ್ಗೆ ಮಾಹಿತಿ ಪಡೆದ
ಜಿಲ್ಲಾಧಿಕಾರಿಗಳು, ಆಕ್ಸಿಸ್ ಬ್ಯಾಂಕ್ ಕುರಿತು ತೀವ್ರ ಅಸಮಾಧಾನ
ವ್ಯಕ್ತಪಡಿಸಿದರು. ಒಂದು ವಾರದ ಒಳಗಾಗಿ ಎಲ್ಲ
ಫಲಾನುಭವಿಗಳಿಗೂ ಸಾಲ ಸೌಲಭ್ಯ ಮಂಜೂರು ಮಾಡದಿದ್ದಲ್ಲಿ,
ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು
ಎಚ್ಚರಿಕೆಯನ್ನು ನೀಡಿದರು. ಬ್ಯಾಂಕ್ ಅಧಿಕಾರಿಗಳೂ ಕೂಡ,
ವಿಳಂಬಕ್ಕೆ ಅವಕಾಶವಿಲ್ಲದೆ ಅರ್ಹರಿಗೆ ಸಾಲ ಸೌಲಭ್ಯ ನೀಡಿ. ಅಲ್ಲದೆ
ಯೋಜನೆ ದುರುಪಯೋಗವಾಗದಂತೆಯೂ ಎಚ್ಚರಿಕೆ ವಹಿಸಿ.
ಬಡವರ ಬದುಕು ಕಟ್ಟಿಕೊಳ್ಳಲು ನೆರವಾಗುವವರಿಗೆ
ಪ್ರಾಪ್ತಿಯಾಗುವ ಪುಣ್ಯ, ದೇವಸ್ಥಾನಕ್ಕೆ ತೆರಳಿ ದೇವರಿಗೆ
ಪೂಜೆ ಮಾಡಿದಾಗ ದೊರೆಯುವ ಪುಣ್ಯಕ್ಕಿಂತ
ಶ್ರೇಷ್ಠವಾದುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ
ನಿರ್ದೇಶಕಿ ನಜ್ಮಾ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ
ಮುದಜ್ಜಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶುಶ್ರೂತ್ ಶಾಸ್ತ್ರಿ, ಜಿಲ್ಲಾ
ಕೌಶಲ್ಯಾಭಿವೃದ್ಧಿ ಇಲಾಖೆ ಅಭಿಯಾನ ವ್ಯವಸ್ಥಾಪಕ ಬಸವರಾಜ್,
ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು
ಭಾಗವಹಿಸಿದ್ದರು.